ಬೀದರ್‌ನ ಭಾಲ್ಕಿ ತಾಲ್ಲೂಕಿನ ಕಟ್ಟಿತುಗಾಂವ್ ಗ್ರಾಮದ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಕೇಳಿಬಂದಿರುವ ಕಾರಣ ಖರ್ಗೆ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ಆಗ್ರಹಿಸಿದೆ. ಆದರೆ “ಬಿಜೆಪಿಯವರು ಎಷ್ಟೇ ಚೀರಾಡಲಿ, ಬಟ್ಟೆ ಹರಿದುಕೊಳ್ಳಲಿ, ನಾನು ಮಾತ್ರ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ” ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಸೇರಿದಂತೆ ಇತರೆ ಆರು ಜನರಿಂದ ಬೆದರಿಕೆ ಇರುವುದಾಗಿ ಡೆತ್‌ನೋಟ್ ಬರೆದಿಟ್ಟು ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗಾಗಲೇ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ. ಆದರೆ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು, ಹಾಗೆಯೇ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂಬುದು ವಿಪಕ್ಷಗಳ ಆಗ್ರಹವಾಗಿದೆ.
ಇದನ್ನು ಓದಿದ್ದೀರಾ? ಗುತ್ತಿಗೆದಾರ ಸಚಿನ್‌ರದ್ದು ಸರ್ಕಾರಿ ಯೋಜಿತ ಆತ್ಮಹತ್ಯೆ: ಬಿವೈ ವಿಜಯೇಂದ್ರ ಆರೋಪ
ಈ ಬಗ್ಗೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಎಷ್ಟೇ ಚೀರಾಡಿಕೊಳ್ಳಲಿ, ಬಟ್ಟೆ ಹರಿದುಕೊಳ್ಳಲಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ನಾನು ಈ ಹಿಂದೆಯೂ ಹೇಳಿದ್ದೇನೆ. ಮೊದಲು ಸಾಕ್ಷಿ ತೋರಿಸಿ ನಂತರ ಮಾತನಾಡಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸಿದಂತೆ ಮಾತನಾಡುವುದಲ್ಲ” ಎಂದು ಹೇಳಿದರು.
“ಡಿಸೆಂಬರ್ 27ರಂದೇ ಗೃಹ ಸಚಿವರು, ಸಿಎಂಗೆ ಮನವಿ ಮಾಡಿದ್ದೇನೆ. ಈ ಪ್ರಕರಣದಲ್ಲಿ ಸ್ವತಂತ್ರ ತನಿಖೆ ಆಗಲಿ ಎಂದು ಹೇಳಿದ್ದೆ. ಸಿಎಂ ಭೇಟಿ ಮಾಡಿ ಮಾಹಿತಿ ನೀಡಿದ್ದೇನೆ, ಗೃಹ ಸಚಿವರನ್ನೂ ಕೂಡ ಭೇಟಿ ಮಾಡಿದ್ದೇನೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ತೇಜೋವಧೆ ಖಂಡನೀಯ: ವಸಂತ್ ಕುಮಾರ್
“ಇನ್ನು ರಾಜು ಕಪನೂರ್ ನನ್ನ ಆಪ್ತನಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ. ಬಿಜೆಪಿ ನಾರ್ತ್ ಅಭ್ಯರ್ಥಿ ಚಂದು ಪಾಟೀಲ್ ಜೊತೆಗೆ ರಾಜು ಕಪನೂರ್ ಇರುವ ಫೋಟೋ ನಮ್ಮ ಬಳಿಯೂ ಇದೆ. ಯಾಕೆಂದರೆ ಅವರು ಕಾಂಗ್ರೆಸ್‌ಗೆ ಬರುವ ಮುನ್ನ ಬಿಜೆಪಿಯಲ್ಲಿದ್ದರು. ರಾಜು ಕಪನೂರ್ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷರಾಗಿದ್ದರು” ಎಂದರು.
“ನಾವು ಲಾಜಿಕ್ ಆಗಿಯೇ ಮಾತನಾಡುತ್ತಿದ್ದೇವೆ. ವಿಜಯೇಂದ್ರ ವಿರುದ್ದ ಮನಿ ಲಾಂಡರಿಂಗ್ ಪ್ರಕರಣ ಆಗಿದೆಯಲ್ಲ. ಹಾಗಿದ್ದರೆ ಅವರು ಯಾಕೆ ರಾಜೀನಾಮೆ ನೀಡುತ್ತಿಲ್ಲ” ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
