ಜಾರ್ಖಂಡ್‌ನಲ್ಲಿ ನಾವು ಇಂಡಿಯಾ ಒಕ್ಕೂಟದ ಮಿತ್ರ ಪಕ್ಷವಾಗಿಲ್ಲ. ಆದರೂ ಕೂಡಾ ಇಂಡಿಯಾ ಒಕ್ಕೂಟವು ಪ್ರಚಾರಕ್ಕಾಗಿ ನಮ್ಮ ಪಕ್ಷದ ಚಿಹ್ನೆಯನ್ನು ಬಳಸುತ್ತಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಬುಧವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಈ ಬಗ್ಗೆ ಸಿಪಿಐಎಂ ಜಾರ್ಖಂಡ್ ಮುಖ್ಯ ಚುನಾವಣಾ ಅಧಿಕಾರಿ ಕೆ ರವಿಕುಮಾರ್ ಅವರಿಗೆ ದೂರು ಸಲ್ಲಿಸಿದೆ. “ಸಿಪಿಎಂ ಪಕ್ಷವು ರಾಜ್ಯದಲ್ಲಿ ಇಂಡಿಯಾ ಒಕ್ಕೂಟದ ಭಾಗವಾಗಿಲ್ಲ ಮತ್ತು 81 ಸದಸ್ಯರ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಸ್ವತಂತ್ರವಾಗಿ ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ” ಎಂದು ಹೇಳಿದೆ.
“ಜಾರ್ಖಂಡ್‌ನಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳ ನಡುವೆ ಸೀಟು ಹಂಚಿಕೆ ವ್ಯವಸ್ಥೆಯಲ್ಲಿ ಸಿಪಿಎಂ ಅನ್ನು ಸೇರಿಸಲಾಗಿಲ್ಲ. ನಮ್ಮ ಚುನಾವಣಾ ಚಿಹ್ನೆಯಾದ ಸುತ್ತಿಗೆ, ಕುಡುಗೋಲು ಮತ್ತು ನಕ್ಷತ್ರವನ್ನು ಕಾಂಗ್ರೆಸ್ ಮತ್ತು ಜೆಎಂಎಂ ನಮ್ಮ ಒಪ್ಪಿಗೆಯಿಲ್ಲದೆ ತಮ್ಮ ಪ್ರಚಾರದಲ್ಲಿ ಬಳಸುತ್ತಿವೆ ಎಂದು ನಾವು ಎಲ್ಲಾ ಸ್ಥಳಗಳಿಂದ ಮಾಹಿತಿಯನ್ನು ಪಡೆಯುತ್ತಿದ್ದೇವೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ? ಹಾಸನ | ಗೌರಿ ಕೊಲೆ ಹಂತಕರಿಗೆ ಸನ್ಮಾನ ಮಾಡಿರುವುದು ಬಹಿರಂಗ ಪ್ರಚೋದನೆ: ಸಿಪಿಐಎಂ ಧರ್ಮೇಶ್
ಜಾರ್ಖಂಡ್‌ನಲ್ಲಿ ಕಾಂಗ್ರೆಸ್, ಜೆಎಂಎಂ, ಆರ್‌ಜೆಡಿ ಮತ್ತು ಸಿಪಿಐ (ಎಂಎಲ್) ಮಾತ್ರ ಅಧಿಕೃತವಾಗಿ ಇಂಡಿಯಾ ಒಕ್ಕೂಟದ ಭಾಗವಾಗಿದೆ ಎಂದು ಸಿಪಿಎಂ ಜಾರ್ಖಂಡ್ ಕಾರ್ಯದರ್ಶಿ ಪ್ರಕಾಶ್ ವಿಪ್ಲವ್ ಹೇಳಿದ್ದಾರೆ.
“ಇಂಡಿಯಾ ಒಕ್ಕೂಟವು ಸಿಪಿಎಂನ ಚಿಹ್ನೆಯನ್ನು ಬಳಸುವುದರಿಂದ ಮತದಾರರು ಮತ್ತು ಪಕ್ಷದ ಅಭ್ಯರ್ಥಿಗಳಲ್ಲಿ ಗಮನಾರ್ಹ ಗೊಂದಲ ಉಂಟಾಗಿದೆ. ಸುತ್ತಿಗೆ ಮತ್ತು ಕುಡಗೋಲು ಚಿಹ್ನೆಯ ಅನಧಿಕೃತ ಬಳಕೆಯು ಅನಗತ್ಯ ತೊಡಕುಗಳನ್ನು ಸೃಷ್ಟಿಸುತ್ತಿದೆ. ಇದು ಮತದಾರರ ಮೇಲೆ ಪ್ರಭಾವ ಬೀರಬಹುದು” ಎಂದು ವಿಪ್ಲವ್ ಹೇಳಿದ್ದಾರೆ. ಮಧ್ಯಪ್ರವೇಶಿಸಿ ತನ್ನ ಚಿಹ್ನೆಯ ದುರುಪಯೋಗವನ್ನು ನಿಲ್ಲಿಸುವಂತೆ ಸಿಪಿಎಂ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ.
ಇದನ್ನು ಓದಿದ್ದೀರಾ? ಕೇರಳ | ಹೊಸ ರಾಜಕೀಯ ಪಕ್ಷ ಕಟ್ಟಲು ಮುಂದಾದ ಸಿಪಿಐಎಂ ಬಂಡಾಯ ಶಾಸಕ ಪಿ ವಿ ಅನ್ವರ್
ಇಂಡಿಯಾ ಒಕ್ಕೂಟದಲ್ಲಿನ ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಜೆಎಂಎಂ 43 ವಿಧಾನಸಭಾ ಸ್ಥಾನಗಳಲ್ಲಿ, ಕಾಂಗ್ರೆಸ್ 30, ಆರ್‌ಜೆಡಿ 6 ಮತ್ತು ಸಿಪಿಐ (ಎಂಎಲ್) ನಾಲ್ಕು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಧನ್ವಾರ್, ಛತ್ರಾಪುರ ಮತ್ತು ವಿಶ್ರಾಮ್‌ಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳ ನಡುವೆ ಸೌಹಾರ್ದ ಸ್ಪರ್ಧೆ ನಡೆಯಲಿದೆ. ಆ ಕ್ಷೇತ್ರಗಳಿಗೆ ಸೀಟು ಹಂಚಿಕೆ ಒಪ್ಪಂದವಾಗಿಲ್ಲ.
ಜಾರ್ಖಂಡ್‌ನಲ್ಲಿ ನವೆಂಬರ್ 13 ಮತ್ತು 20ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.
