- ಚಕ್ರತೀರ್ಥ ಸಮಿತಿಯ ಪಠ್ಯ ವಾಪಸಾತಿಗೆ ಸಮಿತಿ ಆಗ್ರಹ
- ಜೂ. 18ರಂದು ಬೆಂಗಳೂರಿನಲ್ಲಿ ‘ಸ್ವಾಭಿಮಾನಿ ಕನ್ನಡಿಗರ ಸಮಾವೇಶ’
ಕೋಟ್ಯಂತರ ರೂ. ಖರ್ಚಾದರೂ ಸರಿ, ಬರಗೂರು ಪಠ್ಯವನ್ನೇ ಮರುಮುದ್ರಿಸಿ ವಿದ್ಯಾರ್ಥಿಗಳಿಗೆ ಹಂಚಬೇಕು ಮತ್ತು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಪರಿಷ್ಕೃತ ಪಠ್ಯಪುಸ್ತಕಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ಮಾಡಿ ಬಸವಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್, ರಾಷ್ಟ್ರಕವಿ ಕುವೆಂಪು, ನಾರಾಯಣ ಗುರುಗಳ ಸಹಿತ ಅನೇಕ ದಾರ್ಶನಿಕರ ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತಹ ಕಾರ್ಯವನ್ನು ಹಿಂದಿನ ಬಿಜೆಪಿ ಸರ್ಕಾರ ಮಾಡಿತ್ತು. ಈ ಕೃತ್ಯವನ್ನು ರಾಜ್ಯದ ಜನತೆ ಸಹಿಸಲಿಲ್ಲ. ಸರ್ಕಾರದ ವಿರುದ್ಧವೇ ತಿರುಗಿ ಬಿದ್ದರು. ಆ ಸಂದರ್ಭದಲ್ಲಿ ಕುವೆಂಪು ಹೋರಾಟ ಸಮಿತಿ ದೊಡ್ಡಮಟ್ಟದಲ್ಲಿ ರಾಜ್ಯದಲ್ಲಿ ಚಳವಳಿ ಹೂಡಿತು. ಎಚ್ಚೆತ್ತುಕೊಂಡ ಸರ್ಕಾರ, ತಪ್ಪೋಲೆ ಪತ್ರವನ್ನು ಪ್ರತಿ ಶಾಲೆಗೂ ಕಳಿಸಿ, ಅದರಂತೆ ಪಾಠ ಮಾಡಿ ಎಂದು ಸೂಚಿಸಿತ್ತು. ಈ ಸೂಚನೆಯನ್ನು ಪಾಲಿಸಲಾಗಿದೆಯೇ ಎಂಬ ಸಂಗತಿ ಇಂದಿಗೂ ತಿಳಿದು ಬಂದಿಲ್ಲ ಎಂದು ಹೋರಾಟ ಸಮಿತಿಯ ಅಧ್ಯಕ್ಷ ಜಿ ಬಿ ಪಾಟೀಲ್ ತಿಳಿಸಿದ್ದಾರೆ.
“ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಹಿಂದೆ ಸಾಹಿತಿ ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಪರಿಷ್ಕರಣೆಯನ್ನೇ ಮುಂದುವರಿಸಬೇಕು. ಈಗಾಗಲೇ ಪಠ್ಯಪುಸ್ತಕಗಳನ್ನು ಹಂಚಲಾಗಿದ್ದು, ಹೊಸ ಪಠ್ಯಗಳ ವಿತರಣೆಗೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ ಎಂಬುದನ್ನು ನಾವು ಒಪ್ಪಲು ತಯಾರಿಲ್ಲ. ಮಕ್ಕಳಿಗೆ ದ್ವೇಷ ರಹಿತ ಶಿಕ್ಷಣ ನೀಡುವಲ್ಲಿ ಕೋಟಿ ರೂಪಾಯಿಗಳ ಕಾಳಜಿ ಮಾಡಕೂಡದು. ಹೀಗಾಗಿ, ಬರಗೂರು ಅಧ್ಯಕ್ಷತೆಯಲ್ಲಿ ಪರಿಷ್ಕೃತವಾಗಿರುವ ಪಠ್ಯಗಳನ್ನು ತಕ್ಷಣವೇ ಮುದ್ರಿಸಿ ಹಂಚಬೇಕು ಎಂಬುದು ಹೋರಾಟ ಸಮಿತಿಯ ಸ್ಪಷ್ಟ ನಿಲುವು ಎಂದು ಪಾಟೀಲ್ ತಿಳಿಸಿದ್ದಾರೆ.
ಪಠ್ಯಪುಸ್ತಕಗಳಲ್ಲಿ ಏನೇನು ಬದಲಾವಣೆಗಳಾಗಬೇಕು ಎಂಬ ಬಗ್ಗೆ ಈಗಾಗಲೇ ನೂತನ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಶಿಕ್ಷಣ ಮಂತ್ರಿಗಳನ್ನು ಕೂಡ ಭೇಟಿ ಮಾಡಿ, ತಿಳಿಸಲಿದ್ದೇವೆ ಎಂದು ಹಿರಿಯ ಸಾಹಿತಿ ಎಲ್ ಎನ್ ಮುಕುಂದರಾಜ್ ತಿಳಿಸಿದರು.
“ಕೇಂದ್ರ ಸರ್ಕಾರವು ಬಲವಂತವಾಗಿ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯು ಈ ದೇಶದ ದಲಿತರು, ಶೂದ್ರರು ಹಾಗೂ ಮಹಿಳೆಯರಿಗೆ ಪುನಃ ವಿದ್ಯೆ ಸಿಗದಂತೆ ಮಾಡುವ ಕುತಂತ್ರದ ಭಾಗವಾಗಿದೆ. ತಮಿಳುನಾಡಿನಲ್ಲಿರುವಂತೆ ಕರ್ನಾಟಕದಲ್ಲೂ ಬೇರೆಯದೇ ಆದ ಉನ್ನತ ಶಿಕ್ಷಣ ನೀತಿ ಬರಬೇಕು, ಇದಕ್ಕಾಗಿ ನೂತನ ಉನ್ನತ ಶಿಕ್ಷಣ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಲಿದ್ದೇವೆ ಎಂದು ತಿಳಿಸಿದರು.
“ರೋಹಿತ್ ಚಕ್ರತೀರ್ಥ ಸಮಿತಿಯು ಕೈಗೊಂಡ ಪರಿಷ್ಕೃತ ಪಠ್ಯಗಳ ವಾಪಸಾತಿಗೆ ಮತ್ತು ತಪ್ಪುಗಳನ್ನು ಸರಿಪಡಿಸಲು ಆಗ್ರಹಿಸಿ 2022ರ ಜೂ.18ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸಿದ್ದೆವು. ಹಲವಾರು ಸ್ವಾಮೀಜಿಗಳು, ಸಾಹಿತಿಗಳು, ಹೋರಾಟಗಾರರು, ಸಿನಿಮಾ ಕಲಾವಿದರು, ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು, ರೈತ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳು ಸೇರಿ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದು ಇಡೀ ದೇಶದ ಗಮನವನ್ನೇ ಸೆಳೆದಿತ್ತು. ಇದೇ ಜೂ.18ಕ್ಕೆ ನಮ್ಮ ಹೋರಾಟಕ್ಕೆ ಒಂದು ವರ್ಷವಾಗಲಿದೆ. ಹೀಗಾಗಿ, ಅಂದು ‘ಸ್ವಾಭಿಮಾನಿ ಕನ್ನಡಿಗರ ಸಮಾವೇಶ’ ನಡೆಸಲು ಹೋರಾಟ ಸಮಿತಿ ತೀರ್ಮಾನಿಸಿದೆ. ಆ ಕಾರ್ಯಕ್ರಮಕ್ಕೆ ಸಂವಿಧಾನಪರ, ಪ್ರಜಾಪ್ರಭುತ್ವದ ಪರ ಹಾಗೂ ಮನುಷ್ಯ ಪರ ಇರುವ ಎಲ್ಲ ರಾಜಕೀಯ ಪಕ್ಷ, ಸಾಹಿತಿಗಳು, ಜನಪರ ಸಂಘಟನೆಗಳನ್ನು ಆಹ್ವಾನಿಸಲಿದ್ದೇವೆ” ಎಂದು ಮುಕುಂದರಾಜ್ ತಿಳಿಸಿದರು.

“ಕಳೆದ ವರ್ಷ ಬೆಂಗಳೂರಿನಲ್ಲಿ ಪ್ರಾರಂಭಗೊಂಡ ಹೋರಾಟ ಸಮಿತಿಯೇ ಪಠ್ಯಪುಸ್ತಕ ಪರಿಶೀಲನೆ ಹೇಗಿರಬೇಕು? ಯಾವ್ಯಾವ ಅಂಶಗಳನ್ನೆಲ್ಲ ಕೈ ಬಿಟ್ಟಿದ್ದೀರಿ? ಯಾವ ಅಂಶಗಳನ್ನೆಲ್ಲ ಸೇರಿಸಬೇಕು ಎಂಬ ಮಾಹಿತಿಯನ್ನು ಅಂದಿನ ಬಿಜೆಪಿ ಸರ್ಕಾರಕ್ಕೆ ಕೊಡಲಾಗಿತ್ತು. ಅದನ್ನು ಸೇರಿಸಿದ್ದೇವೆ ಅಂತ ನೆಪ ಹೇಳಿ, ಹೊಸ ಸುತ್ತೋಲೆಯನ್ನು ಪ್ರಕಟಿಸಿದ್ದರು. ಹೊಸ ಸುತ್ತೋಲೆಯ ಅಂಶಗಳನ್ನು ಬೋಧಿಸಬೇಡಿ ಎಂದು ಪರೋಕ್ಷವಾಗಿ ಹೇಳಿದ್ದ ಸರ್ಕಾರ ಈಗ ರಾಜ್ಯದಲ್ಲಿ ಇಲ್ಲ. ಕರ್ನಾಟಕದ ನೆಲ-ಜಲ-ಭಾಷೆಗಳ ವಿಚಾರವಾಗಿ ನಡೆದಿರುವ ತಪ್ಪುಗಳನ್ನು ಈ ಸರ್ಕಾರ ಸರಿಪಡಿಸಬೇಕು. ಜೂ. 18ರಂದು ನಡೆಯುವ ಸಮಾವೇಶವು ಸಂಭ್ರಮಿಸುವ ದಿನವಲ್ಲ. ಬದಲಾಗಿ, ಈ ಸರ್ಕಾರ ಕೂಡ ತಪ್ಪು ಮಾಡಿದರೆ ಅದನ್ನು ಎಚ್ಚರಿಸುವ ಕನ್ನಡಿಗರ ಸ್ವಾಭಿಮಾನದ ಸಮಾವೇಶ” ಎಂದು ಜೆಡಿಎಸ್ ಮುಖಂಡ ಗಂಗಾಧರ ಮೂರ್ತಿ ತಿಳಿಸಿದರು.
ಈ ವೇಳೆ ಸಮಿತಿಯ ಕಾರ್ಯದರ್ಶಿ ನಾಗರಾಜ್ ಮತ್ತು ಯುವ ಮುಖಂಡ ಹ.ರಾ. ಮಹೇಶ್ ಮಾತನಾಡಿದರು.
ಈ ವೇಳೆ ಮಹದೇವಪ್ಪ, ಪ್ರಭಾ ಬೆಳವಂಗಲ, ಜಾಣಜಾಣೆಯರ ಜಗದೀಶ್, ಬಸವರಾಜ್, ನಾಗೇಶ್ ಅರಳಕುಪ್ಪೆ, ಡಾ. ನಾಗೇಶ್, ಗೊರೂರು ಪಂಕಜ, ಬೈರೇಗೌಡ, ಡಾ. ಮಧುಸೂಧನ್, ಹಲಗೂರು ಶಿವರಾಜ್, ರುದ್ರಪ್ಪ ಪುನೀತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.