ದೆಹಲಿ ಮುಖ್ಯಮಂತ್ರಿ ಆತಿಶಿ ಅವರನ್ನು ನಕಲಿ ಪ್ರಕರಣಗಳಲ್ಲಿ ಸಿಲುಕಿಸಿ ಬಂಧಿಸಲು ಸಂಚು ನಡೆಯುತ್ತಿದೆ. ಮುಂದಿನ ಕೆಲವೇ ದಿನಗಳಲ್ಲಿ ಆತಿಶಿ ಅವರನ್ನು ಕೇಂದ್ರ ಸರ್ಕಾರ ಬಂಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ, ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
ಬುಧವಾರ ಕೇಜ್ರಿವಾಲ್ ಹೊರಡಿಸಿರುವ ಪ್ರಕಟಣೆಯಲ್ಲಿ, “2025ರ ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ಎಎಪಿ ನಾಯಕರ ಮೇಲೆ ತನಿಖಾ ಸಂಸ್ಥೆಗಳಿಂದ ದಾಳಿ ನಡೆಸಲು ಯೋಜನೆಗಳು ರೂಪುಗೊಳ್ಳುತ್ತಿವೆ. ಆತಿಶಿ ಅವರನ್ನೂ ಬಂಧಿಸಲು ಸಂಚು ನಡೆಯುತ್ತಿದೆ” ಎಂದು ಆರೋಪಿಸಿದ್ದಾರೆ.
ಚುನಾವಣೆಗೆ ಸಿದ್ದತೆ ನಡೆಸುತ್ತಿರುವ ಎಎಪಿ, ದೆಹಲಿಯ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವ ಸಂಜೀವಿನಿ ಯೋಜನೆಯನ್ನು ಘೋಷಿಸಿದೆ. “ಮಹಿಳಾ ಸಮ್ಮಾನ್ ಯೋಜನೆ ಮತ್ತು ಸಂಜೀವಿನಿಯಂತಹ ಕಲ್ಯಾಣ ಯೋಜನೆಗಳನ್ನು ಎಎಪಿ ಸರ್ಕಾರ ಘೋಷಿಸಿರುವುದು ಕೆಲವರಿಗೆ (ಬಿಜೆಪಿ) ಭಯ ಉಂಟುಮಾಡಿದೆ. ಹೀಗಾಗಿ, ದೆಹಲಿ ಮುಖ್ಯಮಂತ್ರಿ ಆತಿಶಿ ಅವರನ್ನು ಶೀಘ್ರದಲ್ಲೇ ನಕಲಿ ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಲು ಸಂಚು ನಡೆಯುತ್ತಿದೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.