ಹರಿಯಾಣದಲ್ಲಿ ಬಿಜೆಪಿ ಆಡಳಿತ ಅಂತ್ಯವಾಗಲಿದೆ. ಕಾಂಗ್ರೆಸ್ ಭಾರೀ ಬಹುಮತ ಪಡೆದು ಸರ್ಕಾರ ರಚಿಸಲಿದೆ ಎಂಬ ಅಭಿಪ್ರಾಯ ದೇಶಾದ್ಯಂತ ಇತ್ತು. ಆಡಳಿತಾರೂಢ ಬಿಜೆಪಿಯೇ ಸ್ವತಃ ಸೋಲೊಪ್ಪಿಕೊಂಡಿತ್ತು. ಆದಾಗ್ಯೂ, ಬಿಜೆಪಿ ಮತ್ತೆ ಗೆದ್ದಿದೆ. ಗೆಲ್ಲುವ, ಗುಲ್ಲುತ್ತೇವೆಂಬ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ ಮತ್ತೆ ಸೋಲುಂಡಿದೆ. ಕಾಂಗ್ರೆಸ್ ಸೋಲಿನ ವಿಪಕ್ಷಗಳಿಂದಲೇ ಟೀಕೆ ವ್ಯಕ್ತವಾಗುತ್ತಿದೆ. ಆತ್ಮಾವಲೋಕನದ ಸಲಹೆಗಳೂ ಬರುತ್ತಿದೆ. ಇದೀಗ, ಕಾಂಗ್ರೆಸ್ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನೆ (ಉದ್ಧವ್ ಬಣ) ಸಂಸದ ಸಂಜತ್ ರಾವತ್, “ವಿನ್ನಿಂಗ್ ಮ್ಯಾಚ್‌ನಲ್ಲೂ ಸೋಲುವುದು ಹೇಗೆ ಎಂಬುದನ್ನು ಕಾಂಗ್ರೆಸ್‌ನಿಂದ ಕಲಿಯಬೇಕು” ಎಂದು ವ್ಯಂಗ್ಯವಾಡಿದ್ದಾರೆ.
ಹರಿಯಾಣದಲ್ಲಿ ಕಾಂಗ್ರೆಸ್-ಎಎಪಿ ಮೈತ್ರಿಯಲ್ಲಿ ಸ್ಪರ್ಧಿಸಲು ಮುಂದಾಗಿದ್ದವು. ಆದರೆ, ಕೊನೆ ಕ್ಷಣದಲ್ಲಿ ಮೈತ್ರಿ ಮುರಿದು ಸ್ವತಂತ್ರವಾಗಿ ಸ್ಪರ್ಧಿಸಿದ್ದವು. ಇದನ್ನು ಉಲ್ಲೇಖಿಸಿ ಮಾತನಾಡಿದ ಸಂಜಯ್ ರಾವತ್, “ಮಿತ್ರಪಕ್ಷಗಳ ಬೆಂಬಲವಿಲ್ಲದೆ ಗೆಲ್ಲಬಹುದು ಎಂದು ಈಗಲೂ ಕಾಂಗ್ರೆಸ್ ನಂಬಿದೆ. ಪಕ್ಷದ ಸೋಲಿಗೆ ಅತಿಯಾದ ಆತ್ಮವಿಶ್ವಾಸವೇ ಕಾರಣ. ಗೆಲುವಿನ ಪಂದ್ಯವನ್ನು ಸೋಲಿನ ಪಂದ್ಯವಾಗಿ ಪರಿವರ್ತಿಸಿದೆ” ಎಂದು ಹೇಳಿದ್ದಾರೆ.
ಶಿವಸೇನೆಯ ಮುಖವಾಣಿ ‘ಸಾಮ್ನಾ’ ಕೂಡ ಕಾಂಗ್ರೆಸ್ ಸೋಲಿನ ಬಗ್ಗೆ ಸಂಪಾದಕೀಯ ಬರೆದಿದ್ದು, “ಆಂತರಿಕ ಭಿನ್ನಾಭಿಪ್ರಾಯವು ಕಾಂಗ್ರೆಸ್‌ನ ಸಂಘಟನಾ ಶಕ್ತಿಯನ್ನು ದುರ್ಬಲಗೊಳಿಸಿದೆ. ಕಳಪೆ ಪ್ರಚಾರವು ಸೋಲಿಗೆ ಕಾರಣವಾಗಿದೆ. ಹರಿಯಾಣದಲ್ಲಿ ಬಿಜೆಪಿ ವಿರುದ್ಧ ಆಡಳಿತದ ವಿರೋಧಿ ಅಲೆ ಇದ್ದರೂ, ಅದರ ಲಾಭ ಪಡೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಸೋತಿದೆ” ಎಂದು ಹೇಳಿದೆ.