ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭ್ಯರ್ಥಿಯಾಗಿದ್ದು, ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಅವರ ವಿರುದ್ಧ ಸಿಪಿಐ ಅಭ್ಯರ್ಥಿ ಅನ್ನಿ ರಾಜಾ ಸ್ಪರ್ಧಿಸಿದ್ದಾರೆ. ಅವರೂ ಕೂಡ ಬುಧವಾರ ನಾಮಪತ್ರ ಸಲ್ಲಿಸಿದರು.
“ಎಲ್‌ಡಿಎಫ್ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ನೋಡಿದರೆ ಗೊತ್ತಾಗುತ್ತಿದೆ. ಇಂದು ನಾಮಪತ್ರ ಸಲ್ಲಿಕೆಯ ಅತ್ಯಂತ ಮಹತ್ವದ ದಿನ ಎಂದು ನಮಗೆಲ್ಲರಿಗೂ ಸಂತೋಷವಾಗಿದೆ” ಎಂದು ರೋಡ್ ಶೋನಲ್ಲಿ ಭಾಗವಹಿಸಿದ ವೇಳೆ ಅನ್ನಿ ರಾಜಾ ಹೇಳಿದರು.
ವಯನಾಡ್‌ನಲ್ಲಿ ಪ್ರಮುಖ ಅಭ್ಯರ್ಥಿಯಾಗಿರುವ ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡಿದ ಅನ್ನಿ ರಾಜಾ, “ಕಾಂಗ್ರೆಸ್ ಅಭ್ಯರ್ಥಿಯ ಅದೃಷ್ಟದ ಬಗ್ಗೆ ನಾನು ಚಿಂತಿಸುವುದಿಲ್ಲ. ರಾಷ್ಟ್ರೀಯ ವಿಷಯಗಳ ಬಗ್ಗೆ ತಮ್ಮ ಪಕ್ಷದ ನಿಲುವಿನ ಬಗ್ಗೆ ಜನರಿಗೆ ತಿಳಿಸುವ ಮೂಲಕ ನಾವು ಜನರನ್ನು ತಲುಪುತ್ತೇವೆ” ಎಂದು ಹೇಳಿದರು.
“ಎಡರಂಗದ ಅಭ್ಯರ್ಥಿಯಾಗಿ ನಾನು ಇಲ್ಲಿ ಗೆಲ್ಲಲು ಸ್ಪರ್ಧಿಸುತ್ತಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿಯ ಬಹುಮತ ಅಥವಾ ಅವರ ಹಣೆಬರಹ ಏನೆಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಇಲ್ಲೇ ಇದ್ದೇವೆ, ಜನರನ್ನು ಸುಲಭವಾಗಿ ತಲುಪುತ್ತಿದ್ದೇವೆ. ನಮ್ಮ ರಾಜಕೀಯ ಏನು, ಎಲ್ಲ ರಾಷ್ಟ್ರೀಯ ವಿಷಯಗಳ ಬಗ್ಗೆ ನಮ್ಮ ನಿಲುವು, ಫ್ಯಾಸಿಸಂ, ಸಂಘ ಪರಿವಾರ ಎಲ್ಲದರ ಕುರಿತು ಜನರ ಪ್ರತಿಕ್ರಿಯೆಯೊಂದಿಗೆ ನಮ್ಮ ಗೆಲುವಿನ ವಿಶ್ವಾಸವಿದೆ” ಎಂದು ಸಿಪಿಐ ಅಭ್ಯರ್ಥಿ ಹೇಳಿದರು.
ವಯನಾಡ್ ನಿರ್ಲಕ್ಷ್ಯದ ಬಗ್ಗೆ ರಾಹುಲ್ ಗಾಂಧಿಯನ್ನು ದೂರಿದ ಅವರು “ಕಳೆದ ಚುನಾವಣೆಗೆ ಮೊದಲು ಜನರು ನನ್ನ ಬಳಿಗೆ ಬಂದು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವುದಿಲ್ಲವೆಂದು ಹೇಳುತ್ತಿದ್ದರು, ಆದರೆ ಅವರು ಪ್ರಧಾನಿಯಾಗುತ್ತಾರೆಂದು ಹೇಳಿ ಮತ ಚಲಾಯಿಸುವಂತೆ ತಿಳಿಸಲಾಗಿತ್ತು. ಆದ್ದರಿಂದ ಅವರು ಕಳೆದ ಬಾರಿ ಕಾಂಗ್ರೆಸ್‌ಗೆ ಮತ ಹಾಕಿದರು. ಆದರೆ ಏನಾಯಿತು” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಯನಾಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ
“ವಯನಾಡ್ ಎಂಬ ಹೆಸರು ಮಲಯಾಳಂನಲ್ಲಿ ಕೇವಲ ನಾಲ್ಕು ಅಕ್ಷರಗಳನ್ನು ಹೊಂದಿದೆ. ಐದು ವರ್ಷಗಳಲ್ಲಿ ಅವರು ಒಮ್ಮೆಯೂ ತಮ್ಮ ಕ್ಷೇತ್ರದ ಹೆಸರನ್ನು ಉಚ್ಚರಿಸಿಲ್ಲ” ಎಂದು ಆರೋಪಿಸಿದರು.
ಕೇರಳದ ವಯನಾಡಿನಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಲಿರುವ ದಿನವೇ ಅನ್ನಿ ರಾಜಾ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಅನ್ನಿ ರಾಜಾ ಅವರು ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದರು.
