ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಧಾರವಾಡ ಪ್ರವೇಶಕ್ಕೆ ನಿರ್ಬಂಧ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ, ಧಾರವಾಡಕ್ಕೆ ಪ್ರವೇಶ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಜಿಲ್ಲೆಗೆ ಪ್ರವೇಶಿಸಲು ಅನುಮತಿ ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಜೂನ್ 20ರಂದು ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆಯ ಮೇಯರ್ ಚುನಾವಣೆ ಇದೆ. ಆ ಚುನಾವಣೆಯಲ್ಲಿ ಶಾಸಕ ವಿನಯ್ ಕುಲಕರ್ಣಿ ಕೂಡ ಮತ ಚಲಾಯಿಸಬೇಕು. ಅದಕ್ಕಾಗಿ, ತಮಗೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ. ಅರ್ಜಿದಾರರ ವಾದ ಆಲಿಸಿರುವ ನ್ಯಾಯಾಲಯ, ಜೂನ್ 17ರೊಳಗೆ ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಸೂಚನೆ ನೀಡಿದೆ.
ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾಗಿರುವ ವಿನಯ್ ಕುಲಕರ್ಣಿಗೆ ಚುನಾವಣೆ ಸಮಯದಲ್ಲಿಯೂ ಧಾರವಾಡ ಪ್ರವೇಶಕ್ಕೆ ಅವಕಾಶ ನೀಡಲಾಗಿರಲಿಲ್ಲ. ಚುನಾವಣಾ ಸಮಯದಲ್ಲಿಯೂ ಅನುಮತಿ ಕೋರಿ ವಿನಯ್ ಸಲ್ಲಿಸಿದ್ದ ಅರ್ಜಿಯನ್ನು ಏಪ್ರಿಲ್ 18ರಂದು ನ್ಯಾಯಾಲಯ ತಿರಸ್ಕರಿಸಿತ್ತು.
ಅಂದು ಅರ್ಜಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯ, “ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ 90 ಸಾಕ್ಷಿಗಳಿವೆ. ಒಂದು ವೇಳೆ ವಿನಯ್ ಕಲಕರ್ಣಿಗೆ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಿದರೆ ಪ್ರಕರಣಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇರುವುದರಿಂದ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶಕ್ಕೆ ಅವಕಾಶ ನೀಡಲಾಗುವುದಿಲ್ಲ” ಎಂದು ಹೇಳಿತ್ತು.
ಅರ್ಜಿ ತಿರಸ್ಕೃತವಾಗಿ, ಧಾರವಾಡ ಪ್ರವೇಶ ಪಡೆಯಲಾಗದಿದ್ದರೂ ವಿನಯ್ ಕುಲಕರ್ಣಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಅವರ ಗೆಲುವಿಗಾಗಿ ಅವರಪ ಪತ್ನಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಭಾರೀ ಪ್ರಚಾರ ನಡೆಸಿದ್ದರು.