ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದ ಮೇಲೆ ತನ್ನ ಇಬ್ಬರು ಶಾಸಕರನ್ನು ಆರು ವರ್ಷಗಳ ಕಾಲ ಮೇಘಾಲಯ ಕಾಂಗ್ರೆಸ್ ಅಮಾನತುಗೊಳಿಸಿದೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಶಾಸಕರಾಗಿ ಆಯ್ಕೆಯಾಗಿದ್ದ ಚಾರ್ಲ್ಸ್ ಮಾರ್ಂಗಾರ್ (ಮಾವಾಟಿ ಕ್ಷೇತ್ರ) ಮತ್ತು ಗೇಬ್ರಿಯಲ್ ವಾಹ್ಲಾಂಗ್ (ನಾಂಗ್‌ಸ್ಟೋಯಿನ್ ಕ್ಷೇತ್ರ) ಅವರನ್ನು ಅಮಾನತುಗೊಳಿಸಿ ಮೇಘಾಲಯ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಾನ್ಸುಕ್ ಸೈಯೆಮ್ ಆದೇಶ ಹೊರಡಿಸಿದ್ದಾರೆ.
ಮೇಘಾಲಯದಲ್ಲಿ ಅಧಿಕಾರದಲ್ಲಿರುವ ಎಂಡಿಎ ಪಕ್ಷದೊಂದಿಗೆ ಈ ಇಬ್ಬರೂ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಎಂಡಿಎ ಪಕ್ಷದೊಂದಿಗೆ ನಂಟು ಹೊಂದಿರುವುದು ಕಾಂಗ್ರೆಸ್‌ನ ಸಿದ್ಧಾಂತಗಳು ಮತ್ತು ತತ್ವಕ್ಕೆ ವಿರುದ್ಧವಾಗಿವೆ ಎಂದು ಹೇಳಲಾಗಿದೆ. ಹೀಗಾಗಿ, ಇಬ್ಬರೂ ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಇವರಿಬ್ಬರಲ್ಲದೆ, ಮತ್ತೋರ್ವ ಶಾಸಕ ಸೆಲೆಸ್ಟಿನ್ ಲಿಂಗ್ಡೋಹ್ ಕೂಡ ಎನ್‌ಪಿಪಿ ಸೇರತು ಮುಂದಾಗಿದ್ದಾರೆ ಎಂಬ ಆರೋಪಗಳಿದ್ದವು. ಮೂವರೂ ಶಾಸಕರಿಗೆ ಕಾಂಗ್ರೆಸ್ ನೋಟಿಸ್ ನೀಡಿ, ಕಚೇರಿಗೆ ಬರುವಂತೆ ಸೂಚನೆ ನೀಡಿತ್ತು. ಆದರೆ, ಲಿಂಗ್ಡೋಹ್ ಮಾತ್ರ ಕಚೇರಿಗೆ ತೆರಳಿ, ತಮ್ಮ ವಿರುದ್ಧದ ಆರೋಪಗಳು ಸುಳ್ಳೆಂದು ಹೇಳಿದ್ದರು. ಉಳಿದ ಇಬ್ಬರು ಶಾಸಕರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ, ಅವರಿಬ್ಬರನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.