ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ ಕಾವಡ್ ಯಾತ್ರೆಗೆ ಮಾರ್ಗ ಗುರುತಿಸಲಾಗಿದ್ದು, ಮಾರ್ಗದಲ್ಲಿರುವ ಎರಡು ಮಸೀದಿಗಳು ಮತ್ತು ಮಝಾರ್ ಕಾಣದಂತೆ ಪರದೆಗಳನ್ನು ಅಳವಡಿಸಲಾಗಿದೆ. ಸ್ಥಳೀಯ ಆಡಳಿತ ಮತ್ತು ಸರ್ಕಾರದ ಈ ಕ್ರಮದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪವಾಗಿದ್ದು, ಬಳಿಕ ಪರದೆಗಳನ್ನು ತೆರವುಗೊಳಿಸಲಾಗಿದೆ.
ಇತ್ತೀಚೆಗೆ, ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಕಾವಡ್ ಯಾತ್ರೆ ವೇಳೆ ಅಂಗಡಿ ಮಳಿಗೆಗಳ ಮಾಲೀಕರು ತಮ್ಮ ಹೆಸರುಳ್ಳ ನಾಮಫಲಕಗಳನ್ನು ಅಂಗಡಿಗಳ ಮುಂದೆ ಪ್ರದರ್ಶಿಸಬೇಕೆಂದು ಪೊಲೀಸರು ಆದೇಶ ಹೊರಡಿಸಿದ್ದರು. ಆದೇಶವು ವಿವಾದ ಸೃಷ್ಟಿಸಿತ್ತು. ಬಳಿಕ, ಪೊಲೀಸರ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಇದೀಗ, ಉತ್ತರಾಖಂಡದ ಹರಿದ್ವಾರದಲ್ಲಿ ಅಂತದ್ದೇ ವಿವಾದವನ್ನು ಆಡಳಿತ ಸೃಷ್ಟಿಸಿದೆ.
ಹರಿದ್ವಾರದ ಜ್ವಾಲಾಪುರ ಪ್ರದೇಶದಲ್ಲಿರುವ ಎರಡು ಮಸೀದಿಗಳು ಮತ್ತು ಮಝಾರ್ ಮುಂದೆ ಬಿದಿರಿನ ಬಂಬುಗಳನ್ನು ಕಟ್ಟಿ, ಬಿಳಿ ಬಣ್ಣದ ಪರದೆಗಳನ್ನು ಹಾಕಲಾಗಿತ್ತು. ಶಾಂತಿ ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಸತ್ಪಾಲ್ ಮಹಾರಾಜ್ ಸಮರ್ಥಿಸಿಕೊಂಡಿದ್ದರು. ಅಲ್ಲದೆ, ಇದೇನು ದೊಡ್ಡ ವಿಷಯವಲ್ಲ. ನಾವು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಕೂಡ ಮುಚ್ಚಿದ್ದೇವೆ ಎಂದು ಹೇಳಿದ್ದಾರೆ.
ಅದಾಗ್ಯೂ, ವಿಪಕ್ಷಗಳು ಹಾಗೂ ಸ್ಥಳೀಯರ ಆಕ್ಷೇಪ, ಆಕ್ರೋಶಕ್ಕೆ ಮಣಿದಿರುವ ಜಿಲ್ಲಾಡಳಿತ ಪರದೆಗಳನ್ನು ತೆಗೆದುಹಾಕಿದೆ. “ನಾನು ನನ್ನ ಜೀವನದಲ್ಲಿ ಇಂತಹದ್ದನ್ನು ನೋಡಿಲ್ಲ. ನಾವು ಮುಸ್ಲಿಮರು ಯಾವಾಗಲೂ ಕಾವಡ್ ಯಾತ್ರೆ ವೇಳೆ ಶಿವಭಕ್ತರನ್ನು ಸ್ವಾಗತಿಸುತ್ತೇವೆ. ಅವರಿಗೆ ವಿವಿಧ ಸ್ಥಳಗಳಲ್ಲಿ ಉಪಹಾರಗಳನ್ನು ಒದಗಿಸುತ್ತೇವೆ. ಹರಿದ್ವಾರದಲ್ಲಿ ಹಿಂದು-ಮುಸ್ಲಿಮರ ನಡುವೆ ಸೌಹಾರ್ದತೆ ಇದೆ. ಆದರೆ, ಸರ್ಕಾರ ವಿಭಜಿಸುವ ಪ್ರಯತ್ನ ಮಾಡುತ್ತಿದೆ” ಎಂದು ಕಾಂಗ್ರೆಸ್ ನಾಯಕ ನಯೀಮ್ ಖುರೇಷಿ ಕಿಡಿಕಾರಿದ್ದಾರೆ.