ಅಪರಾಧ ಚಟುವಟಿಕೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವಾಗಲಿ ಅಥವಾ ಬಿಜೆಪಿ ಸರ್ಕಾರವಾಗಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿವೆ ಎಂಬುದನ್ನು ಅಂಕಿ-ಅಂಶಗಳೇ ಹೇಳುತ್ತಿವೆ. ಆದರೆ ಬಿಜೆಪಿ ಕಥೆ ಹೇಗಿದೆ ಎಂದರೆ, ತನ್ನ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಕಾಂಗ್ರೆಸ್ ತಟ್ಟೆಯ ನೊಣದತ್ತ ಬೊಟ್ಟು ಮಾಡುತ್ತಿದೆ!
ಕರ್ನಾಟಕದಲ್ಲಿ ಅಪರಾಧ ಚಟುವಟಿಕೆ ವಿಚಾರ ಈಗ ಹೆಚ್ಚು ಸದ್ದು ಮಾಡುತ್ತಿದೆ. “ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಳವಾಗಿದೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ” ಎಂದು ಆರೋಪಿಸಿ ಬಿಜೆಪಿ ನಾಯಕರು ವಿಧಾನಸಭೆ ಅಧಿವೇಶನದಲ್ಲೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕರ ಆರೋಪಕ್ಕೆ ಉತ್ತರಿಸಿರುವ ಗೃಹ ಸಚಿವ ಪರಮೇಶ್ವರ್, “ಬಿಜೆಪಿಯ ಆಡಳಿತಕ್ಕೆ ಹೋಲಿಸಿದರೆ ನಮ್ಮ ಆಡಳಿತದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ” ಎಂದಿದ್ದಾರೆ. ಇದರಲ್ಲಿ ಯಾವುದು ನಿಜ? ಯಾವುದು ಸುಳ್ಳು? ಎಂಬುದನ್ನು ಅಂಕಿ-ಅಂಶಗಳೇ ಹೇಳುತ್ತವೆ. ಅದನ್ನು ತಿಳಿಯುವ ಮೊದಲು ಇದಕ್ಕೆ ಪೂರಕವಾಗಿ ತಿಳಿಯಬೇಕಾದ ಒಳ ಸಂಗತಿ ಇದೆ.
ಯಾವುದೇ ಪಕ್ಷದ ಸರ್ಕಾರವಿರಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದಷ್ಟು ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಇರುತ್ತದೆ ಎಂಬುದು ಮೇಲ್ನೋಟಕ್ಕೆ ಒಪ್ಪುವ ಮಾತು. ಆದರೆ, ಅಪರಾಧ ಚಟುವಟಿಕೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳು ರಾಜಕಾರಣದೊಂದಿಗೆ ತಳಕು ಹಾಕಿಕೊಂಡಿವೆ. ಅಪರಾಧ ಚಟುವಟಿಕೆಗಳು ಹೆಚ್ಚಾದಷ್ಟು ಬಿಜೆಪಿಯ ಬಲ ಹೆಚ್ಚುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಹಿಂದೂ ಮತ್ತು ಮುಸ್ಲಿಂ ಕೇಂದ್ರಿತ ವಿಚಾರಗಳು ಅಪರಾಧ ವ್ಯಾಪ್ತಿಯೊಳಗೆ ಬಂದರೆ ಸಾಕು ಬಿಜೆಪಿಗೆ ಸಂಭ್ರಮ. ಹೆಣ ಬಿದ್ದರಂತೂ ಮುಗೀತು; ಬಿಜೆಪಿ ನಾಯಕರ ನರನಾಡಿಗಳಲ್ಲಿ ಕೋಮು ದ್ವೇಷದ ಶಕ್ತಿ ಸಂಚಯವಾಗುತ್ತದೆ. ಮುಸ್ಲಿಂ ದ್ವೇಷಿ ಮನಸ್ಥಿತಿಯ ಹಾರ್ಡ್‌ಕೋರ್ ಬಿಜೆಪಿ ನಾಯಕರು ರಣಹದ್ದುಗಳಂತೆ ಅಲ್ಲಿ ಎರಗುತ್ತಾರೆ. ತದನಂತರದಲ್ಲಿ ಅಂತಹ ಪ್ರಕರಣಗಳು ಚುನಾವಣೆ ರಾಜಕಾರಣಕ್ಕೂ ಅಸ್ತ್ರವಾಗುತ್ತವೆ. ಇದಕ್ಕೆ ತಾಜಾ ಉದಾಹರಣೆ ಲೋಕಸಭಾ ಚುನಾವಣೆ ಹೊತ್ತಲ್ಲಿ ನಡೆದ ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ!
ಕೊಲೆಯಾದ ನೇಹಾ ಕುಟುಂಬಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ಆದರೆ ನ್ಯಾಯ ಕೊಡಿಸುವ ನಾಟಕವಾಡಿದವರಿಗೆ ನೇಹಾ ಪ್ರಕರಣ ಲಾಭ ತಂದುಕೊಟ್ಟಿತು. ಚುನಾವಣೆಯಲ್ಲಿ ಹಿಂದೂ-ಮುಸ್ಮಿಂ ದ್ವೇಷರಾಜಕಾರಣವನ್ನು ಮುಂದು ಮಾಡಿ, ಮತ್ತೆ ಕ್ಷೇತ್ರವನ್ನು ಗೆದ್ದು ಕೇಂದ್ರ ಗದ್ದುಗೆ ಉಳಿಸಿಕೊಂಡರು. ಮರಳಿ ನೇಹಾ ಕುಟುಂಬದತ್ತ ತಲೆ ಹಾಕಿಯೂ ಮಲಗಲಿಲ್ಲ. ಅಲ್ಲಿಗೆ ಬಿಜೆಪಿ ಪಾಲಿಗೆ ನೇಹಾ ಪ್ರಕರಣ ಬಳಸಿ ಬಿಸಾಡುವ ಬಾಳೆ ಎಲೆಯಾಯಿತು.
ಈ ಪ್ರಕರಣ ನೆನಪಿಸುವ ಉದ್ದೇಶ ಇಷ್ಟೇ, ವಿರೋಧ ಪಕ್ಷದ ನಾಯಕರು ವಿಧಾನಸಭೆಯಲ್ಲಿ ಮಂಗಳವಾರ ಮಾತನಾಡಿ, “ರಾಜ್ಯದಲ್ಲಿ ತಲೆ ತಗ್ಗಿಸುವ ಅಪರಾಧದ ಚಟುವಟಿಕೆಗಳು ನಡೆಯುತ್ತಿದ್ದರೂ ಸರ್ಕಾರ ಯಾರನ್ನೂ ಬಂಧಿಸಿಲ್ಲ. ಇದರಿಂದ ಸರ್ಕಾರ ಬದುಕಿದೆಯೇ ಅಥವಾ ಸತ್ತಿದೆಯೇ, ಹೇಳುವವರು- ಕೇಳುವವರು ಯಾರೂ ಇಲ್ಲವೇ” ಎಂದು ಪ್ರಶ್ನಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಪ್ರಶ್ನೆ ಸ್ವಾಗತಾರ್ಹ. ಆದರೆ, ಮುಂದುವರಿದು ಅವರು ಪ್ರಸ್ತಾಪಿಸುವ ವಿಚಾರಗಳು ಯಾವವು? ಅವೇ ಹಿಂದೂ-ಮುಸ್ಲಿಂ ವಿಚಾರಗಳು. “ಬಿಡದಿಯಲ್ಲಿರುವ ಟೊಯೋಟಾ ಕಂಪನಿಯ ಶೌಚಾಲಯದ ಗೋಡೆಯ ಮೇಲೆ ಪಾಕಿಸ್ತಾನ ಜಿಂದಾಬಾದ್ ಮತ್ತು ಕನ್ನಡಿಗರನ್ನು ಅವಾಚ್ಯವಾಗಿ ನಿಂದಿಸಿ ಬರೆದ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಬಂಧಿಸಬೇಕು” ಎಂದು ಆಗ್ರಹಿಸುತ್ತಾರೆ. ಅಷ್ಟೇ ಅಲ್ಲ, ಹಾವೇರಿ ಜಿಲ್ಲೆಯ ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣ ಪ್ರಸ್ತಾಪಿಸಿ, ಸಂಘಪರಿವಾರದ ಕಲ್ಪಿತ ಸಿದ್ಧಾಂತವಾದ ‘ಲವ್ ಜಿಹಾದ್’ ಎನ್ನುವ ಆರೋಪ ಮುಂದುಮಾಡುತ್ತಾರೆ. ಈ ಪ್ರಕರಣದಲ್ಲಿ ಹಿಂದೂ ಯುವಕರು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ತುಟಿ ಬಿಚ್ಚುವುದಿಲ್ಲ.
ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ವಿವಾಹವಾಗಿ, ಮತಾಂತರ ಮಾಡುತ್ತಾರೆಂಬ ಸಂಘಪರಿವಾರದ ಕಲ್ಪಿತ ಪಿತೂರಿ ಸಿದ್ಧಾಂತವೇ ಲವ್ ಜಿಹಾದ್ ಆಗಿರುವಾಗ ಬಿಜೆಪಿಗರಿಗೆ ಹಿಂದೂ-ಮುಸ್ಲಿಂ ಯುವಕ ಯುವತಿಯರು ಪರಸ್ಪರ ಪ್ರೀತಿಸುವುದು ಮಹಾನ್ ಅಪರಾಧ. ಹೀಗಾಗಿ ಲವ್ ಜಿಹಾದ್ ಎನ್ನುವ ತಮ್ಮ ರಾಜಕೀಯ ಅಸ್ತಿತ್ವದ ವಿಚಾರವನ್ನು ಹೀಗೆ ತೇಲಿಬಿಡುತ್ತಾರೆ.
ಇದೇ ಆರ್. ಅಶೋಕ್ ಅವರು ತಮ್ಮ ಆಡಳಿತಾವಧಿಯ ಬಗ್ಗೆ ಮಾತೇ ಆಡುವುದಿಲ್ಲ. ಬಹುಶಃ ಆರ್. ಅಶೋಕ್ ಅವರಿಗೆ ಬಿಜೆಪಿ ಆಡಳಿತ ಎಂದರೆ- ಕಳ್ಳರಿಲ್ಲದ, ಸುಳ್ಳರಿಲ್ಲದ, ಭ್ರಷ್ಟರಿಲ್ಲದ, ಹೆಣ್ಣುಮಕ್ಕಳ ಶೋಷಕರಿಲ್ಲದ, ಕೋಮು ದ್ವೇಷವಿಲ್ಲದ ಒಂದು ಸುಭಿಕ್ಷ ರಾಜ್ಯ ಎನ್ನಿಸುತ್ತದೇನೋ!
ಈಗ ಅಪರಾಧ ಅಂಕಿ-ಅಂಶಗಳತ್ತ ಬರೋಣ. ಅಪರಾಧ ಚಟುವಟಿಕೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವೂ ಸಾಚಾ ಇಲ್ಲ. ಬಿಜೆಪಿಯಂತೂ ಮೊದಲೇ ಸಾಚಾ ಅಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಪರಾಧ ಚಟುವಟಿಕೆ ಕಾಂಗ್ರೆಸ್ ಸರ್ಕಾರದ ಅವಧಿಗಿಂತ ಹೆಚ್ಚಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸ್ಯಾಂಕಿ ಕೆರೆಯಲ್ಲಿ ಸರ್ಕಾರಿ ಪ್ರಾಯೋಜಿತ ಮೌಢ್ಯಾರತಿ, ಯಾರಿಗಾಗಿ?
ಬಿಜೆಪಿ ಅವಧಿಯ ಅಪರಾಧ ಚಟುವಟಿಕೆ ವಿವರ
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೌಡಿಗಳಿಗೆ ಮಣೆ ಹಾಕಿ 20,455 ಮಂದಿಯನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಡಲಾಗಿದೆ. 2019ರಲ್ಲಿ 2,195, 2020ರಲ್ಲಿ 1,718, 2021ರಲ್ಲಿ 8,062, 2023ರಲ್ಲಿ 7,361.
ರಾಜ್ಯದಲ್ಲಿ 2023ರ ಜನವರಿ ಒಂದೇ ತಿಂಗಳಲ್ಲಿ 104 ಕೊಲೆಗಳು ನಡೆದಿತ್ತು. ಅಂದರೆ ದಿನಕ್ಕೆ ಎರಡು ಕೊಲೆ ಪ್ರಕರಣಗಳು ದಾಖಲಾಗಿವೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಅತಿಯಾಗಿತ್ತು. ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದ 40% ಕಮಿಷನ್ ದಂಧೆ, ಹಗರಣಗಳು, ಬೆಲೆ ಏರಿಕೆ, ನಿರುದ್ಯೋಗದಿಂದ ಬೇಸತ್ತ ರಾಜ್ಯದ ಜನರು ಹಣಕ್ಕಾಗಿ ಮೈಕ್ರೋ ಫೈನಾನ್ಸ್ ಕದತಟ್ಟಿ ಕೈ ಸುಟ್ಟುಕೊಂಡಿದ್ದಾರೆ. ಈಗ ಅದು ಕಾಂಗ್ರೆಸ್ ಸರ್ಕಾರದಲ್ಲಿ ವ್ಯಾಪಕವಾಗಿ ಬೆಳಕಿಗೆ ಬಂದಿದೆ.
2022ರ ಬಿಜೆಪಿ ಸರ್ಕಾರದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಒಟ್ಟು 23,182 ಕೋಟಿ ರೂ. ಸಾಲ ನೀಡುವ ಮೂಲಕ ಕರ್ನಾಟಕ 4ನೇ ಸ್ಥಾನಕ್ಕೆ ತಲುಪಿತ್ತು. ಬಿಜೆಪಿ ಸರ್ಕಾರ ಅವಧಿಯಲ್ಲೇ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅತಿ ಹೆಚ್ಚು ಸಾಲ ನೀಡಿದ್ದು ಎಂಬುದು ಗಮನಾರ್ಹ. ಆರ್‌ಬಿಐನಿಂದ ಗುರುತಿಸಲ್ಪಟ್ಟ ಸ್ವಯಂ-ನಿಯಂತ್ರಕ ಸಂಸ್ಥೆಯಾದ ಮೈಕ್ರೋಫೈನಾನ್ಸ್ ಇಂಡಸ್ಟ್ರಿ ನೆಟ್ವರ್ಕ್ (MFIN) ಪ್ರಕಾರ ಕರ್ನಾಟಕದಲ್ಲಿನ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಒಟ್ಟು ಸಾಲದ ಬಂಡವಾಳವು ಮಾರ್ಚ್ 2019 ರಲ್ಲಿ 16,946 ಕೋಟಿಗಳಿಂದ ಮಾರ್ಚ್ 2024 ಕ್ಕೆ 42,265 ಕೋಟಿಗಳಿಗೆ ಏರಿಕೆಯಾಗಿ ನಾಲ್ಕು ಪಟ್ಟು ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆಫೆ ಸ್ಫೋಟದ ಹಿಂದೆ ತಮಿಳಿಗರು ಇದ್ದಾರೆ ಎಂದು ಜನರ ನಡುವೆ ದ್ವೇಷ ಸೃಷ್ಟಿ ಮಾಡಿ ಗಲಭೆ ಹಚ್ಚಲು ಹೊರಟಿದ್ದ ಬಿಜೆಪಿಯ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ದ ತಮಿಳುನಾಡಿನ ಡಿಎಂಕೆ ಪಕ್ಷ ದೂರು ನೀಡಿದ್ದರಿಂದ ಕರಂದ್ಲಾಜೆ ಧ್ವನಿ ಮತ್ತೆ ಬರಲಿಲ್ಲ.
ಕರ್ನಾಟಕದಲ್ಲಿ 2021 ರಿಂದ 2024ರ ಅಪರಾಧ ಚಟುವಟಿಕೆ ಅಂಕಿ-ಅಂಶ

ಬಿಜೆಪಿ ಅವಧಿಯ ಕೋಮುಗಲಭೆ ಪ್ರಕರಣಗಳು
2019 ರಿಂದ 2022ರ ಬಿಜೆಪಿ ಆಡಳಿತ ಅವಧಿಯಲ್ಲಿ 300 ಕೋಮು ಗಲಭೆ ಪ್ರಕರಣಗಳು ನಡೆದಿವೆ. 2019ರಲ್ಲಿ 63, 2020ರಲ್ಲಿ 21, 2021ರಲ್ಲಿ 120, 2022ರಲ್ಲಿ 96 ಕೋಮು ಗಲಭೆಗಳು ನಡೆದಿವೆ. ಕೋಮು ಗಲಭೆಯಲ್ಲಿ ಇದುವರೆಗೂ ಬಡ 21 ಜನ ಬಿಲ್ಲವ ಜನಾಂಗದ ಯುವಕರು ಹಾಗೂ 50 ಬಡ ದಲಿತರು ಪ್ರಾಣ ಬಿಟ್ಟಿದ್ದಾರೆ. ಆದರೆ, ಎಂದಾದರೂ ಬಿಜೆಪಿ ನಾಯಕರ ಮಕ್ಕಳು ಬೀದಿಗೆ ಬಂದು ಪ್ರಾಣ ಕಳೆದುಕೊಂಡ ಉದಾಹರಣೆ ಇದೆಯೇ?
2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ 18 ಜಿಲ್ಲೆಗಳಲ್ಲಿ ಕೋಮುಗಲಭೆ ವರದಿಯಾಗಿದ್ದು ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಪ್ರತಿನಿಧಿಸುವ ಶಿವಮೊಗ್ಗವು 57 ಪ್ರಕರಣಗಳೊಂದಿಗೆ ಅಗ್ರಸ್ಥಾನ ಪಡೆದಿತ್ತು. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ(NHFS-5) ಪ್ರಕಾರ ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಕರ್ನಾಟಕ ನಂ.1 ಸ್ಥಾನಕ್ಕೆ ಬಂದಿದ್ದು ಬಿಜೆಪಿ ಸರ್ಕಾರದಲ್ಲಿ. 2019-2021ರಲ್ಲಿ ಸಮೀಕ್ಷೆಗೆ ಒಳಗಾದ ಶೇ. 44 ವಿವಾಹಿತ ಮಹಿಳೆಯರು ತಾವು ಕೌಟುಂಬಿಕ ಹಿಂಸಾಚಾರವನ್ನು ಎದುರಿಸುತ್ತಿರುವುದು ವರದಿಯಾಗಿತ್ತು.
ಜನವರಿ 2019 ರಿಂದ ಮೇ 2021 ರವರೆಗೆ ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 1,168 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಅಂದರೆ, ದಿನಕ್ಕೆ ಸರಾಸರಿ ಒಂದು ಅತ್ಯಾಚಾರ ರಾಜ್ಯದಲ್ಲಿ ನಡೆದಿವೆ.

8.12.2022- ಬಿಲ್ಡರ್ ಮತ್ತು ಕಟ್ಟಡದ ಮಾಲೀಕನ ಮೇಲೆ ಗುಂಡಿನ ದಾಳಿ ಕೆ.ಆರ್.ಪುರಂನ ಸೀಗೆಹಳ್ಳಿ ಬಳಿಯ ಹಾಸ್ಯಗಾರ್ಡನ್‌ನಲ್ಲಿ ನಡೆದಿದೆ.
9.12.2022- ಬೆಂಗಳೂರು ನಗರದಲ್ಲಿ ಪುಡಿರೌಡಿಗಳ ಹಾವಳಿ ಮತ್ತೆ ಹೆಚ್ಚಾಗಿದ್ದು, ಸಿಗರೇಟ್ ಹಣ ಕೇಳಿದ್ದಕ್ಕೆ ಅಂಗಡಿ ಹುಡುಗರ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ 1.90 ಲಕ್ಷ ರೂ. ಎಗರಿಸಿ ಪ್ರಾಣ ಬೆದರಿಕೆ ಹಾಕಿರುವ ಪ್ರಕರಣ ಕುಂದಲಹಳ್ಳಿ ಗೇಟ್ ಸಮೀಪದ ಬೇಕರಿಯಲ್ಲಿ ನಡೆದಿತ್ತು.
18.12.2022- ಹಫ್ತಾ ನೀಡಲಿಲ್ಲ ಎನ್ನುವ ಕಾರಣಕ್ಕೆ ರೌಡಿಯೊಬ್ಬ ಮೀನಿನ ಅಂಗಡಿ ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ಘಟನೆ ಬೆಂಗಳೂರಿನ ಬಾಣಸವಾಡಿಯ ಜೈ ಭಾರತ್ ನಗರದಲ್ಲಿ ನಡೆದಿತ್ತು.
24.12.2022- ಆನೇಕಲ್ ಪಟ್ಟಣದ ದೇವರಕೊಂಡಪ್ಪ ವೃತ್ತದಲ್ಲಿ ಗಾಂಜಾ ಮತ್ತಿನಲ್ಲಿ ನಡುರಸ್ತೆಗೆ ಬೈಕ್ ನಿಲ್ಲಿಸಿಕೊಂಡು ಓಡಾಡುವ ಜನರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದವರನ್ನು ಪ್ರಶ್ನಿಸಿದ ಕಾನ್‌ಸ್ಟೆಬಲ್ ರಂಗನಾಥ್ ಅವರ ಮೇಲೆ ಹಲ್ಲೆ ಮಾಡಿದ್ದರು.
22.11.2022- ಬೆಂಗಳೂರಿನ ಕಾನ್ಶಿರಾಮ್ ನಗರದಲ್ಲಿ ಪುಡಿ ಪುಂಡರ ಹಾವಳಿ, ರಸ್ತೆಯಲ್ಲಿ ಓಡಾಡುವವರ ಮೇಲೆ ಹಲ್ಲೆ. ಹಾವಳಿ ಪ್ರಕರಣ ದಾಖಲು.
21.09.2022- ಕಾಲೇಜು ಆವರಣಗಳ ಸುತ್ತಾ ಹೆಚ್ಚಿದ ಪುಂಡರ ಹಾವಳಿ ಪೋಷಕರಿಂದ ದೂರು, ವ್ಹೀಲಿಂಗ್, ಚುಡಾಯಿಸುವುದು, ವಿದ್ಯಾರ್ಥಿಗಳಿಂದ ವಸೂಲಿ ಪ್ರಕರಣಗಳ ಬಗ್ಗೆ ದೂರು.
26.11.2022- ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಲಸಿಂದ ಪಾರ್ಕ್ ಬಳಿ ಐದಾರು ಮಂದಿ ಯುವಕರು ಬೈಕ್ ವ್ಹೀಲಿಂಗ್ ಮಾಡುವ ಜೊತೆಗೆ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಪುಂಡಾಟಿಕೆ ಮಾಡಿರುವ ಘಟನೆ ನಡೆದಿದೆ.
2022 ಏಪ್ರಿಲ್‌ನಲ್ಲಿ ಧಾರವಾಡ ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಮುಸ್ಲಿಂ ವ್ಯಾಪಾರಿ ನಬೀಸಾಬ್ ಅವರಿಗೆ ಸೇರಿದ ಕಲ್ಲಂಗಡಿ ಹಣ್ಣಿನ ಅಂಗಡಿಯನ್ನು ಹಾಳು ಮಾಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರೂ ಯಾರ ಬಂಧನವಾಗಲಿಲ್ಲ.
2022ರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಕಾಲೇಜಿನಲ್ಲಿ ಕಂಡು ಬಂದ ಹಿಜಾಬ್ ವಿವಾದ ಬಿಜೆಪಿಯ ರಾಜಕೀಯ ಒಂದು ತಂತ್ರಗಾರಿಕೆಯಾಗಿತ್ತು.
ದಲಿತರಿಗೂ ಬಿಜೆಪಿ ಅವಧಿಯಲ್ಲಿ ರಕ್ಷಣೆ ಸಿಕ್ಕಿಲ್ಲ
ಪರಿಶಿಷ್ಟ ಜಾತಿ ಪಂಗಡದ ಮೇಲೆ ದೌರ್ಜನ್ಯಗಳ ಪ್ರಮಾಣ ಹೆಚುತ್ತಲೇ ಇದ್ದರೂ ಅವರ ರಕ್ಷಣೆ ವಿಚಾರದಲ್ಲಿ ಬಿಜೆಪಿ ಸರ್ಕಾರ ಪರೋಕ್ಷವಾಗಿ ಅವರ ವಿರೋಧಿಯಾಗಿಯೇ ನಡೆದುಕೊಂಡಿದೆ. ದಲಿತ ದೌರ್ಜನ್ಯ ಪ್ರಕರಣ ಮತ್ತು ಹಲ್ಲೆ ವಿವರ ಇಲ್ಲಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಗಾಂಜಾ ಹಾವಳಿ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಗಾಂಜಾ ಹಾವಳಿಗೇನೂ ಕಡಿಮೆ ಇಲ್ಲ. ಬೆಂಗಳೂರನ್ನು ಡ್ರಗ್ಸ್‌ಗಳ ಅಡ್ಡೆಯಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಡ್ರಗ್ ವಶಪಡಿಸಿಕೊಂಡ ಕೇಸ್‌ಗಳ ಸಂಖ್ಯೆ 1,400.

NCRB ವರದಿ ಪ್ರಕಾರ 2021ರಲ್ಲಿ ಬೆಂಗಳೂರಲ್ಲಿ ಒಟ್ಟು 6,423 ಸೈಬರ್ ಕ್ರೈಮ್ ಪ್ರಕರಣ ವರದಿಯಾಗಿದೆ. ಇದು ದೇಶದಲ್ಲಿಯೇ ನಂಬರ್ 1 ಎನಿಸಿಕೊಂಡಿದೆ. ಬೀದರ್ ಜಿಲ್ಲೆಯೊಂದರಲ್ಲೇ 2020ರಲ್ಲಿ 803 ಕೆಜಿ, 2021ರಲ್ಲಿ 1,512 ಕೆ.ಜಿ. ಹಾಗೂ 2022ರಲ್ಲಿ 640 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಸೈಬರ್ ಕ್ರೈಂನಲ್ಲಿ ಕರ್ನಾಟಕವನ್ನು 3 ಸ್ಥಾನಕ್ಕೆ ಮತ್ತು ಬೆಂಗಳೂರು ನಗರವನ್ನು 1ನೇ ಸ್ಥಾನಕ್ಕೆ ತಂದ ಕೀರ್ತಿ ಬಿಜೆಪಿಗೇ ಸಲ್ಲಬೇಕು. 2018ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ 5.253 ಇದ್ದ ಸೈಬರ್ ಕ್ರೈಮ್ ಪ್ರಕರಣಗಳನ್ನು ಬಿಜೆಪಿ ಸರ್ಕಾರ ಬಂದನಂತರ ಕೇವಲ ಒಂದೇ ವರ್ಷದಲ್ಲಿ 10,555 ಪ್ರಕರಣಗಳು ದಾಖಲಾಗಿ ಶೇ. 100 ಹೆಚ್ಚಾಗಿದೆ.
ಬಿಜೆಪಿ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ದಾಖಲಾದ ಸೈಬರ್ ಕ್ರೈಮ್ ಪ್ರಕರಣ

ಕಾಂಗ್ರೆಸ್ ಅವಧಿಯ ಅಪರಾಧ ಚಟುವಟಿಕೆ ವಿವರ
ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಅಪರಾಧ ಚಟುವಟಿಕೆಗೆ ಕಡಿವಾಣ ಬಿದ್ದಿಲ್ಲ. ರಾಜ್ಯದಲ್ಲಿ ಕೊಲೆ, ದರೋಡೆ, ಅತ್ಯಾಚಾರ ಹಾಗೂ ಸೈಬರ್ ಕ್ರೈಮ್ ಹೆಚ್ಚಾಗಿಯೇ ನಡೆಯುತ್ತಿವೆ. ತಮ್ಮ ಸರ್ಕಾರ ಅವಧಿಯ ಅಪರಾಧ ಚಟುವಟಿಕೆ ಅಂಕಿ ಅಂಶವನ್ನು ಗೃಹ ಸಚಿವ ಪರಮೇಶ್ವರ್ ಅವರೇ ಸದನದಲ್ಲಿ ಮಂಡಿಸಿದ್ದಾರೆ.
ಕೊಲೆ ಪ್ರಕರಣ – 2023ರಲ್ಲಿ 1,294 ಮತ್ತು 2024ರಲ್ಲಿ 1,208 ಕೊಲೆ ಪ್ರಕರಣ ವರದಿಯಾಗಿದೆ.
ಸೈಬರ್ ಕ್ರೈಮ್ – 2023ರಲ್ಲಿ 2,149 ಪ್ರಕರಣ ದಾಖಲಾಗಿದ್ದರೆ, 2024ರಲ್ಲಿ ಹತ್ತು ಪಟ್ಟು ಹೆಚ್ಚಳವಾಗಿದ್ದು, 21,984 ಸೈಬರ್ ಪ್ರಕರಣ ವರದಿಯಾಗಿದೆ.
ಡ್ರಗ್ ಕೇಸ್ – 2023ರಲ್ಲಿ 6,767 ಡ್ರಗ್ ಕೇಸ್ ದಾಖಲಾಗಿದ್ದರೆ, 2024ರಲ್ಲಿ 4,188 ಪ್ರಕರಣ ದಾಖಲಾಗಿದೆ.
ಮಹಿಳಾ ದೌರ್ಜನ್ಯ – 2023ರಲ್ಲಿ 3,897 ಮಹಿಳಾ ದೌರ್ಜನ್ಯ ಮತ್ತು ಫೊಕ್ಸೋ ಪ್ರಕರಣ ದಾಖಲಾಗಿದೆ. 2024ರಲ್ಲಿ ಈ ಸಂಖ್ಯೆ 4,000 ಆಗಿದೆ.
ಕಮ್ಯೂನಲ್ ಕೇಸ್ – 2023ರಲ್ಲಿ 12 ಕೋಮು ಗಲಭೆ ಪ್ರಕರಣ ನಡೆದಿದ್ದು, 2024ರಲ್ಲಿ 8 ಪ್ರಕರಣಗಳು ವರದಿಯಾಗಿವೆ.
ಗ್ಯಾಂಗ್ ರೇಪ್ – 2023ರಲ್ಲಿ 10, 2024ರಲ್ಲಿ 5 ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿದೆ.
ಗಲಭೆ– 2023ರಲ್ಲಿ 7 ಮತ್ತು 2024ರಲ್ಲಿ 5 ಗಲಭೆಗಳು ದಾಖಲಾಗಿವೆ.
ಒಟ್ಟಾರೆ ಅಪರಾಧ ಚಟುವಟಿಕೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವಾಗಲಿ ಅಥವಾ ಬಿಜೆಪಿ ಸರ್ಕಾರವಾಗಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿವೆ ಎಂಬುದನ್ನು ಅಂಕಿ-ಅಂಶಗಳೇ ಹೇಳುತ್ತಿವೆ. ಆದರೆ ಬಿಜೆಪಿ ಕಥೆ ಹೇಗಿದೆ ಎಂದರೆ, ತನ್ನ ತಟ್ಟೆಯಲ್ಲಿ ಹೆಗ್ಗಣ ಸತ್ತ ಬಿದ್ದಿದ್ದರೂ ಕಾಂಗ್ರೆಸ್ ತಟ್ಟೆಯ ನೊಣದತ್ತ ಬೊಟ್ಟು ಮಾಡುತ್ತಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.