ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಳಿಕ ಇದೀಗ ಕಾಂಗ್ರೆಸ್ ಶಾಸಕ ರಂಗನಾಥ್ ಅವರು ಆರ್‌ಎಸ್‌ಎಸ್ ಗೀತೆ ಗುಣಗಾನ ಮಾಡಿದ್ದಾರೆ. ತುಮಕೂರಿನ ಕುಣಿಗಲ್ ಶಾಸಕ ರಂಗನಾಥ್ ಅವರು ಆರ್‌ಎಸ್‌ಎಸ್ ಗೀತೆ ಹಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನಮಸ್ತೆ ಸದಾ ವಸ್ತಲೇ ಹಾಡು ಚೆನ್ನಾಗಿದೆ” ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆಶಿ ಅವರು ಸದನದಲ್ಲೇ ‘ನಮಸ್ತೆ ಸದಾ ವತ್ಸಲೇ ಮಾತೃಭೂಮಿ’ ಎಂದು ಆರ್‌ಎಸ್‌ಎಸ್ ಗೀತೆ ಹಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಡಿಕೆಶಿ ಮೃದು ಹಿಂದುತ್ವ ಹೊಂದಿದ್ದು, ಈಗ ರಾಜಕೀಯ ಲಾಭಕ್ಕಾಗಿ ಸಾರ್ವಜನಿಕವಾಗಿ ಮೃದು ಹಿಂದುತ್ವ ಪ್ರದರ್ಶನ ಮಾಡಿದ್ದಾರೆ ಎಂದು ಟೀಕಿಸಲಾಗಿತ್ತು.
ಇದನ್ನು ಓದಿದ್ದೀರಾ? ಆರ್‌ಎಸ್‌ಎಸ್ ಬ್ಯಾನ್ ಮಾಡಿ ನೋಡಿ, ಮೂರು ತಿಂಗಳಲ್ಲಿ ನಿಮ್ಮ ಸರ್ಕಾರ ಇರಲ್ಲ: ಆರ್ ಅಶೋಕ್ ಗುಡುಗು
ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಯಾಗುತ್ತಿದ್ದಂತೆ ಈ ಬಗ್ಗೆ ಸ್ಪಷ್ಟಣೆ ನೀಡಿದ್ದ ಡಿ ಕೆ ಶಿವಕುಮಾರ್ ಅವರು, “ಹುಟ್ಟಿನಿಂದಲೇ ನಾನು ಕಾಂಗ್ರೆಸಿಗ. ನನ್ನ ರಕ್ತ ಜೀವನವೆಲ್ಲಾ ಕಾಂಗ್ರೆಸ್. ಆರ್‌ಎಸ್‌ಎಸ್ ಹೇಗೆ ಶಾಲೆಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ನನಗೆ ತಿಳಿದಿದೆ. ನನ್ನ ಶಕ್ತಿಯೆಲ್ಲಾ ಸೇರಿಸಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅನ್ನು ಮುನ್ನಡೆಸುತ್ತೇನೆ” ಎಂದು ಹೇಳಿದ್ದಾರೆ.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ರಂಗನಾಥ್ ಅವರು ಆರ್‌ಎಸ್‌ಎಸ್ ಗೀತೆ ಗುಣಗಾನ ಮಾಡಿದ್ದಾರೆ. “ಗೀತೆಯ ಅರ್ಥ ಡಿ ಕೆ ಶಿವಕುಮಾರ್ ಸಾಹೇಬ್ರು ಹಾಡಿದ ಮೇಲೆಯೇ ಓದಿ ತಿಳಿಯಿತು. ಹುಟ್ಟಿದ ಭೂಮಿಗೆ ನಮಸ್ಕಾರ ಮಾಡಿ ಎಂದು ಗೀತೆ ಹೇಳುತ್ತದೆ. ಅದರಲ್ಲಿ ಏನೂ ತಪ್ಪು ಕಾಣಿಸಲ್ಲ. ನಮ್ಮದು ಜಾತ್ಯಾತೀತ ಪಕ್ಷ, ಯಾವ ಪಕ್ಷದಲ್ಲಿ ಅಥವಾ ಮನುಷ್ಯನಲ್ಲಿ ಒಳ್ಳೆಯದು ಇದೆಯೋ ಅದನ್ನು ಸ್ವೀಕರಿಸಬೇಕು” ಎಂದು ಹೇಳಿಕೊಂಡಿದ್ದಾರೆ.
“ಬಲಪಂಥೀಯರಾದ ಬಿಜೆಪಿಯವರು ಜಾತಿಯ, ಧರ್ಮದ ಒಡಕನ್ನು ಮೂಡಿಸುವುದನ್ನು ನಾವು ಖಂಡಿಸುತ್ತೇವೆ. ಯಾವುದೇ ಕಾರಣಕ್ಕೂ ಅವರ ಸಿದ್ಧಾಂತಕ್ಕೂ ನಮ್ಮ ಸಿದ್ಧಾಂತಕ್ಕೂ ಹೊಂದಿಕೆಯಾಗಲ್ಲ. ಆರ್‌ಎಸ್‌ಎಸ್‌ನಲ್ಲಿರುವ ಗೀತೆ ಹಾಡಿದರೆ ತಪ್ಪೇನು” ಎಂದು ಡಾ. ರಂಗನಾಥ್ ಪ್ರಶ್ನಿಸಿದ್ದಾರೆ.
ಇನ್ನು ಧರ್ಮಸ್ಥಳ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಪ್ರತಿ ಮನೆಯಲ್ಲೂ ಧರ್ಮಸ್ಥಳದ ಭಕ್ತರಿದ್ದಾರೆ. ವಿಶೇಷವಾಗಿ ಅತಿ ಹೆಚ್ಚು ಕಾಂಗ್ರೆಸ್ ಶಾಸಕರೇ ಅಲ್ಲಿಯ ಭಕ್ತರು. ಬಿಬೆಪಿಯವರು ಇಲ್ಲಿವರೆಗೂ ಯಾರೂ ಮಾತಾಡಿರಲಿಲ್ಲ. ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ಇರಬಹುದು ಅಂತ ಎಂದು ಸದನದಲ್ಲಿ ಡಿಕೆಶಿ ಅವರು ಹೇಳಿದ ಬಳಿಕ ಬಿಜೆಪಿಯವರು ಮಾತನಾಡಲು ಶುರು ಮಾಡಿದ್ದಾರೆ” ಎಂದು ಟೀಕಿಸಿದರು.
ಇದನ್ನು ಓದಿದ್ದೀರಾ? ಕಾಂಗ್ರೆಸ್ ಹೈಕಮಾಂಡ್‌ಗೆ ಮಾನ ಮರ್ಯಾದೆ ಇದ್ದರೆ ಸಿಎಂ, ಡಿಸಿಎಂ ಕಿತ್ತೆಸೆಯಲಿ: ಹೆಚ್ ಡಿ ಕುಮಾರಸ್ವಾಮಿ ಕಿಡಿ
“ಮಹಾಭಾರತ, ರಾಮಾಯಣಗಳಲ್ಲಿ ಹಲವು ಸವಾಲುಗಳು ಎದುರಾಗಿದೆ. ಸೀತಾ ಮಾತೆಯನ್ನೆ ಪರೀಕ್ಷೆಗೆ ದೂಡಿದಂತಹ ಸಂಸ್ಕೃತಿ ನಮ್ಮದು. ಹಾಗಾಗಿ ತನಿಖೆ ನಡೆಯುತ್ತಿರುವುದು ಸ್ವಾಗತಾರ್ಹ. ಸಂಪೂರ್ಣ ತನಿಖೆ ನಡೆದ ಮೇಲೆ ಪೂರ್ಣ ಮಾಹಿತಿ ನೀಡುತ್ತಾರೆ. ಕಾದು ನೋಡೋಣ” ಎಂದು ಹೇಳಿದ್ದಾರೆ.
ಇನ್ನು ಎಡಪಂಥೀಯರ ಷಡ್ಯಂತ್ರ, ಒತ್ತಡ ಇದೆ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, “ಡಿ ಕೆ ಶಿವಕುಮಾರ್ ಅವರು ಮಾತನಾಡುವವರೆಗೂ ಬಿಜೆಪಿಯವರು ಮಾತನಾಡಲೇ ಇಲ್ಲ. ಈಗ ಅವರಿಗೆ ಹುರುಪು ಬಂದುಬಿಟ್ಟಿದೆ. ಧರ್ಮಸ್ಥಳ ಪವಿತ್ರವಾದ ಕ್ಷೇತ್ರ. ನಮ್ಮ ಹೇಳಿಕೆಯಿಂದ ಗೊಂದಲವಾಗಬಾರದು. ಬಹಳಷ್ಟು ಜನ ಸೂಕ್ಷ್ಮವಾಗಿ ಗಮನಿಸುತ್ತಾರೆ. ತನಿಖೆ ನಡೆದು ಪೂರ್ಣವಾಗುವವರೆಗೂ ನಾನು ಅದರ ಬಗ್ಗೆ ಹೆಚ್ಚು ಮಾತನಾಡಲ್ಲ” ಎಂದು ತಿಳಿಸಿದರು.
