ಬೆಳಗಾವಿ ಅಧಿವೇಶನದ ವೇಳೆ ವಿಧಾನ ಪರಿಷತ್‌ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ಅಸಹ್ಯವಾಗಿ ಮಾತನಾಡಿದ್ದು ಸತ್ಯ. ಸಿ.ಟಿ ರವಿ ಅಂತಹ ಮಾತುಗಳನ್ನು ಆಡಬಾರದಿತ್ತೆಂದು ಸದನದಲ್ಲಿಯೇ ಬಿಜೆಪಿಯ ಕೆಲ ಶಾಸಕರು ಲಕ್ಷ್ಮಿ ಹೆಬ್ಬಾಳ್ಕರ್ ಬಳಿ ಕ್ಷಮೆ ಕೇಳಿದ್ದಾರೆ ಎಂದು ಮುಖ್ಯಮಂತ್ರಿಗಳ ಸಲಹೆಗಾರ, ಆಳಂದ ಶಾಸಕ ಬಿ.ಆರ್ ಪಾಟೀಲ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಿ.ಆರ್ ಪಾಟೀಲ್ ಮಾತನಾಡಿದರು. “ಸಿ.ಟಿ. ರವಿ ಪರ ನಾವೇ ಕ್ಷಮೆಯಾಚಿಸುತ್ತೇವೆ ಎಂದು ಕೆಲ ಬಿಜೆಪಿ ಶಾಸಕರು ಲಕ್ಷ್ಮಿ ಹೆಬ್ಬಾಳ್ಕರ್ ಬಳಿ ಕ್ಷಮೆ ಕೇಳಿದ್ದಾರೆ. ಅವರ ಹೆಸರನ್ನು ನಾನು ಹೇಳಲು ಇಚ್ಛಿಸುವುದಿಲ್ಲ” ಎಂದು ಹೇಳಿದ್ದಾರೆ.
“ಮಹಾತ್ಮ ಗಾಂಧಿ ನೇತೃತ್ವದಲ್ಲಿ 1924ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷಗಳಾಗಿವೆ. ಬೆಳಗಾವಿಯಲ್ಲಿ ಡಿ.26 ಮತ್ತು 27ರಂದು ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಗಾಮೀಣಾಭಿವೃದ್ಧಿ ಬಗ್ಗೆ ಗಾಂಧಿ ಕನಸು ಕಂಡಿದ್ದರು. ಹೀಗಾಗಿ, ಗದಗ ಗ್ರಾಮೀಣ ವಿಶ್ವವಿದ್ಯಾಲಯಕ್ಕೆ ಗಾಂಧಿ ಅವರ ಹೆಸರಿಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಾಜಶೇಖರ್ ಯಂಕಂಚಿ, ಬಾಬುರಾವ್ ಗೊಬ್ಬುರ್ ಇದ್ದರು.