- ನಿಗಮ ಮಂಡಳಿ ಅಧ್ಯಕ್ಷ, ಸದಸ್ಯ ಸ್ಥಾನಗಳಿಗೆ ಬೇಕಾಬಿಟ್ಟಿ ನೇಮಕ ಇಲ್ಲ
- ಪಕ್ಷಕ್ಕೆ ಯಾರು ಹೆಚ್ಚು ಮತ ತಂದಿದ್ದಾರೋ ಅವರಿಗೆ ಮೊದಲ ಪ್ರಾಶಸ್ತ್ಯ
ನಿಗಮ ಮಂಡಳಿ ಸೇರಿದಂತೆ ಇತರೇ ಅಧ್ಯಕ್ಷ, ಸದಸ್ಯ ಸ್ಥಾನಗಳಿಗೆ ಬೇಕಾಬಿಟ್ಟಿ ನೇಮಕ ಮಾಡುವುದಿಲ್ಲ. ಯಾವ ನಾಯಕರು ಪಕ್ಷಕ್ಕಾಗಿ ದುಡಿದಿದ್ದಾರೋ ಅವರಿಗೆ ಮೊದಲ ಆದ್ಯತೆ ನೀಡುತ್ತೇವೆ ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ “ಕ್ವಿಟ್ ಇಂಡಿಯಾ ಚಳವಳಿ” ದಿನಾಚರಣೆಯಲ್ಲಿ ಮಾತನಾಡಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಈ ಬಗ್ಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಬೂತ್ ಮಟ್ಟದಲ್ಲಿ ಎಷ್ಟು ಮತಗಳನ್ನು ಪಕ್ಷಕ್ಕೆ ತಂದಿದ್ದಾರೋ ಅಂತಹ ನಾಯಕರಿಗೆ ಮೊದಲು ಪ್ರಾಶಸ್ತ್ಯ ನೀಡಿ ಎಂದಿದ್ದಾರೆ. ಆ ಪ್ರಕಾರ ನಾವು ನಡೆಯುತ್ತೇವೆ” ಎಂದರು.
“ಕೊರೊನಾ ಸಮಯದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಿ, ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಜನರ ಸೇವೆಗೆ ಕಳುಹಿಸಿ ಜೀವ ಒತ್ತೆ ಇಟ್ಟು ಪಕ್ಷ ಕಟ್ಟಿದ್ದೇವೆ. ಸ್ವಾತಂತ್ರ್ಯ ಅಮೃತ ಮಹೋತ್ಸವ, ಮೇಕೆದಾಟು ಪಾದಯಾತ್ರೆ ರಾಜ್ಯದ ಇತಿಹಾಸದಲ್ಲಿ ದಾಖಲಾಗುವಂತಹ ಸಂಗತಿಗಳು, ಭಾರತ್ ಜೋಡೋ ಸಂದರ್ಭದಲ್ಲಿ ಬದನವಾಳುವಿನಲ್ಲಿ ಸವರ್ಣೀಯರು ಮತ್ತು ದಲಿತರ ಮಧ್ಯೆ ಇದ್ದಂತಹ ಕಂದಕವನ್ನು ಮುಚ್ಚಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ಸಾಧನೆ” ಎಂದು ಹೇಳಿದರು.
ಬಿಜೆಪಿ, ಜೆಡಿಎಸ್ ಮತದಾರರ ಹೃದಯ ಗೆಲ್ಲಬೇಕು
“ಮುಂದೆ ಲೋಕಸಭಾ ಚುನಾವಣೆ ಇದೆ. ನಮ್ಮ ಯೋಜನೆಗಳ ಲಾಭವನ್ನು ಬಿಜೆಪಿ ಮತದಾರರೂ ಪಡೆಯುತ್ತಿದ್ದಾರೆ. ಅಂತಹವರ ಹೃದಯ ಗೆಲ್ಲಬೇಕು, ಕರ್ನಾಟಕದಲ್ಲಿ ದ್ವೇಷ, ಅಸೂಯೆ ರಾಜಕಾರಣಕ್ಕೆ ಅವಕಾಶವಿಲ್ಲ, ಎಲ್ಲರೂ ನಮ್ಮವರೇ, ಆ ನಿಟ್ಟಿನಲ್ಲಿ ಎಲ್ಲ ನಾಯಕರು, ಕಾರ್ಯಕರ್ತರು ಕೆಲಸ ಮಾಡಬೇಕು. ನಮ್ಮ ಗುರಿ ಕೇವಲ 2024 ಮಾತ್ರವಲ್ಲ 2028 ಕೂಡ ಇರಬೇಕು” ಎಂದರು.
“ಕಾಂಗ್ರೆಸ್ 136 ಸ್ಥಾನ ಗೆಲ್ಲುತ್ತದೆ ಎಂದು ಹೇಳಿದ್ದೆ. ಸುಮಾರು ಜನ ನನ್ನ ಮಾತನ್ನು ನಂಬಲಿಲ್ಲ. ವಿರೋಧ ಪಕ್ಷದವರು ಸಮ್ಮಿಶ್ರ ಸರ್ಕಾರ ಬಂದು ಬಿಡುತ್ತದೆ ಎಂದು ಮುಂಚಿತವಾಗಿಯೇ ಕಾಲಿಗೆ ಬಿದ್ದು ಸರ್ಕಾರ ಮಾಡೋಕೆ ತಯಾರಾಗಿದ್ದರು. ಆದರೆ ನನ್ನ ನಂಬಿಕೆ ಸುಳ್ಳಾಗಲಿಲ್ಲ” ಎಂದು ತಿಳಿಸಿದರು.
ರಾಜೀವ್ ಗಾಂಧಿ ಜನ್ಮ ದಿನದಂದು ಗೃಹಲಕ್ಷ್ಮಿ ಜಾರಿ
“ಆಗಸ್ಟ್ 20ನೇ ತಾರೀಖು ಪ್ರತಿಯೊಂದು ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ, ಮಟ್ಟದಲ್ಲಿ, ಮಹಾನಗರ ಪಾಲಿಕೆಯ ವಾರ್ಡ್ ಮಟ್ಟದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳನ್ನು ಸೇರಿಸಿ ಪಕ್ಷಾತೀತವಾಗಿ ಸಂಭ್ರಮಾಚರಣೆ ಮಾಡುವಂತೆ ಸೂಚಿಸಿದ್ಧೇವೆ. 1 ಕೋಟಿ 28 ಲಕ್ಷ ಮಹಿಳೆಯರ ಅರ್ಜಿಯನ್ನು ಪರಿಗಣಿಸಿದ್ದೇವೆ” ಎಂದು ವಿವರಿಸಿದರು.
ಕೋಮುವಾದಿ ವಿರುದ್ಧ ಹೋರಾಟ
ಮಹಾತ್ಮ ಗಾಂಧಿ ಅವರು ಬ್ರಿಟೀಷರನ್ನ ಭಾರತ ಬಿಟ್ಟು ತೊಲಗಿ ಎನ್ನುವ ಹೋರಾಟಕ್ಕೆ 81 ವರ್ಷ ಆಗಿದೆ. ಈಗ ಮತ್ತೆ 8 ದಶಕಗಳ ನಂತರ “ಭಾರತ ಬಿಟ್ಟು ತೊಲಗಿ ಎನ್ನುವ ಹೋರಾಟ” ಮತ್ತೆ ಆರಂಭವಾಗಿದೆ. ಇಂದು ಕೋಮುವಾದಿ, ಸರ್ವಾದಿಕಾರಿ ಸರ್ಕಾರ ತೊಲಗಿಸಲು ಹೋರಾಟ ಮಾಡಬೇಕಾಗಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಬಿಜೆಪಿ ಅವರು ಹೇಳುತ್ತಿದ್ದರು. ಈಗ ನೀವೆಲ್ಲಾ ಬಿಜೆಪಿ ಮುಕ್ತ ಭಾರತಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಿದರು.
“ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಭಾರತದ ಎಲ್ಲ ರಾಜ್ಯಗಳ ಪ್ರಮುಖ ವಿರೋಧ ಪಕ್ಷಗಳ ನಾಯಕರು, ಮುಖ್ಯಮಂತ್ರಿಗಳು “ಇಂಡಿಯಾ ರಕ್ಷಿಸಿ” ಅಭಿಯಾನಕ್ಕೆ ಬೆಂಗಳೂರು ಸಾಕ್ಷಿಯಾಯಿತು. ಇಡೀ “ಇಂಡಿಯಾ”ಕ್ಕೆ ಕರ್ನಾಟಕ ಆತ್ಮವಿಶ್ವಾಸ ನೀಡಿದೆ. “ಇಂಡಿಯಾ” ಸಭೆಯ ನಂತರ ನಮ್ಮ ಪಕ್ಷದ ಎಲ್ಲಾ ರಾಜ್ಯಗಳ ನಾಯಕರನ್ನು ಕರೆದ ಉನ್ನತ ನಾಯಕರುಗಳು ಕರ್ನಾಟಕ ಮಾದರಿಯನ್ನು ಅನುಕರಿಸಿ ಎಂದು ಹೇಳಿದರು” ಎಂದು ನೆನಪಿಸಿಕೊಂಡರು.