ಕೆಲವು ವಿಚಾರದಲ್ಲಿ ತನ್ನ ‘ವಿರೋಧ’ಗಳ ಹೊರತಾಗಿಯೂ, ಆಪರೇಷನ್ ಸಿಂಧೂರ ಬಳಿಕ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ಹೇರಲು ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಅಭಿಯಾನ ನಡೆಸುವುದಕ್ಕೆ ಭಾರತೀಯ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)-ಸಿಪಿಐಎಂ ಬೆಂಬಲ ವ್ಯಕ್ತಪಡಿಸಿದೆ. ಹಾಗೆಯೇ ವಿವಿಧ ಪ್ರಮುಖ ದೇಶಗಳಿಗೆ ಭೇಟಿ ನೀಡಲಿರುವ ಸರ್ವಪಕ್ಷ ನಿಯೋಗದ ಭಾಗವಾಗಲು ನಿರ್ಧರಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತ್ರ ಸಭೆ ನಡೆಸುತ್ತಿರುವ ಬಗ್ಗೆ ಸಿಪಿಐಎಂ ಪೊಲಿಟ್ ಬ್ಯೂರೋ ಅಸಮಾಧಾನ ವ್ಯಕ್ತಪಡಿಸಿದೆ. ಗಡಿಯಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚಿಸಲು ವಿಶೇಷ ಸಂಸತ್ತಿನ ಅಧಿವೇಶನ ನಡೆಸಬೇಕು ಎಂಬ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ವಿಧಾನಸಭಾ ಉಪಚುನಾವಣೆ; ಪ್ರಜಾಪ್ರಭುತ್ವ ವಿರೋಧಿ, ಕೋಮುವಾದಿ ಬಿಜೆಪಿ-ಜೆಡಿಎಸ್ ಪಕ್ಷಗಳನ್ನು ಸೋಲಿಸಲು ಸಿಪಿಐಎಂ ಕರೆ
“ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ನಂತರದ ಬೆಳವಣಿಗೆಗಳ ಕುರಿತು ಚರ್ಚಿಸಲು ಪ್ರಧಾನಿ ಮತ್ತು ಅವರ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲು ನಿರಾಕರಿಸಿದ್ದು ದುರದೃಷ್ಟಕರ. ಸರ್ಕಾರವು ತಕ್ಷಣವೇ ಸಂಸತ್ತಿನ ಅಧಿವೇಶನವನ್ನು ಕರೆಯಬೇಕು. ಜನರಿಗೆ ಮಾಹಿತಿ ನೀಡಬೇಕು. ಸ್ವಷ್ಟೀಕರಣ ಪಡೆಯಲು ಅವಕಾಶ ನೀಡಬೇಕು” ಎಂದು ಸಿಪಿಐಎಂ ಒತ್ತಾಯಿಸಿದೆ.

“ಪ್ರಧಾನಿ ಬಿಜೆಪಿ-ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ‘ಆಪರೇಷನ್ ಸಿಂಧೂರ’ ಬಗ್ಗೆ ವಿವರಿಸಲು ನಿರ್ಧರಿಸಿದರು. ಇದು ತಾರತಮ್ಯ. ದೇಶಕ್ಕೆ ಸಂಬಂಧಿಸಿದ ಗಂಭೀರ ವಿಚಾರದ ಬಗ್ಗೆ ಮಾಹಿತಿ ನೀಡಲು ಕೇಂದ್ರವು ವಿರೋಧ ಪಕ್ಷದ ಮುಖ್ಯಮಂತ್ರಿಗಳು ಸೇರಿದಂತೆ ದೇಶದ ಎಲ್ಲಾ ಮುಖ್ಯಮಂತ್ರಿಗಳ ಸಭೆಯನ್ನು ನಡೆಸಬೇಕು” ಎಂದು ಆಗ್ರಹಿಸಿದೆ.
“ಸರ್ಕಾರವು ಮೊದಲು ಭಾರತದ ಜನರಿಗೆ ಮಾಹಿತಿ ನೀಡಬೇಕು, ಪಾರದರ್ಶಕವಾಗಿರಬೇಕು.ಆಡಳಿತ ಪಕ್ಷದ ನಾಯಕರು ಮತ್ತು ರಾಜ್ಯ ಸಚಿವರು ಈ ಪರಿಸ್ಥಿತಿಗೆ ಕೋಮು ಬಣ್ಣ ಬಳಿಯುವ ಅಭಿಯಾನ ನಡೆಸುತ್ತಿದ್ದಾರೆ. ಅದನ್ನು ಕೂಡಲೇ ನಿಲ್ಲಿಸಬೇಕು” ಎಂದು ಸಿಪಿಐಎಂ ಒತ್ತಾಯಿಸಿದೆ.
ಇನ್ನು, “ಸರ್ಕಾರವು ರಾಜ್ಯಸಭೆಯಲ್ಲಿ ನಮ್ಮ ಪಕ್ಷದ ನಾಯಕರನ್ನು ಕರೆದು, ತನ್ನ ರಾಜತಾಂತ್ರಿಕ ಸಂಪರ್ಕದ ಭಾಗವಾಗಿ ವಿವಿಧ ದೇಶಗಳಿಗೆ ಕಳುಹಿಸಲು ನಿರ್ಧರಿಸಿರುವ ವಿವಿಧ ನಿಯೋಗಗಳ ಬಗ್ಗೆ ತಿಳಿಸಿದೆ. ನಾವು ಇತರೆ ಯಾವುದೇ ಆಗ್ರಹಗಳನ್ನು ಹೊಂದಿದ್ದರೂ ಕೂಡಾ, ಅದನ್ನು ಪುನರುಚ್ಚರಿಸುತ್ತಲೇ ಈ ನಿಯೋಗ ರಚನೆಗೆ ಬೆಂಬಲ ನೀಡುತ್ತೇವೆ. ವಿಶಾಲ ರಾಷ್ಟ್ರೀಯ ಹಿತಾಸಕ್ತಿಯಿಂದ ಈ ನಿಯೋಗದ ಭಾಗವಾಗಲು ನಾವು ಬಯಸುತ್ತೇವೆ” ಎಂದು ಸಿಪಿಐಎಂ ಪೊಲಿಟ್ ಬ್ಯೂರೋ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
