ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಿದ್ದ ವಿಪಕ್ಷ ನಾಯಕರನ್ನು ಮೊಘಲರಿಗೆ ಹೋಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಹಾಗೂ ಆರ್‌ಜೆಡಿ ತಿರುಗೇಟು ನೀಡಿವೆ.
ಪ್ರಧಾನಿ ಮೋದಿ ಅವರು ಆರ್‌ಜೆಡಿಯ ಲಾಲು ಪ್ರಸಾದ್, ಅವರ ಪುತ್ರ ತೇಜಸ್ವಿ ಯಾದವ್ ಮತ್ತು ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ನೀಡಿದ ಈ ಹೇಳಿಕೆಯ ಬಳಿಕ ಎರಡೂ ವಿಪಕ್ಷಗಳು ಮೋದಿ ವಿರುದ್ಧ ವಾಗ್ದಾಳಿ ನಡೆಸಿವೆ.
“ಭಯಭೀತರಾಗಿರುವ ಪ್ರಧಾನಿಯೊಬ್ಬರು ತಮ್ಮ ‘ಅನಾರೋಗ್ಯದ ಮನಸ್ಥಿತಿ’ಗೆ ಹೊಸ ಉದಾಹರಣೆಯನ್ನು ನೀಡುತ್ತಿದ್ದಾರೆ” ಎಂದು ಕಾಂಗ್ರೆಸ್ ಹೇಳಿದರೆ, “ಪ್ರಧಾನಿ ಅವರಿಗೆ ಚುನಾವಣೆ ಸಮೀಪಿಸುತ್ತಿದ್ದಂತೆ ಆತಂಕ ಹೆಚ್ಚಾಗಿದೆ. ಆದ್ದರಿಂದ ಸೂಕ್ಷ್ಮ, ಧಾರ್ಮಿಕ ಮತ್ತು ಭಾವನಾತ್ಮಕ ವಿಚಾರವನ್ನು ಮಾತನಾಡುತ್ತಿದ್ದಾರೆ” ಎಂದು ಆರ್‌ಜೆಡಿ ಹೇಳಿದೆ.
ಇದನ್ನು ಓದಿದ್ದೀರಾ? ಲೋಕಸಭಾ ಚುನಾವಣೆ | ಪೆರಿಯಾರ್-ಸಾಮಾಜಿಕ ನ್ಯಾಯ ಮತ್ತು ಆರ್‌ಎಸ್‌ಎಸ್-ಮೋದಿ ನಡುವಿನ ಯುದ್ಧ: ರಾಹುಲ್ ಗಾಂಧಿ
ಸೆಪ್ಟೆಂಬರ್‌ನಲ್ಲಿ ಆರ್‌ಜೆಡಿಯ ಲಾಲು ಪ್ರಸಾದ್ ಮತ್ತು ರಾಹುಲ್ ಗಾಂಧಿ ಅವರು ಮಾಂಸದ ಅಡುಗೆ ಮಾಡಿದ್ದರು. ಅದಾದ ಬಳಿಕ ತೇಜಸ್ವಿ ಅವರು ಈ ವಾರದಲ್ಲಿ ಮೀನೂಟ ಸೇವಿಸಿದ್ದರು. ಇದರ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ.
ಉಧಂಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಪ್ರಧಾನಿ ಮೋದಿ, “ಶ್ರಾವಣ ಮಾಸದಲ್ಲಿ ಮಟನ್ ತಯಾರಿಸುವ ವಿಡಿಯೋವನ್ನು ಹರಿಬಿಡುವ ಮೂಲಕ ಯಾರ ಭಾವನೆಗಳಿಗೆ ಧಕ್ಕೆ ತರಲು ನೀವು ಪ್ರಯತ್ನಿಸುತ್ತಿದ್ದೀರಿ” ಎಂದಿದ್ದಾರೆ. ಅಲ್ಲದೆ, ವಿಪಕ್ಷ ನಾಯಕರನ್ನು ಮೊಘಲರಿಗೆ ಹೋಲಿಸಿದ್ದಾರೆ.
“ಈ ಜನರು ಈಗ ನನ್ನ ಮೇಲೆ ನಿಂದನೆ ಮಾಡುತ್ತಾರೆಂದು ನನಗೆ ತಿಳಿದಿದೆ. ಆದರೆ ವಿಷಯವು ನಿಯಂತ್ರಣ ತಪ್ಪಿದಾಗ ಈ ವಿಷಯಗಳ ಬಗ್ಗೆ ಜನರಿಗೆ ತಿಳಿಸುವುದು ನನ್ನ ಕರ್ತವ್ಯವಾಗಿದೆ” ಎಂದು ಮೋದಿ ಹೇಳಿಕೊಂಡಿದ್ದಾರೆ.
ಇದಾದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ತೇಜಸ್ವಿ, “ಬಡತನ, ನಿರುದ್ಯೋಗ, ಉದ್ಯೋಗಗಳಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಬೇಕಾಗಿದೆ. ಬಡತನ ಏಕೆ ನಿರ್ಮೂಲನೆಯಾಗಿಲ್ಲ? ಬಿಹಾರಕ್ಕೆ ಏಕೆ ವಿಶೇಷ ಸ್ಥಾನಮಾನ ನೀಡಲಿಲ್ಲ” ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು. ಏಪ್ರಿಲ್ 8ರ, ಅಂದರೆ ನವರಾತ್ರಿ ಪ್ರಾರಂಭವಾಗುವ ಮೊದಲ ವೀಡಿಯೊ ಇದಾಗಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ರೈತರ ಕನಿಷ್ಠ ಬೆಂಬಲ ಬೆಲೆ, ಯುವಕರ ಉದ್ಯೋಗದ ಬಗ್ಗೆ ಕೇಳಿಸಿಕೊಳ್ಳದ ಕೇಂದ್ರ: ರಾಹುಲ್ ಗಾಂಧಿ
ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ದು, “ಪ್ರಧಾನಿಯಂತೆ, ಯಾವ ನಾಯಕರು ಯಾವ ತಿಂಗಳಲ್ಲಿ ಏನು ತಿಂದರು ಎಂಬುದನ್ನು ನಾವು ನೋಡುತ್ತಾ ಕೂತಿಲ್ಲ. ಬದಲಾಗಿ ಪೌಷ್ಟಿಕಾಂಶದ ಡೇಟಾದ ಅಂಕಿಅಂಶ ಎಲ್ಲಿಗೆ ತಲುಪಿದೆ ಎಂಬುವುದರ ಕಡೆ ನಾವು ಗಮನಹರಿಸುತ್ತೇವೆ. ದೇಹದಲ್ಲಿ ಕಬ್ಬಿಣಾಂಶದ ಕೊರತೆ, ಅಸಮರ್ಪಕ ಆಹಾರ, ಮತ್ತು ಇತರ ಪೋಷಕಾಂಶಗಳ ಕೊರತೆ ಸೇರಿದಂತೆ ಹಲವಾರು ಅಂಶಗಳಿಂದ ರಕ್ತಹೀನತೆ ಉಂಟಾಗುತ್ತದೆ” ಎಂದು ತಿಳಿಸಿದರು.
“2015-16 ಮತ್ತು 2019-21 ರ ನಡುವೆ, 5 ವರ್ಷದೊಳಗಿನ ಮಕ್ಕಳಲ್ಲಿ ರಕ್ತಹೀನತೆ ಸುಮಾರು ಶೇಕಡ 10ರಷ್ಟು ಹೆಚ್ಚಾಗಿದೆ. 15 ರಿಂದ 19 ವರ್ಷ ವಯಸ್ಸಿನ ಮಹಿಳೆಯರಲ್ಲಿ, ರಕ್ತಹೀನತೆಯ ಪ್ರಮಾಣವು ಶೇಕಡ 9.2ರಷ್ಟು ಅಧಿಕವಾಗಿದೆ. ಪ್ರಧಾನಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿ, ಐದು ವರ್ಷದೊಳಗಿನ ಹತ್ತು ಮಕ್ಕಳ ಪೈಕಿ ಎಂಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿರುವುದು ಕಂಡುಬಂದಿದೆ” ಎಂದು ಅಂಕಿ ಅಂಶಗಳ ಮೂಲಕ ತಿರುಗೇಟು ನೀಡಿದರು.
“ಪ್ರತಿದಿನವೂ ಪ್ರಧಾನಿಯವರು ತಮ್ಮ ಅನಾರೋಗ್ಯದ ಮನಸ್ಥಿತಿಯ ಹೊಸ ಉದಾಹರಣೆಯನ್ನು ನಮಗೆ ನೀಡುತ್ತಾರೆ. ಪ್ರಧಾನಿಯವರ ಈ ರಾಜಕಾರಣ ಬಾಲಿಶ. ಮೊದಲ ಹಂತದ ಚುನಾವಣೆಗೆ ಒಂದು ವಾರ ಮುಂಚಿತವಾಗಿ, ಬಿಜೆಪಿ ಕೇವಲ ಪ್ರಣಾಳಿಕೆ ಸಮಿತಿಯನ್ನು ಸೇರಿಸಿದೆ. ಆದರೆ ಕಾಂಗ್ರೆಸ್ ಈಗಾಗಲೇ ಪ್ರಣಾಳಿಕೆ ಪ್ರಕಟಿಸಿ ಪ್ರತಿ ಮನೆಗೆ ನಮ್ಮ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುತ್ತಿದೆ, ಪ್ರಚಾರ ಪ್ರಾರಂಭಿಸಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಸಂಪತ್ತಿನ ಪುನರ್‌ಹಂಚಿಕೆ ಸಮೀಕ್ಷೆ: ರಾಹುಲ್ ಗಾಂಧಿ
ಆರ್‌ಜೆಡಿ ವಕ್ತಾರ ಸುಬೋಧ್ ಕುಮಾರ್ ಮೆಹ್ತಾ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಪ್ರಧಾನಿ ಹೇಳಿಕೆಯನ್ನು ನಾವು ಖಂಡಿಸುತ್ತೇವೆ, ವಿಶೇಷವಾಗಿ ನಮ್ಮ ನಾಯಕ ಲಾಲು ಪ್ರಸಾದ್ ಅವರ ವಿರುದ್ಧ ಮಾಡಿದ ಭಾಷೆಯ ಬಳಕೆಯನ್ನು ನಾವು ಖಂಡಿಸುತ್ತೇವೆ” ಎಂದಿದ್ದಾರೆ.
“ಯಾವುದೇ ಕಾನೂನು ಅಥವಾ ಧಾರ್ಮಿಕ ಪಠ್ಯವು ನಮ್ಮ ಆಹಾರದ ಆಯ್ಕೆಗೆ ನಿರ್ಬಂಧ ಹೊಂದಿಲ್ಲ ಎಂದು ಪ್ರಧಾನಿ ಸ್ವತಃ ಒಪ್ಪಿಕೊಂಡಿದ್ದಾರೆ. ಆದರೆ ಚುನಾವಣಾ ಪ್ರಚಾರದ ಆರಂಭದಲ್ಲಿಯೇ ಅವರ ಇಂತಹ ಹೇಳಿಕೆಗಳು ಅವರು ಚುನಾವಣೆಯ ಬಗ್ಗೆ ಆತಂಕಗೊಂಡಿದ್ದಾರೆ ಎಂಬುವುದನ್ನು ಸ್ಪಷ್ಟಪಡಿಸುತ್ತದೆ. ಬಹುಶಃ ಅವರು ಗೋಡೆ ಬರಹಗಳನ್ನು ನೋಡಿರಬಹುದು” ಎಂದು ಲೇವಡಿ ಮಾಡಿದ್ದಾರೆ.