ರಾಜ್ಯದಲ್ಲಿ ಮತದಾರರ ಪಟ್ಟಿ ಅಕ್ರಮ ಪರಿಶೀಲಿಸಲು ಚುನಾವಣಾ ಆಯೋಗಕ್ಕೆ ಮನವಿ: ಡಿ.ಕೆ ಶಿವಕುಮಾರ್

Date:

Advertisements

ಇಡೀ ರಾಜ್ಯದಲ್ಲಿ ಮತದಾರರ ಪಟ್ಟಿ ಅಕ್ರಮದ ಪರಿಶೀಲನೆ ಮಾಡಲು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಮಹದೇವಪುರ ವಿಧಾನಸಭೆ ಕ್ಷೇತ್ರ ಸೇರಿದಂತೆ ರಾಜ್ಯದ ನಾನಾ ಕಡೆ ಚುನಾವಣೆ ಆಯೋಗದಿಂದಲೇ ಮತ ಅಕ್ರಮ ಕುರಿತು ಕೆಪಿಸಿಸಿ ಅಧ್ಯಕ್ಷರೂ ಆದ ಡಿ ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗ ಬೆಂಗಳೂರಿನಲ್ಲಿ ರಾಜ್ಯ ಚುನಾವಣೆ ಆಯೋಗದ ಕಚೇರಿಗೆ ತೆರಳಿ ದೂರು ಸಲ್ಲಿಸಿತು.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, “ಅನ್ಯಾಯದ ವಿರುದ್ಧ ಹೋರಾಡಿ, ಮತದಾನದ ಹಕ್ಕು ರಕ್ಷಣೆ ಮಾಡಿಕೊಳ್ಳಲು ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಾವು ಪ್ರತಿಭಟನೆ ನಡೆಸಿದ್ದೆವು. ಕೋರ್ಟ್ ಆದೇಶ ಗಮನದಲ್ಲಿಟ್ಟುಕೊಂಡು, ಚುನಾವಣಾ ಆಯೋಗದ ಕಚೇರಿಗೆ ಮೆರವಣಿಗೆ ಮೂಲಕ ಬರುವುದು ಬೇಡ ಎಂದು ತೀರ್ಮಾನಿಸಿ ಪಕ್ಷದ ವತಿಯಿಂದ ಕೆಲವು ನಾಯಕರಷ್ಟೇ ಆಗಮಿಸಿದೆವು. ಚುನಾವಣೆಯಲ್ಲಿ ಹೇಗೆ ಅನ್ಯಾಯವಾಗಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಇದು ರಾಜ್ಯದ ಉದ್ದಗಲಕ್ಕೆ ನಡೆದಿರುವ ಅನ್ಯಾಯ. ನಾವು ಕೆಲವು ಕ್ಷೇತ್ರಗಳಲ್ಲಿ ಮಾತ್ರ ಅಧ್ಯಯನ ಮಾಡಿದ್ದೇವೆ. ನಾವು ಐದಾರು ಪ್ರದೇಶಗಳನ್ನು ಪ್ರಸ್ತಾಪಿಸಿ, ಇಡೀ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದ್ದೇವೆ” ಎಂದು ತಿಳಿಸಿದರು.

ಇದನ್ನು ಓದಿದ್ದೀರಾ? ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮತ ಕಳವು: ಚುನಾವಣಾ ಆಯೋಗವೇ ನೇರ ಬೆಂಬಲ ನೀಡಿತೆ?  

Advertisements

“ಆಯೋಗಕ್ಕೆ ನಾವು ಮಹದೇವಪುರ ಹಾಗೂ ಗಾಂಧಿನಗರದ ಮಾದರಿಗಳನ್ನು ಸಲ್ಲಿಸಿಲ್ಲ. ನಿನ್ನೆ ಮಾಧ್ಯಮಗೋಷ್ಠಿಯಲ್ಲಿ ರಾಹುಲ್ ಗಾಂಧಿ ಅವರು ಬಿಡುಗಡೆ ಮಾಡಿದ್ದು ಕೇವಲ ಉದಾಹರಣೆ. ರಾಜ್ಯದ ಕೆಲವು ಭಾಗಗಳಲ್ಲಿ ಈ ರೀತಿ ಅನ್ಯಾಯವಾಗಿದ್ದು, ಎಲ್ಲಾ ಕಡೆ ಪರಿಶೀಲನೆ ಮಾಡಿ ಈ ಅಕ್ರಮವನ್ನು ಪತ್ತೆಹಚ್ಚಬೇಕು. ಈ ಅಕ್ರಮದಲ್ಲಿ ಭಾಗಿಯಾಗಿರುವ ರಿಟರ್ನಿಂಗ್ ಅಧಿಕಾರಿ, ಬಿಎಲ್ಒ ಸೇರಿದಂತೆ ಯಾರೇ ಆಗಿದ್ದರೂ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದೇವೆ” ಎಂದು ಮಾಹಿತಿ ನೀಡಿದರು.

“ಒಂದೇ ಮತದಾರರ ಹೆಸರನ್ನು ಐದು ಕಡೆ ಸೇರಿಸುವುದು, ಮನೆ ವಿಳಾಸ ಇಲ್ಲದೆ ಮತಪಟ್ಟಿಯಲ್ಲಿ ಸೇರಿಸುವುದು, ಖಾಲಿ ನಿವೇಶನಗಳ ವಿಳಾಸದಲ್ಲಿ ನಕಲಿ ಮತ ಸೇರಿಸುವುದು, ಮತಗಳನ್ನು ಪಕ್ಕದ ಬೂತ್‌ಗಳಿಗೆ ವರ್ಗಾಯಿಸಿ ಅಕ್ರಮ ಎಸಗಿರುವುದಕ್ಕೆ ಸಾಕಷ್ಟು ದಾಖಲೆಗಳಿವೆ. ಹೀಗಾಗಿ ನಾವು ಆಯೋಗಕ್ಕೆ 8-10 ಅಂಶಗಳನ್ನು ಹಾಕಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮತದಾರರ ಪಟ್ಟಿಯ ಡಿಜಿಟಲ್ ಮಾದರಿ ಸೇರಿದಂತೆ ನಮಗೆ ಯಾವ ರೀತಿ ಮಾಹಿತಿ ಬೇಕು ಎಂದು ಆಯೋಗಕ್ಕೆ ಕೇಳಿದ್ದೇವೆಯೇ ಹೊರತು, ನಾವು ಸಂಪೂರ್ಣ ವಿವರವನ್ನು ನೀಡಿಲ್ಲ” ಎಂದು ಸ್ಪಷ್ಟನೆ ನೀಡಿದರು.

“ಚುನಾವಣಾ ಆಯೋಗಕ್ಕೆ ಹೊಸದಾಗಿ ಬಂದಿರುವ ಅನ್ಬುಕುಮಾರ್ ಅವರು ಪರಿಶೀಲನೆ ಆರಂಭಿಸಿರುವುದಾಗಿ ನಮಗೆ ತಿಳಿಸಿದರು. ಅವರ ಕ್ರಮ ಸ್ವಾಗತಾರ್ಹ. ಯಾವ ಕ್ಷೇತ್ರಗಳಲ್ಲಿ ಏನೆಲ್ಲಾ ಅನ್ಯಾಯ ಆಗಿದೆ, ಮುಂದೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ವಿಚಾರ ತಿಳಿಸುತ್ತೇವೆ. ಇದು ಕೇವಲ ಕರ್ನಾಟಕ ಅಥವಾ ಮಹದೇವಪುರಕ್ಕೆ ಸೀಮಿತವಾದ ಹೋರಾಟವಲ್ಲ” ಎಂದು ತಿಳಿಸಿದರು.

“ನಿಮ್ಮದೇ ಸರ್ಕಾರ, ನಿಮ್ಮದೇ ಅಧಿಕಾರಿ ಎಂದು ಕೆಲವರಲ್ಲಿ ಪ್ರಶ್ನೆ ಮೂಡಬಹುದು. ಎಲ್ಲಾ ನಿಯಂತ್ರಣ ಆಯೋಗದ ಕೈಯಲ್ಲಿ ಇರಲಿದೆ. ಕಂಪ್ಯೂಟರ್‌ನಲ್ಲಿ ನನ್ನ ಹೆಸರು ಹಾಕಿದರೆ, ನನ್ನ ಹೆಸರಲ್ಲಿ ಎಷ್ಟು ಕಡೆ ಮತ ಇದೆ ಎಂದು ಗೊತ್ತಾಗುತ್ತದೆ. ಇದನ್ನು ಪರಿಶೀಲಿಸುವಷ್ಟು ಸೌಜನ್ಯ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಇರಬೇಕು. ಹೀಗಾಗಿ ನಾವು ಅವರ ಗಮನ ಸೆಳೆದಿದ್ದೇವೆ. ಇಡೀ ದೇಶದಲ್ಲಿ ಇದು ವ್ಯಾಪಕ ಚರ್ಚೆ ಆಗಬೇಕಿದೆ. ಈ ನಿಟ್ಟಿನಲ್ಲಿ ನಾವು ಪ್ರತಿಭಟನೆ ನಡೆಸಿದ್ದು, ಮುಂದಿನ ದಿನಗಳಲ್ಲಿ, ಇದನ್ನು ಮುಂದುವರಿಸುತ್ತೇವೆ” ಎಂದರು.

ಇದನ್ನು ಓದಿದ್ದೀರಾ? ಮೋದಿ ಮತಗಳ ಕಳವು ಮಾಡಿ ಪ್ರಧಾನಿಯಾಗಿದ್ದಾರೆ, ಸಾಬೀತುಪಡಿಸಬಲ್ಲೆವು: ರಾಹುಲ್ ಗಾಂಧಿ

ರಾಹುಲ್ ಗಾಂಧಿ ಅವರಿಂದ ಅಫಿಡವಿಟ್ ಬೇಕು ಎಂಬ ಆಯೋಗದ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದಾಗ, “ಯಾವ ಅಫಿಡವಿಟ್ ಬೇಕು? ನಾನು, ರಾಹುಲ್ ಗಾಂಧಿ ಅವರೇ ಅಫಿಡವಿಟ್. ಚುನಾವಣೆಗೆ ಸ್ಪರ್ಧಿಸುವಾಗ, ಗೆದ್ದ ನಂತರ ನಮ್ಮಿಂದ ಅಫಿಡವಿಟ್ ತೆಗೆದುಕೊಂಡ ಮೇಲೆ ನಮ್ಮ ಮಾತಿಗಿಂತ ಇನ್ನೇನು ಅಫಿಡವಿಟ್ ಬೇಕು? ನಾವು ಸುಳ್ಳು ಹೇಳಿದ್ದರೆ, ಗಲ್ಲಿಗೆ ಹಾಕಿ. ರಾಹುಲ್ ಗಾಂಧಿ ಅವರ ಆರೋಪವನ್ನು ಆಯೋಗದವರು ನಿರಾಕರಿಸಿದ್ದಾರಾ? ಅವರು ಅಫಿಡವಿಟ್ ಕೇಳಿದ ಕಾರಣಕ್ಕೆ ನಾವು ಅವರಿಂದ ಮಾಹಿತಿ ಬಯಸುತ್ತಿದ್ದೇವೆ. ನಾವು ಪಡೆದಿರುವ ಮಾಹಿತಿ ಆರ್‌ಟಿಐ ಮೂಲಕ ಸಂಗ್ರಹಿಸಿರುವ ಮಾಹಿತಿ” ಎಂದು ತಿಳಿಸಿದರು.

ಅಕ್ರಮ ಎಲ್ಲೇ ಆಗಲಿ, ಯಾರೇ ಮಾಡಲಿ, ತಪ್ಪು ತಪ್ಪೇ: ಡಿಸಿಎಂ

ಅರವಿಂದ ಲಿಂಬಾವಳಿ ಅವರು ಚಾಮರಾಜಪೇಟೆ, ವರುಣಾ ಕ್ಷೇತ್ರಗಳಲ್ಲಿ ಡಬಲ್ ಎನ್ ರೋಲ್ ಆಗಿರುವ ಬಗ್ಗೆ ಮಾಹಿತಿ ನೀಡಿರುವ ಬಗ್ಗೆ ಕೇಳಿದಾಗ, “ವರುಣಾ, ಚಾಮರಾಜಪೇಟೆ, ಕನಕಪುರ ಯಾವುದೇ ಕ್ಷೇತ್ರ ಇರಲಿ. ಈ ತಪ್ಪು ಎಲ್ಲಾದರೂ ತಪ್ಪೆ. ಕ್ರಮ ಕೈಗೊಳ್ಳಲಿ. ಸಂವಿಧಾನದ ಆಶಯ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಬೇಕು” ಎಂದು ತಿಳಿಸಿದರು.

ಬಿಜೆಪಿ ನಾಯಕರ ಟೀಕೆ ಬಗ್ಗೆ ಕೇಳಿದಾಗ, “ನಾವು ಬಿಜೆಪಿ ನಾಯಕರ ಹೇಳಿಕೆಗಳಿಗೆ ಉತ್ತರ ನೀಡುವುದಿಲ್ಲ. ನಮ್ಮ ಹೋರಾಟ ಏನಿದ್ದರೂ ಚುನಾವಣಾ ಆಯೋಗದ ವಿರುದ್ಧ. ಅವರು ಒಂದು ಪಕ್ಷದ ಧ್ವನಿಯಾಗಿ ಕೆಲಸ ಮಾಡಬಾರದು ಎಂಬುದು ನಮ್ಮ ಹೋರಾಟ” ಎಂದು ತಿಳಿಸಿದರು.

ನನ್ನ ಕ್ಷೇತ್ರದ ಎರಡು ವಿಧಾಸಭಾ ಕ್ಷೇತ್ರದಲ್ಲಿ ಈ ರೀತಿ ಆಗಿದೆ ಎಂಬ ಡಿ.ಕೆ. ಸುರೇಶ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಈ ಹಿಂದೆಯೇ ಕೇಂದ್ರ ಚುನಾವಣಾ ಆಯೋಗಕ್ಕೆ ಹೋಗಿ ಮಾಹಿತಿ ಸಮೇತ ಪತ್ರ ಬರೆದಿದ್ದರು. ಅದರ ದಾಖಲೆ ನನ್ನ ಬಳಿ ಇದೆ. ಆದರೆ ಆಯೋಗ ಆ ಪತ್ರವನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ” ಎಂದರು.

ಶಿವಕುಮಾರ್ 1

ಇಂಡಿಯಾ ಟುಡೆ ಫ್ಯಾಕ್ಟ್ ಚೆಕ್‌ಗೆ ಅಭಿನಂದನೆ

ಇಂಡಿಯಾ ಟುಡೆ ಮಾಡಿರುವ ಫ್ಯಾಕ್ಟ್ ಚೆಕ್ ವರದಿಯಲ್ಲಿ ರಾಹುಲ್ ಗಾಂಧಿ ಅವರ ಆರೋಪ ಸಾಬೀತಾಗಿರುವುದರ ಬಗ್ಗೆ ಕೇಳಿದಾಗ, “ನಾನು ಮೊದಲು ಇಂಡಿಯಾ ಟುಡೆ ಮಾಧ್ಯಮಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮಾಧ್ಯಮಗಳು ಕೂಡ ಪ್ರಜಾಪ್ರಭುತ್ವದ ಭಾಗ. ನಾವೆಲ್ಲರೂ ಸೇರಿ ಇದನ್ನು ಉಳಿಸಬೇಕು. ನಾವೆಲ್ಲರೂ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು. ನಿಮ್ಮ ಕಾರ್ಯಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಚುನಾವಣಾ ಆಯೋಗಕ್ಕೆ ಆಕ್ಷೇಪಣೆ ಹಾಕಲು ಈಗ ಕಾಲ ಮೀರಿದೆ ಎಂಬ ಅರಿವು ನಮಗಿದೆ. ಆದರೆ ಹದಗೆಟ್ಟಿರುವ ವ್ಯವಸ್ಥೆಯನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ತಿಳಿಸಿದರು.

ರಾಹುಲ್ ಗಾಂಧಿ ಅವರ ಆರೋಪ ನಿರಾಧಾರ ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, “ನಾವು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡುತ್ತಿಲ್ಲ. ನಾವು ಚುನಾವಣಾ ಆಯೋಗವನ್ನು ಪ್ರಶ್ನಿಸುತ್ತಿದ್ದೇವೆ. ಅವರು ಏನಾದರೂ ಟೀಕೆ ಮಾಡಲಿ. ನಾವು ನಮ್ಮ ಕರ್ತವ್ಯ ನಿಭಾಯಿಸುತ್ತೇವೆ” ಎಂದರು. “ಬಿಜೆಪಿ ನಾಯಕರ ಈ ವರ್ತನೆ ಅವರು ಈ ಅಕ್ರಮದಲ್ಲಿ ಭಾಗಿಯಾಗಿರುವುದನ್ನು ತೋರಿಸುತ್ತಿದೆ” ಎಂದು ತಿರುಗೇಟು ನೀಡಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

Download Eedina App Android / iOS

X