ವರುಣಾ ಕ್ಷೇತ್ರದಲ್ಲಿ ಕುಕ್ಕರ್ ಹಂಚಿಕೆ ಮಾಡಿದ್ದಕ್ಕೂ, ವಿಧಾನಸಭಾ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ನನ್ನ ಜನ್ಮದಿನದ ಅಂಗವಾಗಿಯಷ್ಟೇ ಕುಕ್ಕರ್ ಹಂಚಿಕೆ ಮಾಡಲಾಗಿತ್ತು. ಅಲ್ಲದೆ, ಕುಕ್ಕರ್ ಹಂಚಿಕೆ ಕಾರ್ಯಕ್ರಮ ನಡೆದಾಗ ಚುನಾವಣೆಯೇ ಘೋಷಣೆ ಆಗಿರಲಿಲ್ಲ ಎಂದು ರಾಜ್ಯ ಮಡಿವಾಳರ ಸಂಘದ ಅಧ್ಯಕ್ಷ ಸಿ ನಂಜಪ್ಪ ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾದಲ್ಲಿ ತಾವು ಗೆಲ್ಲಲು ಜನರಿಗೆ ಕುಕ್ಕರ್ ವಿತರಣೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕುಕ್ಕರ್ ವಿತರಣೆಗೆ ಸಂಬಂಧಿಸಿದಂತೆ ನಂಜಪ್ಪ ಅವರು ಸ್ಪಷ್ಟನೆ ನೀಡಿದ್ದು, “ನನ್ನ ಜನ್ಮ ದಿನದ ಪ್ರಯುಕ್ತ ಕಳೆದ 10 ವರ್ಷಗಳಿಂದ ವಿವಿಧ ಗ್ರಾಮಗಳಲ್ಲಿ ಬಡವರಿಗೆ ಕುಕ್ಕರ್, ಇಸ್ತ್ರಿಪೆಟ್ಟಿಗೆ, ನೋಟ್‌ಬುಕ್‌ಗಳನ್ನು ವಿತರಣೆ ಮಾಡುತ್ತಾ ಬಂದಿದ್ದೇನೆ. ಅದೇ ರೀತಿಯಲ್ಲಿ ಈ ವರ್ಷದ ಜನವರಿಯಲ್ಲಿ ವರುಣಾ ಕ್ಷೇತ್ರದ ಕುಪ್ಪರವಳ್ಳಿಯಲ್ಲಿ ಕುಕ್ಕರ್ ವಿತರಣೆ ಮಾಡಲಾಗಿತ್ತು. ಅದಕ್ಕೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.
“ಬೆಂಗಳೂರಿನ ದೇವನಹಳ್ಳಿ, ಯಲಹಂಕ ಹಾಗೂ ಹಾವೇರಿ, ಹುಬ್ಬಳ್ಳಿ, ಮಂಡ್ಯಗಳನ್ನೂ ವಿವಿಧ ದಿನ ಬಳಕೆಯ ವಸ್ತುಗಳನ್ನು ವಿತರಣೆ ಮಾಡಿದ್ದೇನೆ. ಒಂದೊಂದು ವರ್ಷ ಒಂದೊಂದು ಗ್ರಾಮದಲ್ಲಿ ಇಂತಹ ವಸ್ತುಗಳ ವಿತರಣಾ ಕಾರ್ಯಕ್ರಮ ಡನೆಸುತ್ತೇನೆ. 2022ರಲ್ಲಿ ಮೈಸೂರು ಜಿಲ್ಲೆಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು.ಆಗ ಕಾರ್ಯಕ್ರಮ ನಡೆದಿರಲಿಲ್ಲ. ಹಾಗಾಗಿ ಈ ವರ್ಷದ ಜನವರಿಯಲ್ಲಿ ವರುಣಾ ಕ್ಷೇತ್ರದ ಕುಪ್ಪರವಳ್ಳಿಯಲ್ಲಿ ಕಾರ್ಯಕ್ರಮ ನಡೆಸಿ ಕುಕ್ಕರ್ ವಿತರಣೆ ಮಾಡಿದ್ದೇನೆ” ಎಂದು ಅವರು ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: 3000 ಕ್ಯೂಸೆಕ್ ನೀರು ಹರಿಸುವ ಆದೇಶಕ್ಕೆ ಆಕ್ಷೇಪಣೆ ಸಲ್ಲಿಸುತ್ತೇವೆ: ಸಿಎಂ ಸಿದ್ದರಾಮಯ್ಯ
“ಎಲ್ಲಿ ಕಾರ್ಯಕ್ರಮ ಮಾಡುತ್ತೇವೆಯೋ ಆ ಕಾರ್ಯಕ್ರಮಕ್ಕೆ ಅಲ್ಲಿನ ಜನಪ್ರತಿನಿಧಿಗಳನ್ನು ಕರೆಯುತ್ತೇವೆ. ಅದರಂತೆ, ಕುಪ್ಪರವಳ್ಳಿ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರನ್ನು ಕರೆಯಲಾಗಿತ್ತು. ಆದರೆ, ನನ್ನ ಜನ್ಮದಿನದ ಸಮಯದಲ್ಲಿ ಸಿದ್ದರಾಮಯ್ಯ ಭಾರತ್ ಜೋಡೊ ಕಾರ್ಯಕ್ರಮದ ಕಾರಣದಿಂದ ಅವರು ಬರಲಾಗುವುದಿಲ್ಲ ಎಂದಿದ್ದರು. ಹೀಗಾಗಿ, ಕಾರ್ಯಕ್ರಮವನ್ನು ಜನವರಿ 27ಕ್ಕೆ ಮುಂದೂಡಲಾಗಿತ್ತು. ಅಂದೇ ಕಾರ್ಯಕ್ರಮ ನಡೆಯಿತು. ಆಗ ಚುನಾವಣೆ ಘೊಷಣೆ ಆಗಿರಲಿಲ್ಲ” ಎಂದು ಹೇಳಿದ್ದಾರೆ.
“ಮಡಿವಾಳ ಸಮಾಜ ಸಂಘಟಿತರಾಗಿ ಒಗ್ಗೂಡಿರುವುದಕ್ಕೆ ಯತೀಂದ್ರ ಸಿದ್ದರಾಮಯ್ಯ ಕೃತಜ್ಞತೆ ಸಲ್ಲಿಸಲ್ಲಿಸಿದ್ದರು. ಆ ಸಮಯದಲ್ಲಿ ಅಂದಿನ ಕಾರ್ಯಕ್ರಮವನ್ನು ನೆನಪು ಮಾಡಿಕೊಂಡರು. ಅದನ್ನೇ ವಿವಾದ ಮಾಡಲಾಗಿದೆ. ಈ ವರ್ಷ ಯಾದಗಿರಿಯಲ್ಲಿ ನಮ್ಮ ಸಮಾಜದ ಬಡವರಿಗೆ ಕುಕ್ಕರ್ ಸಹಿತ ವಿವಿಧ ವಸ್ತುಗಳ ವಿತರಣೆ ನಡೆಯಲಿದೆ” ಎಂದು ತಿಳಿಸಿದ್ದಾರೆ.