ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಮಹಾರಾಷ್ಟ್ರದ ಶಿವಸೇನಾ ನಾಯಕ (ಶಿಂಧೆ ಬಣ) ಸಂಜಯ್ ಗಾಯಕ್ವಾಡ್ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ ಸಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಮಂಗಳವಾರ ಕೆಪಿಸಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಉದ್ದೇಶಿಸಿ ಮಾತನಾಡಿದ, ಜಿ ಸಿ ಚಂದ್ರಶೇಖರ್, “ಶಿಂಧೆ ಬಣದ ಶಿವಸೇನೆಯ ಗೂಂಡಾ ಶಾಸಕ ಸಂಜಯ್ ಗಾಯಕ್ವಾಡ್ ಅವರ ಹೇಳಿಕೆ ಖಂಡಿಸಿ ಕೆಪಿಸಿಸಿ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಬಿಜೆಪಿ ಬೆಂಬಲಿತ ಪಕ್ಷಗಳು ಹಾಗೂ ಬಿಜೆಪಿ ಇಂತಹವರಿಗೆ ಕುಮ್ಮಕ್ಕು ನೀಡಿ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಮಾತನಾಡುವುದು ಸರ್ವೇ ಸಾಮಾನ್ಯವಾಗಿದೆ” ಎಂದು ಕಿಡಿಕಾರಿದರು.
“ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡಿರುವ ಶಾಸಕ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಆತನಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ. ಮಹಾರಾಷ್ಟ್ರದಲ್ಲಿ ಆಡಳಿತ ಮಾಡುತ್ತಿರುವುದೂ ಗೂಂಡಾ ಸರ್ಕಾರ. ಇಂತಹ ಸರ್ಕಾರದ ಶಾಸಕ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ” ಎಂದರು.
“ರಾಹುಲ್ ಗಾಂಧಿ ಅವರ ಹೇಳಿಕೆ ಸಂಪೂರ್ಣವಾಗಿ ನೋಡದೇ, ಅದನ್ನು ತಿರುಚಿ, ದೇಶದೆಲ್ಲೆಡೆ ಪ್ರಚೋದನೆ ನೀಡುವ ಹೇಳಿಕೆ ನೀಡಲಾಗಿದೆ. ಆಮೂಲಕ ಪರಿಶಿಷ್ಟರು, ಶೋಷಿತರನ್ನು ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿ ಹಾಗೂ ಅವರ ಮೈತ್ರಿ ಪಕ್ಷಗಳು ದಲಿತರು ಹಾಗೂ ಹಿಂದುಳಿದ ವರ್ಗಗಳ ವಿರೋಧಿ ಪಕ್ಷಗಳು. ಇವರು ಸದಾ ಮೀಸಲಾತಿ ವಿರೋಧ ಮಾಡಿಕೊಂಡು ಬಂದವರು. ಕಾಂಗ್ರೆಸ್ ಪಕ್ಷವೇ ದೇಶದಲ್ಲಿ ಮೀಸಲಾತಿ ತಂದಿದ್ದು, ಕಾಂಗ್ರೆಸ್ ಹೇಗೆ ಇದನ್ನು ವಿರೋಧಿಸಲು ಸಾಧ್ಯ: ಎಂದು ಪ್ರಶ್ನಿಸಿದರು.
“ಎಲ್ಲಿಯತನಕ ನಮ್ಮ ದೇಶದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾನತೆ ಬರುವುದಿಲ್ಲವೋ, ಅಲ್ಲಿಯವರೆಗೂ ಮೀಸಲಾತಿ ತೆಗೆಯಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಅವರು ತಿಳಿಸಿದರು. ಆದರೆ ರಾಹುಲ್ ಗಾಂಧಿ ಅವರ ಹೇಳಿಕೆ ಕೆಲ ಭಾಗವನ್ನು ಮಾತ್ರ ಕಟ್ ಮಾಡಿ ಪ್ರಚಾರ ಮಾಡುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಪ್ರಧಾನಿಯಾಗಿ ನೂರು ದಿನ: ಹಿನ್ನಡೆಯೋ, ಮುನ್ನಡೆಯೋ?
“ನೈತಿಕತೆ ಇದ್ದರೆ, ದಲಿತರು, ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಮುನಿರತ್ನ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ. ಅದನ್ನು ಬಿಟ್ಟು ಸಮರ್ಥನೆ ಮಾಡಿಕೊಳ್ಳಲು ನಿಮಗೆ ನಾಚಿಕೆಯಾಗುವುದಿಲ್ಲವೇ? ನೀವು ಕರ್ನಾಟಕದಲ್ಲಿರಲು ನಾಲಾಯಕ್ ಮನುಷ್ಯ. ನೀವು ರಾಜ್ಯದ ಯಾವುದೇ ಯೋಜನೆಗೆ ನೆರವಾಗಿಲ್ಲ, ನೀವು ಕರ್ನಾಟಕ ವಿರೋಧಿಯಾಗಿದ್ದೀರಿ” ಎಂದು ಪ್ರಲ್ಹಾದ್ ಜೋಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಐಸಿಸಿ ಕಾರ್ಯದರ್ಶಿ ಬಿ ಎಂ ಸಂದೀಪ್ ಮಾತನಾಡಿ, “ಬಿಜೆಪಿ ಹಾಗೂ ಅದರ ಮೈತ್ರಿ ನಾಯಕರು ರಾಹುಲ್ ಗಾಂಧಿ ಅವರ ಬಗ್ಗೆ ನಿರಂತರವಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಸಂಜಯ್ ಗಾಯಕ್ವಾಡ್ ಅವರು ರಾಹುಲ್ ಗಾಂಧಿ ಅವರ ಸಂದರ್ಶನವನ್ನು ತಿರುಚಿ ನೀಡಿರುವ ಹೇಳಿಕೆ ಕೀಳುಮಟ್ಟದಾಗಿದೆ” ಎಂದು ಹೇಳಿದರು.
“ಮನುವಾದಿ ಬಿಜೆಪಿ, ಆರ್ ಎಸ್ಎಸ್ ಹಾಗೂ ಅದರ ಮಿತ್ರ ಪಕ್ಷಗಳು ಸದಾ ಸಂವಿಧಾನ ವಿರೋಧಿಗಳು. ಆರ್ ಎಸ್ಎಸ್ ಪ್ರಮುಖ ಹುದ್ದೆಯಲ್ಲಿ ದಲಿತರಿದ್ದಾರಾ? ಕಾಂಗ್ರೆಸ್ ಪಕ್ಷದಲ್ಲಿ ದಲಿತರಾದ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಅಧ್ಯಕ್ಷರಾಗಿದ್ದಾರೆ. ಇಂತಹ ಸಾವಿರಾರು ಉದಾಹರಣೆಗಳು ಕಾಂಗ್ರೆಸ್ ಪಕ್ಷದಲ್ಲಿವೆ” ಎಂದರು.
“ಶೋಷಿತರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾನತೆ ನೀಡುವ ಕೆಲಸ ಮಾಡಿರುವುದು ಕಾಂಗ್ರೆಸ್. ಇದನ್ನು ಆರ್ ಎಸ್ಎಸ್ ಎಂದಿಗೂ ಸಹಿಸುವುದಿಲ್ಲ. ರಾಹುಲ್ ಗಾಂಧಿ ಅವರ ಹೇಳಿಕೆ ತಿರುಚಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಮೋದಿ ಅವರು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ತಿರುಚಿದ್ದರು. ಬಿಜೆಪಿಯ ಅಸಮಾನತೆ ಸಿದ್ಧಾಂತದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿದೆ” ಎಂದು ಎಚ್ಚರಿಸಿದರು.
ವಿಧಾನ ಪರಿಷತ್ ಸದಸ್ಯರಾದ ಯು.ಬಿ ವೆಂಕಟೇಶ್, ನಾಗರಾಜ್ ಯಾದವ್, ಎಐಸಿಸಿ ಕಾರ್ಯದರ್ಶಿಗಳಾದ ಬಿ.ಎಂ ಸಂದೀಪ್, ಸೂರಜ್ ಹೆಗ್ಡೆ, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಮತ್ತು ಮಾಧ್ಯಮ ಕಾರ್ಯದರ್ಶಿಗಳಾದ ದೀಪಕ್ ತಿಮ್ಮಯ, ಕೆಪಿಸಿಸಿ ಖಜಾಂಚಿಗಳಾದ ವಿನಯ್ ಕಾರ್ತಿಕ್, ಕೆಪಿಸಿಸಿ ಉಪಾಧ್ಯಕ್ಷರಾದ ನಾರಾಯಣ ಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವಿಜಯ್ ಮುಳಗುಂದ್, ಜಿಲ್ಲಾಧ್ಯಕ್ಷರುಗಳಾದ ಹನುಮಂತರಾಯಪ್ಪ, ಅಬ್ದುಲ್ ವಾಜಿದ್, ಕೆ.ವಿ ಗೌತಮ್, ಮಂಜುನಾಥ್, ನಂದಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.