1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ಸಮಯದಲ್ಲಿ ಹಿಂದುತ್ವದ ಅಬ್ಬರ ಮುನ್ನೆಲೆಯಲ್ಲಿತ್ತು. ಅದೇ ಸಮಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಿತು. ಆಗಲೂ, ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಸರ್ಕಾರ ರಚಿಸಿತು. ಹಿಂದುತ್ವಕ್ಕೆ ಆ ರಾಜ್ಯದ ಜನರು ಕಿಮ್ಮತ್ತು ನೀಡಿರಲಿಲ್ಲ.
2024ಕ್ಕೆ ಲೋಕಸಭಾ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗಳನ್ನು ಎದುರಿಸುತ್ತಲೇ ಲೋಕಸಭಾ ಚುನಾವಣೆಗೆ ಎಲ್ಲ ಪಕ್ಷಗಳು ತಯಾರಿ ನಡೆಸುತ್ತಿವೆ. ಈ ನಡುವೆ, ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ `ಮೃದು ಹಿಂದುತ್ವ’ವನ್ನು ಪ್ರದರ್ಶಿಸುತ್ತಿದೆ ಎಂದೂ ಹೇಳಲಾಗುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಕಾಂಗ್ರೆಸ್ ನಾಯಕರು ದೇವಾಲಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಫೋಟೋಗಳನ್ನು ಕ್ಲಿಕ್ಕಿಸಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ. ಕರ್ನಾಟಕದಂತೆಯೇ ಆ ರಾಜ್ಯಕ್ಕೂ ಐದು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಭರವಸೆಗಳನ್ನು ಘೋಷಿಸಿದ ತಕ್ಷಣವೇ ಅವರು ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು.
ಜೊತೆಗೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸೋಲಿಸಿ, ಮತ್ತೆ ಮುಖ್ಯಮಂತ್ರಿ ಗಾದಿಗೇರಲು ಹವಣಿಸುತ್ತಿರುವ ಕಮಲ್ ನಾಥ್ ಅವರೂ ಪುರೋಹಿತರಿಗೆ ಭರವಸೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ, ರಾಜ್ಯದ ಎಲ್ಲ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ಇತ್ತೀಚೆಗೆ ಹಿಂದುತ್ವವಾದಿ ಸಂಘಟನೆಗಳನ್ನೇ ಹೋಲುವಂತಹ ಕಾರ್ಯಕ್ರಮವನ್ನು ಕಮಲ್ನಾಥ್ ನಡೆಸಿದ್ದಾರೆ. ಕಾಂಗ್ರೆಸ್ನ ಈ ನಡವಳಿಕೆ ಇತ್ತೀಚಿನದಲ್ಲದಿದ್ದರೂ, ಅದು ಹೊಸತರಂತೆ ಕಾಣುತ್ತಿದೆ.

ಈ ನಡುವೆ, ‘2014ರಲ್ಲಿ ಸೋಲುಂಡ ನಂತರ, ಕಾಂಗ್ರೆಸ್ಅನ್ನು ‘ಮುಸ್ಲಿಂ ತುಷ್ಟೀಕರಣ’ ಪಕ್ಷವೆಂದು ಬಹುತೇಕ ಹಿಂದು ಮತದಾರರು ಗ್ರಹಿಸಲು ಆರಂಭಿಸಿದ್ದಾರೆ’ ಎಂದು ಎಕೆ ಆಂಟನಿ ವರದಿ ಹೇಳಿದ್ದಾಗಿ ವರದಿಯಾಗಿದೆ. ಅಂದಿನಿಂದ, ಬಿಜೆಪಿಗೆ ಹಿಂದು ಮತಬ್ಯಾಂಕ್ ಹೆಚ್ಚಾಗಿದೆ. ಇದನ್ನು ತಡೆಯುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಹತಾಶವಾಗಿದೆ. ಹೀಗಾಗಿ, ಮಧ್ಯಪ್ರದೇಶದಲ್ಲಿ ಮುಂಬರುವ ಚುನಾವಣಾ ಪ್ರಚಾರದ ಸಮಯದಲ್ಲಿ ಪಕ್ಷವು ತನ್ನ ಮೃದು ಹಿಂದುತ್ವವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಿಂಬಿಸಬೇಕೆಂದು ಅನೇಕ ಕಾಂಗ್ರೆಸ್ ನಾಯಕರು ಬಯಸಿದ್ದಾರೆಂದು ಹೇಳಲಾಗುತ್ತಿದೆ.
ಆದರೂ, ಚುನಾವಣಾ ಅಂಕಿಅಂಶಗಳು ಮತ್ತು ರಾಜಕೀಯ ಲೆಕ್ಕಾಚಾರಗಳು ಮಧ್ಯಪ್ರದೇಶದಲ್ಲಿ ಗೆಲ್ಲಲು ಕಾಂಗ್ರೆಸ್ಗೆ ನಿಜವಾಗಿಯೂ ‘ಮೃದು ಹಿಂದುತ್ವ ಪ್ರದರ್ಶನ’ದ ಅಗತ್ಯವಿಲ್ಲವೆಂದು ಸೂಚಿಸುತ್ತಿವೆ. ಅದನ್ನು 2014ರ ಲೋಕಸಭಾ ಚುನಾವಣೆ ನಡೆದ ನಂತರದಲ್ಲಿ ಕಾಂಗ್ರೆಸ್ ಗೆದ್ದ ರಾಜ್ಯ ಚುನಾವಣೆಗಳನ್ನು ನೋಡಿದರೆ ಅದು ಸ್ಪಷ್ಟವಾಗುತ್ತದೆ.
2017ರಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ಪಂಜಾಬ್ಅನ್ನು ಕಾಂಗ್ರೆಸ್ ನಿರಾಯಾಸವಾಗಿ ಗೆದ್ದುಕೊಂಡಿತು. ಪಂಜಾಬ್ ರಾಜಕೀಯದಲ್ಲಿ ಹಿಂದುತ್ವಕ್ಕೆ ಯಾವುದೇ ಪಾತ್ರವಿಲ್ಲ. ಅಲ್ಲದೆ, 2018ರ ಅಂತ್ಯದಲ್ಲಿ ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನವನ್ನು ಗೆದ್ದಿತು. ಅಲ್ಲಿಯೂ ಹಿಂದುತ್ವದ ಯಾವುದೇ ಹಿಕಮತ್ತು ಇರಲಿಲ್ಲ. ಛತ್ತೀಸ್ಗಢದಲ್ಲಿ 15 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದ ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಹೋರಾಟ ಕಾಂಗ್ರೆಸ್ಗೆ ಭರ್ಜರಿ ಜಯ ತಂದುಕೊಟ್ಟಿತು. ಕಾಂಗ್ರೆಸ್ 2.7% ಹೆಚ್ಚು ಮತಗಳನ್ನು ಗಳಿಸಿತು. ಆದರೆ, ಬಿಜೆಪಿ ಮತ ಹಂಚಿಕೆಯು 8% ಕುಸಿತ ಕಂಡಿತು. ಕರ್ನಾಟಕ ಮತ್ತು ಹಿಮಾಚಲದಂತೆಯೇ ರಾಜಸ್ಥಾನವೂ ಪ್ರತಿ ಐದು ವರ್ಷಗಳಿಗೊಮ್ಮೆ ಸರ್ಕಾರಗಳನ್ನು ಬದಲಾಯಿಸುತ್ತದೆ. ಅದೇನೇ ಇರಲಿ, ಕಾಂಗ್ರೆಸ್ ಮತ ಹಂಚಿಕೆ ಬಿಜೆಪಿಗಿಂತ ಶೇ.1ರಷ್ಟು ಹೆಚ್ಚಿದೆ.

ಇನ್ನು, ಮಧ್ಯಪ್ರದೇಶವನ್ನೂ ಹಿಂದೆ ಕಾಂಗ್ರೆಸ್ ಗೆದ್ದಿತ್ತು. ಆದರೆ, ಆಪರೇಷನ್ ಕಮಲಕ್ಕೆ ಸರ್ಕಾರ ಬಲಿಯಾಗಿ, ಅಧಿಕಾರ ಕಳೆದುಕೊಂಡಿತು. ಅಲ್ಲಿನ ಪರಿಷ್ಕೃತ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಎರಡೂ ಪಕ್ಷಗಳ ಮತ ಹಂಚಿಕೆಯು 41.3% ರಷ್ಟಿದೆ. ಅಲ್ಲಿಯೂ ಹಿಂದುತ್ವದ ಯಾವುದೇ ಪ್ರಭಾವವಿಲ್ಲ. ಅಲ್ಲಿ, ಆಹಾರ ಮತ್ತು ಸ್ಥಳೀಯ ಸಮಸ್ಯೆಗಳು ನಿರ್ಣಾಯಕ ಪಾತ್ರ ವಹಿಸಿವೆ.
ಈ ಸುದ್ದಿ ಓದಿದ್ದೀರಾ?: ಮಹಾರಾಷ್ಟ್ರ | ಬಿಜೆಪಿ ಔರಂಗಜೇಬ್ನನ್ನು ಗೋರಿಯಿಂದ ಎಬ್ಬಿಸಿದ್ದೇಕೆ?
2019ರ ಲೋಕಸಭಾ ಚುನಾವಣೆಯ ನಂತರವೂ, ಕಾಂಗ್ರೆಸ್ ಎರಡು ರಾಜ್ಯಗಳನ್ನು ಗೆದ್ದಿದೆ. ಹಿಮಾಚಲ ಪ್ರದೇಶ (2022) ಮತ್ತು ಕರ್ನಾಟಕ (2023) ಕಾಂಗ್ರೆಸ್ಗೆ ಅಧಿಕಾರ ನೀಡಿವೆ. ಹಿಮಾಚಲದಲ್ಲಿ, ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಭರವಸೆಯು ಮತದಾರರನ್ನು ಕಾಂಗ್ರೆಸ್ನತ್ತ ಸೆಳೆಯಿತು.
ಇನ್ನು, ಹಿಜಾಬ್, ಹಲಾಲ್, ಲವ್ ಜಿಹಾದ್, ಗೋಹತ್ಯೆ ನಿಷೇಧ ಸೇರಿದಂತೆ ಹಿಂದುತ್ವದ ಮೇಲೆ ಬಿಜೆಪಿ ಎಷ್ಟೇ ಆಟವಾಡಿದರೂ ಕರ್ನಾಟಕದಲ್ಲಿ ಬಿಜೆಪಿ ಸೋಲುಂಡಿತು. ಕಾಂಗ್ರೆಸ್ ಗೆಲುವು ಸಾಧಿಸಿತು. ಇಲ್ಲಿ, ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳು ಮತ್ತು ಬಿಜೆಪಿ ಸರ್ಕಾರದ ವಿರುದ್ಧವಿದ್ದ ಭ್ರಷ್ಟಾಚಾರದ ಆರೋಪಗಳು ಹಾಗೂ ಆಡಳಿತ ವಿರೋಧಿ ಅಲೆಯು ಕಾಂಗ್ರೆಸ್ ಭಾರೀ ಬಹುಮತ ತಂದುಕೊಟ್ಟಿತು. ಕರ್ನಾಟಕದಲ್ಲಿ ಭಜರಂಗದಳವನ್ನು ನಿಷೇಧಿಸುವ ಕಾಂಗ್ರೆಸ್ನ ಭರವಸೆಯೂ ಪಕ್ಷದ ವಿರುದ್ಧ ಯಾವುದೇ ಪರಿಣಾಮ ಬೀರಲಿಲ್ಲ.
ಕಾಂಗ್ರೆಸ್ ಮತ್ತು ಮುಸ್ಲಿಂ ಮತಗಳು
ಕಳೆದ ಮೂರು ದಶಕಗಳಲ್ಲಿ ಮುಸ್ಲಿಮರ ಮತದಾನದ ದಾಖಲೆಗಳನ್ನು ನೋಡಿದರೆ, ಅವರು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ಇರುವ ರಾಜ್ಯಗಳಲ್ಲಿ ಕಾಂಗ್ರೆಸ್ಗೆ ಮತ ಹಾಕಿದ್ದಾರೆ. ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿರುವ ರಾಜ್ಯಗಳಲ್ಲಿ ಅವರು ಕಾಂಗ್ರೆಸ್ಗಿಂತ ಪ್ರಾದೇಶಿಕ ಪಕ್ಷಗಳಿಗೇ ಹೆಚ್ಚು ಮತ ಚಲಾಯಿಸಿದ್ದಾರೆ.
ಮುಸ್ಲಿಂ ಮತದಾರರು ಮೂರ್ಖರಲ್ಲ. ಅವರು ಬಿಜೆಪಿ ಮತ್ತದರ ಮಿತ್ರಪಕ್ಷಗಳನ್ನು ಸೋಲಿಸಲು ಸ್ಥಳೀಯವಾಗಿ ಭಾರೀ ಪೈಪೋಟಿ ನೀಡುವ ಪಕ್ಷ ಅಥವಾ ಅಭ್ಯರ್ಥಿಗೆ ಮತ ಹಾಕುತ್ತಾರೆ. ಇದಕ್ಕೆ, 2019ರಲ್ಲಿ ಔರಂಗಾಬಾದ್ ಲೋಕಸಭಾ ಕ್ಷೇತ್ರದ ಫಲಿತಾಂಶವು ಉತ್ತಮ ಉದಾಹರಣೆಯಾಗಿದೆ. ಅಲ್ಲಿ ಕಾಂಗ್ರೆಸ್ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಅಲ್ಲಿ, ಎಐಎಂಐಎಂನ ಇಮ್ತಿಯಾಜ್ ಜಲೀಲ್, ಶಿವಸೇನಾ ಅಭ್ಯರ್ಥಿಯ ವಿರುದ್ಧ ಸುಮಾರು 4,000 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಅಂತೆಯೇ, ಕರ್ನಾಟಕದಲ್ಲಿ ಜೆಡಿಎಸ್ ತೆಕ್ಕೆಯಲ್ಲಿದ್ದ ಮುಸ್ಲಿಂ ಮತಗಳು, ಭಜರಂಗದಳವನ್ನು ನಿಷೇಧಿಸುವ ಭರವಸೆ ನೀಡುವ ಮೂಲಕ ಹಿಂದುತ್ವ ವಿರೋಧಿ ನಿಲುವನ್ನು ಪ್ರದರ್ಶಿಸಿದ ಕಾಂಗ್ರೆಸ್ನತ್ತ ವಾಲಿದವು.
ಮಧ್ಯಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಎಐಎಂಐಎಂ ಮತ್ತು ಇತರ ಪಕ್ಷಗಳಿಂದ ಅದು ಸಾಧ್ಯವಿಲ್ಲ ಎಂಬುದನ್ನು ಮುಸ್ಲಿಂ ಮತದಾರರು ಸ್ಪಷ್ಟವಾಗಿ ತಿಳಿದಿದ್ದಾರೆ. ಹೀಗಿರುವಾಗ, ಕಾಂಗ್ರೆಸ್ ಮೃದು ಹಿಂದುತ್ವದ ಚುನಾವಣಾ ನಿಲುವನ್ನು ಅಳವಡಿಸಿಕೊಳ್ಳುವ ಮೂಲಕ ಅನಗತ್ಯವಾಗಿ ಮುಸ್ಲಿಮರನ್ನು ಯಾಕೆ ದೂರವಿಡಬೇಕು? ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಬಿಜೆಪಿಯನ್ನು ಕಾಂಗ್ರೆಸ್ ನಕಲು ಮಾಡುವ ಅಗತ್ಯವಿಲ್ಲ
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ 35% ಕೋರ್ ಬೆಂಬಲಿಗರ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿವೆ. 1960ರ ದಶಕದಿಂದೀಚೆಗೆ ರಾಜ್ಯದಲ್ಲಿ ಸಂಘಪರಿವಾರ ಅಸಾಧಾರಣ ಶಕ್ತಿಯಾಗಿತ್ತು. ತುರ್ತು ಪರಿಸ್ಥಿತಿಯ ನಂತರ, ಮಧ್ಯಪ್ರದೇಶದಲ್ಲಿ ಜನತಾ ಪಕ್ಷದ ಸರ್ಕಾರವು ವಾಸ್ತವವಾಗಿ ಜನಸಂಘ ಸರ್ಕಾರವಾಗಿತ್ತು. ಆದರೂ, ಕಾಂಗ್ರೆಸ್ ಸ್ಥಿರ ಬೆಂಬಲವನ್ನು ಹೊಂದಿದೆ. 1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ಕೆಲವೇ ತಿಂಗಳಲ್ಲಿ (1993) ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಿತು. ಆ ವೇಳೆ ಹಿಂದುತ್ವದ ಪ್ರಚಾರ ಮುನ್ನೆಲೆಯಲ್ಲಿತ್ತು. ಆದರೂ, ಕಾಂಗ್ರೆಸ್ (40.7% ಮತ ಹಂಚಿಕೆ) ಬಿಜೆಪಿಯನ್ನು (38.9% ಮತ ಹಂಚಿಕೆ) ಸೋಲಿಸಿ ಸರ್ಕಾರ ರಚಿಸಿತು. ಅನಾವಶ್ಯಕವಾಗಿ ಮೃದು ಹಿಂದುತ್ವವನ್ನು ಅಳವಡಿಸಿಕೊಂಡು, ರಾಜ್ಯ ರಾಜಕೀಯದಲ್ಲಿ ಚೆಲ್ಲಾಟವಾಡುವ ಮೊದಲು ಪಕ್ಷದ ನಾಯಕರು ಆ ಚುನಾವಣೆಯಿಂದ ಪಾಠ ಕಲಿಯಬೇಕಾಗಿದೆ.
ಮಧ್ಯಪ್ರದೇಶ ರಾಜಕೀಯ ನೋಡಿದರೆ, ಕಳೆದ 30 ವರ್ಷಗಳಲ್ಲಿ 2003ರಲ್ಲಿ ಕಾಂಗ್ರೆಸ್ ಮತಗಳ ಪ್ರಮಾಣವು 35% ಕ್ಕಿಂತ ಕಡಿಮೆಯಾಗಿತ್ತು. ಆಗಲೂ, ಹಿಂದುತ್ವಕ್ಕೆ ಯಾವುದೇ ಪಾತ್ರವಿರಲಿಲ್ಲ. ಅದು ಅಂದಿನ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ವಿರುದ್ಧದ ಜನರ ಆಕ್ರೋಶದ ಫಲವಾಗಿತ್ತು. ಆ ಚುನಾವಣೆಯಲ್ಲಿ ಬಿಜೆಪಿಯೂ ಕೇವಲ 36.8% ಮತಗಳನ್ನಷ್ಟೇ ಗಳಿಸಿತ್ತು.
ಇಷ್ಟೆಲ್ಲಾ ಇದ್ದರೂ ಕೂಡ ಕಾಂಗ್ರೆಸ್ ಮೃದು ಹಿಂದುತ್ವವನ್ನು ಅಳವಡಿಸಿಕೊಂಡಂತೆ ವರ್ತಿಸುತ್ತಿದೆ. ದಿಗ್ವಿಜಯ್ ಸಿಂಗ್ ಅವರಂತಹ ನಾಯಕರು ಮತ್ತೆ ಕೇಸರಿ ಭಯೋತ್ಪಾದನೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದರೆ, ಅದು ಕಾಂಗ್ರೆಸ್ಗೆ ರಾಜಕೀಯ ಆತ್ಮಹತ್ಯೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಮಧ್ಯಪ್ರದೇಶದಲ್ಲಿಯೂ ಆಡಳಿತ ವಿರೋಧಿ ಅಲೆ ಕಾಂಗ್ರೆಸ್ ಅಧಿಕಾರ ನೀಡುವ ಸಾಧ್ಯತೆ ಇದೆ. 2018ಕ್ಕೆ ಹೋಲಿಸಿದರೆ ಮತಗಳ ಹಂಚಿಕೆಯಲ್ಲಿ ಕಾಂಗ್ರೆಸ್ ಪಾಲು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಅದು, ಕಮಲ್ ನಾಥ್ ಅವರಿಗೆ ಮತ್ತೆ ಮುಖ್ಯಮಂತ್ರಿ ಹುದ್ದೆ ನೀಡುತ್ತದೆ.
ಮೂಲ: ದಿ ಕ್ವಿಂಟ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ