ದ.ಕ ಜಿಲ್ಲೆಯ ಇತ್ತೀಚಿನ ಬೆಳವಣಿಗೆ ಮತ್ತು ರಾಜ್ಯ ಸರ್ಕಾರದ ಗೃಹ ಇಲಾಖೆಯ ವೈಫಲ್ಯಕ್ಕೆ ಮನನೊಂದು ಸಾಮೂಹಿಕ ರಾಜೀನಾಮೆಗೆ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ತೀರ್ಮಾನ ಮಾಡಿದ್ದಾರೆ.
ಇಂದು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಅಲ್ಪಸಂಖ್ಯಾತ ಘಟಕದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಬೂತ್ ಕಮಿಟಿ ಬ್ಲಾಕ್ ಸಮಿತಿ ಜಿಲ್ಲಾ ಘಟಕ, ರಾಜ್ಯ ಘಟಕಗಳ ಹುದ್ದೆಗಳಿಗೆ ರಾಜೀನಾಮಗೆ ತೀರ್ಮಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನವಾಝ್, ರಾಜ್ಯ ಅಲ್ಪಸಂಖ್ಯಾತ ಘಟಕದ ನಾಯಕ ನಾಸಿರ್ ಲಕ್ಕಿಸ್ಟಾರ್, ಕೆಪಿಸಿಸಿ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ವಹಾಬ್ ಕುದ್ರೋಳಿ, ಮಾಜಿ ಪಾಲಿಕೆ ಸದಸ್ಯರಾದ ರವೂಫ್, ಲತೀಫ್ ಕಂದಕ್ ಸೇರಿ ಎಲ್ಲಾ ಬೂತ್ ಮಟ್ಟದ ಹುದ್ದೆಗಳಿಗೆ, ಬ್ಲಾಕ್ ಮಟ್ಟದ ಹುದ್ದೆಗಳಿಗೆ, ಜಿಲ್ಲಾ ಘಟಕ ಮತ್ತು ರಾಜ್ಯ ಘಟಕಗಳ ವಿವಿಧ ಹುದ್ದೆಗಳಿಗೆ ರಾಜೀನಾಮೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
ಮುಂದಿನ ನಿರ್ಧಾರದ ಬಗ್ಗೆ ಚರ್ಚಿಸಲು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕವು ಮೇ 29ರಂದು ಅಪರಾಹ್ನ 2.30ಕ್ಕೆ ನಗರದ ಬೋಳಾರ ಶಾದಿಮಹಲ್‌ನ ಸಭಾಂಗಣದಲ್ಲಿ ಸಭೆ ಕರೆದಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಆಡಳಿತಕ್ಕೆ 11 ವರ್ಷ; ದೇಶ ಉದ್ಧಾರವಾಯಿತೇ?
ಜಿಲ್ಲೆಯಲ್ಲಿ ಸರಣಿ ಕೊಲೆಗಳು ನಡೆಯುತ್ತಿವೆ. ಇದನ್ನು ತಡೆಯುವಲ್ಲಿ ಗೃಹ ಇಲಾಖೆಯ ವೈಫಲ್ಯ ಮತ್ತು ಮುಸ್ಲಿಮರ ಕಡೆಗಣನೆ ಬೇಸತ್ತು ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದಿಂದ ಹಿಡಿದು ರಾಜ್ಯ ಘಟಕದವರೆಗಿನ ವಿವಿಧ ಹುದ್ದೆಯಲ್ಲಿರುವ ಮುಸ್ಲಿಮ್ ಮುಖಂಡರು ಮತ್ತು ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ಪ್ರಕಟಿಸುವ ನಿಟ್ಟಿನಲ್ಲಿ ಈ ಸಭೆ ಕರೆಯಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮುಹಮ್ಮದ್ ಮತ್ತು ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.