- ದೆಹಲಿ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಅಜಿತ್ ಪ್ರಕಾಶ್ ಶಾ
- ಬುಲ್ಡೋಝರ್ ರಾಜಕೀಯ ಇಂದು ಅಧಿಕಾರದ ಸಂಕೇತವಾಗಿ ಮಾರ್ಪಾಡಾಗಿದೆ
ದೇಶದಲ್ಲಿ ಕೋಮುವಾದಿ ಶಕ್ತಿಗಳ ಹೆಚ್ಚಳದ ಮಧ್ಯೆ ಅಲ್ಪಸಂಖ್ಯಾತರು ಭಯದಲ್ಲಿ ಉಳಿದಿದ್ದರೂ ನ್ಯಾಯಾಲಯಗಳು ಮೂಕ ಪ್ರೇಕ್ಷಕರಾಗಿವೆ ಎಂದು ದೆಹಲಿ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಅಜಿತ್ ಪ್ರಕಾಶ್ ಶಾ ಅಭಿಪ್ರಾಯಿಸಿದ್ದಾರೆ.
ಭಾರತದಲ್ಲಿ ನ್ಯಾಯಾಲಯಗಳಂತಹ ಔಪಚಾರಿಕ ಸಂಸ್ಥೆಗಳು ದುರ್ಬಲಗೊಳ್ಳುತ್ತಿರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿರುವ ನಿವೃತ್ತ ನ್ಯಾಯಮೂರ್ತಿ, ದೇಶದಲ್ಲಿ ಇತ್ತೀಚೆಗೆ ‘ಉಗ್ರವಾದ ಮತ್ತು ಕೋಮುವಾದಿ’ ಶಕ್ತಿಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
“ದೇಶದಲ್ಲಿ ಅಲ್ಪಸಂಖ್ಯಾತರು ಭಯಭೀತರಾಗಿದ್ದಾರೆ. ದ್ವೇಷದ ಸಂಸ್ಕೃತಿ ಹೆಚ್ಚಳವಾಗುತ್ತಿದೆ. ಆದರೂ ನ್ಯಾಯಾಲಯಗಳು ಈ ಬಗ್ಗೆ ಮಾತನಾಡುತ್ತಿಲ್ಲ. ಮೂಕ ಪ್ರೇಕ್ಷಕರಾಗಿದೆ’ ಎಂದು ಎ ಪಿ ಶಾ ಅಭಿಪ್ರಾಯಿಸಿದ್ದಾರೆ.
“ಹರಿದ್ವಾರ, ಹರಿಯಾಣ ಅಥವಾ ಇತರೆಡೆಗಳಲ್ಲಿ ಬಹುಸಂಖ್ಯಾತರು ಇತರರನ್ನು, ಅದರಲ್ಲೂ ವಿಶೇಷವಾಗಿ ಮುಸ್ಲಿಮರನ್ನು ಶತ್ರುಗಳೆಂದು ಭಾವಿಸುವಂತೆ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ಭಾವನೆ ದೇಶದಾದ್ಯಂತ ಹರಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.
“ಎನ್‌ಕೌಂಟರ್ ಹತ್ಯೆ, ಅಲ್ಪಸಂಖ್ಯಾತ ಸಮುದಾಯದ ವ್ಯಾಪಾರಿಗಳ ಮೇಲೆ ಪಂಚಾಯತ್ ನಿಷೇಧ ಹೇರಿಕೆ ಮತ್ತು ‘ಬುಲ್ಡೋಝರ್ ರಾಜಕೀಯ’ದಂತಹ ಕಾನೂನುಬಾಹಿರ ಸಾಧನಗಳು ಈ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ ಎಂದು ನಿವೃತ್ತ ನ್ಯಾಯಮೂರ್ತಿ ಬೇಸರಿಸಿದ್ದಾರೆ.
“ಬುಲ್ಡೋಝರ್ ಇಂದು ಅಧಿಕಾರದ ಸಂಕೇತವಾಗಿ ಮಾರ್ಪಾಡಾಗಿದೆ. ಯಾವುದೇ ಕಾನೂನಿನ ಅನುಮತಿ ಅಥವಾ ಅಧಿಕಾರ ವ್ಯಾಪ್ತಿ ಇಲ್ಲದೇಯೇ ಬುಲ್ಡೋಝರ್ ಅನ್ನು ಬಳಸಲಾಗುತ್ತಿದೆ. ಹಲವಾರು ಮುಗ್ಧ ಜೀವಗಳು, ಜೀವನವನ್ನು ಕಳೆದುಕೊಂಡಿವೆ. ಅವರಿಗೆ ಚೇತರಿಸಿಕೊಳ್ಳಲು ಯಾವುದೇ ಅವಕಾಶ ನೀಡಲಾಗುತ್ತಿಲ್ಲ” ಎಂದು ದೆಹಲಿ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಅಜಿತ್ ಪ್ರಕಾಶ್ ಶಾ ಬೇಸರ ವ್ಯಕ್ತಪಡಿಸಿದ್ದಾರೆ.