“ಕರ್ನಾಟಕದಲ್ಲಿ ಪ್ರೊ.ಬಿ.ಕೆ. ಯವರು ನಡೆಸಿದ ಹಲವಾರು ಹೋರಾಟಗಳಿಂದ ದಲಿತರಲ್ಲಿ ಆತ್ಮಸ್ಟೈರ್ಯ ಹೆಚ್ಚಾಯಿತು” ಎಂದು ದಾವಣಗೆರೆ ಜಿಲ್ಲೆ ಹರಿಹರದ ಪ್ರೊ.ಕೃಷ್ಣಪ್ಪ ಸ್ಮಾರಕ ಮೈತ್ರಿವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ಅಭಿಮತ ವ್ಯಕ್ತಪಡಿಸಿದರು.
ಹರಿಹರ ನಗರದ ಶ್ರೀಶೈಲ ವಾಗೀಶ ಪಂಡಿತಾರಾಧ್ಯ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ”ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪ್ರೊ.ಬಿ.ಕೃಷ್ಣಪ್ಪರವರ ಸಾಧನೆಗಳು” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

“ಪ್ರೊ. ಡಿ ಕೃಷ್ಣಪ್ಪನವರ ದಲಿತರಿಗೆ ಭೂಮಿ ಮಂಜೂರಾತಿ, ಧರ್ಮದ ಹೆಸರಲ್ಲಿ ಮೌಡ್ಯಾಚರಣೆ ವಿರೋಧಿ, ಹೋಬಳಿಗೊಂದು ವಸತಿ ಶಾಲೆ, ವಿದ್ಯಾರ್ಥಿ ವೇತನ, ಮೀಸಲಾತಿ ಸೇರಿದಂತೆ ಹತ್ತಾರು ಬಗೆಯ ನಿರಂತರ ಹೋರಾಟ ಆಡಳಿತಗಾರರ ಒಳಗಣ್ಣು ತೆರೆಸಿದವು” ಎಂದರು.
“20ನೇ ಶತಮಾನದಲ್ಲಿ 4 ದಶಕಗಳ ಹೋರಾಟದ ಮೂಲಕ ರಾಜ್ಯದ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಸಂರಕ್ಷಣೆಗಾಗಿ ಅತ್ಯಂತ ಸಮರ್ಥವಾಗಿ ಮುಖಾಮುಖಿಯಾದ ಕೃಷ್ಣಪ್ಪನವರು ರಾಜ್ಯದ ಬಹುದೊಡ್ಡ ಹೋರಾಟಗಾರರಾಗಿ ಹೊರಹೊಮ್ಮಿದರು”ಎಂದು ಸ್ಮರಿಸಿದರು.
“ಪ್ರೊಫೆಸರ್ ನಾಯಕತ್ವದಲ್ಲಿ ರಾಜ್ಯದಲ್ಲಿ ಜ್ವಾಲಾಮುಖಿಯಂತೆ ಸ್ಪೋಟಗೊಂಡ ದಸಂಸ ಸಂಘಟನೆ ಅತಿ ಕಡಿಮೆ ಅವಧಿಯಲ್ಲಿ ರಾಜ್ಯದ ಮೂಲೆ, ಮೂಲೆಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸಿ ದೊಡ್ಡ ಶಕ್ತಿಯಾಗಿ ರೂಪಗೊಂಡಿದ್ದು ಜಾತಿವಾದಿಗಳಿಗೆ ಮತ್ತು ಆಳುವ ವರ್ಗಗಳಿಗೆ ಹಾಗೂ ಭೂ ಮಾಲಿಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತು. ಅಖಂಡ ಮಾನವತಾವಾದಿ ಡಾ.ಅಂಬೇಡ್ಕರ್ ಅವರ ಆಲೋಚನೆಗಳನ್ನು ರಾಜ್ಯದ ಕೇರಿ, ಕೇರಿಗಳಲ್ಲಿ ಬಿತ್ತಿದ ಕೃಷ್ಣಪ್ಪನವರು ಒಂದು ಹೊಸ ಸಾಂಸ್ಕೃತಿಕ ಪ್ರಜ್ಞಾವಲಯವನ್ನು ಕಟ್ಟುವ ಮೂಲಕ ದಲಿತರ ಬದುಕಿಗೆ ದಾರಿ ದೀಪವಾದರು” ಎಂದರು.
“ಬಗರ್ ಹುಕುಂ ಸಾಗುವಳಿ ಒತ್ತುವರಿ ಜಮೀನು, ಹೆಚ್ಚುವರಿ ಜಮೀನು, ಸಿ ಮತ್ತು ಡಿ ಭೂಮಿ ವಿತರಣೆಯ ಬಾಪ್ಪು 28,000 ಎಕರೆ ಜಮೀನು ಸೇರಿದಂತೆ 1980ರಲ್ಲಿ ಚೆಂಡೆಗೋಡು, 1981ರಲ್ಲಿ ಬಿದರೆಕಾವಲು, 1983ರಲ್ಲಿ ದೇವಲಾಪುರ, ಚಂದ್ರಗುತ್ತಿ, ಭೂ ಹೋರಾಟಗಳು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ತಲೆ ಎತ್ತಿ ನಿಲ್ಲುವಂತೆ ಮಾಡಿತು” ಎಂದರು.
ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ಪ್ರಾಧ್ಯಾಪಕ ಪ್ರೊ.ಬಿ.ಎಲ್. ರಾಜು ಡಾ.ಅಂಬೇಡ್ಕರ್ ರವರ ಕುರಿತು ಉಪನ್ಯಾಸ ನೀಡಿ, “ಅಂಬೇಡ್ಕರ್ ನೈಪುಣ್ಯತೆ, ಜ್ಞಾನವನ್ನಾಧರಿಸಿ ದೇಶದಲ್ಲಿ ವ್ಯಕ್ತಿಗಳಿಗೆ ಆಧ್ಯತೆ ಸಿಗಬೇಕೆ ಹೊರತು ಜಾತಿಯನ್ನಾಧರಿಸಿ ಅಲ್ಲ ಎಂದು ಅವರು ಪ್ರಬಲವಾಗಿ ಪ್ರತಿಪಾದಿಸಿದರು. ವಿವಿಧ ವಿಷಯಗಳಲ್ಲಿ ಭಾರತವೂ ಸೇರಿದಂತೆ ಲಂಡನ್, ಅಮೇರಿಕಾ ವಿಶ್ವವಿದ್ಯಾನಿಲಯಗಳಿಂದ 30 ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದ ಅಂಬೇಡ್ಕರ್ ಸಹಜವಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಹಾಗೂ ಮಹಿಳೆಯರ ನಿಕೃಷ್ಟ ಬದುಕನ್ನು ಗಮನಿಸಿದ ಅಂಬೇಡ್ಕರ್ ರವರು ಇವರ ಸಂರಕ್ಷಣೆಗಾಗಿಯೆ ಸಂವಿಧಾನದಲ್ಲಿ ವಿಶೇಷ ಕಾಳಜಿ ವಹಿಸಿದರು” ಎಂದರು.
“ಹಿಂದೂ ಕೋಡ್ ಬಿಲ್ ರಚಿಸಿ ಜಾರಿಗೆ ತಂದ ಪರಿಣಾಮವಾಗಿ ದೇಶದ ಎಲ್ಲಾ ವರ್ಗದ ಮಹಿಳೆಯರಿಗೆ ಪ್ರಥಮ ಬಾರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ದೊರೆಯಿತು. ಈ ಕಾಯ್ದೆ ಜಾರಿಗೆ ತಂದ ಪರಿಣಾಮವಾಗಿ ಮೇಲ್ವರ್ಗದವರ ಟೀಕೆಯಿಂದಾಗಿ ಸಚಿವ ಸ್ಥಾನಕ್ಕೆ ಅವರು ರಾಜಿನಾಮೆ ನೀಡಬೇಕಾಗಿ ಬಂದದ್ದು ವಿಪರ್ಯಾಸ” ಎಂದರು.
ಈ ಸುದ್ದಿ ಓದಿದ್ದೀರಾ? ರಾಜ್ಯಾದ್ಯಂತ ಬೀದಿನಾಯಿಗಳಿಂದ ಮಾರಣಾಂತಿಕ ದಾಳಿ: ಸುರಕ್ಷತೆ, ನಿಯಂತ್ರಣಕ್ಕೆ ನಾಗರಿಕರ ಆಗ್ರಹರಾಜ್ಯಾದ್ಯಂತ ಬೀದಿನಾಯಿಗಳಿಂದ ಮಾರಣಾಂತಿಕ ದಾಳಿ: ಸುರಕ್ಷತೆ, ನಿಯಂತ್ರಣಕ್ಕೆ ನಾಗರಿಕರ ಆಗ್ರಹ
ಪ್ರಾಧ್ಯಾಪಕ ಪ್ರೊ.ರಮೇಶ್ ಕೆ.ಪರ್ವತಿ, ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್, ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಎನ್.ಎಚ್.ಪಾಟೀಲ ಮಾತನಾಡಿದರು. ಕಡ್ಲೆಗೊಂದಿ ತಿಮ್ಮಣ್ಣ, ಕಡತಿ ನಾಗರಾಜಪ್ಪ, ಸಂಜೀವ್, ಅಣ್ಣಪ್ಪ, ಬಸವರಾಜ್, ರಾಜಪ್ಪ, ವಿದ್ಯಾರ್ಥಿನಿ ಕಾವ್ಯ, ಸಂಜನಾ, ದಿವ್ಯ ಸ್ವಾಗತಿಸಿದರು. ಅಧ್ಯಾಪಕ ಸಿದ್ದಯ್ಯ ಹಾಗೂ ವಿದ್ಯಾರ್ಥಿಗಳು ಕಾರ್ಯಕರ್ತರು ಭಾಗವಹಿಸಿದ್ದರು.