ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಒಕ್ಕಲಿಗ, ಮುಸ್ಲಿಂ, ಹಿಂದುಳಿದ ಸಮುದಾಯದ ಜನಸಂಖ್ಯೆ ಹೆಚ್ಚಿದ್ದರೂ 1996ರಿಂದ ಮೂರು ದಶಕಗಳಿಂದ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳು ಜಯಗಳಿಸುತ್ತಿದ್ದಾರೆ. ಪಕ್ಷವಾರು ವಿಷಯಕ್ಕೆ ಬಂದರೆ 1991ರಿಂದಲೂ ಬಿಜೆಪಿಯ ಭದ್ರಕೋಟೆಯಾಗಿ ಪರಿಣಮಿಸಿದೆ. 1951ರಲ್ಲಿ ಮಾದಯ್ಯ ಗೌಡ ಹಾಗೂ 1989ರಲ್ಲಿ ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಮಾತ್ರ ಕಾಂಗ್ರೆಸ್‌ನಿಂದ ಗೆಲುವು ಗಳಿಸಿದ್ದರು.
1977ರಿಂದ 1989ರವರೆಗೆ ಜನತಾ ಪಕ್ಷದ ಅಭ್ಯರ್ಥಿಗಳು ವಿಜಯ ಸಾಧಿಸಿದರೆ, 1957 ರಿಂದ 1977ರವರೆಗೂ ಬೇರೆ ಕ್ಷೇತ್ರಗಳೊಂದಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವಿಲೀನಗೊಂಡಿತ್ತು. ಎಂಟು ವಿಧಾನಸಭಾ ಕ್ಷೇತ್ರವಿರುವ ದಕ್ಷಿಣ ಲೋಕಸಭಾ ವ್ಯಾಪ್ತಿಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಮಾತ್ರ ಸ್ಪರ್ಧಿ. ಸದ್ಯ ಮೈತ್ರಿ ಪಕ್ಷವಾಗಿರುವ ಜೆಡಿಎಸ್ ಈ ಭಾಗದಲ್ಲಿ ಹೆಚ್ಚಿನ ಮಟ್ಟದ ಮತ ಪಡೆಯುವ ಸಾಮರ್ಥ್ಯ ಹೊಂದಿಲ್ಲ. ಕೇಂದ್ರ ಸರ್ಕಾರದ ಭ್ರಷ್ಟಾಚಾರ, ಅದಕ್ಷ ಆಡಳಿತ, ನಿರುತ್ಸಾಹಿ ಸ್ಥಳೀಯ ಸಂಸದರ ಕಾರ್ಯವೈಖರಿಯಿಂದ ಬೇಸತ್ತಿರುವ ಬಿಜೆಪಿಯ ಸಾಂಪ್ರದಾಯಿಕ ಮತದಾರರು ಕೂಡ ಈ ಬಾರಿ ತಮ್ಮ ಮನಸ್ಸನ್ನು ಬದಲಾಯಿಸುವ ಸಾಧ್ಯತೆಯಿದೆ ಎಂಬ ಮಾತುಗಳು ಕ್ಷೇತ್ರದ ಹಲವು ಕಡೆಗಳಲ್ಲಿ ಕೇಳಿ ಬರುತ್ತಿದೆ.
ಮಹಿಳಾ ಮತದಾರರೇ ಹೆಚ್ಚಿರುವ ರಾಜ್ಯದ ಮತ್ತೊಂದು ಪ್ರಮುಖ ಕ್ಷೇತ್ರವಾಗಿರುವ ಬೆಂಗಳೂರು ದಕ್ಷಿಣದಲ್ಲಿ ಮಾಜಿ ಕೇಂದ್ರ ಸಚಿವ ದಿವಗಂತ ಅನಂತ್ ಕುಮಾರ್ ಅವರು ಕ್ಷೇತ್ರದಲ್ಲಿ ಮೂರು ದಶಕಗಳ ಕಾಲ ಹಿಡಿತವನ್ನು ಹೊಂದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಅನಂತ್ ಕುಮಾರ್ ಅವರ ಜನಪ್ರಿಯತೆ ಹಾಗೂ ಮೋದಿ ಅವರ ನಾಮಬಲದ ಮೇಲೆ ದಕ್ಷಿಣ ಕ್ಷೇತ್ರದಲ್ಲಿ ಕಮಲ ಅರಳಿತ್ತು.
ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹಾಲಿ ಸಂಸದ ತೇಜಸ್ವಿ ಸೂರ್ಯ ಕಳೆದ ಐದು ವರ್ಷಗಳಿಂದ ಅಭಿವೃದ್ಧಿ ಚಟುವಟಿಕೆಗಳಿಗಿಂತ ಹಿಂದುತ್ವದ ಮಾತುಗಳಿಗೆ ಮಣೆ ಹಾಕುತ್ತಿರುವುದರಿಂದ ಮತದಾರರಲ್ಲಿ ಬೇಸರ ತರಿಸಿದೆ. ಈ ಬಾರಿಯೂ ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗಿದೆ. ಕೋವಿಡ್ ಸಮಯದಲ್ಲೂ ಕ್ಷೇತ್ರದ ಜನರ ದೂರುಗಳನ್ನು ಸರಿಯಾಗಿ ಆಲಿಸಿಲ್ಲ ಎಂಬ ಅಸಮಾಧಾನಗಳು ಹಲವು ಕಡೆ ಕೇಳಿ ಬರುತ್ತಿದೆ. ಜೊತೆಗೆ ಕೋವಿಡ್ ಸಂದಿಗ್ಧ ಸಮಯದಲ್ಲಿ ಎಲ್ಲ ಜಾತಿಯ ಜನರ ಬಗ್ಗೆ ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕಾದ ಸೂರ್ಯ, ಮುಸ್ಲಿಮರನ್ನು ಟಾರ್ಗೆಟ್ ಮಾಡಲು ಹೋಗಿ ನಗೆಪಾಟಲಿಗೀಡಾಗಿದ್ದರು. ಬೀದಿಗಿಳಿದು ಜನರ ಕಷ್ಟಸುಖ ಕೇಳದ ಸೂರ್ಯ, ಸೋಷಿಯಲ್ ಮೀಡಿಯಾದಲ್ಲಷ್ಟೇ ಜೀವಂತವಿದ್ದರು. ಮಾತೆತ್ತಿದರೆ ಮೋದಿ ಜಪ ಮಾಡುತ್ತಿದ್ದರು. ಕೊನೆಪಕ್ಷ ತಾವು ಪ್ರತಿನಿಧಿಸುವ ಬ್ರಾಹ್ಮಣ ಸಮುದಾಯಕ್ಕಾದರೂ ನೆರವಾದರೆ ಎಂದರೆ, ಗುರುರಾಘವೇಂದ್ರ, ವಶಿಷ್ಟ ಸಹಕಾರ ಬ್ಯಾಂಕ್‌ಗಳನ್ನು ಮುಳುಗಿಸಿ, ವಯೋವೃದ್ಧ ಬ್ರಾಹ್ಮಣರು ಪ್ರತಿದಿನ ಕಣ್ಣೀರು ಹಾಕುವಂತೆ ಮಾಡಿದರು. ಈಗ ಮತ್ತದೇ ಮೋದಿ ಭಜನೆ ಮಾಡುತ್ತಾ ಮತದಾರರ ಮುಂದೆ ಪ್ರತ್ಯಕ್ಷರಾಗಿದ್ದಾರೆ.
ಬಿಜೆಪಿ ಸೋಲಿಸಲು ಕಾಂಗ್ರೆಸ್‌ನಿಂದ ಸಂಘಟನಾ ಶಕ್ತಿ
ಬಿಜೆಪಿಯ ತೇಜಸ್ವಿ ಸೂರ್ಯರನ್ನು ಮಣಿಸಲೇಬೇಕೆಂದು ಆಡಳಿತಾರೂಢ ಕಾಂಗ್ರೆಸ್ ಸಜ್ಜಾಗಿ ನಿಂತಿದೆ. ಅದಕ್ಕಾಗಿ ಈ ಬಾರಿ ಕಾಂಗ್ರೆಸ್‌ನ ಪ್ರಭಾವಿ ನಾಯಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ, ಜಯನಗರದ ಮಾಜಿ ಶಾಸಕಿ ಸೌಮ್ಯಾರೆಡ್ಡಿ ಅವರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಮಾಜಿ ಶಾಸಕಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಅವರು ತಮ್ಮ ನಿಷ್ಠಾವಂತ ಕಾರ್ಯಕರ್ತರೊಂದಿಗೆ ಬೆರೆಯುವ ಮೂಲಕ ಆತ್ಮೀಯತೆ ಮತ್ತು ನಮ್ರತೆಯಿಂದ ಕ್ಷೇತ್ರದಲ್ಲೂ ಸಹ ಜನಪ್ರಿಯತೆ ಪಡೆದುಕೊಂಡಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಸೌಮ್ಯ ರೆಡ್ಡಿ, ಮತ ಎಣಿಕೆ ಗೊಂದಲದಿಂದಾಗಿ ಕೆಲವೇ ಕೆಲವು ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ | ಪಿ ಸಿ ಮೋಹನ್ ಅಭಿವೃದ್ಧಿ ವಿರೋಧಿ ಅಲೆ ಮನ್ಸೂರ್ ಜಯದ ಹಾದಿಗೆ ಅನುಕೂಲವಾಗಲಿದೆಯೆ?
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಬಿಟಿಎಂ ಲೇಔಟ್ ಶಾಸಕರು ಆಗಿರುವ ರಾಮಲಿಂಗಾರೆಡ್ಡಿ ಅವರು ಕ್ಷೇತ್ರದಲ್ಲಿ ತಮ್ಮದೇ ಆದ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ. 2013ರಿಂದ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಂದ ಸೌಮ್ಯ ರೆಡ್ಡಿ ಅವರು ಸಹ ಜನಪ್ರಿಯತೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರತಿಷ್ಠಿತ ಕ್ಷೇತ್ರವಾದ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಡಿ ಕೆ ಶಿವಕುಮಾರ್ ಹಲವು ತಂತ್ರಗಾರಿಕೆ ನಡೆಸಿದ್ದಾರೆ.
ಸಚಿವ ರಾಮಲಿಂಗಾ ರೆಡ್ಡಿ ಅವರು ಸಹ ಮಗಳ ರಾಜಕೀಯ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಬಿರುಸಿನಿಂದ ಓಡಾಡುತ್ತಿದ್ದಾರೆ.
ಬಿಜೆಪಿಯ ಭದ್ರಕೋಟೆಯಾಗಿದ್ದ ಜಯನಗರ ಕ್ಷೇತ್ರವನ್ನು 2018ರ ವಿಧಾನಸಭೆ ಚುನಾವಣೆಯಲ್ಲಿ ಕೈ ತಪ್ಪಿಸಿ ರಾಮಲಿಂಗಾ ರೆಡ್ಡಿ ತಮ್ಮ ಪುತ್ರಿ ಸೌಮ್ಯಾ ರೆಡ್ಡಿ ಅವರನ್ನು ಗೆಲ್ಲಿಸಿದ್ದರು. 2023ರಲ್ಲಿ ಈ ಕ್ಷೇತ್ರ ಕೇವಲ 16 ಮತಗಳ ಅಂತರದಿಂದ ಕೈತಪ್ಪಿ ಹೋಯಿತು. 70ರ ದಶಕದಿಂದ ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಕಾಲಿಟ್ಟ ರಾಮಲಿಂಗಾರೆಡ್ಡಿ ಅವರು 1983ರಲ್ಲಿ ಪಾಲಿಕೆ ಸದಸ್ಯರಾಗಿ 1989ರಿಂದ ಇಲ್ಲಿಯವರೆಗೂ ಜಯನಗರ ಹಾಗೂ ಬಿಟಿಎಂ ಲೇಔಟ್‌ನಿಂದ ಸತತ 8 ಬಾರಿ ಗೆಲುವು ಸಾಧಿಸಿ ಬೆಂಗಳೂರು ನಗರದ ನಾಡಿಮಿಡಿತವನ್ನು ಅರಿತವರು. ತಮ್ಮ ಪುತ್ರಿಯನ್ನು ಲೋಕಸಭೆಗೆ ಕಳಿಸಲೇಬೇಕೆಂದು ಪ್ರತಿ ಕ್ಷೇತ್ರದ ಬಡಾವಣೆಯಲ್ಲಿ ಸಭೆ ನಡೆಸುವ ಮೂಲಕ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಸೌಮ್ಯಾ ಮತ್ತು ಅವರ ಕಾರ್ಯಕರ್ತ ಪಡೆ ಮತದಾರರೊಂದಿಗೆ ಸಂಪರ್ಕ ಸಾಧಿಸಲು ಪ್ರಚಾರ ಸಭೆಗಳಲ್ಲದೆ ಸಾಮಾಜಿಕ ಮಾಧ್ಯಮವನ್ನು ಬಳಸುವುದರಲ್ಲಿ ಉತ್ತಮ ಪರಿಣಿತಿ ಹೊಂದಿದೆ. ಈ ಹಿಂದೆ 2009ರಲ್ಲಿ ಕೃಷ್ಣ ಬೈರೇಗೌಡ ಅವರು ಸ್ಪರ್ಧಿಸಿದ್ದಾಗ ಬಿಜೆಪಿ ಸಾವಿರಾರು ಅಲ್ಪಸಂಖ್ಯಾತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಿಸಿತ್ತು, ಇಷ್ಟಾಗಿಯೂ ಕೆಲವೇ ಸಾವಿರ ಮತಗಳ ಅಂತರದಿಂದ ಕೃಷ್ಣ ಬೈರೇಗೌಡರು ಪರಾಭವಗೊಂಡಿದ್ದರು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಬಿಜೆಪಿಯ ಕ್ಷುಲ್ಲಕ ರಾಜಕಾರಣಕ್ಕೆ ತಡೆಬಿದ್ದಿದೆ.
ಈ ಕ್ಷೇತ್ರದಲ್ಲಿ ಮಹಿಳೆಯರೆ ಹೆಚ್ಚಿರುವ ಕಾರಣ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಜಾರಿಗೊಳಿಸಿರುವ ಎರಡು ಜನಪ್ರಿಯ ಗ್ಯಾರಂಟಿ ಯೋಜನೆಗಳಾದ ಉಚಿತ ಬಸ್ ಪ್ರಯಾಣ ಹಾಗೂ ತಿಂಗಳಿಗೆ 2 ಸಾವಿರ ರೂ. ನೆರವು ಕಾರ್ಯಕ್ರಮಗಳನ್ನು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಮತದಾರಿಗೆ ಮನಮುಟ್ಟಿಸಿದರೆ ಕೈ ಗೆಲುವು ಕಷ್ಟವೇನಲ್ಲ.
ಅದಲ್ಲದೆ ಅಭಿವೃದ್ಧಿಪರ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿ ಉಳಿದಿರುವುದರಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಮೊದಲ ಬಾರಿ ಮಹಿಳೆಯೊಬ್ಬರು ಸಂಸದರಾಗಿ ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ವಿಧಾನಸಭಾ ಕ್ಷೇತ್ರಗಳು
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ಒಟ್ಟು 8 ಕ್ಷೇತ್ರಗಳನ್ನು ಒಳಗೊಂಡಿದೆ. ಎಲ್ಲವೂ ಸಾಮಾನ್ಯ ಕ್ಷೇತ್ರಗಳಾಗಿವೆ. ಗೋವಿಂದರಾಜನಗರ, ವಿಜಯನಗರ ಹಾಗೂ ಬಿಟಿಎಂ ಲೇಔಟ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಾಂಗ್ರೆಸ್ ಜಯಗಳಿಸಿದ್ದರೆ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭ ನಗರ, ಜಯನಗರ, ಬೊಮ್ಮನಹಳ್ಳಿ ಕ್ಷೇತ್ರಗಳು ಬಿಜೆಪಿ ತೆಕ್ಕೆಯಲ್ಲಿವೆ.
ಪುರುಷರಿಗಿಂತ ಮಹಿಳಾ ಮತದಾರರು ಅಧಿಕ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಪುರುಷರು 9,43 ಲಕ್ಷ, ಮಹಿಳೆಯರು 10,85 ಲಕ್ಷ ಒಳಗೊಂಡು ಒಟ್ಟು 21,81 ಲಕ್ಷ ಮತದಾರರಿದ್ದಾರೆ. ಕೆಲವೊಂದು ಅಂಕಿಅಂಶಗಳ ಪ್ರಕಾರ ಜಾತಿವಾರು ಮತದಾರರ ಪೈಕಿ ಒಕ್ಕಲಿಗ 2.7 ಲಕ್ಷ, ಬ್ರಾಹ್ಮಣ 2.5 ಲಕ್ಷ, ಎಸ್ಸಿಎಸ್ಟಿ 6 ಲಕ್ಷ, ಮುಸ್ಲಿಂ 2.4 ಲಕ್ಷ, ಇತರೆ ಹಿಂದುಳಿದ ಸಮುದಾಯದವರು 5 ಲಕ್ಷ ಮಂದಿ ಇದ್ದಾರೆ.
ಜಾತಿವಾರು ಲೆಕ್ಕ ಹಿಡಿದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧ್ಯ ಎನಿಸಿದರೂ, ನಗರಪ್ರದೇಶದ ಜನ ಮೋದಿ ಪರವಿರುವುದು ಬಿಜೆಪಿಗೆ ವರದಾನವಾಗಿದೆ. ಯಾರು ಗೆದ್ದರೂ, ಅಲ್ಪಮತಗಳ ಅಂತರದಲ್ಲಿ, ಎನ್ನುವುದು ಮತದಾರರ ಅನಿಸಿಕೆಯಾಗಿದೆ.