- ‘ನಮಗೆ ಆಪರೇಷನ್ ಹಸ್ತದ ಅಗತ್ಯವಿಲ್ಲ, ಬರುವವರು ಬರಲಿ’
- ‘ಕೆಲಸದ ವಿಚಾರವಾಗಿ ಕೆಲವು ನಾಯಕರು ಭೇಟಿ ಮಾಡುತ್ತಾರೆ’
ನಮ್ಮ ಪಕ್ಷಕ್ಕೆ ಬಲ ತುಂಬುವವರು, ನಮ್ಮ ಮೇಲೆ ವಿಶ್ವಾಸ ಇಡುವವರನ್ನು ನಾವು ಪಕ್ಷಕ್ಕೆ ಸದಾ ಸ್ವಾಗತಿಸುತ್ತೇವೆ. ಮುಖಂಡರಿಗೆ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿರುತ್ತವೆ. ಏನೋ ಕೆಲಸಗಳು ಆಗಬೇಕಾಗಿರುತ್ತವೆ. ಅದಕ್ಕಾಗಿ ಕೆಲವು ನಾಯಕರು ಭೇಟಿ ಮಾಡುತ್ತಾರೆ ಎಂದು ಡಿಎಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಚಾಮರಾಜನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ನಮಗೆ ಆಪರೇಷನ್ ಹಸ್ತದ ಅಗತ್ಯವಿಲ್ಲ. ಆದರೆ, ಕಾಂಗ್ರೆಸ್ ಸೇರಲು ಬಯಸುವವರನ್ನು ತಡೆಯುವುದಿಲ್ಲ” ಎಂದರು.
“ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಧಾನಮಂತ್ರಿ ಕಚೇರಿಯ ಸಂದೇಶವೇ ಬಿಜೆಪಿ ನಾಯಕ ಆರ್. ಅಶೋಕಗೆ ಗೊತ್ತಿಲ್ಲ. ಸುಮ್ಮನೇ ಏನೇನೋ ಮಾತನಾಡುತ್ತಾರೆ” ಎಂದು ಹರಿಹಾಯ್ದರು.
“ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟವರ ಕುಟುಂಬಗಳಿಗೆ ನ್ಯಾಯ ಒದಗಿಸುವ ಬಗ್ಗೆ ಪ್ರಶ್ನಿಸಿದಾಗ, “ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈದ್ಯಕೀಯ ಶಿಕ್ಷಣ ಸಚಿವರಿಗೆ ಈ ಬಗ್ಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾರ್ಯದರ್ಶಿಯವರಿಗೂ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಒದಗಿಸುವುದು ನಮ್ಮ ಆದ್ಯತೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಜ್ಯ ಬಿಜೆಪಿ ಲೀಡರ್ ಲೆಸ್ ಪಾರ್ಟಿ: ಜಗದೀಶ್ ಶೆಟ್ಟರ್ ಲೇವಡಿ
“ಚಾಮರಾಜನಗರ ಕೈಗಾರಿಕಾ ಪ್ರದೇಶದಲ್ಲಿ ಸೌರಶಕ್ತಿ ಶೇಖರಣೆಯ ಬ್ಯಾಟರಿ ಉತ್ಪಾದನಾ ಘಟಕದ ಶಂಕುಸ್ಥಾಪನೆಗೆ ಬಂದಿದ್ದೇನೆ. ಖಾಸಗಿ ಕಂಪನಿಯು ₹2,000 ಕೋಟಿ ಬಂಡವಾಳ ಹೂಡಿಕೆ ಮಾಡಲು ಮುಂದಾಗಿದ್ದು, ಮೊದಲ ಹಂತದಲ್ಲಿ ₹500 ಕೋಟಿಯನ್ನು ಇಲ್ಲಿ ಹೂಡಿಕೆ ಮಾಡಿ ಬ್ಯಾಟರಿ ಉತ್ಪಾದನಾ ಘಟಕ ನಿರ್ಮಾಣ ಮಾಡುತ್ತಿದೆ. ಗಡಿ ಪ್ರದೇಶ ಚಾಮರಾಜನಗರದಲ್ಲಿ ಕೈಗಾರಿಕೆಗೆ ಬಂಡವಾಳ ಹೂಡಿಕೆ ಮಾಡುವವರಿಗೆ ನಮ್ಮ ಸರ್ಕಾರ ಪ್ರೋತ್ಸಾಹ ನೀಡಲಿದೆ” ಎಂದು ಹೇಳಿದರು.