ಬೆಳೆ ಬದಲಾವಣೆ | ರಾಜ್ಯದಲ್ಲಿ ಶೇ.78ರಷ್ಟು ಜೋಳ ಬೆಳೆಯುವ ಪ್ರದೇಶ ಕಣ್ಮರೆ, ಕುಸಿತಕ್ಕೆ ಕಾರಣವೇನು?

Date:

Advertisements
ಕರ್ನಾಟಕದಲ್ಲಿ ಜೋಳ ಬೆಳೆಯುವ ಪ್ರಮಾಣ ಮತ್ತು ಉತ್ಪಾದನೆ ಆಶಾದಾಯಕವಾಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಈಗಲೂ ಜೋಳದ ರೊಟ್ಟಿ ಪ್ರತಿ ಮನೆಯ ಪ್ರಮುಖ ಆಹಾರ. ಆದರೆ, 1950-1960ರ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 25.88 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತಿತ್ತು. 2022-2023ರ ಹೊತ್ತಿಗೆ ಕೇವಲ 5.67 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಜೋಳ ಬೆಳೆ ಕಣ್ಮರೆಯಾಗಲು ಕಾರಣವೇನು? ವಿವರ ಇಲ್ಲಿದೆ... 

ಜೋಳದ ರೊಟ್ಟಿ ತಿಂದ್ರೆ ರಟ್ಟೆ ಗಟ್ಟಿ” ಎನ್ನುವ ಮಾತಿದೆ. ಉತ್ತಮ ಆರೋಗ್ಯಕ್ಕೆ ಬೇಕಾದ ವಿವಿಧ ಪೋಷಕಾಂಶ ಜೋಳದಲ್ಲಿ ಹೇರಳವಾಗಿದೆ. ದಕ್ಷಿಣ ಭಾರತದಲ್ಲಿ ಪ್ರಮುಖ ಆಹಾರ ಬೆಳೆ ಎಂದೇ ಜೋಳವನ್ನು ಗುರುತಿಸಲಾಗಿದೆ. ಜೊತೆಗೆ ದನಕರುಗಳಿಗೆ ಉತ್ಕೃಷ್ಟವಾದ ಮೇವು ಜೋಳದಿಂದ ಸಿಗುತ್ತದೆ. ಆದರೆ, ಇತ್ತೀಚಿನ ದಶಕಗಳಲ್ಲಿ ಜೋಳ ‌ಬೆಳೆಯುವ ಪ್ರದೇಶ ಮತ್ತು ಉತ್ಪಾದನೆಯ ಪ್ರಮಾಣ ದೇಶ ಹಾಗೂ ಕರ್ನಾಟಕದಲ್ಲಿ ಗಣನೀಯವಾಗಿ ಕುಸಿತ ಕಂಡಿದೆ.

ಭಾರತದಲ್ಲಿ 1950-60ರ ಅವಧಿಯಲ್ಲಿ ಸುಮಾರು 18.41 ಮಿಲಿಯನ್‌ ಹೆಕ್ಟೇರ್‌ ಪ್ರದೇಶದಲ್ಲಿ (184.1 ಲಕ್ಷ ಹೆಕ್ಟೇರ್‌ ವಿಸ್ತೀರ್ಣ) ಜೋಳ ಬೆಳೆಯಲಾಗುತ್ತಿತ್ತು. ಆದರೆ, 2020ರ ಹೊತ್ತಿಗೆ ಕೇವಲ 4.38 ಮಿಲಿಯನ್‌ ಹೆಕ್ಟೇರ್‌ ಪ್ರದೇಶದಲ್ಲಿ (43.8 ಲಕ್ಷ ಹೆಕ್ಟೇರ್‌ ವಿಸ್ತೀರ್ಣ) ಜೋಳವನ್ನು ಬೆಳೆಯಲಾಗುತ್ತಿದೆ. ಅಂದರೆ 70 ವರ್ಷದಲ್ಲಿ ಶೇ.76 ರಷ್ಟು ಜೋಳ ಬೆಳೆಯುವ ಪ್ರದೇಶದ ವಿಸ್ತೀರ್ಣ ಕುಗ್ಗಿದೆ.

ಜೋಳ ಬೆಳೆಯುವ ಪ್ರದೇಶದ ವಿಸ್ತೀರ್ಣ ಕಡಿಮೆಯಾದಂತೆ ಜೋಳದ ಉತ್ಪಾದನೆಯಲ್ಲೂ ಕುಸಿತ ಕಂಡಿದೆ. ಇಡೀ ದೇಶದಲ್ಲಿ 1950-60ರ ಅವಧಿಯಲ್ಲಿ ಜೋಳ ಉತ್ಪಾದನೆಯ ಪ್ರಮಾಣ ಸುಮಾರು 9.81 ಮಿಲಿಯನ್‌ ಟನ್‌ (98.1 ಲಕ್ಷ ಟನ್‌) ಇತ್ತು. 2020ರ ಹೊತ್ತಿಗೆ 4.81 ಮಿಲಿಯನ್‌ ಟನ್‌ (48.1 ಲಕ್ಷ ಟನ್‌) ಉತ್ಪಾದನೆಗೆ ಇಳಿಕೆಯಾಗಿದೆ. ಏಳು ದಶಕದ ಅಂತರದಲ್ಲಿ ಶೇ.50ರಷ್ಟು ಜೋಳದ ಉತ್ಪಾದನೆಯ ಪ್ರಮಾಣ ಕುಸಿತವಾಗಿದೆ.

Advertisements
ಭಾರತದಲ್ಲಿ ಜೋಳ

ಕರ್ನಾಟಕದಲ್ಲೂ ಶೇ.78ರಷ್ಟು ಜೋಳದ ಪ್ರದೇಶ ಮಾಯ!

ಕರ್ನಾಟಕ ವಿಚಾರದಲ್ಲಿ ಜೋಳ (ಬಿಳಿ ಜೋಳ, ಹೈಬ್ರಿಡ್ ಜೋಳ) ಬೆಳೆಯುವ ಪ್ರಮಾಣ ಮತ್ತು ಉತ್ಪಾದನೆ ಆಶಾದಾಯಕವಾಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಈಗಲೂ ಜೋಳದ ರೊಟ್ಟಿ ಪ್ರತಿ ಮನೆಯ ಪ್ರಮುಖ ಆಹಾರ. ಆದರೂ ರಾಜ್ಯದಲ್ಲಿ ಜೋಳ ಬೆಳೆಯುವ ಪ್ರದೇಶದ ವಿಸ್ತೀರ್ಣ ಮತ್ತು ಉತ್ಪಾದನೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಹೋಗುತ್ತಿದೆ.

1950-1960ರ ಅವಧಿಯಲ್ಲಿ ಕರ್ನಾಟಕದೊಳಗೆ ಸುಮಾರು 25.88 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತಿತ್ತು. ಆದರೆ, 2022-2023ರ ಹೊತ್ತಿಗೆ ಕೇವಲ 5.67 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತಿದೆ. 70 ವರ್ಷದ ಅವಧಿಯಲ್ಲಿ ಶೇ.78ರಷ್ಟು ಜೋಳ ಬೆಳೆಯುವ ಪ್ರದೇಶ ರಾಜ್ಯದಲ್ಲಿ ಮಾಯವಾಗಿದೆ. ಹಾಗೆಯೇ ಉತ್ಪಾದನೆಯಲ್ಲಿ 1950-60ರ ಅವಧಿಯಲ್ಲಿ ಜೋಳ ಉತ್ಪಾದನೆಯ ಪ್ರಮಾಣ ಸುಮಾರು 10.7 ಲಕ್ಷ ಟನ್‌ ಇತ್ತು. 2022-23ರ ಹೊತ್ತಿಗೆ 6.82 ಲಕ್ಷ ಟನ್‌ಗೆ ಇಳಿಕೆಯಾಗಿದೆ.

ಕರ್ನಾಟಕ ಜೋಳ

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಳಿ ಜೋಳವನ್ನು ಹೆಚ್ಚು ಬೆಳೆಯುತ್ತಾರೆ. ವಿಜಯಪುರ ಜಿಲ್ಲೆ ಜೋಳ ಬೆಳೆಯುವುದರಲ್ಲಿ ಮೊದಲ ಸ್ಥಾನದಲ್ಲಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಹಿಂದೆ ಹೆಚ್ಚು ಜೋಳ ಬೆಳೆಯುತ್ತಿದ್ದರು. ಈಗ ಜೋಳದ ಜಾಗದಲ್ಲಿ ಗೋದಿ ಮತ್ತು ಭತ್ತ ಬೆಳೆ ಬಂದು ಕುಳಿತಿದೆ. ಇದಕ್ಕೆ ಜೋಳಕ್ಕೆ ಸಿಗದ ಯೋಗ್ಯ ದರ ಮತ್ತು ಜನರ ಆಹಾರ ಬದಲಾವಣೆಯ ಕ್ರಮವೇ ಕಾರಣ ಎನ್ನುತ್ತಾರೆ ತಜ್ಞರು.

ಭತ್ತದ ಕಣಜ ಎಂದು ಪ್ರಸಿದ್ಧಿಯಾಗಿರುವ ಗಂಗಾವತಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಹಿಂದೆ ಜೋಳವನ್ನು ಹೆಚ್ಚು ಬೆಳೆಯಲಾಗುತ್ತಿತ್ತು. ಈಗ ಭತ್ತವೇ ಆ ಭಾಗದ ಪ್ರಧಾನ ಬೆಳೆಯಾಗಿದೆ. ಭತ್ತ ಬೆಳೆ ಇಲ್ಲದಿದ್ದಾಗ ಸಿಂಧನೂರು ಪ್ರದೇಶದಲ್ಲಿ ಹೈಬ್ರಿಡ್‌ ಜೋಳವನ್ನು ಈಗಲೂ ರೈತರು ಬೆಳೆಯುತ್ತಾರೆ.

ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ಜೋಳವನ್ನು ಹೆಚ್ಚು ಬೆಳೆಯಲಾಗುತ್ತದೆ. ಆದರೆ, ಈಗ ವಿಜಯಪುರದಲ್ಲಿ ಜೋಳ ಬೆಳೆಯ ಜಾಗವನ್ನು ತೊಗರಿ ಆಕ್ರಮಿಸಿಕೊಂಡಿದೆ. ಬೆಳಗಾವಿ, ಗದಗ, ಧಾರವಾಡ, ಬಾಗಲಕೋಟೆ ಭಾಗದಲ್ಲಿ ಜೋಳದ ಜಾಗದಲ್ಲಿ ಕಬ್ಬು, ಗೋಧಿ, ಮೆಕ್ಕೆಜೋಳ, ಕಡಲೆ ಹಾಗೂ ಈರುಳ್ಳಿ ಬೆಳೆ ಬಂದು ಕುಳಿತಿದೆ. ಧಾರವಾಡ ಭಾಗದಲ್ಲಿ ಸೋಯಾಬಿನ್‌ ಜೋಳವನ್ನು ಆಕ್ರಮಿಸಿಕೊಂಡಿದೆ.

ಜೋಳ ಮಳೆ 1

ಮಳೆಯಾಶ್ರಿತ ಬೆಳೆ ಜೋಳ

ಜೋಳ ಮಳೆಯಾಶ್ರಿತ ಬೆಳೆಯಾಗಿರುವುದರಿಂದ ಕಡಿಮೆ ಮಳೆ ಬೀಳುವ ಪ್ರದೇಶದಲ್ಲೂ ಬೆಳೆಯಬಹುದು. ಆದರೆ ಭತ್ತವನ್ನು ನೀರಾವರಿ ಮತ್ತು 2000 ಮಿ.ಮಿ. ಮಳೆ ಬೀಳುವ ಪ್ರದೇಶದಲ್ಲೇ ಬೆಳೆಯಬೇಕು. ಹಿಂದೆ ಭತ್ತದ ತಳಿಗಳು ಐದಾರು ಅಡಿ ಎತ್ತರಕ್ಕೆ ಬೆಳೆಯುತ್ತಿದ್ದವು. 1964-65ರಲ್ಲಿ ಬೆಳೆ ವಿಜ್ಞಾನಿಗಳು ಭತ್ತದ ಗಿಡ್ಡ ತಳಿಯನ್ನು ಕಂಡು ಹಿಡಿದ ಮೇಲೆ ಭತ್ತದ ಬೆಳೆ ನಿಧಾನವಾಗಿ ಎಲ್ಲ ಹೊಲಗಳಲ್ಲೂ ವಿಸ್ತರಣೆಯಾಗುತ್ತ ಹೋಗಿದೆ.

1970 ದಶಕದವರೆಗೂ ಆಹಾರ ವಿದೇಶಗಳಿಂದ ಭಾರತಕ್ಕೆ ರಫ್ತಾಗುತ್ತಿತ್ತು. ಹಸಿರು ಕ್ರಾಂತಿಯ ಪರಿಣಾಮದಿಂದ ಮತ್ತು ರೋಗ ನಿರೋಧಕ ತಳಿಗಳು ಹುಟ್ಟಿಕೊಂಡ ಮೇಲೆ ಭತ್ತ ಮತ್ತು ಗೋಧಿ ಬೆಳೆಗಳ ಉತ್ಪಾದನೆ ದೇಶದಲ್ಲಿ ಅಧಿಕವಾಯಿತು. ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು 20 ಅಂಶಗಳ ಕಾರ್ಯಕ್ರಮಗಳ ಬಡತನ ನಿರ್ಮೂಲನೆಗೆ ಮತ್ತು ಪ್ರತಿ ಕುಟುಂಬಕ್ಕೂ ಆಹಾರ ಒದಗಿಸಲು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (ಪಿಡಿಎಸ್‌) ಜಾರಿಗೆ ತಂದ ಮೇಲೆ ಅಕ್ಕಿ ಮತ್ತು ಗೋಧಿಯನ್ನು ಕೇಂದ್ರ ಸರ್ಕಾರವೇ ಖರೀದಿಸಿ ಬಡವರಿಗೆ ಆಹಾರ ಧಾನ್ಯ ಹಂಚಲು ಆರಂಭಿಸಿತು. ಸರ್ಕಾರದಿಂದ ಪ್ರೋತ್ಸಾಹ ಸಿಕ್ಕ ಮೇಲೆ ಮತ್ತು ಜನರ ಆಹಾರ ಕ್ರಮವೂ ಬದಲಾಗಿದ್ದರಿಂದ ಗೋಧಿ ಮತ್ತು ಭತ್ತ ಬೆಳೆಗೆ ಇನ್ನಿಲ್ಲದ ಬೇಡಿಕೆ ಬಂತು.

ಈ ಸುದ್ದಿ ಓದಿದ್ದೀರಾ? ‘ಬೆಳೆ ಪರಿಹಾರ’ ಪರಿಕಲ್ಪನೆಯೇ ಸರ್ಕಾರದಲ್ಲಿ ಇಲ್ಲ, ರಾಜ್ಯಕ್ಕೆ ಬೇಕಿದೆ ಹೊಸ ಕಾಯ್ದೆ – ಕಾನೂನು

ದೇಶದ ಏಳು ಪ್ರಮುಖ ರಾಜ್ಯಗಳಲ್ಲಿ ಜೋಳ ಬೆಳೆಯಲಾಗುತ್ತದೆ. ಜೋಳ ಬೆಳೆಯುವ ಪ್ರದೇಶ ಮತ್ತು ಉತ್ಪಾದನೆಯಲ್ಲಿ ಮಹಾರಾಷ್ಟ್ರ ಮೊದಲಿನಿಂದಲೂ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ರಾಜಸ್ಥಾನ, ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ, ಮಧ್ಯ ಪ್ರದೇಶ ಇವೆ. ಆದರೆ, ರಾಜಸ್ಥಾನ ಹೊರತುಪಡಿಸಿ ಎಲ್ಲ ರಾಜ್ಯಗಳಲ್ಲೂ ಜೋಳದ ಬೆಳೆ ವರ್ಷದಿಂದ ವರ್ಷಕ್ಕೆ ಕುಸಿತವಾಗುತ್ತಲೇ ಇದೆ. ಮಹಾರಾಷ್ಟ್ರದ ರೈತರು 1951-1960 ಅವಧಿಯಲ್ಲಿ 55.91 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬೆಳೆಯುತ್ತಿದ್ದರು. ಉತ್ಪಾದನೆಯೂ 55.91 ಲಕ್ಷ ಟನ್‌ ಇತ್ತು. ಆದರೆ ಮಹಾರಾಷ್ಟ್ರದಲ್ಲೂ ಜೋಳದ ಬೆಳೆ ತಗ್ಗಿದೆ. 2021-2025ರ ಅವಧಿಯಲ್ಲಿ 11.43 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬೆಳೆಯುತ್ತಿದ್ದು, 7.47 ಲಕ್ಷ ಟನ್‌ ಉತ್ಪಾದನೆ ಇದೆ.

ಜೋಳ ರಾಜ್ಯವಾರು

ಜೋಳದ ಪ್ರದೇಶ ಮಾಯವಾಗಿರುವ ಬಗ್ಗೆ ತಜ್ಞರು ಹೇಳುವುದೇನು?

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ನಿರ್ದೇಶಕರಾಗಿರುವ ಡಾ. ಬಿ ಡಿ ಬಿರಾದರ್‌ ಅವರು ಈ ದಿನ.ಕಾಮ್‌ ಜೊತೆ ಬೆಳೆಗಳ ಬದಲಾವಣೆ ಕುರಿತು ಮಾಹಿತಿ ಹಂಚಿಕೊಂಡಿದ್ದು, “ಒಕ್ಕಲುತನ ಎಂಬುದೇ ಒಂದಿಷ್ಟು ಸಮಸ್ಯೆಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಕ್ಷೇತ್ರ. ಜೋಳಕ್ಕೆ ಈಗಲೂ ಯೋಗ್ಯ ಬೆಲೆ ಇಲ್ಲ. ಜೋಳದ ಬೆಳೆಯ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದೇನೆ. ನಿರ್ದಿಷ್ಟ ದರವನ್ನು ಜೋಳಕ್ಕೆ ನಿಗದಿ ಮಾಡುವಂತೆ 10 ವರ್ಷಗಳಿಂದಲೂ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದೇವೆ. ಅದು ಕೈಗೂಡಿಲ್ಲ. ಜೋಳಕ್ಕೆ ಬೆಂಬಲ ಬೆಲೆಯೇ ಇಲ್ಲ. ಇದು ರೈತರು ಬೇರೆ ಬೆಳೆಗಳಿಗೆ ಹೊರಳುವಂತೆ ಮಾಡಿದೆ” ಎನ್ನುತ್ತಾರೆ.

ಮುಂದುವರಿದು, “ಜೋಳವನ್ನು ಅತಿ ಕಡಿಮೆ ನೀರಿನಲ್ಲಿ ಬೆಳೆಯಬಹುದು. ಜೊತೆಗೆ ಅಧಿಕ ಇಳುವರಿ ಮತ್ತು ಉತ್ಕೃಷ್ಟ ಮೇವು ಲಭಿಸುತ್ತದೆ. ಉದಾಹರಣೆಗೆ ಜೋಳಕ್ಕೆ 300 ಲೀಟರ್‌ ನೀರು ಖರ್ಚಾದರೆ 1 ಕೆ.ಜಿ ಜೋಳ ಮತ್ತು 2 ಕೆ.ಜಿ ಮೇವು ಸಿಗುತ್ತದೆ. ಆದರೆ, 1500-2000 ಲೀಟರ್‌ ನೀರಿನಿಂದ 1 ಕೆ.ಜಿ ಭತ್ತ ಮಾತ್ರ ಸಿಗುತ್ತದೆ. ಜೋಳ ನಾಲ್ಕು ತಿಂಗಳ ಅವಧಿಯ ಬೆಳೆ, ಖರ್ಚು ಕಡಿಮೆ. ಜೋಳದ ಬೆಳೆಯ ಬೇರುಗಳಿಗೆ ಮಾತ್ರ ಗೊಬ್ಬರ ಕೊಡುತ್ತಾರೆ. ಬೆಳೆಯ ಮೇಲ್ಮೈಗೆ ಯಾವುದೇ ಔಷಧ ಸಿಂಪಡಿಸದೇ ಇರುವುದರಿಂದ ದನಕರುಗಳಿಗೆ ಜೋಳ ಉತ್ಕೃಷ್ಟ ಮೇವು. ಆದರೆ, ಕಟಾವು ವಿಚಾರದಲ್ಲಿ ಎಷ್ಟೇ ಯಂತ್ರೋದ್ಯಮ ಕ್ಷೇತ್ರ ಮುಂದುವರಿದಿದ್ದರೂ ಜೋಳದ ತೆನೆಯನ್ನು ಕೂಲಿ ಕಾರ್ಮಿಕರಿಂದ ಕತ್ತರಿಸಿಯೇ ರಾಸಿ ಮಾಡಬೇಕು. ಏಕೆಂದರೆ ಮಷೀನ್‌ ತಂತ್ರಗಳನ್ನು ಬಳಸಿದರೆ ಜೋಳವೂ ಸಿಗುವುದಿಲ್ಲ, ಮೇವೂ ಕೈಗತ್ತುವುದಿಲ್ಲ. ಹಾಗೆಯೇ ಮೊದಲಿನ ರೀತಿ ಕೃಷಿ ಕೆಲಸಕ್ಕೆ ಕಾರ್ಮಿಕರು ಈಗ ಸಿಗುತ್ತಿಲ್ಲ. ದುಡಿಯುವ ಜನರು ನಗರ ಪ್ರದೇಶಗಳತ್ತ ಮುಖ ಮಾಡಿದ್ದಾರೆ. ಅದಕ್ಕೆ ಕಾರಣ ಕೃಷಿಯಿಂದ ಹೆಚ್ಚು ದಿನಗಳ ಕೂಲಿ ಸಿಗಲ್ಲ ಎಂಬುದು” ಎಂದು ವಿವರಿಸಿದರು.

Photo 3
ಡಾ. ಬಿ ಡಿ ಬಿರಾದರ್‌, ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ನಿರ್ದೇಶಕರು

ರಾಜಸ್ಥಾನದಲ್ಲಿ ಜೋಳ ಬೆಳೆಗೆ ಒತ್ತು

“ಜೋಳ ಬೆಳೆ ಕಡಿಮೆಯಾದ ಮೇಲೆ ಹಳ್ಳಿಗಾಡಿನ ಬಣವಿಗಳು ಕಾಣೆಯಾಗಿವೆ. ದನಕರುಗಳಿಗೆ ಮೇವು ಸಿಗುತ್ತಿಲ್ಲ. ಆಗ ಪ್ರತಿಯೊಂದು ಮನೆಯಲ್ಲೂ ಆಕಳು, ಎಮ್ಮೆ ಸಿಗುತ್ತಿದ್ದವು. ಎಲ್ಲರ ಮನೆಯಲ್ಲೂ ಹೈನು ಇತ್ತು. ಇದರಿಂದ ಜನರು ಆರೋಗ್ಯವಂತರಿದ್ದರು. ಈಗ ಮೇವಿನ ಕೊರತೆಯಿಂದ ಹೈನುಗಾರಿಕೆ ಕಡಿಮೆಯಾಗಿದೆ. ಜೋಡು ಎತ್ತುಗಳ ಕಲ್ಪನೆ 20 ವರ್ಷದಲ್ಲಿ ಬಹಳಷ್ಟು ನಶಿಸಿದೆ. ಒಂದು ರೀತಿಯಲ್ಲಿ ಆಹಾರ ಮತ್ತು ಒಕ್ಕಲುತನ ನಡುವೆ ಬ್ರೇಕ್‌ ಆಗಿದೆ. ಕೇವಲ 330 ಮಿ.ಮೀ. ಮಳೆ ಕಡಿಮೆ ಬೀಳುವ ರಾಜ್ಯವಾದ ರಾಜಸ್ಥಾನದಲ್ಲಿ ಹೈನುಗಾರಿಕೆ ಹೆಚ್ಚಿದೆ. ಕಾರಣ ರಾಜಸ್ಥಾನ ರೈತರು ಜೋಳವನ್ನು ಮುಖ್ಯ ಭಾಗವಾಗಿ ಬೆಳೆಯುತ್ತಾರೆ. ರಾಜಸ್ಥಾನ ರೈತರು ಜೋಳದ ಮೇವಿಗೆ ಬಹಳ ಒತ್ತು ಕೊಡುತ್ತಾರೆ. 1951-60 ಅವಧಿಯಲ್ಲಿ ರಾಜಸ್ಥಾನದಲ್ಲಿ ಕೇವಲ 9.60 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬೆಳೆಯುತ್ತಿದ್ದರು. ಈಗಲೂ ಆ ರಾಜ್ಯದಲ್ಲಿ ಸ್ಥಿರವಾಗಿದೆ ಮತ್ತು ಬೆಳೆಯುವ ವಿಸ್ತೀರ್ಣ ಹೆಚ್ಚಾಗಿದೆ. 2021-2025ರ ಅವಧಿಯಲ್ಲಿ 10.84 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಈಗ ಜೋಳ ಬೆಳೆಯಲಾಗುತ್ತಿದೆ. ಜಾನುವಾರುಗಳ ಸಂಖ್ಯೆಯಲ್ಲೂ ರಾಜಸ್ಥಾನ ಮುಂದಿದೆ. ಕರ್ನಾಟಕದಲ್ಲಿ ಸುಮಾರು 700 ಮಿ.ಮೀ ವರೆಗೂ ಮಳೆಯಾದರೂ ಜಾನುವಾರುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಯುತ್ತಲೇ ಇದೆ” ಎಂದು ಬಿ ಡಿ ಬಿರಾದರ್ ಹೇಳಿದರು.

ಮೇವು
ಜೋಳದ ಮೇವು

ಮಾರುಕಟ್ಟೆಯ ಶಕ್ತಿಗಳ ಆಟಕ್ಕೆ ಜೋಳ ಬಲಿ

“ಜೋಳ ಬೆಳೆ ಎಂಬುದು ಸುಸ್ಥಿರ ಕೃಷಿಯ ಭಾಗವಾಗಿದೆ. ಸಿರಿಧಾನ್ಯಗಳಲ್ಲಿ ಜೋಳ ಕೂಡ ಒಂದು. ಜೋಳಕ್ಕೆ ಯಾವುದೇ ರಾಸಾಯನಿಕ ಸಿಂಪಡನೆಯ ಅವಶ್ಯಕತೆ ಇರುವುದಿಲ್ಲ. ಆದರೆ ಸರ್ಕಾರದ ರಕ್ಷಣೆ ಜೋಳಕ್ಕೆ ಇಲ್ಲವಾಗಿದೆ. ಬೆಂಬಲ ಬೆಲೆ ಎಂಬುದು ಈ ಬೆಳೆಗೆ ಸಿಕ್ಕೇ ಇಲ್ಲ. ಬೆಳೆ ವಿಜ್ಞಾನಿಗಳಿಂದ ಜೋಳದ ಉತ್ತಮ ತಳಿಗಳು ಇನ್ನೂ ಸೃಷ್ಟಿಯಾಗಬೇಕಿದೆ. ಜೋಳ ಕಟಾವಿಗೆ ವೈಜ್ಞಾನಿಕವಾದ ಯಂತ್ರಗಳು ಸೃಷ್ಟಿಯಾಗಿಲ್ಲ. ಕೂಲಿಕಾರರ ಸಮಸ್ಯೆ ಹೆಚ್ಚಿದೆ. ಇಷ್ಟೆಲ್ಲ ಸಮಸ್ಯೆಗಳ ನಡುವೆ ಮಾರುಕಟ್ಟೆಯ ಶಕ್ತಿಗಳು ಜೋಳದ ಬೆಳೆಯ ಪ್ರದೇಶವನ್ನು ವ್ಯವಸ್ಥಿತವಾಗಿ ತಗ್ಗಿಸಿವೆ. ಜೋಳ ಬೆಳೆಯುವ ಪ್ರದೇಶದಲ್ಲಿ ಕಾರ್ಪೋರೇಟ್‌ ಕಂಪನಿಗಳು ಬಿ ಟಿ ಹತ್ತಿ ಮತ್ತು ಮೆಕ್ಕೆಜೋಳವನ್ನು ಹೆಚ್ಚಾಗಿ ಪ್ರಮೋಟ್‌ ಮಾಡುತ್ತಿವೆ. ಇದರಿಂದಾಗಿ ಒಳ್ಳೆಯ ಆಹಾರ ಬೆಳೆಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಸರ್ಕಾರದಿಂದ ರಕ್ಷಣೆ ಸಿಕ್ಕಾಗ ಮಾತ್ರ ಜೋಳ ಬೆಳೆ ಉಳಿಯಲು ಸಾಧ್ಯ” ಎನ್ನುತ್ತಾರೆ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ ಎನ್‌ ಪ್ರಕಾಶ್‌ ಕಮ್ಮರಡಿ.

ಪ್ರಕಾಶ್‌ ಕಮ್ಮರಡಿ 1
ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ ಎನ್‌ ಪ್ರಕಾಶ್‌ ಕಮ್ಮರಡಿ

ಜಮೀನನ್ನು ಲೀಸ್‌ಗೆ ಪಡೆದು ಭತ್ತ ಬೆಳೆ

“ಜೋಳ ಬೆಳೆಯ ವಿಸ್ತೀರ್ಣ ಕಡಿಮೆಯಾಗಲು ಜನಸಂಖ್ಯೆಯ ಬೆಳವಣಿಗೆ ಕೂಡ ಒಂದು ಕಾರಣ. ಜನಸಂಖ್ಯೆಯ ಅನುಗುಣವಾಗಿ ಭೂಮಿ ಹಂಚಿಕೆಯಾಗುತ್ತಿದೆ ಹೊರತು ವಿಸ್ತರಣೆಯಾಗುತ್ತಿಲ್ಲ. ಕೃಷಿ ವಲಯದ ಭೂಮಿಗಳಲ್ಲಿ ನಗರ ಪ್ರದೇಶ ವಿಸ್ತರಣೆಯಾಗುತ್ತಿದೆ. ಅಭಿವೃದ್ಧಿ ಹೆಸರಲ್ಲಿ ಭೂಮಿಯ ಬಳಕೆ ಹಿಂದಿಗಿಂತ ಈಗ ಹೆಚ್ಚಿದೆ. ‘ಲ್ಯಾಂಡ್‌ ಬ್ಯಾಂಕ್’‌ ಮಾಫಿಯಾ ಜೋರಾಗಿದೆ. 1950ರಲ್ಲಿ ನೀರಾವರಿ ಪ್ರದೇಶ ಬಹಳ ಕಡಿಮೆ ಇತ್ತು. ನಂತರದಲ್ಲಿ ಅಣೆಕಟ್ಟುಗಳ ನಿರ್ಮಾಣ, ಏತ ನೀರಾವರಿ, ಬೋರ್ ವೆಲ್, ಕೃಷಿ ಹೊಂಡಗಳಿಂದ ನೀರಿನ ಸೌಲಭ್ಯ ಹೆಚ್ಚಾಗಿ ಸಿರಿಧಾನ್ಯ ಬೆಳೆಗಳು ಕಣ್ಮರೆಯಾಗುತ್ತ ಬಂದಿವೆ. ವಾಣಿಜ್ಯ ಬೆಳೆಗಳೇ ಕೃಷಿಯಲ್ಲಿ ಪ್ರಧಾನ ಬೆಳೆಗಳಾಗಿವೆ. ಹಿಂದೆ ವರ್ಷಕ್ಕೆ ಎರಡು ಬೆಳೆ ತೆಗೆದರೆ ಹೆಚ್ಚು ಇತ್ತು. ತರಕಾರಿ ಬೆಳೆದರೆ ವರ್ಷಕ್ಕೆ ನಾಲ್ಕು ಬೆಳೆಗಳನ್ನು ತೆಗೆಯಬಹುದು. ಇದರಿಂದ ಆದಾಯವೂ ಬರುತ್ತದೆ. ಹೀಗಾಗಿ ನಮ್ಮ ಬೆಳಗಾವಿ ಭಾಗದಲ್ಲಿ ಜೋಳ ಹಿಂದಿನಷ್ಟು ಬೆಳೆಯಲು ರೈತರು ಮುಂದೆ ಬರುತ್ತಿಲ್ಲ” ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ತಿಳಿಸಿದರು.

ಮುಂದುವರಿದು, “ಜಮೀನನ್ನು ಲೀಸ್‌ ತೆಗೆದುಕೊಳ್ಳುವ ಪಕ್ಕಾ ವ್ಯವಹಾರ ಕೇಂದ್ರಿತ ವ್ಯವಸ್ಥೆ ಕರ್ನಾಟಕದಲ್ಲಿದೆ. ಮೈಸೂರು, ಮಂಡ್ಯ, ಚಾಮರಾಜನಗರ ಭಾಗದಲ್ಲಿ ಕೇರಳದವರು ಬಂದು ಜಮೀನನ್ನು ಲೀಸ್‌ಗೆ ಪಡೆದು ತಮ್ಮ ಇಷ್ಟದ ಬೆಳೆ ಬೆಳೆಯುತ್ತಾರೆ. ಆಂಧ್ರ ಪ್ರದೇಶದ ರೈತರು ಗಂಗಾವತಿ ಭಾಗದಲ್ಲಿ ವಲಸೆ ಬಂದು ಅಲ್ಲಿಯ ರೈತರ ಸಾಗುವಳಿ ಜಮೀನನ್ನು ಲೀಸ್‌ಗೆ ಪಡೆದು ಭತ್ತ ಬೆಳೆಯುತ್ತಾರೆ. ಆಂಧ್ರ ಪ್ರದೇಶದಲ್ಲಿ ಭತ್ತವೇ ಪ್ರಮುಖ ಆಹಾರ ಬೆಳೆ. ಅಷ್ಟೇ ಅಲ್ಲ ಆಫ್ರಿಕಾ ದೇಶಗಳಿಗೂ ಆಂಧ್ರ ಪ್ರದೇಶದ ಬಲಾಢ್ಯ ರೈತರು ಹೋಗಿ ಕೃಷಿ ಮಾಡಿರುವ ಉದಾಹರಣೆಗಳು ಇವೆ” ಎಂದು ಹೇಳಿದರು.

ಸಿದಗೌಡ ಮೋದಗಿ
ಸಿದಗೌಡ ಮೋದಗಿ, ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷರು

ಜಾನುವಾರು ರಾಜಕಾರಣಕ್ಕೆ ಬೆದರಿದ ರೈತ

“ಕೇವಲ ಜೋಳ ಬೆಳೆ ಕಡಿಮೆಯಾದ ಮಾತ್ರಕ್ಕೆ ಜಾನುವಾರುಗಳ ಸಂಖ್ಯೆ ಕಡಿಮೆಯಾಗಿಲ್ಲ. ಈ ಸತ್ಯವನ್ನು ಪೂರ್ಣ ಅಲ್ಲಗಳೆಯಲೂ ಆಗುವುದಿಲ್ಲ. ಈಗ ಮೇವು ಸಂಗ್ರಹಣೆ ಎಂಬುದು ರೈತರಿಗೆ ದೊಡ್ಡ ಸವಾಲಾಗಿದೆ. ಎರಡು ಎಕರೆ ಭೂಮಿ ಇದ್ದರೆ ಮಾತ್ರ ಬಣವಿಗಳನ್ನು ಮಾಡಿಕೊಳ್ಳಬಹುದು. ಎರಡು ಎತ್ತು ಇದ್ದರೆ ದಿನಕ್ಕೆ ಒಂದು ಬಂಡಿ ಮೇವು ಬೇಕಾಗುತ್ತದೆ. ಮಳೆಗಾಲದಲ್ಲಿ ಎತ್ತುಗಳಿಗೆ ಅಷ್ಟು ಮೇವು ಎಲ್ಲಿಂದ ತರುವುದು? ಒಕ್ಕಲುತನಕ್ಕೆ ಟ್ರ್ಯಾಕ್ಟರ್‌ಗಳ ಮೊರೆ ಹೋಗುವುದು ಹೆಚ್ಚಾಗಿದೆ. ಇದರಿಂದ ಎತ್ತುಗಳ ಸಂಖ್ಯೆಯಲ್ಲೂ ಇಳಿಮುಖವಾಗುತ್ತಿದೆ. ಹಾಗೆಯೇ ಜಾನುವಾರು ರಾಜಕಾರಣಕ್ಕೆ ರೈತರು, ಜನಸಾಮಾನ್ಯರು ಹೆದರಿದ್ದಾರೆ. ಒಂದು ದಿನವಾದರೂ ಹೊಲದಲ್ಲಿ ದುಡಿಯದ ಸ್ವಯಂಘೋಷಿತ ಗೋ ರಕ್ಷಕರ ಉಪಟಳ ಈಗ ಎಲ್ಲ ಕಡೆ ಇದೆ. ಇದಕ್ಕೆ ಅಂಟಿಕೊಂಡ ಮತರಾಜಕಾರಣ ಸಕ್ರಿಯವಾಗಿದೆ. ಜಾನುವಾರುಗಳ ಮಾರಾಟ ಮಾಡುವುದು, ಕಸಾಯಿ ಖಾನೆಗೆ ಕಳಿಸುವುದು ಒಂದು ರೀತಿಯಲ್ಲಿ ಅಪರಾಧ ಎಂಬ ಮನೋಭಾವ ಜನರ ಮನಸಲ್ಲಿ ಮೂಡಿದೆ. ‘ದನದ ಮಾಂಸ’ ಪದ ಕೇಳಿದರೆ ಸಾಕು ದ್ವೇಷ ರಾಜಕಾರಣವೇ ಸಮಾಜದಲ್ಲಿ ಮೇಲೆದ್ದು ಕುಳಿತು ಬಿಡುತ್ತದೆ. ಹಸುಗಳ ಸಾಕಣೆ ಸಹವಾಸ ಯಾಕೆ ಬೇಕು ಎನ್ನುವ ವ್ಯವಸ್ಥೆಯ ಕ್ರೌರ್ಯ ರೈತರಿಗೆ ಭಯ ತರಿಸಿದೆ. ಹೀಗಾಗಿ ಜಾನುವಾರು ರಾಜಕಾರಣದಿಂದಾಗಿಯೂ ದನಕರುಗಳ ಸಂಖ್ಯೆ ಇಳಿಮುಖವಾಗುತ್ತಿದೆ” ಎಂದು ಮೋದಗಿ ಅವರು ವಿಶ್ಲೇಷಿಸಿದರು.

ತಿನ್ನಲು ಅಷ್ಟೇ ಈಗ ಜೋಳ ಬಳಕೆ

“ನಾವೆಲ್ಲ ಸಣ್ಣವರಿದ್ದಾಗ ಬೆಳಿಗ್ಗೆ ಎದ್ದು ಕೂಡಲೇ ಊಟ ಆಯ್ತು ಏನ್ರಿ ಅಂತ ಕೇಳುವ ಸಂಪ್ರದಾಯ ಇತ್ತು. ಊಟ ಅಂದ್ರೆ ಅದು ಜೋಳದ ರೊಟ್ಟಿ ಊಟವೇ ಆಗಿರುತ್ತಿತ್ತು. ಆದರೆ ಈಗ ಚಹಾ ಆಯ್ತು ಏನ್ರಿ… ನಾಸ್ಟಾ ಆಯ್ತು ಏನ್ರಿ… ಅಂತ ಕೇಳುವ ರೂಢಿ ಬಂದಿದೆ. ಆಗ ವಾರಪೂರ್ತಿ ಜೋಳದ ರೊಟ್ಟಿಯ ಊಟವೇ ಎಲ್ಲ ಮನೆಗಳಲ್ಲೂ ಇರುತ್ತಿತ್ತು. ಹಬ್ಬ ಹರಿದಿನಗಳಲ್ಲಿ ಮಾತ್ರ ಅನ್ನವನ್ನು ಬಳಸಲಾಗುತ್ತಿತ್ತು. ಈಗ ಅನ್ನ ಇಲ್ಲದ ಊಟವೇ ಇಲ್ಲ. ಜೊತೆಗೆ ರೊಟ್ಟಿ ಬದಲು ಚಪಾತಿ ಬಂದು ಸೇರಿದೆ. ಅಡುಗೆ ಮನೆಯಲ್ಲಿ ಜೋಳದ ಬಳಕೆ ಅರ್ಧಕ್ಕೆ ಅರ್ಧ ಕಡಿಮೆಯಾಗಿದೆ. ಹೀಗೆ ಹಂತ ಹಂತವಾಗಿ ಜೋಳ ನಮ್ಮಿಂದ ದೂರವಾಗುತ್ತಿದೆ” ಎಂದು ಗದಗ ಜಿಲ್ಲೆಯ ಹರ್ಲಾಪುರ ಗ್ರಾಮದ ರೈತ ಮಹಿಳೆ ಸುಮಂಗಲಾ ಧರ್ಮಾಯತ ಹೇಳಿದರು.

“ಜೋಳ ಬೆಳೆದರೆ ಆದಾಯ ಬರುತ್ತದೆ ಎಂಬ ಯಾವ ಭರವಸೆಯೂ ಈಗಿಲ್ಲ. ಐದು ವರ್ಷದ ಹಿಂದೆ 5,500 ರೂ.ಗೆ ಕ್ವಿಂಟಲ್‌ ಜೋಳ ಮಾರಿದ್ದೆ. ಮರಳಿ ಆ ದರ ನಮಗೆ ಸಿಕ್ಕೇ ಇಲ್ಲ. ಈಗ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಜೋಳಕ್ಕೆ 2000 ಇದೆ. ಜೋಳ ಬೆಳೆದರೆ ತೆನೆ ಕೊಯ್ಯಬೇಕು, ದಂಟು ಕೀಳಬೇಕು, ಸಣ್ಣ ಸಣ್ಣ ಸಿವುಡು ಕಟ್ಟಬೇಕು. ನಂತರ ಒಂದು ಕಡೆ ಕೂಡಿಹಾಕಬೇಕು. ಒಟ್ಟಾರೆ ತುಂಬಾ ಶ್ರಮ ಬೇಡುವ ಬೆಳೆಯಿದು. ಹೀಗಾಗಿ ತಿನ್ನಲು ಎಷ್ಟು ಬೇಕೋ ಅಷ್ಟು ಈಗ ಜೋಳವನ್ನು ರೈತರು ಬೆಳೆಯುತ್ತಿದ್ದಾರೆ. ಕಡಲೆ ಹಾಕಿ ಸುತ್ತಲೂ ಜೋಳ ಹಾಕಿದರೆ ಕಡಲೆ ಲಾಭವೂ ತಂದುಕೊಡುತ್ತದೆ. ಅತ್ತ ತಿನ್ನಲು ಜೋಳವೂ ಆಗುತ್ತದೆ. ಕಡಲೆ ಸುತ್ತಲೂ ಜೋಳ ಹಾಕುವುದರಿಂದ ಕಡಲೆಗೆ ರಕ್ಷಣೆಯೂ ಸಿಕ್ಕಂತಾಗುತ್ತದೆ” ಎಂದು ಹೇಳಿದರು.

(ಹೊಲದಲ್ಲಿ ಜೋಳ ಕೀಳುತ್ತಿರುವ ರೈತರ ವಿಡಿಯೋ) 

ಭವಿಷ್ಯದ ದೃಷ್ಟಿಯಿಂದ ಒಕ್ಕಲುತನ, ದನಕರುಗಳನ್ನು ಅವಲಂಭಿಸಿದ ಸಣ್ಣ ಸಣ್ಣ ಉದ್ಯಮಗಳು ಹಾಗೂ ಜನರ ಆಹಾರ ವಿಚಾರವಾಗಿ ಜೋಳ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿರುವುದು ಖಂಡಿತ ಆತಂಕ ಹುಟ್ಟಿಸುವ ಸಂಗತಿ.‌ ಜೋಳದಲ್ಲಿ ವಿಟಮಿನ್ ಬಿ3, ಬಿ1, ಬಿ2, ಖನಿಜಾಂಶಗಳು, ನಾರಿನಂಶ ಮತ್ತು ಪ್ರೊಟೀನ್‌ಗಳು ಸಮೃದ್ಧವಾಗಿವೆ. ಅವು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಇದರಲ್ಲಿರುವ ನಾರಿನಂಶವು ಸ್ನಾಯುಗಳನ್ನು ಬಲಗೊಳಿಸುತ್ತದೆ. ಪೋಷಕಾಂಶಗಳು ಚರ್ಮವನ್ನು ಆರೋಗ್ಯವಾಗಿಡುತ್ತವೆ ಎಂದು ತಜ್ಞರು ಹೇಳುತ್ತಾರೆ.

ದೇಶದ ಬೆನ್ನೆಲುಬಾದ ಅನ್ನದಾತರರಿಗೆ ಜೋಳ ಬೆಳೆಯ ಬಗ್ಗೆ ಸರ್ಕಾರಗಳು ಭತ್ತ ಮತ್ತು ಗೋಧಿಗೆ ಕೊಟ್ಟ ಪ್ರೋತ್ಸಾಹವನ್ನು ಜೋಳಕ್ಕೆ ಕೊಟ್ಟರೆ ರೈತರ ಹೊಲದಲ್ಲಿ ಮತ್ತೆ ಜೋಳ ತಲೆ ಎತ್ತಲಿದೆ. ಜಾನುವಾರುಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತದೆ. ಸರ್ಕಾರದ ಇಚ್ಛಾಶಕ್ತಿಯ ಮೇಲೆ ಇದೆಲ್ಲ ನಿಂತಿದೆ. ಶೇ.78ರಷ್ಟು ಜೋಳ ಬೆಳೆಯುವ ಪ್ರದೇಶ ರಾಜ್ಯದಲ್ಲಿ ಕಣ್ಮರೆಯಾಗಿರುವುದು ಸಾಮಾನ್ಯ ಸಂಗತಿಯಲ್ಲ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಿ ಕೃಷಿ ವಲಯವನ್ನು ಆದ್ಯತೆಯಾಗಿ ಪರಿಗಣಿಸಬೇಕಿದೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

Download Eedina App Android / iOS

X