- ಮುಸ್ಲಿಂ ಸಮುದಾಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು?: ಜಮೀರ್
- ಸಣ್ಣ ಗಲಾಟೆಯಾದರೂ ಬಿಜೆಪಿಯವರು ಪಾಕಿಸ್ತಾನ ಮಾಡುತ್ತಾರೆ
ರಾಜ್ಯದಲ್ಲಿ ಮುಂದಿನ 15 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರ ನಡೆಸಲಿದೆ. ಇದನ್ನು ಯಾರೂ ತಪ್ಪಿಸಲಾಗದು ಎಂದು ಸಚಿವ ಜಮೀರ್ ಅಹಮದ್ ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಮಾತನಾಡಿದ ಸಚಿವರು, “ಈಗಿನ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವುದರಿಂದ ಮುಂದಿನ 15 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರ ನಡೆಸುವುದು ಖಚಿತ” ಎಂದು ತಿಳಿಸಿದರು.
ಮುಖ್ಯಮಂತ್ರಿಯ ಅವಧಿ ಎಷ್ಟು ವರ್ಷ ಎನ್ನುವ ಪ್ರಶ್ನೆಗೆ ಉತ್ತರಿಸಿ, “ಹೈಕಮಾಂಡ್ ಅಣತಿಯಂತೆ ನಡೆಯುವ ಪಕ್ಷ ನಮ್ಮದು. ಎಲ್ಲ ತೀರ್ಮಾನಗಳನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ” ಎಂದು ಹೇಳಿದರು.
ಮುಸ್ಲಿಂ ಸಮುದಾಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು?
ಜೆಡಿಎಸ್ – ಬಿಜೆಪಿ ಹೊಂದಾಣಿಕೆ ಆದ ಬಳಿಕ ಉಳಿದುಕೊಂಡಿರುವುದು ಏಕೈಕ ಜಾತ್ಯತೀತ ಪಕ್ಷ ಕಾಂಗ್ರೆಸ್. ಸರ್ಕಾರ ಹೋದರೆ ಮುಸಲ್ಮಾನರು ನನ್ನ ಬಳಿಯೇ ಬರಬೇಕು ಎನ್ನುವ ಕುಮಾರಸ್ವಾಮಿ ಮುಸಲ್ಮಾನರಿಗೆ ಏನು ಕೊಡುಗೆ ಕೊಟ್ಟಿದ್ದಾರೆ? ದೇವೇಗೌಡರ ಕೊಡುಗೆ ಇದೆ. ಮೀಸಲಾತಿ ವಿಚಾರ ಇರಲಿ, ಈದ್ಗಾ ಮೈದಾನ ವಿಚಾರ ಇರಲಿ ದೇವೇಗೌಡರ ಕೊಡುಗೆ ಸಾಕಷ್ಟು ಇದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಹಾರದ ಜಾತಿ ಜನಗಣತಿ- ಕಮಂಡಲ ರಾಜಕಾರಣ ಕಕ್ಕಾಬಿಕ್ಕಿ
ಸಣ್ಣ ಗಲಾಟೆಯಾದರೂ ಪಾಕಿಸ್ತಾನ ಮಾಡಲು ಹೋಗುತ್ತಾರೆ
“ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಆಗಬಾರದಿತ್ತು, ಆದರೆ ಆಗಿದೆ. ಬಿಜೆಪಿಯವರಿಗೆ ಹೇಳಲು ಏನು ಇಲ್ಲ. ಪ್ರತಿ ಸಲ ಸಣ್ಣ-ಪುಟ್ಟ ಗಲಾಟೆಯಾದರೂ ಸಿ ಟಿ ರವಿ, ಈಶ್ವರಪ್ಪ ಆಗಲಿ, ಅದನ್ನು ಪಾಕಿಸ್ತಾನ ಮಾಡಲು ಹೊಗುತ್ತಾರೆ. ಜಿಲ್ಲಾಡಳಿತದಿಂದ ಅನುಮತಿ ಪಡೆದು ಔರಂಗಜೇಬ್ ಕಟೌಟ್ ಮೆರವಣಿಗೆ ಮಾಡಿದ್ದೀವಿ. ಆದರೆ, ಪರ್ಮಿಷನ್ ಇಲ್ಲವೆಂದು ಮಾಧ್ಯಮದವರು ಹೇಳಿದ್ದಾರೆ. ಈಗ ಆ ಬಗ್ಗೆ ಚರ್ಚೆ ಬೇಡ. ಈಗ ಶಾಂತವಾಗಿದೆ. ಯಾವ ಸಮಸ್ಯೆನೂ ಇಲ್ಲ” ಎಂದರು.
ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ” ಹಿರಿಯ ನಾಯಕರು, ಅವರ ಬಗ್ಗೆ ಗೌರವವಿದೆ. 7 ಜನ ಲಿಂಗಾಯತರನ್ನು ನಾವು ಮಂತ್ರಿ ಮಾಡಿದ್ದೇವೆ. ಅವರಂತೆ ನಾನು ಮುಸ್ಲಿಂಮರಿಗೆ ಇಂತಹ ಕಡೆ ಪೋಸ್ಟ್ ಕೊಡಿ ಎಂದು ಹೇಳಲಾಗುತ್ತಾ? ಯಾವ ಅಧಿಕಾರಿ ಉತ್ತಮ ಕೆಲಸ ಮಾಡ್ತಾರೆ ಅವರನ್ನು ಹಾಕಿಸಿಕೊಳ್ಳಬೇಕು. ಕಲಬುರಗಿಯಲ್ಲಿ ಫೌಜಿಯಾ ಎಂಬ ಡಿಸಿ ಇದ್ದಾರೆ. ಅವರು ಒಳ್ಳೆ ಕೆಲಸ ಮಾಡಿದ್ದಾರೆ, ಅವರಿಗೆ ಡಿಮ್ಯಾಂಡ್ ಇದೆ” ಎಂದರು.