- ದಲಿತರಿಗೆ ಉನ್ನತ ಸ್ಥಾನ ನೀಡಿ ಬಿಜೆಪಿ ತನ್ನ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ
- ಯೋಗ್ಯತೆ ಇರುವ ಒಂದೇ ಒಂದು ಮನುಷ್ಯಾಕೃತಿಯೂ ಬಿಜೆಪಿಯಲ್ಲಿಲ್ಲ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೇ ನೀಡಿದ್ದೇನೆ ಎಂದು ಹೇಳಿಕೆ ನೀಡಿದ್ದ ನಳಿನ್ ಕುಮಾರ್ ಕಟೀಲ್, ಬಳಿಕ ನಾನು ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದಾದ ಬಳಿಕ ಬಿಜೆಪಿ ವಲಯದಲ್ಲಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಕಾಂಕ್ಷಿಗಳು ಪೈಪೋಟಿಗೆ ಇಳಿದಿದ್ದಾರೆ.
ಈ ನಡುವೆ “ಬಿಜೆಪಿ ರಾಜ್ಯಾಧ್ಯಕ್ಷನಾಗಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ನಾನು ಕೂಡ ಬಿಜೆಪಿಯ ಹಿರಿಯ ನಾಯಕ. ಪಕ್ಷ ಅವಕಾಶ ಕೊಟ್ಟರೆ ನಾನು ಕೂಡ ರಾಜ್ಯಾಧ್ಯಕ್ಷನಾಗುವೆ. ಬಿಜೆಪಿಯಲ್ಲಿ ದಲಿತರು ರಾಜ್ಯ ಘಟಕದ ಅಧ್ಯಕ್ಷ ಆಗಬಾರದೇ?” ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿಕೆ ನೀಡಿದ್ದರು.
ಸಂಸದ ರಮೇಶ್ ಜಿಗಜಿಣಗಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಟ್ವೀಟ್ ಮಾಡಿ ಬಿಜೆಪಿಯನ್ನು ಟೀಕಿಸಿದೆ.
“ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಕುರ್ಚಿಯ ಮೇಲೆ ಹತ್ತಾರು ಟವೆಲ್‌ಗಳು ಬಿದ್ದಿವೆ. ಹುದ್ದೆಯ ಆಸೆಗಾಗಿಯೇ ಪರಸ್ಪರ ಹೊಂದಾಣಿಕೆ ರಾಜಕೀಯದ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ದಲಿತರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಕೂಗೆದ್ದಿದೆ, ಆದರೆ ಇದು ವಿಫಲ ಕೂಗು, ಬಿಜೆಪಿಯ ಗರ್ಭಗುಡಿಗೆ ದಲಿತರಿಗೆ ಪ್ರವೇಶವಿಲ್ಲ” ಎಂದು ಕಾಂಗ್ರೆಸ್ ಕುಟುಕಿದೆ.

ಇಷ್ಟಕ್ಕೆ ಸುಮ್ಮನಾಗದ ಕಾಂಗ್ರೆಸ್, “ದಲಿತರಿಗೆ ಉನ್ನತ ಸ್ಥಾನ ನೀಡಿ ಬಿಜೆಪಿ ತನ್ನ ದಲಿತವಿರೋಧಿ ಕೃತ್ಯಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ” ಎಂದು ಅಭಿಪ್ರಾಯಪಟ್ಟಿದೆ.
ಯೋಗ್ಯತೆ ಇರುವ ಒಂದೇ ಒಂದು ಮನುಷ್ಯಾಕೃತಿಯೂ ಇಲ್ಲ
“ಬಿಜೆಪಿಯಲ್ಲಿ ವಿಪಕ್ಷ ನಾಯಕನಾಗಲು ಯೋಗ್ಯತೆ ಇರುವ ಒಂದೇ ಒಂದು ಮನುಷ್ಯಾಕೃತಿಯೂ ಇಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಬಾಯಿ ತೆರೆದರೆ ಹೊಲಸು ಮಾತುಗಳು. ಆರ್ ಅಶೋಕ, ತಾನೇನು ಮಾತಾಡುತ್ತೇನೆ ಎಂಬ ಅರಿವು ಅವರಿಗೇ ಇರುವುದಿಲ್ಲ. ಡಾ. ಸಿ ಎನ್ ಅಶ್ವತ್ಥನಾರಾಯಣ ಅವರಿಗೆ ಸದಾ ಗಂಡಸ್ಥನದ ಬಗ್ಗೆಯೇ ಚಿಂತೆ. ಇನ್ನು ಬಸವರಾಜ ಬೊಮ್ಮಾಯಿ ಪ್ರತಾಪ್ ಸಿಂಹನನ್ನೇ ಎದುರಿಸಲಾಗದವರು ಸಿದ್ದರಾಮಯ್ಯರನ್ನು ಎದುರಿಸಲು ಸಾಧ್ಯವೇ?” ಎಂದು ಕಾಂಗ್ರೆಸ್ ಟೀಕಿಸಿದೆ.