ಬಿಜೆಪಿ ಕೋವಿಡ್ ಹಗರಣ ಬಟಾಬಯಲು | 330 ರೂ. ಕಿಟ್‌ಗೆ 2,200 ರೂ. ಪಾವತಿಸಿದ್ದ ಬಿಎಸ್‌ವೈ ಸರ್ಕಾರ; ಏಳು ಪಟ್ಟು ಹೆಚ್ಚು ಹಣಕ್ಕೆ ಕಾರಣಗಳೇ ಇಲ್ಲ!

Date:

Advertisements
ಕೊರೋನ ಸಮಯದಲ್ಲಿ 1,163.65 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದ ಬಿಜೆಪಿ ಸರ್ಕಾರ, 3,392 ಕೋಟಿ ರೂ.ಗಳ ಲೆಕ್ಕ ತೋರಿಸಿ, ಸುಮಾರು 2,200 ಕೋಟಿ ರೂ. ಲೂಟಿ ಮಾಡಿದೆ ಎಂದು ಆರೋಪಿಸಲಾಗಿದೆ. ಈ ಎಲ್ಲ ಅಕ್ರಮಗಳ ಕುರಿತು ದಾಖಲೆಗಳು ಇನ್ನೂ ಬಹಿರಂಗಗೊಳ್ಳಬೇಕಿದೆ. ಆಗ ಬಿಜೆಪಿ ಕರ್ಮಕಾಂಡ ಮತ್ತಷ್ಟು ಬಯಲಾಗಲಿದೆ.

ರಾಜ್ಯ ರಾಜಕಾರಣದಲ್ಲಿ ಕೊರೋನ ಹಗರಣದ ಕುರಿತ ಚರ್ಚೆಗಳು ಆಗಾಗ್ಗೆ ನಡೆಯುತ್ತಲೇ ಇವೆ. 2020ರಲ್ಲಿ ದೇಶವನ್ನೇ ವ್ಯಾಪಿಸಿದ್ದ ಕೊರೋನ ಮಾರಣಹೋಮವನ್ನೇ ನಡೆಸಿತ್ತು. ಲಕ್ಷಾಂತರ ಮಂದಿಯ ಹೆಣಗಳ ಮೇಲೂ ಅಂದಿನ ಬಿಜೆಪಿ ಸರ್ಕಾರ ಹಣ ಎತ್ತಿಕೊಂಡಿತ್ತು, ಭ್ರಷ್ಟಾಚಾರ ನಡೆಸಿತ್ತು ಎಂಬುದು ಇದೀಗ ದೃಢಪಟ್ಟಿದೆ. ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದ ವಿಚಾರಣಾ ಆಯೋಗವು ಕೊರೋನ ಹಗರಣದ ಬಗ್ಗೆ ತನಿಖೆ ನಡೆಸಿದ್ದು, ಹಗರಣ ನಡೆದಿರುವುದು ಸ್ಪಷ್ಟವೆಂದು ಹೇಳಿದೆ. ಅಂದಿನ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವರಾಗಿದ್ದ ಬಿ ಶ್ರೀರಾಮುಲು ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಶಿಫಾರಸು ಮಾಡಿದೆ.

ತನಿಖಾ ಆಯೋಗವು ಸರ್ಕಾರ ಸೆಪ್ಟೆಂಬರ್ ಮೊದಲ ವಾರದಲ್ಲೇ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಇದೀಗ, ವರದಿಯಲ್ಲಿರುವ ಕೆಲವು ವಿವರಗಳು ಬಹಿರಂಗಗೊಂಡಿವೆ. ವರದಿಯಲ್ಲಿ ಕೋವಿಡ್ ಹಗರಣ ನಡೆದಿರುವುದು ಖಚಿತವೆಂದು ಆಯೋಗ ದೃಢಪಡಿಸಿದೆ.

ಚೀನಾದ ಎರಡು ಕಂಪನಿಗಳಿಂದ ಪ್ರತಿ ಕಿಟ್‌ಗೆ 2,117.53 ರೂ.ನಂತೆ 3 ಲಕ್ಷ ಪಿಪಿಇ ಕಿಟ್‌ ಖರೀದಿಗೆ ಯಡಿಯೂರಪ್ಪ ಅನುಮೋದನೆ ನೀಡಿದ್ದರು. ಅವರ ಆದೇಶದ ಮೇರೆಗೆ ಪಿಟ್‌ಗಳನ್ನು ಖರೀದಿಸಲಾಗಿದೆ. ಆದರೆ, ಖರೀದಿ ಪ್ರಕ್ರಿಯೆಯು ಪಾರದರ್ಶಕವಾಗಿಲ್ಲ. ವಂಚನೆ ಮತ್ತು ಭ್ರಷ್ಟಾಚಾರದಿಂದ ಕೂಡಿದೆ. ಇದರಲ್ಲಿ ಅಂದಿನ ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರ ಪಾತ್ರವಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.

Advertisements

ಕೊರೋನ ಆರಂಭದಲ್ಲಿ, 2020ರ ಮಾರ್ಚ್‌ 18ರಂದು ಕರ್ನಾಟಕಕ್ಕೆ 12 ಲಕ್ಷ ಪಿಪಿಇ ಕಿಟ್‌ಗಳ ಅಗತ್ಯವಿದೆ ಎಂದು ನೀಟ್ ಅಸೆಸ್‌ಮೆಂಟ್‌ ಸಮಿತಿ ವರದಿ ನೀಡಿತ್ತು. ಬಳಿಕ, 2020ರ ಏಪ್ರಿಲ್‌ 1ರಂದು ನಡೆದ ಸಭೆಯಲ್ಲಿ ಬೆಲೆ ನಿಗದಿ ಸಮಿತಿಯು ಪ್ರತಿ ಪಿಪಿಇ ಕಿಟ್‌ಗೆ 2,117.53 ರೂ. ಎಂದು ಬೆಲೆಯನ್ನು ಅಂದಾಜಿಸಿತ್ತು. ಈ ಅಂದಾಜಿಗೆ ಬೆಲೆಗಳ ಕುರಿತು ಮೂರು ಇಂಡಸ್ಟ್ರೀಸ್‌ ಅಂಡ್ ಕಾಮರ್ಸ್‌ ಸಂಸ್ಥೆಗಳಿಂದ ಬಂದ ಇ-ಮೇಲ್‌ಗಳು ಆಧಾರವಾಗಿವೆ. ಆ ಇ-ಮೇಲ್‌ಗಳನ್ನೇ ಉಲ್ಲೇಖಿಸಿ ಬೆಲೆಯನ್ನು ಅಂದಾಜಿಸಲಾಗಿದೆ. ಆದರೆ, ಈ ಇ-ಮೇಲ್‌ಗಳನ್ನು ಅಧಿಕೃತವಾಗಿ ಆಹ್ವಾನಿಸಲಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮುಖ್ಯವಿಚಾರವೆಂದರೆ, ಬೆಲೆ ನಿಗದಿ ಸಮಿತಿಯು ಅಂದಾಜು ಬೆಲೆ ನಿಗದಿ ಮಾಡುವುದಕ್ಕೂ ಮುನ್ನವೇ ರಾಜ್ಯ ಸರ್ಕಾರವು ಭಾರತೀಯ ಸಂಸ್ಥೆಗಳಿಂದ ಲಕ್ಷಾಂತರ ಪಿಪಿಇ ಕಿಟ್‌ಗಳನ್ನು ಖರೀದಿಸಿದೆ. ಅದೂ, ಪ್ರತಿ ಪಿಪಿಇ ಕಿಟ್‌ಗೆ ಕೇವಲ 330 ರೂ.ಗಳನ್ನು ಪಾವತಿಸಲಾಗಿದೆ. ಹೀಗಿದ್ದರೂ, ಬೆಲೆ ನಿಗದಿ ಸಮಿತಿಯು ಪ್ರತಿ ಕಿಟ್‌ಗೆ ಏಳು ಪಟ್ಟು ಹೆಚ್ಚು (2,117.53) ಮೊತ್ತವನ್ನು ಅಂದಾಜಿಸಿದೆ. ಚೀನೀ ಕಂಪನಿಗಳಿಗೆ ಹೆಚ್ಚು ಹಣ ಪಾವತಿಸಿ ಕಿಟ್‌ಗಳನ್ನು ಖರೀದಿಸಲಾಗಿದೆ. ಈ ದುಪ್ಪಟ್ಟು ಪಾವತಿಗೆ ನಿರ್ದಿಷ್ಟ ಕಾರಣವನ್ನೂ ಸರ್ಕಾರ ಉಲ್ಲೇಖಿಸಿಲ್ಲ.

ಇನ್ನು, ಚೀನಾದ ಎರಡು ಸಂಸ್ಥೆಗಳಿಂದ ಪಿಪಿಇ ಕಿಟ್‌ಗಳ ನೇರ ಖರೀದಿಗೆ 2020ರ ಏಪ್ರಿಲ್ 2ರಂದು ಬಿಜೆಪಿ ಸರ್ಕಾರ ಆದೇಶಿಸಿದೆ. ಅದಕ್ಕಾಗಿ, ಮುಖ್ಯಮಂತ್ರಿಯವರಿಂದ ‘ಪೋಸ್ಟ್‌ ಫ್ಯಾಕ್ಟೋ ಅನುಮೋದನೆ’ ಪಡೆಯಲಾಗಿದೆ ಎಂಬುದನ್ನು ತೋರಿಸಲು ದಾಖಲೆಗಳನ್ನು ಸೃಷ್ಟಿಸಲಾಗಿದೆ. ಅಸಲಿಗೆ, ಮುಖ್ಯಮಂತ್ರಿಗಳು ನೇರವಾಗಿ ಆದೇಶಿಸಿದ್ದಾರೆ. ಆದರೆ, ‘ಪೋಸ್ಟ್‌ ಫ್ಯಾಕ್ಟೋ ಅನುಮೋದನೆ’ ಎಂಬುದಾಗಿ ಬಿಂಬಿಸಲಾಗಿದೆ ಎಂದು ವರದಿ ವಿವರಿಸಿದೆ.

image 22 1

ಪಿಪಿಇ ಕಿಟ್ ಖರೀದಿ ಕುರಿತ ಸರ್ಕಾರ ಟಿಪ್ಪಣಿಯು ಮುಖ್ಯಮಂತ್ರಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆರೋಗ್ಯ ಸಚಿವರ ಪ್ರಧಾನ ಕಾರ್ಯದರ್ಶಿ ಮತ್ತು ಆಪ್ತ ಸಹಾಯಕರ ನಡಾವಳಿಗಳನ್ನು ಉಲ್ಲೇಖಿಸಿದೆ. ಈ ಟಿಪ್ಪಣಿಯು ಅಲ್ಪಾವಧಿಯ ಜಾಗತಿಕ ಟೆಂಡರ್ ಅಥವಾ ಕರ್ನಾಟಕ ಪಾರದರ್ಶಕತೆ ಕಾಯಿದೆ-1999ರ ಸೆಕ್ಷನ್ 4(ಎ) ಅಡಿಯಲ್ಲಿ ಖರೀದಿಗೆ ಸಲಹೆ ನೀಡಿದೆ. ಅದೇ ಟಿಪ್ಪಣಿಯ ಮುಂದಿನ ಹಾಳೆಯಲ್ಲಿ, ”ಪರಿಸ್ಥಿತಿಯ ತುರ್ತು ದೃಷ್ಟಿಯಿಂದ, ವಿಷಯವನ್ನು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಮುಂದೆ ಇರಿಸಲಾಗಿದೆ ಮತ್ತು ಅವರ ಅನುಮೋದನೆಯ ಮೇರೆಗೆ, ತಲಾ 2,117.53 ರೂ.ನಂತೆ 1 ಲಕ್ಷ ಪಿಪಿಇ ಕಿಟ್‌ ಪೂರೈಕೆಗಾಗಿ DHB ಗ್ಲೋಬಲ್ ಹಾಂಗ್ ಕಾಂಗ್(ಚೀನಾ)ಗೆ 2020ರ ಏಪ್ರಿಲ್ 2ರಂದು ನಿರ್ದೇಶನ ನೀಡಲಾಗಿದೆ” ಎಂದು ಬರೆಯಲಾಗಿದೆ ಎಂಬುದನ್ನು ತನಿಖಾ ಆಯೋಗ ಗಮನಿಸಿದೆ.

”2020ರ ಏಪ್ರಿಲ್ 10 ರಂದು, 1 ಲಕ್ಷ ಪಿಪಿಇ ಕಿಟ್‌ಗಳಿಗೆ ಎರಡು ಸಂಸ್ಥೆಗಳಿಗೆ ನೇರ ಖರೀದಿ ಆದೇಶಗಳನ್ನು ನೀಡಲಾಗಿದೆ. ಒಂದು, DHB ಗ್ಲೋಬಲ್ ಹಾಂಗ್ ಕಾಂಗ್(ಚೀನಾ)ಗೆ ಪ್ರತಿ ಕಿಟ್‌ಗೆ 2,104.53 ರೂ.ನಂತೆ ಆದೇಶಿಸಿದ್ದರೆ, ಮತ್ತೊಂದು, ಬಿಗ್ ಫಾರ್ಮಾಸ್ಯುಟಿಕಲ್ಸ್‌ಗೆ ಪ್ರತಿ ಕಿಟ್‌ಗೆ 2,049.84 ರೂ.ನಂತೆ ಆದೇಶ ನೀಡಲಾಗಿದೆ. ಗಮನಾರ್ಹವಾಗಿ, ಏಪ್ರಿಲ್ 1 ರಂದು ಒಂದೇ ದಿನದಲ್ಲಿ ಎರಡೂ ಸಂಸ್ಥೆಗಳ ಕೊಟೇಶನ್‌ಗಳನ್ನು ಪರಿಶೀಲಿಸಲಾಗಿದೆ. ಆದರೂ, ದರದಲ್ಲಿನ ವ್ಯತ್ಯಾಸಕ್ಕೆ ಯಾವುದೇ ಸಮರ್ಥನೆಯನ್ನು ದಾಖಲಿಸಲಾಗಿಲ್ಲ. ಪರಿಣಾಮ 1.22 ಕೋಟಿ ರೂ. ನಷ್ಟವಾಗಿದೆ” ಎಂದು ವರದಿ ಬೆಳಕು ಚೆಲ್ಲಿದೆ.

ಮಾತ್ರವಲ್ಲದೆ, ಈ ವ್ಯತ್ಯಾಸದಿಂದಾದ ನಷ್ಟದ ಹಣ 1.22 ಕೋಟಿ ರೂ.ಗಳನ್ನು ಭರಿಸಲು ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ವರದಿ ಹೇಳಿದೆ.

ವರದಿಯಲ್ಲಿನ ಮತ್ತೊಂದು ಗಂಭೀರ ವಿಚಾರವೆಂದರೆ, 2020ರ ಜುಲೈ 02ರಂದು ಮುಖ್ಯಮಂತ್ರಿಯಿಂದ ‘ಪೋಸ್ಟ್ ಫ್ಯಾಕ್ಟೋ ಅನುಮೋದನೆ’ಯನ್ನು ಪಡೆಯಲಾಗಿದೆ ಎಂಬುದಾಗಿ ತೋರಿಸಲು ದಾಖಲೆಗಳನ್ನು ನಿರ್ಮಿಸಲಾಗಿದೆ. ಆದರೆ, ಅದಕ್ಕೂ ಹಿಂದಿನ ಟಿಪ್ಪಣಿಗಳು ಸಂಪೂರ್ಣವಾಗಿ ಮುಖ್ಯಮಂತ್ರಿಯವರ ನಿರ್ದೇಶನದ ಮೇರೆಗೆ ಪಿಪಿಇ ಕಿಟ್‌ ಖರೀದಿಗೆ ಆದೇಶವನ್ನು ಹೊರಡಿಸಲಾಗಿದೆ ಎಂದು ಸ್ಪಷ್ಟವಾಗಿ ಬಹಿರಂಗಪಡಿಸುತ್ತವೆ. ಪಿಪಿಇ ಕಿಟ್‌ಗಳ ಖರೀದಿಗೆ ಮೊದಲೇ ಮುಖ್ಯಮಂತ್ರಿಯಿಂದ ಆದೇಶ ಪಡೆದಿದ್ದರೂ, ನಂತರದಲ್ಲಿ ಅದನ್ನು ‘ಪೋಸ್ಟ್ ಫ್ಯಾಕ್ಟೋ ಅನುಮೋದನೆ’ ಎಂದು ಬಿಂಬಿಸಲಾಗಿದೆ. ಈ ಇಡೀ ಪ್ರಕ್ರಿಯೆಯು ಅಪಾರದರ್ಶಕ, ಅನಿಯಂತ್ರಿತ ಮತ್ತು ವಂಚನೆಯಿಂದ ಕೂಡಿದೆ ಎಂಬುದನ್ನು ವರದಿಯು ಬಹಿರಂಗ ಪಡಿಸಿದೆ.

ಮತ್ತೊಂದು ವಿಚಾರವೆಂದರೆ, ಸ್ಥಳೀಯ ಪೂರೈಕೆದಾರರಿಂದ 5 ಲಕ್ಷ ಪಿಪಿಇ ಕಿಟ್‌ಗಳನ್ನು ಪೂರೈಸುವ ಸಾಮರ್ಥ್ಯವಿಲ್ಲವೆಂದು ಹಿಂದಿನ ಬಿಜೆಪಿ ಸರ್ಕಾರವು ವಿವರಿಸಿದೆ. ಆದರೆ, ಎಲ್ಲಿಯೂ ಅಗತ್ಯವಿರುವಷ್ಟು ಪಿಪಿಇ ಕಿಟ್‌ಗಳನ್ನು ತಮಗೆ ಪೂರೈಸಲು ಸಾಧ್ಯವಿಲ್ಲ ಎಂಬುದಾಗಿ ಭಾರತೀಯ ಸಂಸ್ಥೆಗಳು ಹೇಳಿಕೊಂಡಿವೆ ಎಂಬುದನ್ನು ಸೂಚಿಸಲು ಯಾವುದೇ ದಾಖಲೆಗಳು ಹಾಗೂ ಪುರಾವೆಗಳನ್ನು ಯಡಿಯೂರಪ್ಪನವರ ಸರ್ಕಾರ ಹೊಂದಿರಲಿಲ್ಲ. ದಾಖಲೆಗಳನ್ನು ಪಟ್ಟಿ ಮಾಡಿಲ್ಲ. ಇದು, ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ತಾವು ಆಯ್ಕೆ ಮಾಡಿರುವ ಸಂಸ್ಥೆಗಳಿಂದಲೇ ಪಿಪಿಇ ಕಿಟ್‌ಗಳನ್ನು ಖರೀದಿಸಬೇಕೆಂಬ ಹುಂಬುತನನಿಂದ ಇಂತಹ ವಿವರಣೆ ನೀಡಿದ್ದಾರೆ. ಇದು, ತಮ್ಮ ನಿಲುವು, ನಿರ್ಧಾರವನ್ನು ಸಮರ್ಥಿಸಲು ಅವರಿಬ್ಬರೂ ಹೆಣೆದಿರುವ ತಂತ್ರವೇ ಆಗಿದೆ ಎಂದು ವರದಿ ಹೇಳುತ್ತಿದೆ.

image 22 2

ಆದಾಗ್ಯೂ, 2020ರ ಏಪ್ರಿಲ್ 2ರಂದು ಚೀನೀ ಕಂಪನಿಗಳಿಂದ ಪಿಪಿಇ ಕಿಟ್ ಖರೀದಿಗೆ ಆದೇಶ ಹೊರಡಿಸುವುದಕ್ಕೂ ಮೊದಲು ಬಿಜೆಪಿ ಸರ್ಕಾರ ಭಾರತೀಯ ಕಂಪನಿಗಳಿಂದಲೇ ಲಕ್ಷಾಂತರ ಪಿಪಿಇ ಕಿಟ್‌ಗಳನ್ನು ಖರೀಸಿದೆ. 2020ರ ಮಾರ್ಚ್‌ 14ರಂದು ಸ್ಥಳೀಯ ಪೂರೈಕೆದಾರ ‘ಪ್ಲಾಸ್ಟಿ ಸರ್ಜ್ ಇಂಡಸ್ಟ್ರೀಸ್ ಪ್ರೈವೇಟ್‌ ಲಿಮಿಟೆಡ್‌’ನಿಂದ 1.5 ಲಕ್ಷ ಪಿಪಿಇ ಕಿಟ್‌ಗಳನ್ನು ಖರೀದಿಸಲಾಗಿದೆ. ಅದಕ್ಕಾಗಿ, ಪ್ರತಿ ಕಿಟ್‌ಗಳಿಗೆ 330.40 ರೂ. ಪಾವತಿಸಲಾಗಿದೆ. ಇಲ್ಲಿಯೂ, 2020ರ ಮಾರ್ಚ್‌ 27ರಂದು ಅದೇ ಕಿಟ್‌ಗಳ ಬೆಲೆಯನ್ನು 725 ರೂ.ಗಳಿಗೆ ಅಂದರೆ, ಎರಡು ಪಟ್ಟು ಹೆಚ್ಚಿಸಲಾಗಿದೆ. ಈ ಬಗ್ಗೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವರದಿ ಶಿಫಾರಸು ಮಾಡಿದೆ.

ಮತ್ತೊಂದು ಸ್ಥಳೀಯ ಕಂಪನಿ, ‘ಮಿಸಸ್ ಇಂದುಸ್ ಬಯೋ ಸಲ್ಯೂಷನ್’ನಿಂದ 2020ರ ಮಾರ್ಚ್‌ 24ರಂದು ಪ್ರತಿ ಕಿಟ್‌ಗೆ 656.25 ರೂ.ನಂತೆ ಪಿಪಿಇ ಕಿಟ್‌ಗಳನ್ನು ಖರೀದಿಸಲಾಗಿದೆ. ಆದರೆ, ಅದಾದ ಒಂದು ತಿಂಗಳ ನಂತರ, 2020ರ ಏಪ್ರಿಲ್ 23ರಂದು ಇತರ 8 ಕಂಪನಿಗಳಿಂದ ಮತ್ತೆ ದುಪ್ಪಟ್ಟು ಹಣ, 1,444.80 ರೂ.ಗಳಂತೆ ಕಿಟ್‌ಗಳ ಖರೀದಿಗೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ ಎಂಬುದನ್ನು ಸರ್ಕಾರದ ದಾಖಲೆಗಳೇ ತೋರಿಸಿವೆ.

ಅಂದರೆ, 2020ರ ಮಾರ್ಚ್‌ 14ರಂದು ಒಂದು ಪಿಪಿಇ ಕಿಟ್‌ನ ಬೆಲೆ 330 ರೂ. ಇತ್ತು. ಅದು ಮಾರ್ಚ್‌ ಅಂತ್ಯದ ವೇಳೆಗೆ 750 ರೂ.ಗೆ ತಲುಪಿತು. ಏಪ್ರಿಲ್‌ ವೇಳೆಗೆ 1,440 ರೂ.ಗೆ ಏರಿಕೆಯಾಯಿತು. ಇನ್ನು, ಅದೇ ತಿಂಗಳಲ್ಲಿ ಚೀನೀ ಕಂಪನಿಗಳಿಗೆ ಪೂರೈಕೆ ಆದೇಶ ನೀಡುವ ವೇಳೆಗೆ ಪಿಪಿಇ ಕಿಟ್‌ಗಳ ಬೆಲೆ 2,200 ರೂ.ಗೆ ಜಿಗಿಯಿತು. ಒಂದೇ ತಿಂಗಳಲ್ಲಿ ಅದೇ ಕಿಟ್‌ಗಳ ಬೆಲೆ 7 ಪಟ್ಟು ಹೆಚ್ಚಾಗಿದೆ. ಇದು, ಹಗರಣವನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಈ ವರದಿ ಓದಿದ್ದೀರಾ?: ವಾಲ್ಮೀಕಿ ಪಾಲಿಟಿಕ್ಸ್ | ಗಣಿ ನಾಡಲ್ಲಿ ಮಂಕಾದ ಶ್ರೀರಾಮುಲು, ಪುಟಿದೆದ್ದ ತುಕಾರಾಮ್‌

ಅಂದಹಾಗೆ, ಇದು ಕೇವಲ ಕೊರೋನ ಆಕ್ರಮಣದ ಆರಂಭದ ದಿನಗಳಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿವರಗಳು ಮಾತ್ರ. ಈಗ ಬಹಿರಂಗಗೊಂಡಿರುವ ತನಿಖಾ ಆಯೋಗದ ವರದಿಯಲ್ಲಿ ಆರಂಭದ ಭ್ರಷ್ಟಾಚಾರ ಮಾತ್ರವೇ ಲಭ್ಯವಾಗಿದೆ. ಇದಲ್ಲದೆ, ಕೊರೋನ 2ನೇ ಅಲೆ ಮತ್ತು ನಂತರದಲ್ಲಿಯೂ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಭಾರೀ ಹಗರಣ ನಡೆದಿದೆ ಎಂಬ ಆರೋಪಗಳಿವೆ.

ಆ ಕಾರಣಕ್ಕಾಗಿ, ತನಿಖಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಯೋಗ ಸಲ್ಲಿಸಿದ ಕೂಡಲೇ ಹಾಲಿ ಸಂಸದ ಡಾ. ಕೆ ಸುಧಾಕರ್ ಬಡಬಡಾಯಿಸಿದ್ದಾರೆ. ಯಾಕೆಂದರೆ, ಕೊರೋನ 2ನೇ ಅಲೆಯ ವೇಳೆಗೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರೆ, ಸುಧಾಕರ್ ಆರೋಗ್ಯ ಸಚಿವರಾಗಿದ್ದರು. ಹೀಗಾಗಿಯೇ, ವರದಿ ಸಲ್ಲಿಕೆಯಾದ ಕೂಡಲೇ, ಸುಧಾಕರ್ ಅವರು, ”ನಾನು ಕೋವಿಡ್ ಕಾಲದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಆಗಿದ್ದೆ. ಆ ವೇಳೆ ನಾನು ಅಂತಃಕರಣದಿಂದ ಕೆಲಸ ಮಾಡಿದ್ದೇನೆ. ನನ್ನ ಪ್ರಾಣ ಒತ್ತೆ ಇಟ್ಟು ಊಟ ತಿಂಡಿ ಮರೆತು ಹಗಲಿರುಳು ರೋಗಿಗಳ ಸೇವೆ ಮಾಡಿದ್ದೇನೆ. ನಾನು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ” ಎನ್ನುತ್ತಿದ್ದಾರೆ.

ಸುಧಾಕರ್ ಆರೋಗ್ಯ ಸಚಿವರಾಗಿದ್ದಾಗ, ವೆಂಟಿಲೇಟರ್ ಖರೀದಿ, ಮಾಸ್ಕ್‌ ಖರೀದಿ, ಬೆಡ್‌ಗಳ ಬಾಡಿಗೆ, ವೈದ್ಯಕೀಯ ಉಪಕರಣಗಳು ಹಾಗೂ ಸಾಮಗ್ರಿಗಳ ಖರೀದಿ, ಆಮ್ಲಜನಕ ನಿರ್ವಹಣೆ ನೆಪದಲ್ಲಿ ಸಾವಿರಾರು ಕೋಟಿ ರೂ. ಹಗರಣ ಎಗ್ಗಿಲ್ಲದೆ ನಡೆದಿದೆ ಎಂದು ಆರೋಪಿಸಲಾಗಿದೆ.

ಒಂದು ವೆಂಟಿಲೇಟರ್‌ಗೆ ಮಾರುಕಟ್ಟೆ ಬೆಲೆ 4 ಲಕ್ಷ ರೂ. ಇದ್ದಾಗಲೂ ರಾಜ್ಯ ಬಿಜೆಪಿ ಸರ್ಕಾರ ಪ್ರತಿ ವೆಂಟಿಲೇಟರ್‌ಗೆ ಮೂರು ಪಟ್ಟು ಹೆಚ್ಚು, ಅಂದರೆ, 12 ಲಕ್ಷ ರೂ. ಕೊಟ್ಟು ಖರೀದಿ ಮಾಡಿತ್ತು. 40 ಕೋಟಿ ರೂ.ಗೆ ದೊರೆಯಬಹುದಾಗಿದ್ದ 1,000 ವೆಂಟಿಲೇಟರ್‌ಗಳನ್ನು 120 ಕೋಟಿ ರೂ. ಖರ್ಚು ಮಾಡಿ ಖರೀದಿ ಮಾಡಿತ್ತು.

ಅಲ್ಲದೆ, ಒಟ್ಟು 48.65 ಕೋಟಿ ರೂ. ಮೌಲ್ಯದ 4.89 ಲಕ್ಷ ಪಿಪಿಇ ಕಿಟ್‌ಗಳನ್ನು 150 ಕೋಟಿ ರೂ.ಗೆ ಖರೀದಿ ಮಾಡಿತ್ತು. ಪಿಪಿಟಿ ಕಿಟ್ ಖರೀದಿಯಲ್ಲಿ ಬರೋಬ್ಬರಿ 101.35 ಕೋಟಿ ರೂ. ಅಕ್ರಮ ನಡೆದಿತ್ತು. ಜೊತೆಗೆ, ಸರ್ಜಿಕಲ್ ಮಾಸ್ಕ್‌ಗಳ ಖರೀದಿಯಲ್ಲೂ ಅಕ್ರಮ ನಡೆದಿದ್ದು, 45 ರೂ. ಮೌಲ್ಯದ ಮಾಸ್ಕ್‌ಗೆ ಬಿಜೆಪಿ ಸರ್ಕಾರ, 485 ರೂ. ಪಾವತಿಸಿತ್ತು. 10 ಲಕ್ಷ ಮಾಸ್ಕ್‌ ಖರೀದಿಗಾಗಿ 40 ಕೋಟಿ ರೂ. ಪಾವತಿಸಿದ್ದಾಗಿ ಲೆಕ್ಕ ತೋರಿಸಿತ್ತು.

ಇನ್ನು, 200 ರೂಪಾಯಿಯ ಸರ್ಜಿಕಲ್ ಕೈಗವಸಿಗೆ 400 ರೂಪಾಯಿ ಲೆಕ್ಕ ತೋರಿಸಿ 10 ಲಕ್ಷ ಕೈಗವಸಿಗೆ 40 ಕೋಟಿ ರೂ. ಖರ್ಚು ಮಾಡಿದ್ದಾಗಿ ಹೇಳಿಕೊಂಡಿತ್ತು. ಜೊತೆಗೆ, 40 ಕೋಟಿ ರೂ. ಬೆಲೆ ಬಾಳುವ ಒಟ್ಟು 20 ಲಕ್ಷ ಪರೀಕ್ಷಾ ಕೈಗವಸುಗಳಿಗೆ 65 ಕೋಟಿ ರೂ. ವ್ಯಯಿಸಿದ್ದಾಗಿ ಲೆಕ್ಕ ತೋರಿಸಿತ್ತು.

image 22 3

ಆಮ್ಲಜನಕ ಕೊರತೆಯಿಂದ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ, ಅದೇ ಆಮ್ಲಜನಕದ ಸಿಲಿಂಡರ್ ಖರೀದಿಯಲ್ಲಿ ಬಿಜೆಪಿ ಸರ್ಕಾರ ಅಕ್ರಮ ಎಸಗಿತ್ತು. ಒಟ್ಟು 43 ಕೋಟಿ ರೂ. ಮೌಲ್ಯದ 5,000 ಆಮ್ಲಜನಕ ಸಿಲಿಂಡರ್‌ ಖರೀದಿಗೆ 80 ಕೋಟಿ ರೂ. ಖರ್ಚು ಮಾಡಿರುವುದಾಗಿ ಹೇಳಿಕೊಂಡಿತ್ತು. 6.5 ಲಕ್ಷ ಮಂದಿಗೆ ಕೋವಿಡ್ ಪರೀಕ್ಷೆ ನಡೆಸಿ, 530 ಕೋಟಿ ರೂ. ವ್ಯಯಿಸಿದ್ದಾಗಿ ಸರ್ಕಾರ ಹೇಳಿಕೊಂಡಿತ್ತು. ಆದರೆ, ಕೋವಿಡ್ ಪರೀಕ್ಷಾ ಕಿಟ್‌ ಮಾರುಕಟ್ಟೆ ದರ 4,000 ರೂ. ಇದ್ದು, 248 ಕೋಟಿ ರೂ. ಮಾತ್ರವೇ ಖರ್ಚಾಗಿದೆ ಎಂದು ಹೇಳಲಾಗಿದೆ.

ಇನ್ನು ಸೋಂಕಿತರ ಆರೈಕೆಗಾಗಿ 100 ಕೋಟಿ ರೂ. ಖರ್ಚು ಮಾಡಿ, 525 ಕೋಟಿ ರೂ. ಖರ್ಚಾಗಿದೆ ಎಂದೂ ಇತರೆ ವೈದ್ಯಕೀಯ ವೆಚ್ಚವಾಗಿ 600 ಕೋಟಿ ರೂ. ವ್ಯಯಿಸಿ, 1,737 ಕೋಟಿ ರೂ. ಖರ್ಚಾಗಿದೆ ಎಂದೂ ಸರ್ಕಾರ ಹೇಳಿಕೊಂಡಿದೆ ಎಂದು ಆರೋಪಿಸಲಾಗಿದೆ. ಒಟ್ಟಾರೆಯಾಗಿ ಕೊರೋನ ಸಮಯದಲ್ಲಿ 1,163.65 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದ ಬಿಜೆಪಿ ಸರ್ಕಾರ, 3,392 ಕೋಟಿ ರೂ.ಗಳ ಲೆಕ್ಕ ತೋರಿಸಿ, ಸುಮಾರು 2,200 ಕೋಟಿ ರೂ. ಲೂಟಿ ಮಾಡಿದೆ ಎಂದು ಆರೋಪಿಸಲಾಗಿದೆ.

ಈ ಎಲ್ಲ ಅಕ್ರಮಗಳ ಕುರಿತು ದಾಖಲೆಗಳು ಇನ್ನೂ ಬಹಿರಂಗಗೊಳ್ಳಬೇಕಿದೆ. ಆಗ ಬಿಜೆಪಿ ಕರ್ಮಕಾಂಡ ಮತ್ತಷ್ಟು ಬಯಲಾಗಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X