ಇಂಫಾಲ| ಮಣಿಪುರವನ್ನು ವಿಭಜಿಸಲು ಪಿತೂರಿ ಮಾಡಲಾಗುತ್ತಿದೆ ಎಂದ ಅಮಿತ್ ಶಾ!

Date:

Advertisements

ಮಣಿಪುರದ ಜನರನ್ನು ವಿಭಜಿಸಲು ಪಿತೂರಿ ಮಾಡಲಾಗುತ್ತಿದೆ, ಆದರೆ ಬಿಜೆಪಿ ರಾಜ್ಯದ ವಿಭಜನೆಗೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಹೇಳಿದರು.

ಮಣಿಪುರದಲ್ಲಿ ಬಿಜೆಪಿಯ ಅಭ್ಯರ್ಥಿ ತೌನೊಜಮ್ ಬಸಂತ ಕುಮಾರ್ ಸಿಂಗ್ ಪರವಾಗಿ ಇಂಫಾಲ್‌ನಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು, ಬಿಜೆಪಿ ರಾಜ್ಯವನ್ನು ಸುಭದ್ರಗೊಳಿಸಲಿದೆ ಎಂದು ಭರವಸೆ ನೀಡಿದರು.

“ಕಾಂಗ್ರೆಸ್ ಎಲ್ಲಿ ಹೋದರೂ ವಿಭಜನೆಯ ಬಗ್ಗೆ ಮಾತನಾಡುತ್ತದೆ. ಇದು ದೇಶವನ್ನು ವಿಭಜಿಸಿದೆ. ಈಗಲೂ ಕಾಂಗ್ರೆಸ್ಸಿಗರು ದೇಶವನ್ನು ಉತ್ತರ ಮತ್ತು ದಕ್ಷಿಣ ಭಾರತದ ರೀತಿಯಲ್ಲಿ ವಿಭಜಿಸಲು ಬಯಸುತ್ತಿದ್ದಾರೆ. ಮಣಿಪುರವನ್ನು ವಿಭಜಿಸಲೂ ಮುಂದಾಗಿದ್ದಾರೆ. ಆದರೆ ನಾನು ನಿಮಗೆ ಹೇಳುತ್ತೇನೆ, ನಾವು ಮಣಿಪುರವನ್ನು ವಿಭಜಿಸಲು ಬಿಡುವುದಿಲ್ಲ” ಎಂದು ಶಾ ಹೇಳಿದ್ದಾರೆ.

Advertisements

ಇದನ್ನು ಓದಿದ್ದೀರಾ?  ಲೋಕಸಭೆ ಚುನಾವಣೆಗೂ ಮುನ್ನ ಮಣಿಪುರಕ್ಕೆ ಅಮಿತ್ ಶಾ ಭೇಟಿ ಸಾಧ್ಯತೆ

“ಒಳನುಸುಳುವಿಕೆ (ಅಕ್ರಮ ವಲಸೆ) ಮೂಲಕ ಸಣ್ಣ ರಾಜ್ಯದ ಜನಸಂಖ್ಯೆಯನ್ನು ಬದಲಾಯಿಸುವ ಪಿತೂರಿ ನಡೆಯುತ್ತಿದೆ ಎಂದು ನನಗೆ ತಿಳಿದಿದೆ. (ಭಾರತ-ಮ್ಯಾನ್ಮಾರ್) ಮುಕ್ತ ಚಲನೆಯ ಆಡಳಿತವನ್ನು ಮಾದಕ ದ್ರವ್ಯಗಳ ಕಳ್ಳಸಾಗಣೆಗಾಗಿ ದುರುಪಯೋಗ ಮಾಡಿಕೊಳ್ಳಲಾಗಿದೆ. ನಾವು ಮ್ಯಾನ್ಮಾರ್‌ಗೆ ಬೇಲಿ ಹಾಕಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದರು.


“ಗಡಿಯಲ್ಲಿ ಈ ಕಾರ್ಯ ಆರಂಭವಾಗಿದೆ. ನಾವು ಮಣಿಪುರವನ್ನು ಸುಭದ್ರಗೊಳಿಸುತ್ತೇವೆ” ಎಂದ ಅಮಿತ್ ಶಾ ಮೈತಿಗಳು ಮತ್ತು ಕುಕಿಗಳನ್ನು ಒಳಗೊಂಡ ಜನಾಂಗೀಯ ಹಿಂಸಾಚಾರವನ್ನೂ ಉಲ್ಲೇಖಿಸಿದ್ದಾರೆ. “ಸಮಾಜದ ಎಲ್ಲಾ ವರ್ಗಗಳೊಂದಿಗೆ ಮಾತನಾಡುವ ಮೂಲಕ ರಾಜ್ಯದಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವುದು ಮೋದಿ ಸರ್ಕಾರದ ಆದ್ಯತೆಯಾಗಿದೆ” ಎಂದು ಹೇಳಿದರು.

“ಆರು ವರ್ಷಗಳಿಂದ ಮಣಿಪುರದಲ್ಲಿ ಏನೂ ಆಗಿಲ್ಲ. ನಂತರ ಹಿಂಸಾಚಾರ ನಡೆದಿದೆ. ಮುಂದಿನ ದಿನಗಳಲ್ಲಿ ಶಾಂತಿ ಸ್ಥಾಪಿಸುವುದು ಮೋದಿ ಅವರ ಆದ್ಯತೆ ಎಂದು ನಾನು ಕಣಿವೆ ಮತ್ತು ಬೆಟ್ಟಗಳಲ್ಲಿ ಜೀವಿಸುವವರಿಗೆ ಹೇಳಲು ಬಯಸುತ್ತೇನೆ. ಯಾರು ಎಷ್ಟೇ ಪ್ರಯತ್ನಿಸಿದರೂ ಮಣಿಪುರವನ್ನು ವಿಘಟನೆ ಮಾಡಲು ಬಿಡುವುದಿಲ್ಲ. ಎರಡೂ ಸಮುದಾಯಗಳೊಂದಿಗೆ ಮಾತುಕತೆ ನಡೆಸುವ ಮೂಲಕ ಶಾಂತಿಯನ್ನು ತರಲು ಮೋದಿ ಸರ್ಕಾರ ಬದ್ಧವಾಗಿದೆ” ಎಂದರು.

ಇದನ್ನು ಓದಿದ್ದೀರಾ?   ಮಣಿಪುರ ಹಿಂಸಾಚಾರ | ಜೂನ್‌ 24 ರಂದು ಸರ್ವಪಕ್ಷ ಸಭೆ ಕರೆದ ಗೃಹ ಸಚಿವ ಅಮಿತ್‌ ಶಾ

ಮೋದಿಯವರು ಪ್ರಧಾನಿಯಾದ ಬಳಿಕ ಈಶಾನ್ಯಕ್ಕೆ 70 ಬಾರಿ ಭೇಟಿ ನೀಡಿದ್ದಾರೆ ಎಂದು ಉಲ್ಲೇಖಿಸಿದ ಅಮಿತ್ ಶಾ, ಈ ಪ್ರದೇಶದ ಸಣ್ಣ ರಾಜ್ಯಗಳು ಭಾರತದ ಆತ್ಮ ಎಂಬ ಕಲ್ಪನೆ ಕಾಂಗ್ರೆಸ್‌ಗೆ ಇಲ್ಲ ಎಂದರು. “ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಣಿಪುರದಲ್ಲಿ ಬಂದ್‌ಗಳು ಮತ್ತು ದಿಗ್ಬಂಧನಗಳು ಸಾಮಾನ್ಯವಾಗಿದ್ದವು. ಇಬೋಬಿ ಸಿಂಗ್ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರವು ನೂರಾರು ಜನರ ಎನ್‌ಕೌಂಟರ್ ಮಾಡಿದೆ” ಎಂದು ಆರೋಪಿಸಿದರು.

ನಾಗಾ-ಕುಕಿ ಘರ್ಷಣೆಯಲ್ಲಿ ಒಟ್ಟು 750 ಜನರು, ಮೈತಿ-ಪಂಗಲ್ ಸಂಘರ್ಷದಲ್ಲಿ 100 ಮಂದಿ ಮತ್ತು ಕುಕಿ-ಪೈತೆ ಸಂಘರ್ಷದಲ್ಲಿ 325 ಮಂದಿ ಸಾವನ್ನಪ್ಪಿದ್ದಾರೆ ಎಂದು ಶಾ ತಿಳಿಸಿದರು.

“ಈ ಚುನಾವಣೆಯು ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಯನ್ನಾಗಿ ಮಾಡುವುದಾಗಿದೆ. ಮಣಿಪುರದ ಮತಗಳು ಜನರು ಯಾರೊಂದಿಗೆ ಇದ್ದಾರೆ ಎಂಬುದನ್ನು ತೋರಿಸುತ್ತವೆ. ಈ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಲ್ಲ. ಇದು ಮಣಿಪುರವನ್ನು ವಿಭಜಿಸುವ ಬಗ್ಗೆ ಮಾತನಾಡುವವರು ಮತ್ತು ರಾಜ್ಯವನ್ನು ಒಗ್ಗೂಡಿಸುವವರ ನಡುವೆ ಇದೆ” ಎಂದು ಶಾ ಹೇಳಿದರು.

2023 ರ ಮೇ 3 ರಂದು ಮಣಿಪುರದಲ್ಲಿ ಕುಕಿ ಮತ್ತು ಮೈತಿ ಜನಾಂಗದ ನಡುವೆ ಘರ್ಷಣೆಗಳು ಪ್ರಾರಂಭವಾಗಿದೆ. ಅದಾದ ಬಳಿಕ ಮೇ 29 ರಿಂದ ಜೂನ್ 2 ರವರೆಗೆ ಬಿಜೆಪಿ ಆಡಳಿತದ ಈ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಲ್ಕು ದಿನಗಳ ಭೇಟಿ ಮಾಡಿದ್ದರು. ಆದರೆ ಅದಾದ ಬಳಿಕ ಮತ್ತೆ ಭೇಟಿ ನೀಡಿಲ್ಲ. ಈಗ ಚುನಾವಣೆ ಸಂದರ್ಭದಲ್ಲಿ ಮತ್ತೆ ಮಣಿಪುರಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಿದ್ದು ಮಣಿಪುರದಲ್ಲಿ ಹಿಂಸಾಚಾರ ಆರಂಭವಾದ ಬಳಿಕ ಕೇಂದ್ರ ಸಚಿವರ ಎರಡನೇ ಭೇಟಿ ಇದಾಗಿದೆ.

ಇದನ್ನು ಓದಿದ್ದೀರಾ?   ಮೋದಿ, ಶಾ ಓದಿರುವುದು ನಮ್ಮ ಶಾಲೆಗಳಲ್ಲಿ: ಪ್ರಧಾನಿ ಲೋಕಸಭೆ ಭಾಷಣದ ವಿರುದ್ಧ ಖರ್ಗೆ ಕಿಡಿ

ಅಮಿತ್ ಶಾ ಅವರಂತೆ ಪ್ರಧಾನಿ ನರೇಂದ್ರ ಮೋದಿ ಮಣಿಪುರದಲ್ಲಿ ಹಿಂಸಾಚಾರ ಆರಂಭವಾದ ಬಳಿಕ ಒಂದು ಬಾರಿಯೂ ಮಣಿಪುರಕ್ಕೆ ಭೇಟಿ ನೀಡಿಲ್ಲ. ಈ ಕಾರಣದಿಂದಾಗಿಯೇ ನರೇಂದ್ರ ಮೋದಿ ನಿರಂತರವಾಗಿ ವಿರೋಧ ಪಕ್ಷಗಳಿಂದ ಟೀಕೆಗೆ ಒಳಗಾಗಿದ್ದಾರೆ. ಹಿಂಸಾಚಾರವು ಮೇ ತಿಂಗಳಲ್ಲಿ ಆರಂಭವಾಗಿದ್ದರೂ ಯಾವುದೇ ಹೇಳಿಕೆಯನ್ನು ನೀಡದ ಪ್ರಧಾನಿ ಮೋದಿ 2023 ರ ಆಗಸ್ಟ್‌ನಲ್ಲಿ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಮಾಡಿದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಭಾಷಣದಲ್ಲಿ ಮಣಿಪುರದ ಉಲ್ಲೇಖ ಮಾಡಿದ್ದರು. “ಭಾರತದ ಜನರು ಮಣಿಪುರದೊಂದಿಗೆ ನಿಂತಿದ್ದಾರೆ” ಎಂದು ಹೇಳಿದ್ದರು.

ಹಾಗೆಯೇ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಅಮಿತ್ ಶಾ ಮೈತೆ ಮತ್ತು ಕುಕಿಗಳ ನಡುವೆ ಶಾಂತಿ ಸಂವಾದಕ್ಕೆ ಕರೆ ನೀಡಿದ್ದರು. ತಮ್ಮ ಭೇಟಿ ವೇಳೆ ಕುಕಿ ಪ್ರಾಬಲ್ಯದ ಚುರಾಚಂದ್‌ಪುರ ಜಿಲ್ಲೆ ಮತ್ತು ಮ್ಯಾನ್ಮಾರ್‌ನ ಗಡಿಯಲ್ಲಿರುವ ಮೋರೆಹ್ ಪಟ್ಟಣಕ್ಕೆ ಭೇಟಿ ನೀಡಿದರು. ಆದರೆ ಪ್ರಧಾನಿ ಈವರೆಗೂ ಮಣಿಪುರಕ್ಕೆ ಭೇಟಿ ನೀಡಿಲ್ಲ. ಕೇವಲ ಒಂದು ಬಾರಿ ಮಾತ್ರ ಮಣಿಪುರದ ಬಗ್ಗೆ ಮಾತನಾಡಿದ್ದಾರೆ. ಅದನ್ನು ಹೊರತುಪಡಿಸಿ ಮಣಿಪುರ ರಾಜ್ಯೋತ್ಸವಕ್ಕೆ ಪ್ರಧಾನಿ ಶುಭಕೋರಿದ್ದಾರೆ. ಈ ಸಂದರ್ಭದಲ್ಲಿಯೂ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X