“ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ರೈತರ ಆದಾಯ ಕುಸಿತ, ನಿರುದ್ಯೋಗ ಹೆಚ್ಚಳ, ದೇಶದ ಆರ್ಥಿಕತೆ ಕುಸಿತ ನರೇಂದ್ರ ಮೋದಿಯವರ ಸಾಧನೆ. ಈ ಚಂದಕ್ಕೆ ಇವರು ಪ್ರಧಾನಿ ಆಗ್ಬೇಕಾ?” ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾ ರಾಮಯ್ಯ ಪರವಾಗಿ ದೊಡ್ಡಬಳ್ಳಾಪುರದಲ್ಲಿ ರೋಡ್ ಶೋ ನಡೆಸಿ ಅವರು ಮಾತನಾಡಿದರು.
“ಹತ್ತತ್ತು ವರ್ಷ ಪ್ರಧಾನಿ ಆಗಿ ರೈತರಿಗೆ, ಕಾರ್ಮಿಕರಿಗೆ, ಯುವ ಸಮೂಹಕ್ಕೆ, ಮಹಿಳೆಯರಿಗೆ, ದುಡಿಯುವ ವರ್ಗಗಳಿಗೆ, ಕೃಷಿ ಕಾರ್ಮಿಕರಿಗೆ, ಮಧ್ಯಮ ವರ್ಗದವರಿಗೆ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ ಒಂದೇ ಒಂದು ಕಾರ್ಯಕ್ರಮವನ್ನೂ ಕೊಡಲಾಗಲಿಲ್ಲವಲ್ಲ ಏಕೆ? ಮತ್ತೆ ನೀವು ಪ್ರಧಾನಿಯಾಗಿ ಭಾರತೀಯರಿಗೆ , ದೇಶಕ್ಕೆ ಸಿಕ್ಕಿದ್ದಾದರೂ ಏನು ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
ಪ್ರಧಾನಿ @narendramodi ಅವರಿಗೆ ಚುನಾವಣೆ ವೇಳೆಯಲ್ಲಿ ಬಿಟ್ಟರೆ ಬೇರೆ ಸಮಯದಲ್ಲಿ ನಮ್ಮ ರಾಜ್ಯ ನೆನಪಾಗುವುದೇ ಇಲ್ಲ. ಪ್ರವಾಹ ಬಂದಾಗಲೂ ಈ ಕಡೆ ತಲೆ ಹಾಕಲಿಲ್ಲ, ಬರಗಾಲ ಬಂದಾಗಲೂ ಬರಲಿಲ್ಲ. ಚುನಾವಣೆ ವೇಳೆ ಭ್ರಷ್ಟರನ್ನು ಗೆಲ್ಲಿಸಲು ರಾಜ್ಯಕ್ಕೆ ಮೇಲಿಂದ ಬರ್ತಾರೆ ಅಂದರೆ ಅದು ರಾಜ್ಯದ ಜನತೆಗೆ ಮಾಡುವ ಅವಮಾನ ಅಲ್ಲವೇ?
ಕೊರೋನಾ ಸಂದರ್ಭದಲ್ಲೂ… pic.twitter.com/ZvdU63HIYz
— Siddaramaiah (@siddaramaiah) April 18, 2024
“ವಿದೇಶದಿಂದ ಕಪ್ಪು ಹಣ ತರುವುದಾಗಿ ಹೇಳಿದ್ರಿ. ಆದರೆ ಅದು ತರಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ರಿ, ಹೊಸ ಉದ್ಯೋಗ ಸೃಷ್ಟಿಯಾಗುವುದಿರಲಿ ಇರುವ ಉದ್ಯೋಗಗಳೇ ನಷ್ಟವಾದವು. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ರಿ. ಆದರೆ ರೈತರ ಖರ್ಚು ಮೂರು ಪಟ್ಟು ಆಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಿಸುವುದಾಗಿ ಹೇಳಿದ್ರಿ. ಆದರೆ ರೂಪಾಯಿ ಮೌಲ್ಯ ಹೆಚ್ಚಾಗಲೇ ಇಲ್ಲ” ಎಂದು ಮೋದಿ ವೈಫಲ್ಯಗಳ ಸುದೀರ್ಘ ಪಟ್ಟಿಯನ್ನೇ ಸಿಎಂ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
“ಬಿಜೆಪಿಯಾಗಲೀ, ಮೋದಿಯವರಾಗಲೀ ಕೊಟ್ಟ ಮಾತಲ್ಲಿ ಒಂದನ್ನೂ ಈಡೇರಿಸಲಿಲ್ಲ. ಬದಲಿಗೆ ಹೇಳಿದ್ದಕ್ಕೆ ಉಲ್ಟಾ ಅನಾಹುತಗಳನ್ನೇ ಮಾಡಿದ್ದಾರೆ” ಎಂದರು.
“ಕೊರೋನಾ ಸಂದರ್ಭದಲ್ಲೂ ಕೋಟಿ ಕೋಟಿ ಕೊಳ್ಳೆ ಹೊಡೆದವರನ್ನು ಕ್ಷಮಿಸಲು ಸಾಧ್ಯವೇ? ಕೋವಿಡ್ ಹಗರಣದ ತನಿಖೆ ನಡೆಯುತ್ತಿದೆ. ಹಗರಣ ನಡೆದಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿರುವ ಬಗ್ಗೆ ನನಗೆ ಮಾಹಿತಿ ಇದೆ. ತನಿಖೆ ಪೂರ್ಣಗೊಂಡ ಬಳಿಕ ಭ್ರಷ್ಟಾಚಾರಕ್ಕೆ ತಕ್ಕ ಶಾಸ್ತಿ ಆಗುತ್ತದೆ. ಆದ್ದರಿಂದ ಬಿಜೆಪಿ ಅಭ್ಯರ್ಥಿ ಸುಧಾಕರ್ ಅವರನ್ನು ಸೋಲಿಸಿ ಕನ್ನಡ ನಾಡಿನ ಪರವಾಗಿ ಧ್ವನಿ ಎತ್ತುವ ರಕ್ಷಾ ರಾಮಯ್ಯರನ್ನು ಗೆಲ್ಲಿಸಿಕೊಂಡು ಬನ್ನಿ. ರಕ್ಷಾ ರಾಮಯ್ಯ ನೂರಕ್ಕೆ ನೂರು ಗೆಲ್ಲಲಿದ್ದಾರೆ” ಎಂದು ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.
