ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾವಿನ ಸಂಖ್ಯೆಗಳ ಅಂತರವು ಕೇವಲ 37,206 ಎಂದು ತಪ್ಪು ಮಾಹಿತಿ ನೀಡಿದೆ. ಆ ಮೂಲಕ, ಸುಮಾರು 1,20,708 ಸಾವುಗಳ ಮಾಹಿತಿಯನ್ನೇ ಮುಚ್ಚಿಟ್ಟಿದೆ. ತಪ್ಪು ಮಾಹಿತಿ ನೀಡುವ ಮೂಲಕ ಸರ್ಕಾರ ಮತ್ತು ಅಧಿಕಾರಿಗಳು ಘೋರ ಅಪರಾಧ ಎಸಗಿದ್ದಾರೆ ಎಂದು ತನಿಖಾ ಆಯೋಗ ಹೇಳಿದೆ.
ಕೊರೋನ ಹಗರಣದ ಕುರಿತು ತನಿಖೆ ನಡೆಸಿರುವ ನಿವೃತ್ತ ನ್ಯಾಯಮೂರ್ತಿ ಕುನ್ಹಾ ಆಯೋಗದ ವರದಿಯ ಹಲವಾರು ಅಂಶಗಳು ಬಹಿರಂಗಗೊಳ್ಳುತ್ತಿವೆ. ಹಗರಣ ನಡೆದಿರುವ ಸತ್ಯ. 2020ರಲ್ಲಿ ಅಂದಿನ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ 330 ರೂ. ಪಿಪಿಇ ಕಿಟ್‌ಗಳಿಗೆ 2,117 ರೂ. ಕೊಟ್ಟು ಖರೀದಿ ಮಾಡಿದೆ. ತಮ್ಮ ಮತ್ತು ಚೀನಾ ಮೂಲದ ಕಂಪನಿಗಳ ಲಾಭಕ್ಕಾಗಿ ಯಡಿಯೂರಪ್ಪ ಮತ್ತು ಅಂದಿನ ಆರೋಗ್ಯ ಸಚಿವ ಶ್ರೀರಾಮುಲು ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಮಾಹಿತಿ ಕಳೆದ ವಾರ ಬಹಿರಂಗವಾಗಿತ್ತು. ಇದೀಗ, ಬಿಜೆಪಿ ಸರ್ಕಾರ, ಬರೋಬ್ಬರಿ 1.2 ಲಕ್ಷ ಜನರ ಸಾವಿನ ಅಂಕಿಅಂಶವನ್ನೇ ಮುಚ್ಚಿಟ್ಟಿತ್ತು ಎಂಬ ಆಘಾತಕಾರಿ ಮಾಹಿತಿಯು ತನಿಖಾ ವರದಿಯಿಂದ ಬಹಿರಂಗವಾಗಿದೆ.
ಕೇಂದ್ರ ಸರ್ಕಾರದ ಲೆಕ್ಕಪತ್ರ ಮತ್ತು ಅಂಕಿಅಂಶಗಳ ನಿರ್ದೇಶನಾಲಯವು ರಾಜ್ಯದಲ್ಲಿ 2020ರ ಜನವರಿಯಿಂದ ಜುಲೈವರೆಗೆ 2,69,029 ಹಾಗೂ 2021ರ ಜನವರಿಯಿಂದ ಜುಲೈವರೆಗೆ 4,26,943 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಅಂದರೆ, 2020ಕ್ಕಿಂತ 2021ರಲ್ಲಿ ಸಾವುಗಳ ಸಂಖ್ಯೆ 1,57,914ರಷ್ಟು ಹೆಚ್ಚಾಗಿದೆ. ಆದರೆ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾವಿನ ಸಂಖ್ಯೆಗಳ ಅಂತರವು ಕೇವಲ 37,206 ಎಂದು ತಪ್ಪು ಮಾಹಿತಿ ನೀಡಿದೆ. ಆ ಮೂಲಕ, ಸುಮಾರು 1,20,708 ಸಾವುಗಳ ಮಾಹಿತಿಯನ್ನೇ ಮುಚ್ಚಿಟ್ಟಿದೆ. ತಪ್ಪು ಮಾಹಿತಿ ನೀಡುವ ಮೂಲಕ ಸರ್ಕಾರ ಮತ್ತು ಅಧಿಕಾರಿಗಳು ಘೋರ ಅಪರಾಧ ಎಸಗಿದ್ದಾರೆ ಎಂದು ತನಿಖಾ ಆಯೋಗ ಹೇಳಿದೆ.
ಈ ವರದಿ ಓದಿದ್ದೀರಾ?: ಬಿಜೆಪಿ ಕೋವಿಡ್ ಹಗರಣ ಬಟಾಬಯಲು | 330 ರೂ. ಕಿಟ್‌ಗೆ 2,200 ರೂ. ಪಾವತಿಸಿದ್ದ ಬಿಎಸ್‌ವೈ ಸರ್ಕಾರ; ಏಳು ಪಟ್ಟು ಹೆಚ್ಚು ಹಣಕ್ಕೆ ಕಾರಣಗಳೇ ಇಲ್ಲ!
ಕೋವಿಡ್ ಹಗರಣದ ಸಂಬಂಧ ತನಿಖಾ ಆಯೋಗ ಸಲ್ಲಿಸಿರುವ ಮಧ್ಯಂತರ ವರದಿಯು, ”ಯಡಿಯೂರಪ್ಪ ಮತ್ತು ಶ್ರೀರಾಮುಲು ಅವಧಿಯಲ್ಲಿ ಸರ್ಕಾರವು ಕೊರೋನ ಟೆಸ್ಟ್‌ಗಾಗಿ ಖಾಸಗಿ ಲ್ಯಾಬ್‌ಗಳಿಗೆ 6.93 ಕೋಟಿ ರೂ. ಸಂದಾಯ ಮಾಡಿದೆ. ಆದರೆ, ಅವುಗಳ ಪೈಕಿ 14 ಲ್ಯಾಬ್‌ಗಳು ಐಸಿಎಂಆರ್ನಿಂದ ಮ್ಯಾನತೆಯನ್ನೇ ಪಡೆದಿಲ್ಲ. ಅವುಗಳು TPCR ಟೆಸ್ಟ್ಗೆ ಆ ಲ್ಯಾಬ್‌ಗಳ ಸಾಮರ್ಥ್ಯ ಮತ್ತು ಕ್ಷಮತೆ ಗುರುತಿಸಲಾಗಿಲ್ಲ. ಸಾಮರ್ಥ್ಯ, ಕ್ಷಮತೆ ಪರಿಶೀಲಿಸದೆ ಖಾಸಗಿ ಲ್ಯಾಬ್‌ಗಳಿಗೆ ಕೊರೋನ ಪರೀಕ್ಷೆಗೆ ಅನುಮತಿ ನೀಡಿ, ಹಣ ಸಂದಾಯ ಮಾಡಲಾಗಿದೆ. ಅಲ್ಲದೆ, 8 ಲ್ಯಾಬ್‌ಗಳಿಗೆ ಅನುಮತಿ ಪಡೆಯದೆ 4.28 ಕೋಟಿ ಸಂದಾಯ ಮಾಡಲಾಗಿದೆ” ಎಂದು ವಿವರಿಸಿದೆ.
ಇನ್ನು, ಕೋವಿಡ್ ಜಾಹೀರಾತುವಿನಲ್ಲಿಯೂ ಅಕ್ರಮ ನಡೆದಿದೆ. ”ಕೋವಿಡ್ ಕುರಿತ ಮಾಹಿತಿ ಮತ್ತು ಪ್ರಚಾರಕ್ಕಾಗಿ ಇಟ್ಟಿದ್ದ 7.3 ಕೋಟಿ ರೂ. ಹಣದಲ್ಲೂ ಸಾಕಷ್ಟು ಅಕ್ರಮ ನಡೆದಿವೆ. ಬಿಎಂಟಿಸಿ ಮಾನ್ಯೇಜಿಂಗ್ ಡೈರೆಕ್ಟರ್ (ಎಂಡಿ) ಸಲಹೆ ಮೇರೆಗೆ ಯಾವುದೇ ಅನುಮತಿ ಪಡೆಯದೆ, ಚುಕ್ಕಿ ಟಾಕೀಸ್ ಎಂಬ ಸಂಸ್ಥೆಗೆ 8.85 ಲಕ್ಷ ರೂ. ಹಣವನ್ನು ನಿಯಮ ಬಾಹಿರವಾಗಿ ಪಾವತಿ ಮಾಡಲಾಗಿದೆ. ಪ್ರಚಾರದ ಹಣದಲ್ಲಿ 5 ಕೋಟಿ ರೂ. ಹಣಕ್ಕೆ ಯಾವುದೇ ದಾಖಲೆಗಳನ್ನು ಇಲಾಖೆ ಒದಗಿಸಿಲ್ಲ” ಎಂದು ಆಯೋಗದ ವರದಿ ಗಮನ ಸೆಳೆದಿದೆ.
ಈ ವರದಿ ಓದಿದ್ದೀರಾ?: ಆಗಷ್ಟೇ ಹುಟ್ಟಿದ್ದ ಕಂಪನಿಗಳಿಂದ ದುಬಾರಿ ಬೆಲೆಗೆ ಪಿಪಿಇ ಕಿಟ್ ಖರೀದಿ; ಚೀನಾ ಲಾಭಕ್ಕಾಗಿ ಬಿಎಸ್‌ವೈ, ಶ್ರೀರಾಮುಲು ಭ್ರಷ್ಟಾಚಾರ!
”ಕೋವಿಡ್ ಆಪ್ತಮಿತ್ರ ಸೇವೆಯಲ್ಲಿಯೂ ಗೋಲ್‌ಮಾಲ್ ನಡೆದಿದೆ. ಈ ಸೇವೆಗಾಗಿ ಸುಮಾರು 5 ಕೋಟಿ ರೂ. ಹಣ ನಿಗದಿ ಮಾಡಲಾಗಿತ್ತು. ಆಪ್ತಮಿತ್ರ ಸೇವೆ ಒದಗಿಸಲು ಎರಡು ಬಿಪಿಓ ಸಂಸ್ಥೆಗಳಿಗೆ 4.9 ಕೋಟಿ ರೂ. ಹಣ ಸಂದಾಯ ಮಾಡಲಾಗಿದೆ” ಎಂಬುದನ್ನು ತನಿಖಾ ಆಯೋಗ ಗಮನಿಸಿದೆ.
”ಈ ಎರಡೂ ಬಿಪಿಓ ಸೇವಾ ಸಂಸ್ಥೆಗಳಿಗೆ ಯಾವುದೇ ಅಗ್ರಿಮೆಂಟ್ ಇಲ್ಲದೆ ಕೆಲಸ ಮಾಡಲಾಗಿದೆ. ಕೆಲಸ ನೀಡಿದ್ದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಬಳಿ ಯಾವುದೇ ಸೂಕ್ತ ದಾಖಲೆಗಳಿಲ್ಲ. ಬಿಪಿಓ ಸಂಸ್ಥೆಗಳಿಗೆ ಹಣ ಪಾವತಿ ಮಾಡಿರುವ ಫೈಲ್ ಅನ್ನು ತನಿಖಾ ಆಯೋಗಕ್ಕೆ ಇಲಾಖೆ ಒದಗಿಸಿಲ್ಲ. ಹೀಗಾಗಿ, ಆ ಬಿಪಿಓ ಸಂಸ್ಥೆಗೆ ನೀಡಿರುವ ಹಣವನ್ನ ವಾಪಸ್ ಪಡೆಯಬೇಕು” ಎಂದು ಆಯೋಗ ಶಿಫಾರಸ್ಸು ಮಾಡಿದೆ.