2020ರ ಏಪ್ರಿಲ್‌ನಲ್ಲಿ ಪಿಪಿಇ ಕಿಟ್‌ಗಳ ಖರೀದಿಯಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಕ್ರಮ ಎಸಗಿದೆ ಎಂಬುದನ್ನು ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ’ಕುನ್ಹಾ ನೇತೃತ್ವದ ಆಯೋಗ ದೃಢಪಡಿಸಿದೆ. ಯಡಿಯೂರಪ್ಪ ಮತ್ತು ಅಂದಿನ ಆರೋಗ್ಯ ಸಚಿವ ಬಿ ಶ್ರೀರಾಮುಲು ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಯೋಗ ಶಿಫಾರಸು ಮಾಡಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಕೋವಿಡ್ ಅಕ್ರಮಗಳ ತನಿಖೆಗಾಗಿ 2023ರ ಆಗಸ್ಟ್‌ನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನಿಖಾ ಆಯೋಗ ರಚಿಸಿತ್ತು. ಆಯೋಗವು ಈ ವರ್ಷದ ಸೆಪ್ಟೆಂಬರ್‌ನಲ್ಲಿ ವರದಿ ಸಲ್ಲಿಸಿದೆ. ವರದಿಯ ಒಂದು ಭಾಗವು ಬಹಿರಂಗಗೊಂಡಿದ್ದು, ಅದರಲ್ಲಿ, ಪಿಪಿಇ ಕಿಟ್ ಖರೀದಿಯಲ್ಲಿ ಬಿಜೆಪಿ ಸರ್ಕಾರ ಹಗರಣ ನಡೆಸಿರುವುದು ಸಾಬೀತಾಗಿದೆ. ಚೀನಾದ ಡಿಎಚ್‌ಬಿ ಗ್ಲೋಬಲ್ ಮತ್ತು ಬಿಗ್ ಫಾರ್ಮಾಸ್ಯುಟಿಕಲ್ಸ್ ಎಂಬ ಎರಡದು ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಪಿಪಿಇ ಕಿಟ್ ಖರೀದಿಯ ಪ್ರಕ್ರಿಯೆ ನಡೆಸಿದ್ದಾರೆ ಎಂದು ವರದಿ ಆರೋಪಿಸಿದೆ.
ಈ ಎರಡೂ ಕಂಪನಿಗಳಿಗೆ 2020ರ ಏಪ್ರಿಲ್‌ನಲ್ಲಿ 3 ಲಕ್ಷ ಪಿಪಿಇ ಕಿಟ್‌ಗಳನ್ನು ಪೂರೈಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಅದೂ, 330 ರೂ. ಮೌಲ್ಯದ ಪಿಪಿಇ ಕಿಟ್‌ಗಳಿಗೆ ಬರೋಬ್ಬರಿ 2,117 ರೂ.ಗಳನ್ನು ಪಾವತಿಸಿದೆ. ಅಂದರೆ, ಏಳು ಪಟ್ಟು ಹೆಚ್ಚು ಹಣವನ್ನು ಪಾವತಿಸಿ ಯಡಿಯೂರಪ್ಪ ಸರ್ಕಾರ ಕಿಟ್‌ಗಳನ್ನು ಖರೀದಿಸಿದೆ.
ಗಮನಾರ್ಹ ಸಂಗತಿ ಎಂದರೆ, ಈ ಎರಡೂ ಕಂಪನಿಗಳು ಅನುಭವಿ ಅಥವಾ ಹಳೆಯ ಕಂಪನಿಗಳಲ್ಲ. ಇವೆರಡೂ ಕೊರೋನ ಆಕ್ರಮಣ ಆರಂಭವಾಗುವುದಕ್ಕೂ ಕೆಲವೇ ತಿಂಗಳ ಮೊದಲು ಸ್ಥಾಪನೆಯಾಗಿರುವ ಕಂಪನಿಗಳು. 2020ರ ಆರಂಭದಲ್ಲಿ ಚೀನಾದಲ್ಲಿ ಕೊರೋನ ಆಕ್ರಮಣ ಹೆಚ್ಚಾಗಿತ್ತು. ಅದಕ್ಕಿಂತ ಒಂದು ತಿಂಗಳ ಮೊದಲು 2019ರಲ್ಲಿ ಬಿಗ್ ಫಾರ್ಮಾಸ್ಯುಟಿಕಲ್ಸ್ ಕಂಪನಿ ನೋಂದಾಯಿಸಿಕೊಂಡಿದೆ. ಮಾತ್ರವಲ್ಲದೆ, ಡಿಎಚ್‌ಬಿ ಗೋಬ್ಲಲ್ ಕಂಪನಿ ಕೂಡ 2019ರ ಅಂತ್ಯದಲ್ಲಿ ಸ್ಥಾಪಿಸಲ್ಪಟ್ಟಿದೆ. ಆ ಕಂಪನಿಯನ್ನು ಡೌಗ್ಲಾಸ್ ಕಾರ್ಲೆ ಮತ್ತು ಸೆಬಾಸ್ಟಿಯನ್ ಕೊ ಅವರು ಸ್ಥಾಪಿಸಿದ್ದರು. ಈಗ ಆ ಕಂಪನಿ ನಿಷ್ಕ್ರಿಯವಾಗಿದೆ ಎಂಬುದನ್ನು ಇಂಗ್ಲಿಷ್ ಸುದ್ದಿ ಸಂಸ್ಥೆ ‘ಟಿಎನ್‌ಎಂ’ ಕಂಡುಹಿಡಿದಿದೆ.
ಪಿಪಿಇ ಕಿಟ್ ಹಗರಣದ ಪೂರ್ಣ ವಿವರಗಳಿಗಾಗಿ ಈ ವರದಿ ಓದಿ: ಬಿಜೆಪಿ ಕೋವಿಡ್ ಹಗರಣ ಬಟಾಬಯಲು | 330 ರೂ. ಕಿಟ್‌ಗೆ 2,200 ರೂ. ಪಾವತಿಸಿದ್ದ ಬಿಎಸ್‌ವೈ ಸರ್ಕಾರ; ಏಳು ಪಟ್ಟು ಹೆಚ್ಚು ಹಣಕ್ಕೆ ಕಾರಣಗಳೇ ಇಲ್ಲ!
“2020ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಅವರ ಕರ್ತವ್ಯದ ಅಸಮರ್ಪಕ ನಿರ್ವಹಣೆಯಿಂದಾಗಿ, ಭ್ರಷ್ಟ ಮತ್ತು ಕಾನೂನುಬಾಹಿರ ವಿಧಾನಗಳ ಮೂಲಕ ಪಿಪಿಇ ಕಿಟ್ ಪೂರೈಕೆದಾರ ಕಂಪನಿಗಳೊಂದಿಗೆ ಶಾಮೀಲಾಗಿ, ತಮ್ಮ ಮತ್ತು ಕಂಪನಿಯ ಲಾಭವಾಗುವಂತೆ ಖರೀದಿ ಪ್ರಕ್ರಿಯೆ ನಡೆಸಿದ್ದಾರೆ. ತಮ್ಮ ಹುದ್ದೆಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಅಲ್ಪಾವಧಿಯ ಜಾಗತಿಕ ಟೆಂಡರ್ ಅಥವಾ ಕರ್ನಾಟಕ ಪಾರದರ್ಶಕತೆ ಕಾಯಿದೆ-1999ಅನ್ನು ಉಲ್ಲಂಘಿಸಿದ್ದಾರೆ. ಇದರಲ್ಲಿ, ಆರೋಗ್ಯ ಇಲಾಖೆಯ ಅಧಿಕಾರಿಗಳೂ ಶಾಮೀಲಾಗಿದ್ದು, ಅವರ ವಿರುದ್ಧವೂ ಶಿಸ್ತು ಕ್ರಮ ಜರುಗಿಸಬೇಕು” ಎಂದು ಆಯೋಗದ ಮುಖ್ಯಸ್ಥರಾಗಿದ್ದ ಡಿ’ಕುನ್ಹಾ ಶಿಫಾರಸು ಮಾಡಿದ್ದಾರೆ.
ಈ ಎರಡು ಕಂಪನಿಗಳನ್ನು ಹೇಗೆ ಆಯ್ಕೆ ಮಾಡಲಾಯಿತು?
ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ನಿರ್ದೇಶನದ ಮೇರೆಗೆ ಚೀನಾ ಮೂಲದ ಈ ಎರಡೂ ಕಂಪನಿಗಳಿಂದ ಪಿಪಿಇ ಕಿಟ್‌ಗಳ ಖರೀದಿ ಮಾಡಲಾಗಿದೆ ಎಂಬುದನ್ನು ತನಿಖಾ ವರದಿ ತಿಳಿಸಿದೆ.
ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಯಾವುದೇ ಕೊಟೇಷನ್‌ಗಳನ್ನು ಆಹ್ವಾನಿಸಲಾಗಿಲ್ಲ. ಖರೀದಿ ಮಾಡಿದ ವಿದೇಶಿ ಕಂಪನಿಗಳಿಂದಲೂ ಬೆಲೆ ಪಟ್ಟಿಯನ್ನು ಹೇಗೆ ಪಡೆಯಲಾಗಿದೆ ಎಂಬುದನ್ನು ಸರ್ಕಾರ ದಾಖಲೆಗಳಲ್ಲಿ ಇಟ್ಟಿಲ್ಲ. ಖರೀದಿಗೆ ಆದೇಶ ನೀಡಿದಾಗಲೂ ಕೆಟಿಪಿಪಿ ಕಾಯ್ದೆಯ ಸೆಕ್ಷನ್ 4(ಎ) ಅಡಿಯಲ್ಲಿ ವಿನಾಯಿತಿ ಬಗ್ಗೆ ಯಾವುದೇ ಉಲ್ಲೇಖ ಮಾಡಲಾಗಿಲ್ಲ. ಅಂದಮೇಲೆ, ಖರೀದಿಗೆ ಕಂಪನಿಗಳಿಂದ ಟೆಂಡರ್ ಅಥವಾ ಕೊಟೇಶನ್ ಪಡೆಯುವುದು ಕಾನೂನಾತ್ಮಕ ಕರ್ತವ್ಯ. ಆದರೆ, ಇದಾವುದನ್ನೂ ಮಾಡದೆ, ಬೆಲೆ ನಿಗದಿ ಸಮಿತಿಯು ಪ್ರತಿ ಪಿಪಿಇ ಕಿಟ್‌ಗಳಿಗೆ 2,117.53 ರೂ. ಅಂದಾಜು ಬೆಲೆ ನಿಗದಿ ಮಾಡಿದೆ. ಅದೇ ಅಂದಾಜು ಬೆಲೆಯ ಮೇಲೆ, ಚೀನಾದ ಎರಡೂ ಕಂಪನಿಗಳಿಗೆ ಖರೀದಿ ಆದೇಶ ನೀಡಲಾಗಿದೆ.
ಗಮನಾರ್ಹವಾಗಿ, ಬೆಲೆ ನಿಗದಿ ಸಮಿತಿಯು ಅಂದಾಜು ಬೆಲೆ ನಿಗದಿ ಮಾಡುವುದಕ್ಕೂ ಮುನ್ನವೇ ರಾಜ್ಯ ಸರ್ಕಾರವು ಭಾರತೀಯ ಸಂಸ್ಥೆಗಳಿಂದ ಲಕ್ಷಾಂತರ ಪಿಪಿಇ ಕಿಟ್‌ಗಳನ್ನು ಖರೀದಿಸಿದೆ. ಅದೂ, ಪ್ರತಿ ಪಿಪಿಇ ಕಿಟ್‌ಗೆ ಕೇವಲ 330 ರೂ.ಗಳನ್ನು ಪಾವತಿಸಲಾಗಿದೆ. ಹೀಗಿದ್ದರೂ, ಬೆಲೆ ನಿಗದಿ ಸಮಿತಿಯು ಪ್ರತಿ ಕಿಟ್‌ಗೆ ಏಳು ಪಟ್ಟು ಹೆಚ್ಚು (2,117.53) ಮೊತ್ತವನ್ನು ಅಂದಾಜಿಸಿದೆ. ಇದೆಲ್ಲವೂ, ಅಕ್ರಮವನ್ನು ಎತ್ತಿ ತೋರಿಸಿವೆ.
2020ರ ಜುಲೈ 02ರಂದು ಮುಖ್ಯಮಂತ್ರಿಯಿಂದ ‘ಪೋಸ್ಟ್ ಫ್ಯಾಕ್ಟೋ ಅನುಮೋದನೆ’ಯನ್ನು ಪಡೆಯಲಾಗಿದೆ ಎಂಬುದಾಗಿ ತೋರಿಸಲು ದಾಖಲೆಗಳನ್ನು ನಿರ್ಮಿಸಲಾಗಿದೆ. ಆದರೆ, ಅದಕ್ಕೂ ಹಿಂದಿನ ಟಿಪ್ಪಣಿಗಳು ಸಂಪೂರ್ಣವಾಗಿ ಮುಖ್ಯಮಂತ್ರಿಯವರ ನಿರ್ದೇಶನದ ಮೇರೆಗೆ ಪಿಪಿಇ ಕಿಟ್ ಖರೀದಿಗೆ ಆದೇಶವನ್ನು ಹೊರಡಿಸಲಾಗಿದೆ ಎಂದು ಸ್ಪಷ್ಟವಾಗಿ ಬಹಿರಂಗಪಡಿಸುತ್ತವೆ. ಪಿಪಿಇ ಕಿಟ್‌ಗಳ ಖರೀದಿಗೆ ಮೊದಲೇ ಮುಖ್ಯಮಂತ್ರಿಯಿಂದ ಆದೇಶ ಪಡೆದಿದ್ದರೂ, ನಂತರದಲ್ಲಿ ಅದನ್ನು ‘ಪೋಸ್ಟ್ ಫ್ಯಾಕ್ಟೋ ಅನುಮೋದನೆ’ ಎಂದು ಬಿಂಬಿಸಲಾಗಿದೆ. ಈ ಇಡೀ ಪ್ರಕ್ರಿಯೆಯು ಅಪಾರದರ್ಶಕ, ಅನಿಯಂತ್ರಿತ ಮತ್ತು ವಂಚನೆಯಿಂದ ಕೂಡಿದೆ ಎಂದು ವರದಿಯು ವಿವರಿಸಿದೆ.
ಪಿಪಿಇ ಕಿಟ್ ಖರೀದಿಯಲ್ಲಿ ಸಂಪೂರ್ಣ ಅಪಾರದರ್ಶಕತೆ, ಅನಿಯಂತ್ರಿತತೆ, ದುರುದ್ದೇಶಪೂರಿತ ಮತ್ತು ಕಾನೂನು ಉಲ್ಲಂಘನೆ ಹಾಗೂ ಪೂರೈಕೆದಾರರಿಗೆ ಅನಗತ್ಯ ಲಾಭವನ್ನು ನೀಡುವ ಉದ್ದೇಶದಿಂದ ಪ್ರಕ್ರಿಯೆ ನಡೆಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ಮತ್ತು 11ರ ಅಡಿಯಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕ್ರಮ ಜರುಗಿಸಬೇಕೆಂದು ತನಿಖಾ ಆಯೋಗ ಶಿಫಾರಸು ಮಾಡಿದೆ.