ಬೆಳೆ ಬದಲಾವಣೆ | ಸಿರಿಧಾನ್ಯದ ಕಳವಳದ ಬೆಳವಣಿಗೆ – 75 ವರ್ಷದಲ್ಲಿ ಶೇ.93ರಷ್ಟು ಕುಗ್ಗಿದ ಬೆಳೆ ಪ್ರದೇಶ!

Date:

Advertisements

ಆಹಾರ ಬದುಕಿನ ಪ್ರಾಥಮಿಕ ಅವಶ್ಯಕತೆಗಳಲ್ಲಿ ಒಂದು. ಆಹಾರದಿಂದಲೇ ಆರೋಗ್ಯ. ಆಹಾರವೇ ಔಷಧಿ. ನಾವು ಆಯ್ಕೆ ಮಾಡಿಕೊಳ್ಳುವ ಆಹಾರ ಪದಾರ್ಥಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹೀಗಾಗಿ ನಮ್ಮ ಆಹಾರ ಪದ್ಧತಿ ಮತ್ತು ಜೀವನವಿಧಾನ ಬದಲಾಗಿರುವ ಹಿನ್ನೆಲೆಯಲ್ಲಿ ಉತ್ತಮ ಆರೋಗ್ಯಕ್ಕೆ ‘ಸಿರಿಧಾನ್ಯ’ಗಳ ಬಳಕೆ ಔಷಧವೂ ಹೌದು ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಆಹಾರ ಭದ್ರತೆ, ಪೌಷ್ಟಿಕತೆ ಹಾಗೂ ಆರೋಗ್ಯ ಸಮಸ್ಯೆಗಳ ಪರಿಹರಿಸುವಲ್ಲಿ ಸಿರಿಧಾನ್ಯಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ, ಕೆಲವು ದಶಕಗಳಿಂದ ಭಾರತದಲ್ಲಿ ಸಿರಿಧಾನ್ಯಗಳ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಹಸಿರುಕ್ರಾಂತಿಯ ಉದ್ದೇಶ ವಿದೇಶಗಳಿಂದ ಆಹಾರ ಆಮದು ನಿಲ್ಲಿಸಲು ಮತ್ತು ಸ್ವಾವಲಂಬಿಯಾಗಿ ಆಹಾರ ಉತ್ಪಾದನೆ ಮಾಡುವುದಾಗಿತ್ತು. ಹೀಗಾಗಿ ಭತ್ತ-ಗೋಧಿ ಬೆಳೆಗೆ ಆದ್ಯತೆ ಕೊಟ್ಟು ಆರೋಗ್ಯಸಂಪತ್ತು ಕಲ್ಪಿಸುವ ಸಿರಿಧಾನ್ಯಗಳನ್ನು ಬಹುತೇಕ ಕಡೆಗಣಿಸುತ್ತ ಬರಲಾಗಿದೆ.

ಸಿರಿಧಾನ್ಯಗಳು ಬಹುಕಾಲದಿಂದಲೂ ನಮ್ಮ ಸಾಂಪ್ರದಾಯಿಕ ಆಹಾರದ ಭಾಗವಾಗಿದ್ದವು. ಪ್ರಾಚೀನ ಕವಿಗಳು ಕೂಡ ಸಿರಿಧಾನ್ಯಗಳ ಆಹಾರ ಕ್ರಮದ ಬಗ್ಗೆ ಉಲ್ಲೇಖಿಸಿದ್ದಾರೆ. ಕವಿ ಸರ್ವಜ್ಞನ ವಚನಗಳಲ್ಲಿ ‘ಧಾನ್ಯ’ ಗಮನ ಸೆಳೆಯುತ್ತದೆ. “ರಾಗಿಯನ್ನು ಉಂಬುವ ನಿರೋಗಿ ಎಂದೆನಿಸುವನು…” ಹಾಗೂ “ನವಣೆಯನುತಿಂಬುವನು ಹವಣಾಗಿ ಇರುತಿಹನು…” ವಚನಗಳೇ ಸಾಕ್ಷಿಯಾಗಿವೆ. ಕನಕದಾಸರು ಅಕ್ಕಿ ಮತ್ತು ರಾಗಿಯ ನಡುವೆ ರಾಗಿಯನ್ನು ಕೊಂಡಾಡುವ ಪದವೇ ಉಂಟು.

Advertisements

ಆಹಾರ ಪದಾರ್ಥಗಳಲ್ಲಿ ಸಿರಿಧಾನ್ಯಗಳೇ ಅತ್ಯಂತ ಪುರಾತನ ಆಹಾರ. ರಾಗಿ, ಜೋಳ, ಸಜ್ಜೆ, ನವಣೆ, ಸಾಮೆ, ಹಾರಕ, ಬರಗು, ಕೊರಲೆ, ಊದಲು ಇವು ಸಿರಿಧಾನ್ಯಗಳು. ‘ಸಿರಿ’ ಎಂದರೆ ಸಂಪತ್ತು. ‘ಧಾನ್ಯ’ ಎಂದರೆ ಕಾಳುಗಳು. ಪೌಷ್ಟಿಕಾಂಶಗಳು ಮತ್ತು ಸಮೃದ್ಧ ನಾರಿನ ಅಂಶದ ಸಂಪತ್ತಿನಿಂದ ಕೂಡಿದ ಕಾಳುಗಳೇ ಸಿರಿಧಾನ್ಯಗಳು. ಈ ಧಾನ್ಯಗಳು ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಇವುಗಳನ್ನು ಕಿರುಧಾನ್ಯ ಅಥವಾ ತೃಣ ಧಾನ್ಯ ಎಂತಲೂ ಕರೆಯುತ್ತಾರೆ. ಒಂದೊಂದು ಕಿರುಧಾನ್ಯಕ್ಕೂ ಅವುಗಳದ್ದೇ ಆದ ಸ್ವಂತ ರುಚಿಯಿದೆ.

ಜಗತ್ತಿನಾದ್ಯಂತ ಸಾವಿರಕ್ಕೂ ಮೇಲ್ಪಟ್ಟು ಬೇರೆ ಬೇರೆ ಧಾನ್ಯಗಳನ್ನು ಬೆಳೆಯಲಾಗುತ್ತದೆ. ಆದರೆ, ಸಿರಿಧಾನ್ಯ ಬೆಳೆಯುವ ದೇಶಗಳಲ್ಲಿ ಭಾರತ ಈಗಲೂ ಅಗ್ರಸ್ಥಾನದಲ್ಲಿದೆ. 2022ರ ಅಂಕಿ-ಅಂಶಗಳ ಪ್ರಕಾರ ಜಗತ್ತಿನಲ್ಲೇ ಅತಿ ಹೆಚ್ಚು ಅಂದರೆ ಶೇ.38ರಷ್ಟು ಪ್ರಮಾಣದಲ್ಲಿ ಸಿರಿಧಾನ್ಯ ಉತ್ಪಾದನೆ ಭಾರತದಲ್ಲಾಗುತ್ತಿದೆ. ಆದರೆ, ಇತ್ತೀಚಿನ ದಶಕಗಳಲ್ಲಿ ಭಾರತದಲ್ಲೂ ಸಿರಿಧಾನ್ಯ ಬೆಳೆಯುವ ಪ್ರಮಾಣ ಮತ್ತು ಉತ್ಪಾದನೆ ಗಣನೀಯವಾಗಿ ಕುಸಿದಿದೆ.

ಈ ಸ್ಟೋರಿ ಓದಿದ್ದೀರಾ? ಬೆಳೆ ಬದಲಾವಣೆ | ರಾಜ್ಯದಲ್ಲಿ ಶೇ.78ರಷ್ಟು ಜೋಳ ಬೆಳೆಯುವ ಪ್ರದೇಶ ಕಣ್ಮರೆ, ಕುಸಿತಕ್ಕೆ ಕಾರಣವೇನು?

ಮೇಲ್ನೋಟಕ್ಕೆ ರಾಗಿ, ಜೋಳ ಎರಡೂ ಹೆಚ್ಚು ಬಳಕೆಯ ಸಿರಿಧಾನ್ಯಗಳ ಗುಂಪಿಗೆ ಸೇರಿವೆ. ಆದರೆ ನವಣೆ, ಸಾಮೆ, ಹಾರಕ, ಸಜ್ಜೆ, ಕೊರಲೆ, ಬರಗು ಹಾಗೂ ಊದಲು ಧಾನ್ಯಗಳೇ ನಿಜ ಸಿರಿಧಾನ್ಯಗಳು ಎಂಬ ಭಾವನೆಯಿದೆ. ಈ ಎಲ್ಲ ಬೆಳೆಗಳನ್ನು ಒಳಗೊಂಡ ಸಿರಿಧಾನ್ಯ ಬೇಸಾಯವನ್ನು ಭಾರತದಲ್ಲಿ 1952-53ರ ಅವಧಿಯಲ್ಲಿ ಸುಮಾರು 356.19 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಮಾಡಲಾಗುತ್ತಿತ್ತು. ಆಗ ದೇಶದ ಜನಸಂಖ್ಯೆ 36.1 ಕೋಟಿ ಇತ್ತು. ಉತ್ಪಾದನೆ 139.38 ಲಕ್ಷ ಟನ್‌ ಇತ್ತು. ಬದಲಾದ ಆಹಾರ ಪದ್ಧತಿಯಿಂದ ಸಿರಿಧಾನ್ಯಗಳ ಉತ್ಪಾದಕತೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. 2022-23ರ ಹೊತ್ತಿಗೆ ಕೇವಲ 138 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಏಳು ದಶಕದ ಅವಧಿಯಲ್ಲಿ ತಗ್ಗಿರುವ ಸಿರಿಧಾನ್ಯ ಬೆಳೆಯ ಒಟ್ಟು ಪ್ರದೇಶ ಶೇ.61.25ರಷ್ಟು!

ಸಿರಿಧಾನ್ಯ ಸ್ಟೋರಿ 1 1

ಶೇ.93 ರಷ್ಟು ಸಿರಿಧಾನ್ಯ ಬೆಳೆಯುವ ಭೂಮಿ ಕಣ್ಮರೆ

ಜೋಳ, ರಾಗಿ, ಸಜ್ಜೆ ಹೊರತುಪಡಿಸಿ ಭಾರತದಲ್ಲಿ 1950-1960 ದಶಕದಲ್ಲಿ 56.77 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿತ್ತು. ಉತ್ಪಾದನೆ 24.77 ಲಕ್ಷ ಟನ್‌ ಇತ್ತು. 2024ರ ಹೊತ್ತಿಗೆ ದೇಶದಲ್ಲಿ 3.55 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಸಿರಿಧಾನ್ಯ ಬೆಳೆಯಲಾಗಿದೆ. ಉತ್ಪಾದನೆ 3.15 ಲಕ್ಷ ಟನ್‌ಗೆ ಇಳಿಕೆಯಾಗಿದೆ. 75 ವರ್ಷದಲ್ಲಿ ಶೇ.93.74 ರಷ್ಟು ಸಿರಿಧಾನ್ಯ ಬೆಳೆಯುವ ಭೂಮಿ ದೇಶದಲ್ಲಿ ಕಣ್ಮರೆಯಾಗಿದ್ದು, ಶೇ.87.28 ರಷ್ಟು ಉತ್ಪಾದನೆ ಕುಸಿತವಾಗಿದೆ.

ಭಾರತದಲ್ಲಿ ಸಿರಿಧಾನ್ಯ

ಶೇ.59 ರಷ್ಟು ರಾಗಿ ಬೆಳೆಯುವ ಭೂಮಿ ಮಾಯ

1950-1960ರ ಅವಧಿಯಲ್ಲಿ ರಾಗಿಯನ್ನು ದೇಶದಲ್ಲಿ 25.4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. 19.5 ಲಕ್ಷ ಟನ್‌ ಉತ್ಪಾದನೆ ಇತ್ತು. 2024ರ ಹೊತ್ತಿಗೆ 10.23 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ರಾಗಿ ಬೆಳೆಯಲಾಗಿದ್ದು, 13.9 ಲಕ್ಷ ಟನ್‌ ಉತ್ಪಾದನೆ ಇದೆ. 75 ವರ್ಷದಲ್ಲಿ ಶೇ.59.72ರಷ್ಟು ರಾಗಿ ಬೆಳೆಯುವ ಭೂಮಿ ಮಾಯವಾಗಿದ್ದು, ಉತ್ಪಾದನೆಯ ಶೇ.28.71ರಷ್ಟು ಇಳಿಕೆ ಕಂಡಿದೆ.

ರಾಗಿ 2

ಸಜ್ಜೆ ಬೆಳೆಯುವ ಶೇ.43 ರಷ್ಟು ಭೂಮಿ ಕಾಣೆಯಾಗಿದೆ!

1950-1960ರ ದಶಕದಲ್ಲಿ ಸಜ್ಜೆಯನ್ನು 122 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಆಗ 45.5 ಲಕ್ಷ ಟನ್‌ ಉತ್ಪಾದನೆ ಇತ್ತು. 2022-22ರ ಹೊತ್ತಿಗೆ 68.41 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಸಜ್ಜೆ ಬೆಳೆಯಲಾಗಿದ್ದು, 97.81 ಲಕ್ಷ ಟನ್‌ ಉತ್ಪಾದನೆಯಾಗಿದೆ. 72 ವರ್ಷದ ಅಂತರದಲ್ಲಿ ಶೇ.43.92ರಷ್ಟು ಸಜ್ಜೆ ಬೆಳೆಯುವ ಭೂಮಿ ಕಾಣೆಯಾಗಿದ್ದು, ಶೇ.3.47ರಷ್ಟು ಉತ್ಪಾದನೆ ಕುಂಠಿತವಾಗಿದೆ.

ಭಾರತದಲ್ಲಿ ಸಜ್ಜೆ

ಶೇ.76 ರಷ್ಟು ಕುಗ್ಗಿದ ಜೋಳದ ಪ್ರದೇಶ

ಭಾರತದಲ್ಲಿ 1950-60ರ ಅವಧಿಯಲ್ಲಿ 184.1 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಜೋಳ ಬೆಳೆಯಲಾಗುತ್ತಿತ್ತು. ಆಗ ಉತ್ಪಾದನೆಯ ಪ್ರಮಾಣ ಸುಮಾರು 98.1 ಲಕ್ಷ ಟನ್‌ ಇತ್ತು. ಆದರೆ, 2020ರ ಹೊತ್ತಿಗೆ ಕೇವಲ 43.8 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಜೋಳ ಬೆಳೆಯಲಾಗಿದೆ. ಏಳು ದಶಕದ ಅವಧಿಯಲ್ಲಿ ಶೇ.76 ರಷ್ಟು ಜೋಳ ಬೆಳೆಯುವ ಪ್ರದೇಶ ಕುಗ್ಗಿದ್ದು, ಶೇ.50ರಷ್ಟು ಉತ್ಪಾದನೆಯೂ ಕುಸಿತವಾಗಿದೆ.

ಭಾರತದಲ್ಲಿ ಜೋಳ 1

ಕರ್ನಾಟಕದ ಸಿರಿಧಾನ್ಯ ಚಿತ್ರಣ ಹೇಗಿದೆ?

ಕರ್ನಾಟಕ ವಿಚಾರದಲ್ಲೂ ಸಿರಿಧಾನ್ಯ ಬೆಳೆಯುವ ಪ್ರಮಾಣ ಮತ್ತು ಉತ್ಪಾದನೆ ಉತ್ತಮವಾಗಿಲ್ಲ. ರಾಜ್ಯದ ಜನಸಂಖ್ಯೆ 1.39 ಕೋಟಿ ಇದ್ದ 1952-53ರ ಅವಧಿಯಲ್ಲಿ ಸಿರಿಧಾನ್ಯಗಳನ್ನು 42.23 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಆಗ ಉತ್ಪಾದನೆ 15.59 ಲಕ್ಷ ಟನ್‌ ಇತ್ತು. ಈಗ 7 ಕೋಟಿ ಜನಸಂಖ್ಯೆ ಹೊಂದಿರುವ ಕರ್ನಾಟಕದಲ್ಲಿ 2022-23ರ ಹೊತ್ತಿಗೆ ಕೇವಲ 15.62 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ. 20.42 ಲಕ್ಷ ಟನ್‌ ಉತ್ಪಾದನೆ ಇದೆ. ಕೇವಲ ಶೇ. 4.83ರಷ್ಟು ಉತ್ಪಾದನೆ ಹೆಚ್ಚಾಗಿದ್ದರೂ ಶೇ.63ರಷ್ಟು ಸಿರಿಧಾನ್ಯ ಬೆಳೆಯುವ ಪ್ರದೇಶ ಕರ್ನಾಟಕದಲ್ಲಿ ಕಣ್ಮರೆಯಾಗಿದೆ.

ಕರ್ನಾಟಕ ಸಿರಿಧಾನ್ಯ ಸ್ಟೋರಿ

ರಾಜ್ಯದಲ್ಲಿ ಸಿರಿಧಾನ್ಯ 4.56 ಲಕ್ಷ ಹೆಕ್ಟೇರ್‌ದಿಂದ 35 ಸಾವಿರ ಹೆಕ್ಟೇರ್‌ಗೆ ಇಳಿಕೆ

ರಾಜ್ಯದಲ್ಲಿ ಜೋಳ, ಸಜ್ಜೆ, ರಾಗಿ ಹೊರತು ಪಡಿಸಿ ಉಳಿದ ಸಿರಿಧಾನ್ಯಗಳಾದ ನವಣೆ, ಸಾಮೆ, ಹಾರಕ, ಬರಗು, ಕೊರಲೆ, ಊದಲು ಬೆಳಗಳನ್ನು 1961-62ರ ವೇಳೆ 4.56 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. 2022-23ರ ಹೊತ್ತಿಗೆ ಕೇವಲ 35 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ಇಳಿಕೆಯಾಗಿದೆ. ಆರು ದಶಕದಲ್ಲಿ 4.21 ಲಕ್ಷ ಹೆಕ್ಟೇರ್‌ ಭೂಮಿ (ಶೇ.92ರಷ್ಟು) ಸಿರಿಧಾನ್ಯ ಬೆಳೆಯಿಂದ ಮುಕ್ತವಾಗಿದೆ. 60ರ ದಶಕದಲ್ಲಿ 1.64 ಲಕ್ಷ ಟನ್‌ ಇದ್ದ ಉತ್ಪಾದನೆ ಈಗ ಕೇವಲ 16 ಸಾವಿರ ಟನ್‌ಗೆ ಇಳಿಕೆಯಾಗಿದೆ.

ಕರ್ನಾಟಕದಲ್ಲಿ ರಾಗಿ: ರಾಜ್ಯದೊಳಗೆ 1952-53ರಲ್ಲಿ ರಾಗಿಯನ್ನು 7.45 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಆಗ 2.97 ಲಕ್ಷ ಟನ್‌ ಉತ್ಪಾದನೆ ಇತ್ತು. 2022-23ರ ಹೊತ್ತಿಗೆ 8.29 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬೆಳೆಯಲಾಗುತ್ತಿದೆ. 11.28 ಲಕ್ಷ ಟನ್‌ ಉತ್ಪಾದನೆ ಇದೆ. ಬೇರೆ ಸಿರಿಧಾನ್ಯ ಬೆಳೆಗಳಿಗೆ ಹೋಲಿಸಿಕೊಂಡರೆ ರಾಗಿ ಬೆಳೆಯ ಉತ್ಪಾದನೆ ವಿಸ್ತೀರ್ಣ ಕಡಿಮೆಯಾಗಿಲ್ಲ. ಆದರೆ ಜನಸಂಖ್ಯೆ ದೃಷ್ಟಿಯಿಂದ ರಾಗಿಯ ಇಳುವರಿಯಲ್ಲಿ ಮಹತ್ತರ ಸಾಧನೆ ಕಂಡುಬಂದಿಲ್ಲ. ರಾಗಿ ಲಕ್ಷ್ಮಣಯ್ಯ ಅವರ ನಂತರ ರಾಗಿ ಇಳುವರಿ ಸಂಶೋಧನೆ ದೊಡ್ಡ ಮೈಲಿಗಲ್ಲನ್ನು ಕಾಣದೆ ಹೋಗಿದೆ.

ಕರ್ನಾಟಕದಲ್ಲಿ ಸಜ್ಜೆ: 1952-53ರಲ್ಲಿ 4.22 ಲಕ್ಷ ಹೆಕ್ಟೇರ್‌ನಲ್ಲಿ ಸಜ್ಜೆಯನ್ನು ಬೆಳೆಯಲಾಗುತ್ತಿತ್ತು. ಆಗ 1 ಲಕ್ಷ ಟನ್‌ಗಿಂತಲೂ ಹೆಚ್ಚು ಉತ್ಪಾದನೆ ಇತ್ತು. 2020-21ರಲ್ಲಿ 2.22 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸಜ್ಜೆ ಬೆಳೆಯಲಾಗಿದ್ದು, 2.75 ಲಕ್ಷ ಟನ್‌ ಉತ್ಪಾದನೆ ಇದೆ. ಆದರೆ, 2022-23ರ ಹೊತ್ತಿಗೆ 1.31 ಲಕ್ಷ ಟನ್‌ ಹೆಕ್ಟೇರ್‌ ಭೂಮಿಯಲ್ಲಿ ಸಜ್ಜೆ ಬೆಳೆಯಲಾಗಿದೆ. 1.79 ಲಕ್ಷ ಟನ್‌ ಉತ್ಪಾದನೆ ಕಂಡುಬಂದಿದೆ. ಒಂದೇ ವರ್ಷದಲ್ಲೇ ದೊಡ್ಡ ಕುಸಿತ ಕಂಡಿದೆ.

ಕರ್ನಾಟಕದಲ್ಲಿ ಜೋಳ: ಕರ್ನಾಟಕ ವಿಚಾರದಲ್ಲಿ ಜೋಳ (ಬಿಳಿ ಜೋಳ, ಹೈಬ್ರಿಡ್ ಜೋಳ) ಬೆಳೆಯುವ ಪ್ರಮಾಣ ಮತ್ತು ಉತ್ಪಾದನೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಹೋಗುತ್ತಿದೆ. ಉತ್ತರ ಕರ್ನಾಟಕ ಭಾಗದ ಪ್ರಮುಖ ಆಹಾರ ಬೆಳೆಯಾದ ಜೋಳವನ್ನು 1950-1960ರ ಅವಧಿಯಲ್ಲಿ 25.88 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. 2022-2023ರ ಹೊತ್ತಿಗೆ ಕೇವಲ 5.67 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತಿದೆ. 70 ವರ್ಷದ ಅವಧಿಯಲ್ಲಿ ಶೇ.78ರಷ್ಟು ಜೋಳ ಬೆಳೆಯುವ ಪ್ರದೇಶ ರಾಜ್ಯದಲ್ಲಿ ಕಣ್ಮರೆಯಾಗಿದೆ.

ಕರ್ನಾಟಕ 4
ಇಷ್ಟು ಪರಿಪ್ರಮಾಣದಲ್ಲಿ ಸಿರಿಧಾನ್ಯ ಬೆಳೆಗಳನ್ನು ನುಂಗಿರುವುದು ಗೋಧಿ, ಭತ್ತ, ಮೆಕ್ಕೆಜೋಳ, ಬಿಟಿ ಹತ್ತಿ, ಕಬ್ಬು ಬೆಳೆಗಳು. ಇದಕ್ಕೆ ಕಾರಣ ಸಿರಿಧಾನ್ಯಗಳಿಗೆ ಸಿಗದ ಯೋಗ್ಯ ದರ ಮತ್ತು ಜನರ ಆಹಾರ ಬದಲಾವಣೆಯ ಕ್ರಮವೇ ಕಾರಣ ಎನ್ನುತ್ತಾರೆ ತಜ್ಞರು.

ಜಾಗತಿಕ ಹವಾಮಾನ ಬದಲಾವಣೆಯು ಕೃಷಿಕರನ್ನು ಈಗ ಹೆಚ್ಚು ಸಂಕಟಕ್ಕೆ ದೂಡಿದೆ. ಮುಂಗಾರು ಮಳೆ ಒಂದೊಮ್ಮೆ ಕಣ್ಮರೆಯಾಗುವುದು ಇಲ್ಲವೇ ಅತ್ಯಧಿಕವಾಗಿ ಸುರಿದು ಬೆಳೆಗಳನ್ನು ಹಾಳು ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಅಕಾಲಿಕವಾಗಿ ಸುರಿಯುವ ಮಳೆಯಿಂದ ಬೆಳೆಗಳನ್ನು ಉಳಿಸಿಕೊಳ್ಳುವುದು ರೈತರಿಗೆ ಕಷ್ಟವಾಗುತ್ತಿದೆ. ಹೈಬ್ರಿಡ್ ತಳಿಗಳಿಗೆ ಪ್ರಾಕೃತಿಕ ಏರುಪೇರು ಸಹಿಸಿಕೊಳ್ಳುವ ಸಾಮರ್ಥ್ಯವಿಲ್ಲ.

ಮುಂಗಾರು ವೈಫಲ್ಯ, ಅಕಾಲಿಕ ಮಳೆಯಂಥ ಪ್ರಾಕೃತಿಕ ವಿಕೋಪಗಳಿಗೆ ಕೃಷಿಕರು ತತ್ತರಿಸುವ ವಿಷಮ ಸ್ಥಿತಿಯಲ್ಲೂ ಹುಲುಸಾಗಿ ಬೆಳೆಯುವ ಸಾಮರ್ಥ್ಯ ಸಿರಿಧಾನ್ಯಗಳಿಗಿದೆ. ಜಾಗತಿಕ ಹವಾಮಾನ ಬದಲಾವಣೆ ಬಿಕ್ಕಟ್ಟಿಗೆ ಸಮರ್ಥ ಪರಿಹಾರ ನೀಡಬಲ್ಲ ಬೆಳೆಗಳು ಸಿರಿಧಾನ್ಯ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

“ರೈತರು ಅಕ್ಕಿ, ಗೋಧಿ ಮತ್ತು ಕಬ್ಬು ಬೆಳೆಯುವುದನ್ನು ನಿಲ್ಲಿಸಿದರೆ 18 ವರ್ಷಗಳಲ್ಲಿ ಜಾಗತಿಕ ತಾಪಮಾನವನ್ನು ತಗ್ಗಿಸಬಹುದು. ಬದಲಿಗೆ ಸಿರಿಧಾನ್ಯಗಳನ್ನು ಬೆಳೆದರೆ ಪ್ರಪಂಚದಾದ್ಯಂತ 10.4 ಬಿಲಿಯನ್ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಕಡಿಮೆ ಮಾಡಬಹುದು” ಎಂದು ಭಾರತದ ಮಿಲೆಟ್ ಮ್ಯಾನ್ ಎಂದೇ ಜನಪ್ರಿಯವಾಗಿರುವ ಪೌಷ್ಟಿಕ ಆಹಾರ ತಜ್ಞ ಡಾ. ಖಾದರ್ ವಲಿ ಹೇಳಿದ್ದಾರೆ.

ಬಾರ

ಬರಸಹಿಷ್ಣು ಗುಣದ ಬೆಳೆಗಳು

ಬರ ಪರಿಸ್ಥಿತಿಯನ್ನು ಆಗಾಗ ಎದುರಿಸುತ್ತಿರುವ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಹುಮುಖಿ ಸಿರಿಧಾನ್ಯವನ್ನು ಸುಲಭವಾಗಿ ಬೆಳೆಯಬಹುದು. ಮಳೆಯಾಗಲಿ ಅಥವಾ ಆಗದಿರಲಿ, ಫಲವತ್ತಾದ ಜಮೀನು ಇರದಿದ್ದರೂ ಅಲ್ಲಿ ಸಿರಿಧಾನ್ಯಗಳು ತಾವಾಗಿಯೇ ಬೆಳೆಯುತ್ತವೆ ಮತ್ತು ಅವುಗಳಿಗೆ ಹೆಚ್ಚಿನ ಪೋಷಣೆಯ ಅಗತ್ಯವಿಲ್ಲ. ಧಾನ್ಯದೊಳಗಿನ ಜೀನೋಮಿಕ್ ಅಂಶದಿಂದಾಗಿ 10 ಡಿಗ್ರಿ ಮತ್ತು 45 ಡಿಗ್ರಿ ಸೆಲ್ಸಿಯಸ್ ನಡುವೆ ಬೆಳೆಯುತ್ತವೆ. ಹೀಗಾಗಿಯೇ ಸಿರಿಧಾನ್ಯ ಬೆಳೆಗಳನ್ನು ಬರಸಹಿಷ್ಣು ಗುಣದ ಬೆಳೆಗಳು (ಕಡಿಮೆ ನೀರಿಗೂ ಬೆಳೆಯುವ) ಎಂದೂ ಕರೆಯಲಾಗುತ್ತದೆ.

ಕೊರಲೆ ತುಂಬಾ ವಿರಳವಾಗಿ ಬೆಳೆಯುವ ಸಿರಿಧಾನ್ಯ. ಚಿತ್ರದುರ್ಗ, ತುಮಕೂರು, ಆಂಧ್ರಪ್ರದೇಶದ ಕೆಲವೇ ಪ್ರದೇಶಗಳಲ್ಲಿ ಈ ಬೆಳೆ ಕಾಣಸಿಗುತ್ತದೆ. ಹೊಸದುರ್ಗ ತಾಲ್ಲೂಕಿನ ರೈತರು 2023ರಲ್ಲಿ 17 ಸಾವಿರಕ್ಕೂ ಅಧಿಕ ಹೆಕ್ಟೇ‌ರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು ಗಮನಿಸಬಹುದು. ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯ ಒಟ್ಟು ವಿಸ್ತೀರ್ಣದಲ್ಲಿ ಶೇ 50 ಭಾಗ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಪಾಲಿದೆ. ಈ ಕಾರಣಕ್ಕೆ ಹೊಸದುರ್ಗವನ್ನು ಸಿರಿಧಾನ್ಯಗಳ ಕಣಜ ಎಂತಲೂ ಕರೆಯಲಾಗುತ್ತದೆ. ಸಾಮೆಯನ್ನು (ಸಾವೆ) ಹೋಲುವ ಈ ಧಾನ್ಯ, ತುಸು ಎತ್ತರವಾಗಿ ಬೆಳೆಯುತ್ತದೆ. ಸಾಸಿವೆ ಗಾತ್ರದ ಕಾಳುಗಳು ಇರುವುದರಿಂದ, ಸಾಮೆಗಿಂತ ಇದರ ಸಂಸ್ಕರಣೆ ಸುಲಭ.

ತೃಣಧಾನ್ಯ ಅಥವಾ ಸಿರಿಧಾನ್ಯಗಳನ್ನು 85 ರಿಂದ 100 ದಿನಗಳ ಅವಧಿಯಲ್ಲಿ ಬೆಳೆಯಬಹುದು. ಇವುಗಳಿಗೆ ರೋಗದ ಬಾಧೆಯಿಲ್ಲ. ಅತಿ ಕಡಿಮೆ ತೇವಾಂಶ ಇದ್ದರೂ ಸಾಕು ಹುಲುಸಾಗಿ ಬೆಳೆಯುತ್ತವೆ. ಹೆಚ್ಚು ರಾಸಾಯನಿಕ ಗೊಬ್ಬರ ಮತ್ತು ಔಷಧಗಳ ಅಗತ್ಯವಿಲ್ಲದ ಕಾರಣ ಇವುಗಳಿಂದ ದನಕರುಗಳಿಗೂ ಉತ್ಕೃಷ್ಟ ಮೇವು ಸಹ ಲಭಿಸುತ್ತದೆ. ಎಂತಹ ಬರ ಎದುರಾದರು ಸಹ ಕೊನೆಗೆ ಹುಲ್ಲನ್ನಾದರೂ ಕೊಡುವ ಬೆಳೆಗಳಿವು. ಹವಾಮಾನ ವೈಪರೀತ್ಯಕ್ಕೆ ಸವಾಲು ಹಾಕಿ ಬೆಳೆಯಬಲ್ಲ ಸಿರಿಧಾನ್ಯಗಳು ಭವಿಷ್ಯದ ಆಹಾರದ ಗಣಿಗಳೆಂದೇ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಸಿರಿ 2
ಖನಿಜಾಂಶಗಳ ಕಣಜ ಸಿರಿಧಾನ್ಯ 

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ನಿರ್ದೇಶಕರಾಗಿರುವ ಡಾ ಬಿ ಡಿ ಬಿರಾದರ್‌ ಅವರು ಈ ದಿನ.ಕಾಮ್‌ ಜೊತೆ ಸಿರಿಧಾನ್ಯ ಬೆಳೆಗಳ ಬಗ್ಗೆ ಮಾತನಾಡಿ, "ಸಿರಿಧಾನ್ಯಗಳೆಂದರೆ ಅಪ್ಪಟ ದೇಸಿ, ಗ್ರಾಮೀಣ ಸೊಗಡಿನ ಸಾವಯವ, ಸಮೃದ್ಧ ಕಾಳುಗಳು. ದುರದೃಷ್ಟವಶಾತ್ ಅಕ್ಕಿ ಮತ್ತು ಗೋಧಿ ನಮ್ಮ ಇಡೀ ಆಹಾರ ಸಂಸ್ಕೃತಿಯನ್ನು ಹಾಳು ಮಾಡಿ, ನಮ್ಮ ಆಹಾರದ ಪ್ರಧಾನ ಧಾನ್ಯಗಳಾಗಿವೆ. ಇವುಗಳ ಅತಿಯಾದ ಸೇವನೆಯಿಂದ ಬಿಪಿ, ಶುಗರ್‌, ಕ್ಯಾನ್ಸರ್‌ನಂತಹ ಕಾಯಿಲೆಗಳು ಸಾಮಾನ್ಯವಾಗಿವೆ. ಪೋಸ್ಟರ್‌ಗಳನ್ನು ಗೋಡೆಗೆ ಅಂಟಿಸಲು ಹಿಂದೆ ಗೋಧಿಯ ಹಿಟ್ಟನ್ನು ಬಳಸಲಾಗುತ್ತಿತ್ತು. ಕಾರಣ ಅದರಲ್ಲಿನ ಗ್ಲುಟನ್‌ ಅಂಶ (ಅಂಟಿನ ಅಂಶ). ಈ ಅಂಟಿನ ಪದಾರ್ಥವನ್ನು ನಾವು ಅತಿಯಾಗಿ ಸೇವಿಸುವುದರಿಂದ ಕ್ಯಾನ್ಸರ್‌ಗೆ ಇದು ದಾರಿಮಾಡಿಕೊಡುತ್ತಿದೆ" ಎಂದು ಹೇಳಿದರು.

ಖನಿಜಾಂಶಗಳ ಕಣಜವಾಗಿರುವ ‘ಸಿರಿಧಾನ್ಯಗಳಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಫಾಸ್ಪರಸ್, ಮ್ಯಾಂಗನೀಸ್ ಖನಿಜಾಂಶ ಹೇರಳವಾಗಿವೆ. ಚೀನಾ ದೇಶದ ‘ಹುಂಝ’ ಜನಾಂಗದ ದೀರ್ಘಾಯುಷಿಗಳ ಆಹಾರದ ಹೆಚ್ಚಿನ ಪಾಲು ಸಿರಿಧಾನ್ಯಗಳು. ರಾಗಿಯು ನೈಸರ್ಗಿಕವಾಗಿ ಗ್ಲುಟನ್ ಮುಕ್ತವಾಗಿದೆ. ಇದು ಅಂಟು ಅಸಹಿಷ್ಣುತೆ ಅಥವಾ ಉದರದ ಕಾಯಿಲೆ ಇರುವವರಿಗೆ ರಾಗಿ ಸೂಕ್ತವಾಗಿದೆ. ಇದು ಫೈಟಿಕ್ ಆಮ್ಲದಲ್ಲಿ ಕಡಿಮೆಯಾಗಿದೆ, ಇದು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ” ಎಂದು ತಿಳಿಸಿದರು.

“ಮಳೆಯಾಶ್ರಿತ ಬೆಳೆ ಸಿರಿಧಾನ್ಯವಾಗಿದ್ದರೂ ಕಡಿಮೆ ಮಳೆ ಬಂದರೂ ಉತ್ತಮವಾಗಿ ಬೆಳೆ ಬರುತ್ತದೆ. ಅಷ್ಟೇ ಅಲ್ಲ ಯಾವುದೇ ಸಿರಿಧಾನ್ಯವಾದರೂ ಅವುಗಳಿಂದ ಜಾನುವಾರುಗಳಿಗೆ ಉತ್ಕೃಷ್ಟ ಮೇವು ಲಭಿಸುತ್ತದೆ. ಸಿರಿಧಾನ್ಯ ಬೆಳೆಗಳನ್ನು ಹೆಚ್ಚು ಬೆಳೆಯುವುದರಿಂದ ಉತ್ತಮ ಪರಿಸರವೂ ಸೃಷ್ಟಿಯಾಗುತ್ತದೆ. ಇವುಗಳಿಗೆ ರೋಗ ಬಾಧೆ ಬಹಳ ಕಡಿಮೆ ಇದೆ. ಔಷಧ ಸಿಂಪಡೆಯ ಅವಶ್ಯಕತೆ ಇವುಗಳಿಗಿಲ್ಲ. ಇದರಿಂದ ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಬಹುದು. ಗೋಧಿಯ ಹುಲ್ಲು ದನಕರುಗಳಿಗೆ ಬೇಗ ಜೀರ್ಣವಾಗಲ್ಲ. ಹೆಚ್ಚು ಔಷಧ ಸಿಂಪಡನೆ ಜಾಸ್ತಿ ಇರುವುದೇ ಭತ್ತಕ್ಕೆ. ಹೀಗಾಗಿ ಇದರ ಹುಲ್ಲು ದನಕರುಗಳಿಗೆ ಅಷ್ಟು ಯೋಗ್ಯವಲ್ಲ” ಎಂದು ವಿವರಿಸಿದರು.

ಡಾ. ಬಿ ಡಿ ಬಿರಾದರ್‌
ಡಾ. ಬಿ ಡಿ ಬಿರಾದರ್‌, ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ನಿರ್ದೇಶಕರು
ನಮ್ಮ ಆಹಾರ, ಆರೋಗ್ಯ ಕೆಡಿಸಿದ್ದು ಅಕ್ಕಿ ಮತ್ತು ಗೋಧಿ

"ಸಿರಿಧಾನ್ಯ ಬೆಳೆಗಳಿಗೆ ಸರ್ಕಾರ ಹೆಚ್ಚು ಪ್ರೋತ್ಸಾಹ ಕೊಟ್ಟಷ್ಟು ರೈತರು ಬೆಳೆಯಲು ಮುಂದೆ ಬರುತ್ತಾರೆ. ಕಾರ್ಪೋರೇಟ್‌ ಕಂಪನಿಗಳು ಸಿರಿಧಾನ್ಯ ಕೃಷಿಯನ್ನು ತುಳಿಯುತ್ತಿವೆ. ಅವುಗಳ ಉದ್ದೇಶ ಬೀಜ, ರಸಗೊಬ್ಬರ ಹಾಗೂ ಔಷಧ ಮಾರಾಟವಾಗಬೇಕು. ಇದ್ಯಾವುದೂ ಸಿರಿಧಾನ್ಯಗಳಿಗೆ ಬೇಕಿಲ್ಲ. ಬೀಜಗಳನ್ನು ರೈತರೇ ಸಂಗ್ರಹಿಸುತ್ತಾರೆ. ಸಿರಿಧಾನ್ಯಗಳಿಗೆ ಗೊಬ್ಬರ, ಔಷಧದ ಅಗತ್ಯವೇ ಇಲ್ಲ. ಹೀಗಾಗಿ ಕಾರ್ಪೋರೇಟ್‌ ಕಂಪನಿಗಳು ಮೆಕ್ಕೆಜೋಳ, ಬಿ ಟಿ ಹತ್ತಿಯನ್ನು, ಭತ್ತವನ್ನು ಹೆಚ್ಚು ಪ್ರೋತ್ಸಾಹಿಸುತ್ತಿವೆ. ಆ ಕಂಪನಿಗಳಿಗೆ ವ್ಯವಹಾರವೇ ಮುಖ್ಯ. ಆರೋಗ್ಯಕ್ಕಾಗಿ ಆಹಾರ ಎಂದು ಹಿರಿಯರು ನಂಬಿದ್ದರು. ಈಗ ಏನಾಗಿದೆ? ಅಕ್ಕಿ, ಗೋಧಿ ನಮ್ಮ ಆಹಾರವನ್ನು ಬಹಳಷ್ಟು ಕೆಡಿಸಿದೆ. ಕಂಪನಿಗಳಿಗೆ ಲಾಭವಾಗುತ್ತಿದೆ" ಎನ್ನುತ್ತಾರೆ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ ಎನ್‌ ಪ್ರಕಾಶ್‌ ಕಮ್ಮರಡಿ.

ಮುಂದುವರಿದು, “ಹಸಿರು ಕ್ರಾಂತಿಯ ಉದ್ದೇಶ ಏನು? ಆಹಾರ ಸ್ವಾವಲಂಬನೆ ಸಾಧಿಸಬೇಕಿತ್ತು. ಅದಕ್ಕಾಗಿ ಭತ್ತ ಮತ್ತು ಗೋಧಿಯನ್ನು ಬೆಳೆದಿದ್ದು ಆಯ್ತು. ಹಸಿರು ಕ್ರಾಂತಿಯ ಉದ್ದೇಶ ಈಗ ಈಡೇರಿದೆ. ಆದರೂ ಭತ್ತ-ಗೋಧಿಯನ್ನೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದನ್ನು ಮುಂದುವರಿಸಿದರೆ ನಮ್ಮ ಆಯಸ್ಸು, ಆರೋಗ್ಯ ಹೀಗೆ ಕ್ಷೀಣಿಸುತ್ತಲೇ ಹೋಗುತ್ತದೆ. ಬೆಳೆ ವಿಜ್ಞಾನಿಗಳು ಕೂಡ ಸಿರಿಧಾನ್ಯದ ಉತ್ತಮ ತಳಿಗಳನ್ನು ಕಂಡುಹಿಡಿಯಬೇಕು. ಕೃಷಿ ವಿಶ್ವವಿದ್ಯಾಲಯಗಳು ಮುಂದೆ ಬರಬೇಕು. ಸರ್ಕಾರ ಸಹಕಾರ ನೀಡಬೇಕು. ರೈತರಲ್ಲಿ ಜಾಗೃತಿ ಮೂಡಿಸಬೇಕು. ಅಂದಾಗ ಸಿರಿಧಾನ್ಯ ಮತ್ತೆ ರೈತರ ಹೊಲದಲ್ಲಿ ತಲೆ ಎತ್ತಲಿದೆ. ಪರಿಸರ ಕಾಪಾಡುವ ದೃಷ್ಟಿಯಿಂದಲೂ ಸಿರಿಧಾನ್ಯ ಬೆಳೆಗಳು ಈ ಕಾಲಕ್ಕೆ ಅಗತ್ಯ” ಎಂದು ಹೇಳಿದರು.

ಪ್ರಕಾಶ್‌ ಕಮ್ಮರಡಿ
ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ ಎನ್‌ ಪ್ರಕಾಶ್‌ ಕಮ್ಮರಡಿ

ಸಿರಿಧಾನ್ಯಕ್ಕೆ ಅಂತಾರಾಷ್ಟ್ರೀಯ ವರ್ಷದ ಮನ್ನಣೆ

ಆಹಾರ ಭದ್ರತೆ, ಪೌಷ್ಟಿಕತೆ ಹಾಗೂ ಆರೋಗ್ಯ ಸಮಸ್ಯೆಗಳ ಪರಿಹರಿಸುವಲ್ಲಿ ಸಿರಿಧಾನ್ಯಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ತಜ್ಞರು ಜನಸಮುದಾಯವನ್ನು ಎಚ್ಚರಿಸುತ್ತಿರುವಾಗ ಭಾರತದ ಮನವಿಗೆ ವಿಶ್ವ ಸಂಸ್ಥೆಯು ಸ್ಪಂದಿಸಿ 2023ನೇ ಇಸವಿಯನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿದೆ. ಈಗ ಸಿರಿಧಾನ್ಯಗಳ ಕುರಿತು ವಿಶ್ವ ಸಮುದಾಯದಲ್ಲಿ ಆಸಕ್ತಿ ಹೆಚ್ಚಳವಾಗಿದೆ. ಹಸಿರುಕ್ರಾಂತಿ ಅಬ್ಬರದಲ್ಲಿ ತೆರೆಮರೆಗೆ ಸರಿದಿದ್ದ ಸಿರಿಧಾನ್ಯಗಳು ನಿಧಾನವಾಗಿ ರೈತರ ಹೊಲಗಳಲ್ಲಿ ಜಾಗ ಪಡೆಯುತ್ತಿವೆ.

ಸಿರಿಧಾನ್ಯ ಉತ್ಪಾದನೆ- ಕರ್ನಾಟಕ 3ನೇ ಸ್ಥಾನ

“ಭಾರತದಲ್ಲಿ ಸಿರಿಧಾನ್ಯಗಳ ಉತ್ಪಾದನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಒತ್ತು ನೀಡಿದೆ. ರಾಜಸ್ಥಾನ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಲ್ಲಿ ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಸಾವಯವ ಕೃಷಿ ವಿಸ್ತೀರ್ಣದಲ್ಲಿ ಭಾರತವು ವಿಶ್ವದಲ್ಲಿ 2ನೇ ಸ್ಥಾನ ಹಾಗೂ ಒಟ್ಟು ಸಾವಯವ ಉತ್ಪಾದಕರಲ್ಲಿ ಮೊದಲನೇ ಸ್ಥಾನದಲ್ಲಿದೆ. ರಪ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ವಿಶ್ವದಲ್ಲಿ ಅಂದಾಜು 903.61 ಲಕ್ಷ ಟನ್‌ಗಳಷ್ಟು ಸಿರಿಧಾನ್ಯಗಳ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಶೇ.38.50 ರಷ್ಟು ಪಾಲು ಭಾರತ ದೇಶದ್ದಾಗಿದ್ದು, ವಿಶ್ವದ ಅತಿದೊಡ್ಡ ಸಿರಿಧಾನ್ಯ ಉತ್ಪಾದನೆಯಲ್ಲಿ ಮುಂಚೂಣಿ ರಾಷ್ಟ್ರವಾಗಿದೆ. ಕರ್ನಾಟಕವು ಸಿರಿಧಾನ್ಯಗಳ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ದೇಶದಲ್ಲಿಯೇ 3ನೇ ಸ್ಥಾನದಲ್ಲಿರುತ್ತದೆ. ಸಿರಿಧಾನ್ಯಗಳನ್ನು ಬೆಳೆಯಲು ಮತ್ತು ಸೇವಿಸಲು ಸರ್ಕಾರ ಹೆಚ್ಚು ಪ್ರೋತ್ಸಾಹ ನೀಡಿ, ಸಮರ್ಪಕ ನೀತಿಯನ್ನು ಜಾರಿಗೆ ತಂದರೆ ಸಿರಿಧಾನ್ಯಗಳಿಗೆ ಸಂಬಂಧಿಸಿ ಮುಂಚೂಣಿ ಸ್ಥಾನವನ್ನು ದೇಶ ಕಾಯ್ದುಕೊಳ್ಳುವುದರಲ್ಲಿ ಎರಡು ಮಾತಿಲ್ಲ.

ಹಿಂದೆ ಬಡವರ ಆಹಾರವಾಗಿದ್ದ ಸಿರಿಧಾನ್ಯಗಳು ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ಮತ್ತು ಗೋಧಿ ನೀಡಿದ್ದರಿಂದ ಜನರು ಅವುಗಳಿಗೆ ಹೊಂದಿಕೊಂಡಿದ್ದಾರೆ. ಕ್ರಮೇಣವಾಗಿ ಸಿರಿಧಾನ್ಯಗಳು ಜನಸಾಮಾನ್ಯರಿಂದ ದೂರವಾಗಿವೆ. ಈಗ ಅವು ಶ್ರೀಮಂತರ ಆಹಾರವಾಗಿವೆ. ಮತ್ತೆ ಜನಸಾಮಾನ್ಯರ ಆಹಾರವಾಗಿ ಸಿರಿಧಾನ್ಯಗಳು ಪ್ರತಿಮನೆಯಲ್ಲೂ ಕಾಣುವಂತಾದಾಗ ಸ್ವಾಭಾವಿಕವಾಗಿಯೇ ಜನರ ಆರೋಗ್ಯ ವೃದ್ಧಿಸುತ್ತದೆ.

ಕೃಷ್ಣ ಬೈರೇಗೌಡ 15

ಸಿರಿಧಾನ್ಯಕ್ಕೆ ಹೊಳಪುಕೊಟ್ಟ ಸಚಿವ ಕೃಷ್ಣ ಬೈರೇಗೌಡ

ರಾಜ್ಯದಲ್ಲಿ ಸಿರಿಧಾನ್ಯ ಉತ್ಪಾದನೆಗೆ ತಕ್ಕಂತೆ ಮಾರುಕಟ್ಟೆ ಸೌಲಭ್ಯದ ಅಭಾವ ಹಾಗೂ ‘ರೈತಸ್ನೇಹಿ‘ ಸಂಸ್ಕರಣಾ ಯಂತ್ರಗಳ ಕೊರತೆ ಎದ್ದು ಕಾಣುತ್ತವೆ. ಕೃಷ್ಣಬೈರೇಗೌಡ ಅವರು 2013-2018ರ ಅವಧಿಯಲ್ಲಿ ಕೃಷಿ ಸಚಿವರಾಗಿದ್ದಾಗ ಸಿರಿಧಾನ್ಯ ಉತ್ಪಾದನೆಗೆ ಅತಿ ಹೆಚ್ಚು ಒತ್ತು ನೀಡಿದರು. ರಾಜ್ಯಕ್ಕೆ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳಗಳನ್ನು ಸತತವಾಗಿ ಆಯೋಜಿಸಿ ಜಾಗೃತಿ ಮೂಡಿಸಿದರು. ಆ ಸಂದರ್ಭದಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕಗಳು ಸ್ಥಾಪನೆಯಾದವು. ಈಗ ರಾಜ್ಯದಲ್ಲಿ 50ಕ್ಕಿಂತ ಹೆಚ್ಚು ಸಿರಿಧಾನ್ಯ ಸಂಸ್ಕರಣಾ ಘಟಕಗಳಿವೆ. ಆದರೆ ಅವು ಸಾಲದು.

ರಾಜ್ಯದ ಸಿರಿಧಾನ್ಯ ಕ್ಷೇತ್ರವನ್ನು ವಿಸ್ತರಿಸುವ ನಿಟ್ಟಿನಲ್ಲಿ “ರೈತ ಸಿರಿ” ಯೋಜನೆಯಡಿ ಪ್ರಮುಖ ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಬೆಳೆಗಳನ್ನು ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ.ದಂತೆ, ಗರಿಷ್ಠ 2 ಹೆಕ್ಟೇರ್ ಗಳಿಗೆ ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರ ಪಾವತಿಸುತ್ತಿದೆ. ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಹಾಗೂ ಉತ್ತಮ ಧಾರಣೆ ದೊರಕಿಸಿಕೊಡಲು ರಾಜ್ಯದ ಸಾವಯವ ಕೃಷಿಕರ ಸಂಘಗಳನ್ನು ಒಗ್ಗೂಡಿಸಿ 15 ಪ್ರಾಂತೀಯ ಸಾವಯವ ಒಕ್ಕೂಟಗಳನ್ನು ರಚಿಸಲಾಗಿದೆ. ಸಾವಯವ ಹಾಗೂ ಸಿರಿಧಾನ್ಯಗಳ ಕೃಷಿಗೆ ಸಂಬಂಧಿಸಿದ ಸಂಶೋಧನಾ ಕೇಂದ್ರಗಳನ್ನು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲಾಗಿದೆ. ಸಿರಿಧಾನ್ಯಗಳ ಉತ್ತೇಜನದಲ್ಲಿ ಕರ್ನಾಟಕ ಸರ್ಕಾರವು ಕೈಗೊಂಡಿರುವ ವಿಶೇಷ ಪ್ರಯತ್ನಗಳನ್ನು ಗುರುತಿಸಿ ಕೇಂದ್ರ ಸರ್ಕಾರವು ಪ್ರಶಂಸನಾ ಪತ್ರ ವನ್ನು ಕರ್ನಾಟಕ ಸರ್ಕಾರದ ಕೃಷಿ ಇಲಾಖೆಗೆ ನೀಡಿದೆ.

ಸಾವಯವ ಮತ್ತು ಸಿರಿಧಾನ್ಯಗಳಿಗೆ ವ್ಯವಸ್ಥಿತ ಮಾರುಕಟ್ಟೆ ಮತ್ತು ಸರಬರಾಜು ಸರಪಳಿಯನ್ನು ಕಲ್ಪಿಸುವ ಉದ್ದೇಶದೊಂದಿಗೆ ಪರಿಷ್ಕೃತ “ಸಾವಯವ ಕೃಷಿ ನೀತಿ” ಕಾಂಗ್ರೆಸ್ ಸರ್ಕಾರವು 2017ರಲ್ಲಿ ಹೊರತಂದಿದೆ.‌ ಕೃಷ್ಣ ಬೈರೇಗೌಡ ಅವರು ಕೃಷಿ ಸಚಿವರಾಗಿದ್ದಾಗ ರಾಜ್ಯದ ರೈತರಲ್ಲಿ ಸಾವಯವ ಕೃಷಿ ಪದ್ಧತಿಯ ಬಗ್ಗೆ ಅರಿವು ಮೂಡಿಸಲು”ಸಾವಯವ ಭಾಗ್ಯ ಯೋಜನೆಯನ್ನು” 2013ನೇ ಸಾಲಿನಲ್ಲಿ ಹೊರತಂದು ಹೋಬಳಿಮಟ್ಟದಲ್ಲಿ ಮಾದರಿ ಸಾವಯವ ಗ್ರಾಮಗಳನ್ನು ಸ್ಥಾಪಿಸಿ ರೈತರನ್ನು ಒಗ್ಗೂಡಿಸಿ ಉತ್ತೇಜಿಸಲಾಗಿದೆ.

ಒಂದು ಕೆ.ಜಿ. ಸಿರಿಧಾನ್ಯವನ್ನು ಸಂಸ್ಕರಿಸಿದರೆ 500ರಿಂದ 700 ಗ್ರಾಂ ಕಾಳು ಸಿಗುತ್ತದೆ. ಉಳಿದಿದ್ದು ಮಣ್ಣು, ದೂಳು, ಜೊಳ್ಳು ಸಿಪ್ಪೆಯಲ್ಲಿ ಹೋಗುತ್ತದೆ. ಮಾರುಕಟ್ಟೆಗಳಲ್ಲಿ ಸಿರಿಧಾನ್ಯ ಕೆ.ಜಿಗೆ 100 ರೂ. ಮೇಲಿದೆ. ಆದರೆ ರೈತರಿಗೆ 50 ರೂಪಾಯಿ ಕೂಡ ಸಿಗುತ್ತಿಲ್ಲ. ಧಾನ್ಯ ಖರೀದಿ, ಸಂಸ್ಕರಣಾ ವೆಚ್ಚ, ಸಾಗಾಟದ ಖರ್ಚು ಇತ್ಯಾದಿ ಸೇರಿ ರೈತರಿಗೂ ಗರಿಷ್ಠ ಬೆಲೆ ಗ್ರಾಹಕರಿಗೂ ಹೊರೆಯಾಗದಂತೆ ಮಾರಾಟ ಖರೀದಿ-ವ್ಯವಸ್ಥೆ ಜಾಲವನ್ನು ರೂಪಿಸುವ ಮಹತ್ತರ ಜವಾಬ್ದಾರಿ ಈಗಿನ ಕೃಷಿ ಸಚಿವರಾದ ಎನ್‌ ಚಲುವರಾಯಸ್ವಾಮಿ ಅವರ ಮೇಲಿದೆ. ಸರ್ಕಾರ ಪ್ರೋತ್ಸಾಹಧನದ ಬದಲು ಬೆಳೆದಿದ್ದನ್ನು ಖರೀದಿಸುವ ಮಾರುಕಟ್ಟೆ ಖಾತರಿಯನ್ನು ಕೊಟ್ಟರೆ ಸಾಕು. ಸಿರಿಧಾನ್ಯ ಬೆಳೆಯುವರ ಸಂಖ್ಯೆ ಹೆಚ್ಚಾಗುತ್ತದೆ.

ಸಿರಿ ಧಾನ್ಯ

ದೇಸಿ ಬೀಜಗಳನ್ನು ರಕ್ಷಿಸುವ ಕೆಲಸ ನಿಂತಿದೆ

ಆಂಧ್ರಪ್ರದೇಶ ಸರ್ಕಾರ ‘ಮಿಷನ್‌ ಆನ್ ಮಿಲೆಟ್ಸ್‘ ಅಡಿಯಲ್ಲಿ ರೈತರಿಂದ ಸಿರಿಧಾನ್ಯ ಖರೀದಿಸಿ ಪಡಿತರ, ಅಂಗನವಾಡಿಯ ಮೂಲಕ ಜನರಿಗೆ ಪೌಷ್ಟಿಕ ಆಹಾರ ಸಿಗುವಂತೆ ಮಾಡುತ್ತಿದೆ. ಛತ್ತೀಸ್‌ಗಡ ಸರ್ಕಾರವೂ ‘ಮಿಲ್ಲೆಟ್ ಮಿಷನ್’ ಆರಂಭಿಸಿದೆ. ಒಡಿಶಾ ಸರ್ಕಾರ ಬೆಂಬಲ ಬೆಲೆ ಕೊಟ್ಟು ಸಿರಿಧಾನ್ಯಗಳನ್ನು ಖರೀದಿಸುತ್ತಿದೆ. ಈ ಮಾದರಿಗಳನ್ನು ಕರ್ನಾಟಕ ಸರ್ಕಾರವೂ ಅನುಸರಿಸಬೇಕು. ದೇಸಿ ಬೀಜಗಳನ್ನು ಸಾಂಸ್ಥಿಕವಾಗಿ ರಕ್ಷಿಸುವ ಕೆಲಸ ನಿಂತುಹೋಗಿದೆ. ಸಮುದಾಯ ಬೀಜ ಬ್ಯಾಂಕುಗಳು ಮಾಡುತ್ತಿದ್ದ ಕೆಲಸಗಳನ್ನು ಈಗ ರೈತರೇ ಮಾಡುತ್ತಿದ್ದಾರೆ. ರೈತರ ಪ್ರಯತ್ನಗಳನ್ನು ಕೊಂಡಾಡಲಾಗುತ್ತದೆಯಾದರೂ ಉತ್ಪಾದಿಸಿದ ದೇಸಿ ಬೀಜಗಳನ್ನು ಬೀಜ ಮಾರಾಟ ವ್ಯವಸ್ಥೆಯ ವ್ಯಾಪ್ತಿಗೆ ತರುವುದು ಸಾಧ್ಯವಾಗುತ್ತಿಲ್ಲ.

ಒಟ್ಟಾರೆ ಒಂದು ಕಾಲದಲ್ಲಿ ಒರಟು ಧಾನ್ಯಗಳೆಂಬ ಹಣೆಪಟ್ಟಿಯೊಂದಿಗೆ ಆಹಾರ ಕ್ರಮದ ಮುಖ್ಯವಾಹಿನಿಯಿಂದ ದೂರ ಸರಿದಿದ್ದ ರಾಗಿ, ನವಣೆ, ಸಾವೆ, ಸಜ್ಜೆ ಧಾನ್ಯಗಳೀಗ ಜನರ ಆಹಾರದ ಭಾಗವಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಕಡಿಮೆ ನೀರು- ಆರೈಕೆ ಬೇಡುವ, ಕೀಟ ಬಾಧೆಗಳಿಂದ ಮುಕ್ತವಾಗಿ ಅಪಾರ ಜೀವಸತ್ವದ ಗಣಿಗಳಂತಿರುವ ಸಿರಿಧಾನ್ಯಗಳು ಮಾನವನ ಆರೋಗ್ಯ ಕಾಪಾಡುವಲ್ಲಿ ಔಷಧಿಯಂತೆ ಕೆಲಸ ಮಾಡುತ್ತವೆ. ರಾಗಿ ಮುದ್ದೆ, ಅಂಬಲಿ, ಗಂಜಿ, ರೊಟ್ಟಿ ತಿಂದರೆ ಶುಗರ್ ಲೆವಲ್‌ ನಿಯಂತ್ರಣಕ್ಕೆ ಬರುತ್ತದೆ, ನವಣೆ ತಿಂದರೆ ಗಾಯ ಬೇಗ ವಾಸಿಯಾಗುತ್ತದೆ, ಸಜ್ಜೆಯಿಂದ ಮೈ ಬೊಜ್ಜು ಕರಗುತ್ತದೆ, ಸಾವೆ ತಿಂದರೆ ಕೀಲು ನೋವು ದೂರವಾಗುತ್ತದೆ ಎನ್ನುವ ತಜ್ಞರ ಮಾತುಗಳು ಇನ್ನೂ ಮನಸ್ಸಿನ ಆಳಕ್ಕೆ ಇಳಿಯಬೇಕಿದೆ. ರೋಗನಿರೋಧಕ ಶಕ್ತಿಯ ಸಂಪಾದನೆ ಎಷ್ಟು ಮುಖ್ಯ ಎಂಬುದನ್ನು ಕೋವಿಡ್ ಅಲೆ ತಿಳಿಸಿಕೊಟ್ಟಿದೆ. ಮನುಕುಲಕ್ಕೆ ವರದಾನ ಸಿರಿಧಾನ್ಯ ಎಂಬುದು ಪದೇ ಪದೆ ಸಾಬೀತಾಗುತ್ತಿದೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X