ಕೆಲ ಮಂತ್ರಿಗಳು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಗೆ ಹೈಕಮಾಂಡ್ ಮೇಲೆ ಸತತವಾಗಿ ಬೇಡಿಕೆ ಇಡುತ್ತಿದ್ದಾರಲ್ಲಾ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ ಸಿಡಿಮಿಡಿಗೊಂಡ ಘಟನೆ ನಡೆಯಿತು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಡಿಸಿಎಂಗಳ ನೇಮಕ ಮಾಡುವ ಬಗ್ಗೆ ನೀವು ಸುರ್ಜೇವಾಲ ಸಾಹೇಬರನ್ನೇ ಕೇಳಿ” ಎಂದು ಸಿಟ್ಟಿನಿಂದ ಹೇಳಿದರು.
“ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ತಯಾರಿಗಳನ್ನು ಚರ್ಚಿಸಲು ಮತ್ತು ರೂಪುರೇಷೆಗಳನ್ನು ಸಿದ್ಧಮಾಡಿಕೊಳ್ಳಲು ಸಭೆ ಕರೆಯಲಾಗಿದೆ” ಎಂದು ಇದೇ ವೇಳೆ ಹೇಳಿದರು.
ಜಿಲ್ಲಾಮಟ್ಟದಲ್ಲಿ, ವಿಧಾನ ಸಭಾ ಕ್ಷೇತ್ರಗಳಲ್ಲಿ ಸರ್ಕಾರದ ಗ್ಯಾರಂಟಿಗಳ ಅನುಷ್ಠಾನ, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಗಳನ್ನು ನಡೆಸುವ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ. ಕಾರ್ಯಕರ್ತರಿಗೆ ಕೆಲ ಸಲಹೆಗಳನ್ನು ಸಭೆಯಲ್ಲಿ ನೀಡಲಾಗುವುದು” ಎಂದು ಶಿವಕುಮಾರ್ ತಿಳಿಸಿದರು.