ಪ್ರಧಾನಿ ಮೋದಿ ಅವರು ಚುನಾವಣೆಯ ಆರಂಭದಲ್ಲಿ ‘ಚಾರ್ ಸೌ ಪಾರ್’ (400 ಸ್ಥಾನ) ಗೆಲ್ಲುತ್ತೇವೆಂದು ಹೇಳಿಕೊಳ್ಳುತ್ತಿದ್ದರು. ಆದರೆ, ಈಗ ಅವರ ಮಾತಿನಲ್ಲಿ 400 ಸಂಖ್ಯೆ ಕಾಣೆಯಾಗಿದೆ. ಏನೇ ಇರಲಿ, ಭಾರತದ ಚುನಾವಣಾ ಇತಿಹಾಸದಲ್ಲಿ ಪಕ್ಷವೊಂದು 400 ಸ್ಥಾನಗಳನ್ನು ಗೆದ್ದು 40 ವರ್ಷಗಳು ಕಳೆದಿವೆ. ಆ 40 ವರ್ಷಗಳ ಹಿಂದೆ, ಅಂದರೆ, 1984ರಲ್ಲಿ ಕಾಂಗ್ರೆಸ್ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. ಅದಾದ ಬಳಿಕ, ಯಾವ ಪಕ್ಷವು ಅಷ್ಟು ಸ್ಥಾನವನ್ನು ಗೆಲ್ಲಲಾಗಿಲ್ಲ.
1984ರ ಅಕ್ಟೋಬರ್ 31ರಂದು ಇಂದಿರಾಗಾಂಧಿ ಹತ್ಯೆಯಾದ ನಂತರ, ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದ ರಾಜೀವ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ 400 ಸ್ಥಾನಗಳನ್ನು ಗೆದ್ದಿತು. ಪಕ್ಷವೊಂದು 400 ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗುವಂತೆ ಮಾಡಿದ ಏಕೈಕ ರಾಜಕಾರಣಿ ರಾಜೀವ್ ಗಾಂಧಿ.
ಇಂದಿರಾ ಹತ್ಯೆಯಿಂದಾಗಿ ರಾಷ್ಟ್ರವ್ಯಾಪ್ತಿ ಸಹಾನುಭೂತಿ ಅಲೆಯ ಮೇಲೆ 1984ರ ಡಿಸೆಂಬರ್ 24, 27 ಮತ್ತು 28ರಂದು ನಡೆದ ಚುನಾವಣೆಯಲ್ಲಿ ರಾಜೀವ್ ನೇತೃತ್ವದ ಕಾಂಗ್ರೆಸ್ ಒಟ್ಟು 514 ಸ್ಥಾನಗಳಲ್ಲಿ 404 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಅಲ್ಲದೆ, ಭಯೋತ್ಪಾದನೆ ಪೀಡಿತವಾಗಿದ್ದ ಪಂಜಾಬ್ ಮತ್ತು ಅಸ್ಸಾಂನಲ್ಲಿ 1985ರ ಸೆಪ್ಟೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ 10 ಸ್ಥಾನಗಳನ್ನು ಗೆದ್ದುಕೊಂಡಿತು.
ಭಾರತದ ಅತ್ಯಂತ ಕಿರಿಯ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರು ಅಧಿಕಾರ ವಹಿಸಿಕೊಂಡಾಗ ಅವರಿಗೆ ಕೇವಲ 40 ವರ್ಷವಾಗಿತ್ತು. ಅವರ ಆಡಳಿತದ ವಿರುದ್ಧ ದೊಡ್ಡ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಪರಿಣಾಮ, 1989ರಲ್ಲಿ ಅವರು ಅಧಿಕಾರ ಕಳೆದುಕೊಂಡರು. ಮಾತ್ರವಲ್ಲ, 1984ರ ನಂತರ ಈವರೆಗೆ ಕಾಂಗ್ರೆಸ್ ಸ್ವಂತವಾಗಿ ಲೋಕಸಭೆಯಲ್ಲಿ ಬಹುಮತ ಸಾಧಿಸಲು ಸಾಧ್ಯವಾಗಿಯೇ ಇಲ್ಲ.
ವಿರೋಧ ಪಕ್ಷಗಳ ವಿಭಜನೆ – ಹಗ್ಗಜಗ್ಗಾಟ
1984ಕ್ಕೂ ಮುನ್ನ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ ಅವರನ್ನು 1977ರಲ್ಲಿ ಜನತಾ ಪಕ್ಷ ಸೋಲಿಸಿತು. ಅದಾಗ್ಯೂ, 1980ರಲ್ಲಿ ಇಂದಿರಾ ಮತ್ತೆ ಅಧಿಕಾರಕ್ಕೆ ಬಂದರು. ಆ ಬಳಿಕ, ಚೌಧರಿ ಚರಣ್ ಸಿಂಗ್ ಅವರ ಜನತಾ ಪಕ್ಷ (ಜಾತ್ಯತೀತ)ವು ಅವರದ್ದೇ ನೇತೃತ್ವದ ಜನತಾ ಪಕ್ಷ (ಎಸ್-ಚರಣ್ ಸಿಂಗ್) ಮತ್ತು ಜನತಾ ಪಕ್ಷ (ಎಸ್-ರಾಜ್ ನಾರಾಯಣ್) ಆಗಿ ವಿಭಜನೆಯಾಯಿತು. 1982ರ ಆಗಸ್ಟ್‌ನಲ್ಲಿ ಬಿಹಾರದ ನಾಯಕ ಕರ್ಪೂರಿ ಠಾಕೂರ್ ಅವರು ಲೋಕದಳ ಕಟ್ಟಿದರು. (2024ರ ಆರಂಭದಲ್ಲಿ ಚರಣ್ ಸಿಂಗ್ ಮತ್ತು ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಲಾಗಿದೆ)
ಅಲ್ಲದೆ, ಜಗಜೀವನ್ ರಾಮ್ ಅವರ ಕಾಂಗ್ರೆಸ್ (ಜಗ್ಜೀವನ್), ಎಚ್ ಎನ್ ಬಹುಗುಣ ಅವರ ಡೆಮಾಕ್ರಟಿಕ್ ಸೋಷಿಯಲಿಸ್ಟ್ ಪಾರ್ಟಿ (ಡಿಎಸ್‌ಪಿ), ಚಂದ್ರಜಿತ್ ಯಾದವ್ ಅವರ ಜನವಾದಿ ಪಕ್ಷ ಹಾಗೂ ಜಾರ್ಜ್ ಫರ್ನಾಂಡಿಸ್, ಮಧು ಲಿಮೆಯೆ, ದೇವಿಲಾಲ್ ಮತ್ತು ಬಿಜು ಪಟ್ನಾಯಕ್ ಅವರು ಲೋಕದಳ (ಕೆ) ಪಕ್ಷಗಳನ್ನು ಮುನ್ನಡೆಸುತ್ತಿದ್ದರು.
ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಶೇಖ್ ಅಬ್ದುಲ್ಲಾ ಅವರು 1982ರ ಸೆಪ್ಟೆಂಬರ್ 8 ರಂದು ನಿಧನರಾದ ನಂತರ ಫಾರೂಕ್ ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾದರು. ಕರ್ನಾಟಕದಲ್ಲಿ, 1983ರ ಜನವರಿ 10 ರಂದು ಜನತಾ ಸರ್ಕಾರದಲ್ಲಿ ರಾಮಕೃಷ್ಣ ಹೆಗ್ಡೆ ಅವರು ಸಿಎಂ ಆದರು. ಅದೇ ವರ್ಷ ಜನವರಿ 9ರಂದು ತೆಲುಗು ನಟ-ರಾಜಕಾರಣಿ ಎನ್.ಟಿ ರಾಮರಾವ್ ಅವರು ಆಂಧ್ರಪ್ರದೇಶದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಕೆಲವು ‘ಪ್ರಗತಿಪರ ಮತ್ತು ಸಮಾಜವಾದಿ’ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಸಂಭಾವ್ಯ ಮೈತ್ರಿ ಅಥವಾ ವಿಲೀನಕ್ಕಾಗಿ ಪ್ರಯತ್ನಗಳು ಕೂಡ ನಡೆದವು. ಅದರ ಭಾಗವಾಗಿ, ಚಂದ್ರಶೇಖರ್ ಅವರ ಜನತಾ ಪಕ್ಷ, ಕೆ ರಾಮಚಂದ್ರನ್ ಅವರ ಕಾಂಗ್ರೆಸ್ (ಜಾತ್ಯತೀತ), ಬಹುಗುಣ ಅವರ ಡಿಎಸ್‌ಪಿ ಮತ್ತು ರತುಭಾಯಿ ಅದಾನಿ ಅವರ ರಾಷ್ಟ್ರೀಯ ಕಾಂಗ್ರೆಸ್ ಒಗ್ಗೂಡಿ ಯುನೈಟೆಡ್ ಫ್ರಂಟ್ ರಚಿಸಿದವು. ಈ ಹಿಂದೆ ಪಕ್ಷಗಳ ವಿಲೀನವನ್ನು ವಿರೋಧಿಸಿದ್ದ ಬಿಜೆಪಿ ಕೂಡ ಮೈತ್ರಿ ನಿರ್ಮಿಸಲು ಮುಂದಾಯಿತು. ಬಿಜೆಪಿ ಮುಖ್ಯಸ್ಥ ಅಟಲ್ ಬಿಹಾರಿ ವಾಜಪೇಯಿ ಮತ್ತು ಚರಣ್ ಸಿಂಗ್ ನಡುವಿನ ಅನೇಕ ಸುತ್ತಿನ ಮಾತುಕತೆಗಳ ನಂತರ, ಎರಡು ಪಕ್ಷಗಳು ಒಗ್ಗೂಡಿದವು. 1983ರ ಆಗಸ್ಟ್‌ನಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಕಟ್ಟಿದವು.
ಆದರೆ, ಎನ್‌ಡಿಎ ಮುಂದುವರೆಯಲಿಲ್ಲ. ಎನ್‌ಡಿಎ ರಚನೆಯಾದ ಒಂದೇ ವರ್ಷದಲ್ಲಿ ಬಿಜೆಪಿ ಮೈತ್ರಿಯನ್ನು ಮುರಿಯಿತು. ಚರಣ್ ಸಿಂಗ್ ಅವರು ಹೊಸದಾಗಿ ದಲಿತ ಮಜ್ದೂರ್ ಕಿಸಾನ್ ಪಕ್ಷವನ್ನು (DMKP) ಸ್ಥಾಪಿಸಿದರು.
ಅವಧಿಪೂರ್ವ ಚುನಾವಣೆ
ಲೋಕಸಭೆ ಚುನಾವಣೆಯು ಸಾಮಾನ್ಯವಾಗಿ 1985ರ ಜನವರಿಯಲ್ಲಿ ನಡೆಯಬೇಕಿತ್ತು. ಆದರೆ, ಇಂದಿರಾ ಹತ್ಯೆಯ ನಂತರ ಭೀಕರ ಸಿಖ್ ವಿರೋಧಿ ಹಿಂಸಾಚಾರ ನಡೆಯಿತು. ದೆಹಲಿಯಲ್ಲಿ 2,500ಕ್ಕೂ ಹೆಚ್ಚು ಮಂದಿ ಸೇರಿದಂತೆ ದೇಶಾದ್ಯಂತ 3,000ಕ್ಕೂ ಹೆಚ್ಚು ಸಿಖ್ ಸಮುದಾಯದ ಜನರು ಕೊಲ್ಲಲ್ಪಟ್ಟರು. ಹಿಂಸಾಚಾರ ಪ್ರಕರಣದಲ್ಲಿ ಕೆಲ ಕಾಂಗ್ರೆಸ್ ನಾಯಕರು ಸೇರಿದಂತೆ ಕೆಲವು ಆರೋಪಿಗಳಿಗೆ ಶಿಕ್ಷೆಯಾಗಿದೆ.
ಪರಿಣಾಮವಾಗಿ, ಲೋಕಸಭೆ ಚುನಾವಣೆಯನ್ನು ಕೆಲವು ವಾರಗಳ ಮುಂಚೆಯೇ ನಡೆಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಲಾಯಿತು. ಅದರಂತೆ, 1984ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಿತು.
ಅಭೂತಪೂರ್ವ ಜನಾದೇಶ
17 ರಾಜ್ಯಗಳಲ್ಲಿ ಮತ್ತು ಎಲ್ಲ ಒಂಬತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೇ ದಿನದಲ್ಲಿ ಚುನಾವಣೆಗಳು ನಡೆದವು. ಆದರೆ, ಸಿಖ್ ನರಮೇಧದ ಕಾರಣದಿಂದಾಗಿ ಪಂಜಾಬ್‌ನಲ್ಲಿ ಮತ್ತು ಭಯೋತ್ಪಾದಕ ಚಟುವಟಿಕೆ ನಡೆಯುತ್ತಿದ್ದ ಕಾರಣ ಅಸ್ಸಾಂನಲ್ಲಿ ಚುನಾವಣೆ ನಡೆಯಲಿಲ್ಲ. ಅಲ್ಲಿ, 1985ರ ಸೆಪ್ಟಂಬರ್ ಮತ್ತು ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಿತು. ಇದಕ್ಕೆ ಅನುಕೂಲವಾಗುವಂತೆ, 1951ರ ಜನರ ಪ್ರಾತಿನಿಧ್ಯ ಕಾಯಿದೆಗೆ ಸೆಕ್ಷನ್ 73A ಅನ್ನು ಸೇರಿಸಲಾಯಿತು.
ಡಿಸೆಂಬರ್ 31ರಂದು ಪ್ರಕಟವಾದ ಫಲಿತಾಂಶದಲ್ಲಿ ಕಾಂಗ್ರೆಸ್ 404 ಸ್ಥಾನಗಳನ್ನು ಗೆದ್ದಿತು. ಅಮೇಥಿಯಿಂದ ರಾಜೀವ್ ಗಾಂಧಿ ಗೆದ್ದು ಪ್ರಧಾನಿಯಾದರು.
ಉಳಿದಂತೆ, ಎನ್‌ಟಿಆರ್ ಅವರ ತೆಲುಗು ದೇಶಂ ಪಕ್ಷವು ಲೋಕಸಭೆಯಲ್ಲಿ 30 ಸ್ಥಾನಗಳನ್ನು ಗೆದ್ದಿತ್ತು. ಸಿಪಿಐ(ಎಂ) 22 ಸ್ಥಾನ, ಜನತಾ 10, ಸಿಪಿಐ 6, ಮತ್ತು ಲೋಕದಳ (ಸಿ) 3 ಹಾಗೂ ಬಿಜೆಪಿ ಕೇವಲ ಎರಡು ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಆ ಚುನಾವಣೆಯಲ್ಲಿ ಬಿಜೆಪಿಯಿಂದ ಆಂಧ್ರಪ್ರದೇಶದ ಹನುಮಕೊಂಡದಿಂದ ಚಂದುಪಟ್ಲ ಜಂಗಾರೆಡ್ಡಿ ಮತ್ತು ಗುಜರಾತ್‌ನ ಮೆಹಸಾನಾದಿಂದ ಎ ಕೆ ಪಟೇಲ್ ಗೆದ್ದಿದ್ದರೆ, ವಾಜಪೇಯಿ ಅವರು ಗ್ವಾಲಿಯರ್‌ನಲ್ಲಿ ಸೋತಿದ್ದರು.
ರಾಜಕೀಯದಲ್ಲಿ ಹೊಸ ತರಂಗ
1984ರ ಚುನಾವಣೆಯ ಹೊತ್ತಿಗೆ, ಹಿಂದಿನ ಪೀಳಿಗೆಯ ಹೆಚ್ಚಿನ ವಿರೋಧ ಪಕ್ಷದ ದೈತ್ಯ ನಾಯಕರು ಕಣ್ಮರೆಯಾಗಿದ್ದರು. ಸಿ ರಾಜಗೋಪಾಲಾಚಾರಿ 1972ರಲ್ಲಿ ನಿಧನರಾದರು. 1977ರಲ್ಲಿ ಪ್ರತಿಪಕ್ಷಗಳ ಏಕತೆಯ ಹಿಂದಿನ ಶಕ್ತಿಯಾಗಿದ್ದ ಜಯಪ್ರಕಾಶ್ ನಾರಾಯಣ್ ಕೊನೆಯುಸಿರೆಳೆದರು. ಜೆ.ಬಿ ಕೃಪಲಾನಿ 1982ರಲ್ಲಿ ನಿಧನರಾದರು.
ವಿರೋಧ ಪಕ್ಷಗಳಲ್ಲಿ ಹೊಸ ನಾಯಕರು ಮುನ್ನೆಲೆಗೆ ಬರಲಾರಂಭಿಸಿದರು. 1982ರ ಮಾರ್ಚ್‌ನಲ್ಲಿ ಹುಟ್ಟಿದ ಟಿಡಿಪಿ ಪ್ರಮುಖ ರಾಜಕೀಯ ಪಕ್ಷವಾಗಿ ಬೆಳೆಯಿತು. ಕಾಂಗ್ರೆಸ್‌ನಲ್ಲಿಯೂ ಪ್ರಮುಖ ಹೊಸ ಮುಖಗಳು ಮುನ್ನೆಲೆಗೆ ಬಂದವು.
ರಾಜೀವ್ ವಿರುದ್ಧ ಜನಾದೇಶ
1985ರಲ್ಲಿ, ಕೇಂದ್ರ ಸರ್ಕಾರವು ಪಂಜಾಬ್‌ನಲ್ಲಿ ರಾಜೀವ್-ಲೋಂಗೊವಾಲ್ ಒಪ್ಪಂದ ಮತ್ತು ಅಸ್ಸಾಂ ಚಳವಳಿಯ ನಾಯಕರೊಂದಿಗೆ ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಿತು. 1986ರಲ್ಲಿ, ಶಾ ಬಾನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಪ್ರಗತಿಪರ ತೀರ್ಪನ್ನು ರದ್ದುಗೊಳಿಸಲು ಸರ್ಕಾರವು ಸಂಸತ್ತಿನಲ್ಲಿ ಕಾನೂನನ್ನು ತಂದಿತು. ಅಲ್ಲದೆ, ರಾಜೀವ್ ಅವರ ಸರ್ಕಾರವು ಫೀಲ್ಡ್ ಹೊವಿಟ್ಜರ್‌ಗಳ ಪೂರೈಕೆಗಾಗಿ ಸ್ವೀಡಿಷ್ ಶಸ್ತ್ರಾಸ್ತ್ರ ತಯಾರಕ ಬೋಫೋರ್ಸ್‌ನೊಂದಿಗಿನ ಒಪ್ಪಂದದಲ್ಲಿ 64 ಕೋಟಿ ರೂಪಾಯಿಗಳನ್ನು ಕಿಕ್‌ಬ್ಯಾಕ್ ಪಡೆಯಲಾಗಿದೆ ಎಂಬುದು ಬಹಿರಂಗವಾಯಿತು. ಆ ಬೋಫೋರ್ಸ್ ಹಣರಣವು ಆ ಸಮಯದಲ್ಲಿ ದೊಡ್ಡ ಹಗರಣವೆಂದು ಪರಿಗಣಿಸಲ್ಪಟ್ಟಿತು. ಇದು, ರಾಜೀವ್ ಅವರ ಉಳಿದ ಅವಧಿ ಮತ್ತು ಅವರ ಜೀವನದುದ್ದಕ್ಕೂ ಕಾಡಿಲಾರಂಭಿಸಿತು.
ಹಗರಣ, ಅಕ್ರಮಗಳ ಆರೋಪ ಹೊತ್ತಿದ್ದ ರಾಜೀವ್ ಸರ್ಕಾರ, 1989ರಲ್ಲಿ ನಡೆದ ಚುನಾವಣೆಯಲ್ಲಿ 197 ಕ್ಷೇತ್ರಗಳಿಗೆ ಕುಸಿಯಿತು. ಅಂದರೆ, 1984ರಲ್ಲಿ ಗೆದ್ದಿದ್ದ 404+10 ಸ್ಥಾನಗಳಿಗೆ ಹೋಲಿಸಿದರೆ, 1989ರಲ್ಲಿ ಅರ್ಧಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಕಳೆದುಕೊಂಡಿತು. ಅಲ್ಲದೆ, ಕಾಂಗ್ರೆಸ್ ಅಧಿಕಾರವನ್ನೂ ಕಳೆದುಕೊಂಡಿತು. ಜನತಾ ದಳದ ನೇತೃತ್ವದ ಮೈತ್ರಿಕೂಟ ಮತ್ತೆ ಅಧಿಕಾರದ ಗದ್ದುಗೆ ಏರಿತು.
1984ರ ನಂತರ ಈವರೆಗೆ ಯಾವುದೇ ಪಕ್ಷವು 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಪ್ರಸ್ತುತ ಚುನಾವಣೆಯ ಆರಂಭದಲ್ಲಿ ಪ್ರಧಾನಿ ಮೋದಿ ‘ಚಾರ್ ಸೌ ಪಾರ್’ ಎಂದು ಹೇಳಲು ಆರಂಭಿಸಿದ್ದರಾದರೂ, ಈಗ 400 ಸ್ಥಾನಗಳ ಮಾತು ಬಿಜೆಪಿ ನಾಯಕರ ಬಾಯಲ್ಲಿ ಬರುತ್ತಿಲ್ಲ.