1961ರಲ್ಲಿ ಪೋರ್ಚುಗೀಸ್ ಆಳ್ವಿಕೆಯಿಂದ ಗೋವಾವನ್ನು ವಿಮೋಚನೆಗೊಳಿಸಿದ ನಂತರ, ರಾಜ್ಯದ ಮೇಲೆ ಭಾರತೀಯ ಸಂವಿಧಾನವನ್ನು ‘ಬಲವಂತವಾಗಿ’ ಹೇರಲಾಯಿತು ಎಂದು ದಕ್ಷಿಣ ಗೋವಾದ ಕಾಂಗ್ರೆಸ್ ಅಭ್ಯರ್ಥಿ ಕ್ಯಾಪ್ಟನ್ ವಿರಿಯಾಟೊ ಫೆರ್ನಾಂಡಿಸ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಟೀಕೆಗೆ ಗುರಿಯಾಗಿದೆ.
ನಿವೃತ್ತ ನೌಕಾಪಡೆ ಅಧಿಕಾರಿ ಮತ್ತು ಕಾರ್ಗಿಲ್ ಯುದ್ಧದ ಯೋಧ ಫರ್ನಾಂಡಿಸ್ ಅವರು ದಕ್ಷಿಣ ಗೋವಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 2019ರಲ್ಲಿ ಚುನಾವಣೆಗೂ ಮುನ್ನ ‘ದ್ವಿ ಪೌರತ್ವ’ ಕುರಿತು ರಾಹುಲ್ ಗಾಂಧಿ ಜೊತೆ ನಡೆಸಿದ್ದ ಮಾತುಕತೆಯನ್ನು ನೆನಪಿಸಿಕೊಂಡಿರು. “2019ರ ಮಾರ್ಚ್ 10ರಂದು ಪಣಜಿಯ ಹೋಟೆಲ್‌ನಲ್ಲಿ ರಾಹುಲ್ ಅವರನ್ನು ಭೇಟಿ ಮಾಡಿದ್ದೆ” ಎಂದು ಹೇಳಿದರು.
“1961ರಲ್ಲಿ ಗೋವಾ ವಿಮೋಚನೆಯಾದಾಗ ಭಾರತೀಯ ಸಂವಿಧಾನವನ್ನು ನಮ್ಮ ಮೇಲೆ ಬಲವಂತವಾಗಿ ಹೇರಲಾಯಿತು” ಎಂದು ಹೇಳಿದ್ದಾರೆ. ಆ ಸಮಯದಲ್ಲಿ ಅವರು ಗೋವಾದ ಜನರಿಗೆ ದ್ವಿಪೌರತ್ವ ನೀಡಬೇಕೆಂದು ಒತ್ತಾಯಿಸುತ್ತಿದ್ದ ‘ಗೋಯೆಂಚೋ ಆವಾಜ್’ ಎಂಬ ಎನ್‌ಜಿಒದಲ್ಲಿದ್ದರು.
“ನಾವು ಅವರ [ರಾಹುಲ್] ಮುಂದೆ 12 ಬೇಡಿಕೆಗಳನ್ನು ಇಟ್ಟಿದ್ದೆ. ಅವುಗಳಲ್ಲಿ ಒಂದು ದ್ವಿಪೌರತ್ವಕ್ಕೆ ಸಂಬಂಧಿಸಿದ್ದು. ಆದರೆ, ನನ್ನ ಬೇಡಿಕೆಯು ಸಂವಿಧಾನಬದ್ಧವಾಗಿಲ್ಲದಿದ್ದರೆ, ಅದರನ್ನು ಪರಿಗಣಿಸುವುದಿಲ್ಲ ಎಂದರು. ಆಗ ನಾನು, ‘1950ರ ಜನವರಿ 26ರಂದು ಭಾರತೀಯ ಸಂವಿಧಾನವನ್ನು ಜಾರಿಗೆ ತರಲಾಯಿಗಿತ್ತು. 1961ರಲ್ಲಿ ಗೋವಾವನ್ನು ಪೋರ್ಚುಗೀಸ್ ಆಳ್ವಿಕೆಯಿಂದ ವಿಮೋಚನೆಗೊಳಿಸಿದಾಗ, ನೀವು [ಕೇಂದ್ರ ಸರ್ಕಾರ] ನಮ್ಮ ಮೇಲೆ ಸಂವಿಧಾನವನ್ನು ಒತ್ತಾಯದಿಂದ ಹೇರಿದ್ದೀರಿ’ ಎಂದು ವಿವರಿಸಿದೆ” ಎಂದು ಫರ್ನಾಂಡಿಸ್ ಹೇಳಿದರು.
“ಭಾರತದ ಸಂವಿಧಾನವನ್ನು ಜಾರಿಗೆ ತಂದಾಗ, ಗೋವಾ ಭಾರತದ ಭಾಗವಾಗಿರಲಿಲ್ಲ. ಗೋವಾ ಜನರಿಗಾಗಿ ಯಾವುದೇ ನಿಬಂಧನೆಗಳು ಇರಲಿಲ್ಲ” ಎಂದು ಅವರು ಹೇಳಿದರು.
ಫರ್ನಾಂಡಿಸ್ ಅವರ ಹೇಳಿಕೆಗಳು ತೀವ್ರ ಟೀಕೆಗೆ ಗುರಿಯಾಗಿವೆ. ಇದೇ ವಿಷಯವಾಗಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, “ಭಾರತೀಯ ಸಂವಿಧಾನವನ್ನು ಗೋವಾದವರ ಮೇಲೆ ಬಲವಂತವಾಗಿ ಹೇರಲಾಗಿದೆ ಎಂಬ ಕಾಂಗ್ರೆಸ್‌ನ ಅಭ್ಯರ್ಥಿಯ ಹೇಳಿಕೆಯಿಂದ ನಾನು ದಿಗ್ಭ್ರಮೆಗೊಂಡಿದ್ದೇನೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಗೋವಾ ಭಾರತದ ಅವಿಭಾಜ್ಯ ಅಂಗ ಎಂದು ಮನಃಪೂರ್ವಕವಾಗಿ ನಂಬಿದ್ದರು” ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಕಾಂಗ್ರೆಸ್ ಗೋವಾ ವಿಮೋಚನೆಯನ್ನು 14 ವರ್ಷ ವಿಳಂಬಗೊಳಿಸಿತು. ಈಗ, ಅವರ ಅಭ್ಯರ್ಥಿ ಭಾರತೀಯ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆಯೇ? ಈ ಅಜಾಗರೂಕ ‘ಭಾರತ್ ಟೊಡೊ’ ರಾಜಕಾರಣವನ್ನು ಕಾಂಗ್ರೆಸ್ ಕೂಡಲೇ ನಿಲ್ಲಿಸಬೇಕು. ಕಾಂಗ್ರೆಸ್ ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯ” ಎಂದು ಸಾವಂತ್ ಹೇಳಿದ್ದಾರೆ.