- ‘ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮೋದಿ ಸುಳ್ಳು ಹೇಳುತ್ತಿದ್ದಾರೆ’
- ‘ಮೋದಿ ಬೇಹುಗಾರಿಕೆ ನಡೆಸಿ ಪರೀಕ್ಷೆ ಮಾಡಿಕೊಳ್ಳಲಿ’
ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಎಲ್ಲ ಏಜನ್ಸಿಗಳು ಇವೆ. ನಮ್ಮ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ನಿಜಕ್ಕೂ ತಲುಪುತ್ತಿವೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಂಡು ಮಾತನಾಡಲಿ. ಸುಮ್ಮನೇ ಸುಳ್ಳು ಹೇಳಬೇಡಿ ಎಂದು ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭಾ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ವಿರುದ್ಧ ಗುಡುಗಿದರು.
ಕಲಬುರಗಿಯಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, “ಕರ್ನಾಟಕ ಸರ್ಕಾರದ ಬಗ್ಗೆ ಏನೇನೋ ಸುಳ್ಳು ಹೇಳುತ್ತಾ ಮೋದಿ ತಿರುಗಾಡುತ್ತಿದ್ದಾರೆ. ಮೊನ್ನೆ ಪೂನಾದಲ್ಲೂ ಸುಳ್ಳು ಹೇಳಿದ್ದಾರೆ. ಗ್ಯಾರಂಟಿಗಳಿಂದ ರಾಜ್ಯ ಅಭಿವೃದ್ಧಿಯಾಗುತ್ತಿಲ್ಲ ಎಂದಿದ್ದಾರೆ. ಮೋದಿ ಅವರು ಗುಪ್ತಚರ ಇಲಾಖೆಯಿಂದ ಬೇಹುಗಾರಿಕೆ ನಡೆಸಿ ಪರೀಕ್ಷೆ ಮಾಡಿಕೊಳ್ಳಲಿ” ಎಂದು ಕುಟುಕಿದರು.
ಬೇರೆ ಪಕ್ಷಗಳ ತರ ಸುಮ್ಮನೇ ಬೋಗಸ್ ಭರವಸೆಗಳನ್ನು ನಾವು ಘೋಷಿಸಿಲ್ಲ. ನುಡಿದಂತೆ ನಡೆಯುವ ಸರ್ಕಾರ ನಮ್ಮದು. ಮೋದಿ ಕೂಡ ನುಡಿದಿದ್ದರು; ಒಂದು ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ದರು. ಎಲ್ಲಿದೆ ಉದ್ಯೋಗ? ನಾನು ಅಧಿಕಾರಕ್ಕೆ ಬಂದರೆ 15 ಲಕ್ಷ ರೂ. ಪ್ರತಿ ಕುಟುಂಬಕ್ಕೆ ಕೊಡುತ್ತೇವೆ ಎಂದಿದ್ದರು. ಒಬ್ಬರಿಗಾದ್ರೂ ಸಿಕ್ತಾ? ಒಬ್ಬ ದೇಶದ ಪ್ರಧಾನಿ ವಚನ ಕೊಟ್ಟ ಮೇಲೆ ವಚನ ಭ್ರಷ್ಟರಾಗಲು ಸಾಧ್ಯವೇ? ಮೋದಿ ಇದನ್ನು ನಿಜ ಮಾಡಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪೋಕ್ಸೊ ಕಾಯ್ದೆ ಬಂದರೂ ತಗ್ಗದ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ
“ನಾಳೆ ಪಾರ್ಲಿಮೆಂಟ್‌ಗೆ ತೊಂದರೆ ಆಗುತ್ತದೆ ಎಂದು ರಾಜ್ಯದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲ. 1.40 ಲಕ್ಷ ಕುಟುಂಬಗಳಿಗೆ ಗೃಹಜ್ಯೋತಿ ಅನುಕೂಲವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಯಾವಾಗ ಅಧಿಕಾರಕ್ಕೆ ಬರುತ್ತದೆಯೋ ಅವಾಗ ಹೊಸ ಹೊಸ ಕಾರ್ಯಕ್ರಮ ಕೊಡುತ್ತ ಬಂದಿದೆ. ಬಡವರಿಗಾಗಿ, ಹೆಣ್ಣು ಮಕ್ಕಳಿಗಾಗಿ, ಯುವಕರಿಗಾಗಿ, ಹಾಗೂ ಕೂಲಿಕಾರ್ಮಿಕರಿಗೆ ಹೊಸ ಯೋಜನೆ ತರುತ್ತದೆ. ಇದಕ್ಕೆ ಸಾಕ್ಷಿ ಈ ಐದು ಗ್ಯಾರಂಟಿಗಳು. ದೇಶ ಸುರಕ್ಷಿತವಾಗಿ ಉಳಿಯಬೇಕಾದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು” ಎಂದು ಪ್ರತಿಪಾದಿಸಿದರು.
ಹೈದ್ರಾಬಾದ್ ಕರ್ನಾಟಕಕ್ಕೆ ಸಿಎಂ ಗಮನ ಹರಿಸಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈದ್ರಾಬಾದ್ ಕರ್ನಾಟಕ ಬಗ್ಗೆ ಕಾಳಜಿವಹಿಸಬೇಕು. ಇಲ್ಲಿ ಗುಣಮಟ್ಟದ ರಸ್ತೆಗಳು ನಿರ್ಮಾಣವಾಗಬೇಕು. ಶಿಕ್ಷಣದಲ್ಲಿ ಮುಂದೆ ಬರಬೇಕು. ನಾನು ಈ ಬಗ್ಗೆ ಪದೇ ಪದೇ ಹೇಳಿ ಜನರ ನಿರೀಕ್ಷೆಗಳನ್ನು ಹುಸಿಮಾಡುವುದಿಲ್ಲ. ಈ ಭಾರಿಯಾದ್ರೂ ಸಿದ್ದರಾಮಯ್ಯ ಅವರು ವಿಶೇಷ ಗಮನ ಹರಿಸಿ ಅಭಿವೃದ್ಧಿಪಡಿಸಬೇಕು” ಎಂದು ಮನವಿ ಮಾಡಿದರು.