ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಉದ್ವಿಗ್ನಗೊಂಡಿದೆ. ಪಾಕಿಸ್ತಾನದ ದಾಳಿಯ ವಿರುದ್ಧ ಭಾರತೀಯ ಸೇನೆಯು ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಭಯೋತ್ಪಾದಕರು ಮತ್ತು ಪಾಕಿಸ್ತಾನ್ ದಾಳಿಯನ್ನು ಯಶಸ್ವಿಯಾಗಿ ಹತ್ತಿಕ್ಕುತ್ತಿರುವ ಭಾರತೀಯ ಸೇನೆಗೆ ಬೆಂಬಲ ಸೂಚಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ತಿರಂಗಾ ಯಾತ್ರೆ ನಡೆಸಿದೆ.
ಬೆಂಗಳೂರಿನ ಕೆ.ಆರ್. ವೃತ್ತದಿಂದ ಮ್ಯೂಸಿಯಂ ರಸ್ತೆಯ ಚಿನ್ನಸ್ವಾಮಿ ಸ್ಟೇಡಿಯಂ ವೃತ್ತದ ಮಿನ್ಸ್ ಸ್ಕ್ವೇರ್‌ವರೆಗೆ ಕಾಂಗ್ರೆಸ್ ತಿರಂಗಾ ಯಾತ್ರೆ ನಡೆಸಿದೆ. ಯಾತ್ರೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿ ಎಚ್.ಕೆ. ಪಾಟೀಲ್, ಎಂ.ಸಿ. ಸುಧಾಕರ್, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್ ಸೇರಿದಂತೆ ಹಲವು ಸಚಿವರು, ಶಾಸಕರು ಹಾಗೂ ಕಾಂಗ್ರೆಸ್ ನಾಯಕರು ತಿರಂಗಾ ಧ್ವಜ ಹಿಡಿದು, ಹೆಜ್ಜೆ ಹಾಕಿದ್ದಾರೆ.
ತಿರಂಗಾ ಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ, ‘ನಾವು ನಮ್ಮ ಸೈನಿಕರ ಜೊತೆಗಿದ್ದೇವೆ. ಭದ್ರತೆ ವಿಚಾರವಾಗಿ ಉತ್ತರ ಭಾರತದ ರಾಜ್ಯಗಳಿಗೆ ನೀಡಲಾದ ಸೂಚನೆಗಳನ್ನೇ ಕರ್ನಾಟಕಕ್ಕೂ ಕೇಂದ್ರ ಸರ್ಕಾರ ಕೊಟ್ಟಿದೆ. ನಾವು ಎಲ್ಲ ಜಿಲ್ಲೆಗಳ ಎಸ್‌ಪಿಗಳಿಗೆ ಮುನ್ನೆಚ್ಚರಿಕೆ ಸೂಚನೆ ನೀಡಿದ್ದೇವೆ. ಮಾಹಿತಿಗಳನ್ನು ಸಂಗ್ರಹಿಸಲು ತಿಳಿಸಿದ್ದವೆ. ಸ್ಲೀಪರ್ ಸೆಲ್‌ಗಳ ಮೇಲೂ ನಿಗಾ ಇಡಲು ಸೂಚಿಸಲಾಗಿದೆ” ಎಂದು ಹೇಳಿದ್ದಾರೆ.
“ರಾಜ್ಯದ ಎಲ್ಲ ಜಲಾಶಯಗಳು, ಅಣೆಕಟ್ಟುಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ನಿಯೋಜಿಸಲಾಗಿದೆ. ಹೆಚ್ಚುವರಿ ಭದ್ರತೆಗಾಗಿ ಚರ್ಚೆಗಳು ನಡೆಯುತ್ತಿವೆ” ಎಂದಿದ್ದಾರೆ.