- ಕನ್ನಡಕ್ಕೆ ಒತ್ತು ನೀಡುವ ಕೆಲಸಗಳನ್ನು ರೂಪಿಸಲು ಅಧಿಕಾರಿಗಳಿಗೆ ತಾಕೀತು
- ಗ್ರಾಮೀಣ ಜನರ ಶ್ರೋಯೋಭಿವೃದ್ದಿಗೆ ಪೂರಕವಾಗುವ ಯೋಜನೆ ರೂಪಿಸಲು ಸಲಹೆ
ಅಂತರ್ಜಾಲ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಂತೆ ಕನ್ನಡ ಭಾಷೆಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲು ಅನುಕೂಲವಾಗುವ ಹಾಗೆ ಕನ್ನಡ ಲಿಪಿ ರೂಪಿಸಿ ಎಂದು ಅಧಿಕಾರಿಗಳಿಗೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ವಿಧಾನಸೌಧದಲ್ಲಿಂದು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕನ್ನಡ ಭಾಷೆಗೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳು, ವ್ಯಕ್ತಿಗಳು ಸಲ್ಲಿಸಿರುವ ಸ್ಟಾರ್ಟಪ್‌ಗಳಿಗೆ ಸಂಬಂಧಿಸಿದ ವಿವರಗಳನ್ನು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸರ್ಕಾರದ ಆದೇಶಗಳು, ನ್ಯಾಯಾಲಯದ ತೀರ್ಪುಗಳು ಸೇರಿದಂತೆ ಸರ್ಕಾರ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಅಂತರ್ಜಾಲ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಂತೆ ಕನ್ನಡ ಭಾಷೆಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲು ಅನುಕೂಲವಾಗುವ ಹಾಗೆ ಕನ್ನಡ ಲಿಪಿ ರೂಪಿಸಿ ಬೆಳೆಸುವಂತಂಹ ಸ್ಟಾರ್ಟ್ ಅಪ್ ಗಳನ್ನು ರೂಪಿಸಲು ಪ್ರೋತ್ಸಾಹ ನೀಡಲು ಕಾರ್ಯಕ್ರಮ ರೂಪಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಹಿತಿ ತಂತ್ರಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಕಾರ್ಯಕ್ರಮ ಸಂಯೋಜಿಸುವಲ್ಲಿ ತೊಡಗಿರುವ ಸಂಸ್ಥೆಗಳು ಕೇವಲ ಸರ್ಕಾರದ ಆಲೋಚನೆಗಳನ್ನು ಮಾತ್ರ ಅನುಷ್ಠಾನಗೊಳಿಸಲು ಯೋಚಿಸಬಾರದು. ಬದಲಿಗೆ ತಮ್ಮ ಅಭಿಪ್ರಾಯಗಳೊಂದಿಗೆ ಯೋಜನೆಗಳನ್ನು ಉತ್ತಮಪಡಿಸುವಲ್ಲೂ ಗಮನ ಹರಿಸಬೇಕು ಎಂದರು.
ಈ ಸುದ್ದಿ ಓದಿದ್ದೀರಾ?: ಕೆಂಪೇಗೌಡ ಜಯಂತಿ : 198ಕ್ಕೆ ಏರಿಕೆಯಾದ ಪ್ರಶಸ್ತಿ ಸಂಖ್ಯೆ; ಜುಲೈ 9ಕ್ಕೆ ಪ್ರಶಸ್ತಿ ಪ್ರದಾನ
ಮುಂದುವರೆದು ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಯುವಕರು ಹಾಗೂ ಮಹಿಳೆಯರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತ್ಯೇಕ ಯೋಜನೆಗಳನ್ನು ರೂಪಿಸುವಂತೆಯೂ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಆರೋಗ್ಯ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ಟಾರ್ಟ್ ಅಪ್ ಕಂಪನಿಗಳನ್ನು ಪ್ರೋತ್ಸಾಹಿಸುವ ಅವಶ್ಯಕತೆಯಿದೆ. ಸಂಬಂಧ ಕಾರ್ಯಯೋಜನೆ ರೂಪಿಸಲು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಸಭೆಯಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಉಪಸ್ಥಿತರಿದ್ದರು.