- ಕಾಂಗ್ರೆಸ್‌ನಿಂದ ಬುದ್ದಿ ಹೇಳಿಸಿಕೊಳ್ಳುವ ಪರಿಸ್ಥಿತಿ ಯಾರಿಗೂ ಬಂದಿಲ್ಲ
- ಸದನ ಪ್ರಾರಂಭಕ್ಕೂ ಮೊದಲೆ ವಿಪಕ್ಷ ನಾಯಕನ ಘೋಷಣೆ ಆಗಲಿದೆ
ಜುಲೈ 3 ರಿಂದ ಬಜೆಟ್ ಅಧಿವೇಶನ ಆರಂಭಗೊಳ್ಳಲಿದ್ದು, ಬಿಜೆಪಿ ಮಾತ್ರ ಇನ್ನೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಈ ಕುರಿತು ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, “ನಮ್ಮ ವಿಪಕ್ಷ ನಾಯಕ ಸ್ಥಾನದ ಬಗ್ಗೆ ನಮ್ಮ ವರಿಷ್ಠರು ಸದನ ಪ್ರಾರಂಭಕ್ಕಿಂತಲೂ ಮೊದಲೇ ಸೂಕ್ತ ಸಮಯದಲ್ಲಿ ಘೋಷಿಸುತ್ತಾರೆ. ಕಾಂಗ್ರೆಸ್ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ” ಎಂದು ತಿರುಗೇಟು ನೀಡಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, “ಬಹುಮತ ದೊರೆತರೂ, ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರನ್ನು ಅಂತಿಮಗೊಳಿಸುವಲ್ಲಿ ಕಾಂಗ್ರೆಸ್ ನಡೆಸಿದ ಹಗ್ಗಜಗ್ಗಾಟವನ್ನು ರಾಜ್ಯದ ಜನತೆ ಗಮನಿಸಿದೆ. ಇವರಿಂದ ಹೇಳಿಸಿಕೊಂಡು ಬುದ್ದಿ ಕಲಿಯುವ ಪರಿಸ್ಥಿತಿ ಯಾರಿಗೂ ಬಂದಿಲ್ಲ” ಎಂದು ಕುಟುಕಿದೆ.
“ಇಷ್ಟಕ್ಕೂ ಹೊಸದಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಸಿದ್ದರಾಮಯ್ಯ 2008ರಲ್ಲಿ ಅಂದಿನ ವಿಪಕ್ಷ ನಾಯಕನ ಸ್ಥಾನ ಮಲ್ಲಿಕಾರ್ಗುನ ಖರ್ಗೆ ಅವರಿಗೆ ದೊರೆತ ಕಾರಣ, ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಆ ಪಕ್ಷದ ಕೆಲವು ಶಾಸಕರು ರಾಜೀನಾಮೆ ನೀಡಿದಾಗಲೂ, ಆ ಶಾಸಕರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು” ಎಂದು ಬಿಜೆಪಿ ಟ್ವೀಟ್ ಮಾಡಿದೆ.
“ಕಾರ್ಯಕ್ರಮವೊಂದರ ನಿಮಿತ್ತ ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜೊತೆ ಸಿದ್ದರಾಮಯ್ಯ ಅವರು ಒಟ್ಟಿಗೆ ಪ್ರಯಾಣಿಸಿದ್ದರು. ಆ ಸಂದರ್ಭವನ್ನು ತಮಗೆ ಲಾಭವಾಗುವ ಹಾಗೆ ಸುದ್ದಿ ಹಬ್ಬಿಸಿ ಕಾಂಗ್ರೆಸ್ ಹೈಕಮಾಂಡ್‌ಗೆ ಬೆದರಿಸಿದ್ದರು. ಬೆದರಿಕೆಗೆ ಬಗ್ಗಿದ ಹೈಕಮಾಂಡ್ ಒಲ್ಲದ ಮನಸ್ಸಿನಿಂದಲೇ ಸಿದ್ದರಾಮಯ್ಯರಿಗೆ ವಿಪಕ್ಷ ನಾಯಕ ಸ್ಥಾನ ನೀಡಿತ್ತು” ಎಂದು ವಿವರಿಸಿದೆ.
“ಈ ಬೆಳವಣಿಗೆಯನ್ನು ಕಟುವಾಗಿ ಟೀಕಿಸಿದ್ದ ವಿರೋಧ ಪಕ್ಷದ ನಿರ್ಗಮಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ‘10 ಜನ ಶಾಸಕರೊಂದಿಗೆ ಬಂದ ಸಿದ್ದರಾಮಯ್ಯ, ಈಗ 100 ಶಾಸಕರ ಮುಖ್ಯಸ್ಥರಾಗಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದಿದ್ದರು. ಈ ಎಲ್ಲಾ ಘಟನೆಗಳನ್ನು ಕಾಂಗ್ರೆಸ್ ಮರೆತಂತೆ ಕಾಣುತ್ತಿದೆ. ಚಿಂತಿಸಬೇಡಿ, ಕೆಲವೇ ದಿನಗಳಲ್ಲಿ ಈ ಘಟನೆಗಳು ಮತ್ತಷ್ಟು ವಿಭಿನ್ನವಾಗಿ ಪುನರಾವರ್ತನೆಯಾಗಲಿವೆ” ಎಂದು ಬಿಜೆಪಿ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಹಾಸನ | ಮುಸ್ಲಿಂ ವ್ಯಾಪಾರಿಗಳಿಗೆ ಬೆದರಿಕೆ ಪ್ರಕರಣ | ರಘು ಸಕಲೇಶಪುರ ವಿರುದ್ಧ ಎಫ್‌ಐಆರ್ ದಾಖಲು; ಆರೋಪಿಗಾಗಿ ಹುಡುಕಾಟ
“ನಮ್ಮ ವಿಪಕ್ಷ ನಾಯಕ ಸ್ಥಾನದ ಬಗ್ಗೆ ನಮ್ಮ ವರಿಷ್ಠರು ಸದನ ಪ್ರಾರಂಭಕ್ಕಿಂತಲೂ ಮೊದಲೆ, ಸೂಕ್ತ ಸಮಯದಲ್ಲಿ ಘೋಷಿಸುತ್ತಾರೆ. ಕಾಂಗ್ರೆಸ್ ಇದರ ಬಗ್ಗೆ ತಲೆ ಕೆರೆದುಕೊಳ್ಳುವುದನ್ನು ಬಿಟ್ಟು, ಅವಾಸ್ತವಿಕ ಗ್ಯಾರಂಟಿಗಳ ಅಪ್ರಬುದ್ಧ ಅನುಷ್ಠಾನದ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ದವಾಗಿರುವ ನಮ್ಮ ಪಕ್ಷದ ಶಾಸಕರನ್ನು ಹೇಗೆ ಎದುರಿಸಬೇಕೆಂದು ತಮ್ಮ ಸರ್ಕಾರಕ್ಕೆ ಸಲಹೆ ನೀಡಲಿ” ಎಂದು ತಿರುಗೇಟು ನೀಡಿದೆ.