ಸರ್ಕಾರಿ ಗುತ್ತಿಗೆಗಳಲ್ಲಿ ಮುಸಲ್ಮಾನರಿಗೆ ಶೇ.4ರಷ್ಟು ಮೀಸಲಾತಿ ನೀಡುವ ರಾಜ್ಯ ಕಾಂಗ್ರೆಸ್ ಸರ್ಕಾರದ ಮಸೂದೆ ಕಾಗದದಲ್ಲಿ ಉಳಿಯುವುದೇ ಎಂಬ ಪ್ರಶ್ನೆ ಮೂಡಿದೆ.
ಸರ್ಕಾರಿ ಗುತ್ತಿಗೆಗಳಲ್ಲಿ ಮುಸಲ್ಮಾನರಿಗೆ ಶೇ.4ರಷ್ಟು ಮೀಸಲಾತಿ ನೀಡುವ ರಾಜ್ಯ ಸರ್ಕಾರದ ಮಸೂದೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ರಾಷ್ಟ್ರಪತಿಯವರ ಅಂಕಿತಕ್ಕೆ ಹೊತ್ತು ಹಾಕಿದ್ದಾರೆ.
ರಾಷ್ಟ್ರಪತಿಯವರ ಅಂಕಿತ ಪಡೆಯುವಂತೆ ಸೂಚಿಸಿ ಈ ಮಸೂದೆಯ ಕಡತವನ್ನು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ. ಬಿಜೆಪಿಯ ತೀವ್ರ ವಿರೋಧದ ನಡುವೆಯೂ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಮಸೂದೆಯನ್ನು ವಿಧಾನಮಂಡಲದಲ್ಲಿ ಪಾಸು ಮಾಡಿ ರಾಜ್ಯಪಾಲರ ಅಂಕಿತಕ್ಕೆ ಕಳಿಸಿತ್ತು.
ಪ್ರಧಾನಿ ಮೋದಿಯವರೂ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಮಸೂದೆಯನ್ನು ಕಟುವಾಗಿ ಟೀಕಿಸಿದ್ದಾರೆ. ರಾಜ್ಯ ಬಿಜೆಪಿಯು ಇತ್ತೀಚೆಗೆ ರಾಜ್ಯಾದ್ಯಂತ ನಡೆಸಿದ ಜನಾಕ್ರೋಶ ಯಾತ್ರೆಯಲ್ಲಿಯೂ ಈ ಮೀಸಲಾತಿ ಕ್ರಮವನ್ನು ಪ್ರಧಾನವಾಗಿ ಎತ್ತಿ ಟೀಕೆ ಮಾಡಿತ್ತು.
ಇತ್ತೀಚಿನ ಸುಪ್ರೀಮ್ ಕೋರ್ಟ್ ತೀರ್ಪಿನ ಪ್ರಕಾರ ರಾಜ್ಯ ಸರ್ಕಾರ ಅಂಕಿತಕ್ಕಾಗಿ ಕಳಿಸಿದ ಮಸೂದೆಯನ್ನು ರಾಜ್ಯಪಾಲರು ಅನಿರ್ದಿಷ್ಟಾವಧಿ ಬಾಕಿ ಇಟ್ಟುಕೊಳ್ಳುವಂತಿಲ್ಲ. ತಮಗೆ ಒಪ್ಪಿಗೆಯಿಲ್ಲದಿದ್ದರೆ ರಾಷ್ಟ್ರಪತಿಯವರಿಗೆ ಕಳಿಸಿಕೊಡಬೇಕು. ರಾಷ್ಟ್ರಪತಿಯವರು ಕೂಡ ಇಂತಿಷ್ಟು ಅವಧಿಯೊಳಗಾಗಿ ತಮ್ಮ ಒಪ್ಪಿಗೆ ಅಥವಾ ಅಸಮ್ಮತಿ ಸೂಚಿಸಬೇಕಿದೆ.
ಕೇಂದ್ರ ಬಿಜೆಪಿ ಸರ್ಕಾರದ ಪ್ರಕಟಿತ ಮುಸ್ಲಿಮ್ ವಿರೋಧಿ ನೀತಿಯ ಹಿನ್ನೆಲೆಯಲ್ಲಿ ಈ ಮಸೂದೆಗೆ ರಾಷ್ಟ್ರಪತಿಯವರ ಅಂಕಿತ ದೊರೆಯುವುದು ದುಸ್ಸಾಧ್ಯವೇ ಸರಿ.