ಅಂಬೇಡ್ಕರ್ ಅವರನ್ನು ನಿರಂತರವಾಗಿ ಅಪಮಾನ ಮಾಡಿದ್ದ ಕಾಂಗ್ರೆಸ್. ಅವರ ಹೆಸರು ಹೇಳುವ ನೈತಿಕತೆ ಕಾಂಗ್ರೆಸ್ಸಿಗರಿಗೆ ಇಲ್ಲ ಎಂದು ರಾಜ್ಯ ಬಿಜೆಪಿ ಸಹ ಉಸ್ತುವಾರಿ ಡಾ.ಪಿ.ಸುಧಾಕರ ರೆಡ್ಡಿ ಹೇಳಿದರು.
ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಸೋಲಿನ ನಂತರ ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. ಡಾ. ಅಂಬೇಡ್ಕರ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ 2 ಬಾರಿ ಸೋಲಿಸಿ ಅವಮಾನಿಸಿದ್ದ ಕಾಂಗ್ರೆಸ್ ಪಕ್ಷವು ಇದೀಗ ತಮ್ಮ ನಾಯಕರನ್ನು ಉಳಿಸಿಕೊಳ್ಳಲು ಅದೇ ಬಾಬಾಸಾಹೇಬರ ಹೆಸರನ್ನು ಬಳಸಿಕೊಳ್ಳುತ್ತಿದೆ” ಎಂದರು.
“ದೇಶ ವಿಭಜಿಸುವುದನ್ನು ಸಂವಿಧಾನ ಶಿಲ್ಪಿ ಅಂಬೇಡ್ಕರರು ವಿರೋಧಿಸಿದ್ದರು. 370ನೇ ವಿಧಿ ಹೇರುವುದನ್ನೂ ಅವರು ವಿರೋಧಿಸಿದ್ದರು. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷವು ದೇಶವನ್ನೇ ಜೈಲಾಗಿ ಪರಿವರ್ತಿಸಿತ್ತು ಎಂದು ಟೀಕಿಸಿದರು. ಈಗ ಕಾಂಗ್ರೆಸ್ ಮುಖಂಡರು ಮತಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ” ಎಂದು ಆಕ್ಷೇಪಿಸಿದರು.
“ಬಡ ಕುಟುಂಬದಿಂದ ಬಂದ ವ್ಯಕ್ತಿ 10 ವರ್ಷಕ್ಕೂ ಹೆಚ್ಚು ಕಾಲ ಪ್ರಧಾನಿ ಆಗಿ ಇರುವುದನ್ನು ಕಾಂಗ್ರೆಸ್ಸಿಗರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ರಾಹುಲ್ ಗಾಂಧಿಯವರು ತಮ್ಮದೇ ಯುಪಿಎ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅವಮಾನಿಸಿದ ವ್ಯಕ್ತಿ” ಎಂದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ಮಾತನಾಡಿ, “ರಾಜ್ಯದ ಎಲ್ಲ 30 ಜಿಲ್ಲೆಗಳಿಂದ ಯುವ ಮೋರ್ಚಾ ಅಧ್ಯಕ್ಷರು ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನ ಕಾರ್ಯಕ್ರಮದ ಅಂಗವಾಗಿ ಸುಶಾಸನ ವಿಚಾರದಲ್ಲಿ ಡಾ.ಪಿ.ಸುಧಾಕರ ರೆಡ್ಡಿ ಅವರ ನೇತೃತ್ವದಲ್ಲಿ ಒಳ್ಳೆಯ ಕಾರ್ಯಕ್ರಮ ನಡೆದಿದೆ. ವರ್ಷ ಪೂರ್ತಿ ವಾಜಪೇಯಿಯವರ ಜನ್ಮ ಶತಮಾನೋತ್ಸವದ ಕಾರ್ಯಕ್ರಮ ಏರ್ಪಡಿಸುವ ಕುರಿತು ಚರ್ಚಿಸಲಾಗಿದೆ” ಎಂದರು.
“ಡಾ. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷ ಯಾವ ರೀತಿ ಅವಮಾನ ಮಾಡಿದೆ. ಯಾವ ರೀತಿ ಅವರನ್ನು ಅಗೌರವದಿಂದ ನಡೆಸಿಕೊಂಡಿದೆ ಎಂಬ ಬಗ್ಗೆ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದರು. ಇವತ್ತು ಕಾಂಗ್ರೆಸ್ ಪಕ್ಷ ಅಂಬೇಡ್ಕರರ ಜಪ ಮಾಡುತ್ತಿದೆ” ಎಂದು ಟೀಕಿಸಿದರು.
