ಮೊದಲ ಬಾರಿಗೆ ಶಾಸಕರಾಗಿರುವ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ‘ಬಿಗ್‌ಬಾಸ್ ಕನ್ನಡ’ದಲ್ಲಿ ಸ್ಪರ್ಧಿಯಾಗಿದ್ದಾರೆ. ಬಿಗ್‌ಬಾಸ್ ಮನೆಗೆ ಹೋಗಿರುವ ಪ್ರದೀಪ್ ಈಶ್ವರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಿಡಿಕಾರಿದ್ದಾರೆ.
ಸೋಮವಾರ ಪ್ರಸಾರವಾದ ಪ್ರೋಮೋದಲ್ಲಿ ಶಾಸಕ ಪ್ರದೀಪ್ ಅವರು ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಕಲರ್ಸ್ ಕನ್ನಡದ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರೋಮೋ ಪೋಸ್ಟ್ ಆಗಿರುವ ಕಾರಣ, ಪ್ರದೀಪ್ ಅವರು ಬಿಗ್‌ಬಾಸ್ ಶೋಗೆ ಹೋಗಿರುವುದು ಖಾತ್ರಿಯಾಗಿದೆ. ಫೋಟೋದಲ್ಲಿ, ‘ಸ್ಪರ್ಧಿಯಾಗಿ ಭಾಗಹಿಸಿರುವುದು ಸಂತೋಷವಾಗಿದೆ’ ಎಂದು ಪ್ರದೀಪ್ ಹೇಳಿದ್ದಾರೆ.
ಕೋಚಿಂಗ್ ಇನ್‌ಸ್ಟಿಟ್ಯೂಟ್ ನಡೆಸುತ್ತಿರುವ ಪ್ರದೀಪ್ ಈಶ್ವರ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಕೆ ಸುಧಾಕರ್ ವಿರುದ್ಧ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಕಂಡಿದ್ದರು.
ಪ್ರೋಮೋ ಪ್ರಸಾರವಾದ ನಂತರ, ನೆಟ್ಟಿಗರು ಪ್ರದೀಪ್ ವಿರುದ್ಧ ಕಿಡಿಕಾರಿದ್ದಾರೆ. ಹಲವರು ಬಿಗ್‌ಬಾಸ್ ಕನ್ನಡದಲ್ಲಿ ಚುನಾಯಿತ ಪ್ರತಿನಿಧಿ ಭಾಗವಹಿಸುವುದನ್ನು ಖಂಡಿಸಿದ್ದಾರೆ.
ನೆಟ್ಟಿಗ ಗಜಾನಂದ ಮೋಳ್ಕೆರೆ ಎಂಬವರು ತಮ್ಮ ಟ್ವೀಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. “ಬಿಗ್‌ಬಾಸ್ ಮನೆಗೆ ಹೋಗಿರುವ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಯವಿಟ್ಟು ಕ್ರಮ ಕೈಗೊಳ್ಳಿ. ಜನರು ತಮ್ಮ ಸೇವೆಗಾಗಿ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ, ಅವರು ಬೇಜವಾಬ್ದಾರಿಯಿಂದ ಬಿಗ್‌ಬಾಸ್ ಶೋಗೆ ಹೋಗಿದ್ದಾರೆ” ಎಂದು ಕಿರಿಕಾರಿದ್ದಾರೆ.
ಮತ್ತೊಬ್ಬ ಬಳಕೆದಾರ ಅಭಿಷೇಕ್ ಎಂಬವರು ಕೂಡ ಪ್ರದೀಪ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಎಲ್ಲರು ತೆರಿಗೆ ಪಾವತಿಸುತ್ತಾರೆ. ಅವರು ಸಂಬಳ ಮತ್ತು ಭತ್ಯೆಗಳನ್ನು ತೆಗೆದುಕೊಳ್ಳುತ್ತಾರೆ. ಪ್ರಪಂಚದೊಂದಿಗೆ ಸಂಪರ್ಕವೇ ಇರುವುದಿಲ್ಲ ಎನ್ನುವ ರಿಯಾಲಿಟಿ ಶೋಗಳಿಗೆ ಅವರು ಹೋಗುತ್ತಾರೆ. ಜನಪ್ರತಿನಿಧಿಗಳು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
You pay taxes,they take home salary and allowances and even go to reality shows allegedly unconnected from the rest of the world.
This isn’t how representation works https://t.co/YRPlSNEtgA— ಅಭಿಷೇಕ್ | Abhishek (@gundigre) October 9, 2023
ಮಂಜುನಾಥ್ ಎಂಬುವವರು, “ಏನಿದು ಸರ್? ಸಾರ್ವಜನಿಕ ಸೇವೆ ಮಾಡುವುದಕ್ಕಿಂತ ಬಿಗ್‌ಬಾಸ್ ಪ್ರವೇಶಿಸುವುದು ಹಾಸ್ಯಾಸ್ಪದವಾಗಿದೆ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ಜನರು ಅವರನ್ನು ಆಯ್ಕೆ ಮಾಡಿದ್ದಾರೆಯೇ. ಎಂಎಲ್‌ಎ ಹುದ್ದೆಗೆ ಗೌರವವಿಲ್ಲವೇ?” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಕೆಲಸದಿಂದ ತೆಗೆದು ಹಾಕಿ ಸಂಬಳ ನೀಡಿಲ್ಲವೆಂದು ಕೋಪದಿಂದ ಕಂಪನಿಗೆ ಬೆಂಕಿ ಇಟ್ಟ ಉದ್ಯೋಗಿಗಳು
ಪ್ರದೀಪ್ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ ಪಿ ಬಚ್ಚೇಗೌಡ ಮಾತನಾಡಿದ್ದು, “ಇದು ಅವರ ವೈಯಕ್ತಿಕ ವಿಚಾರ. ನನಗೆ ಬಂದ ಮಾಹಿತಿಯ ಪ್ರಕಾರ, ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಲವೇ ದಿನಗಳಲ್ಲಿ ಅವರು ಹೊರಬರುತ್ತಾರೆ. ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅವಕಾಶ ಕೊಡೋಣ. ಅದರ ಬಗ್ಗೆ ಈಗ ಪ್ರತಿಕ್ರಿಯಿಸುವುದು ಸರಿಯಲ್ಲ” ಎಂದು ಹೇಳಿದ್ದಾರೆ.