ಮುಸ್ಲಿಮರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿದರೆ ಅಧಿಕಾರಿಗಳನ್ನು ನೇಣಿಗೆ ಹಾಕುತ್ತೇನೆ ಎನ್ನುವ ಶ್ರೀರಂಗಪಟ್ಟಣ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿಕೆ ಖಂಡಿಸಿ ಶಾಸಕ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಟಿ ಐ) ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ದಾವಣಗೆರೆ ನಗರದ ಎಸ್ ಡಿ ಪಿ ಐ ಜಿಲ್ಲಾ ಕಚೇರಿಯಿಂದ ಮದೀನಾ ಆಟೋ ಸ್ಟ್ಯಾಂಡ್ ಅಹಮದ್ ನಗರದವರೆಗೆ ಪ್ರತಿಭಟನಾ ರ್ಯಾಲಿಯನ್ನು ನೆಡೆಸಲಾಯಿತು.
ಪ್ರತಿಭಟನಾ ಉದ್ದೇಶಿಸಿ SDPI ಜಿಲ್ಲಾ ಉಪಾಧ್ಯಕ್ಷರಾದ ರಜ್ವಿ ರಿಯಾಜ್ ಅಹಮದ್ ಮಾತನಾಡಿದ, “ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮುಸ್ಲಿಮರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿದರೆ ಅಧಿಕಾರಿಗಳನ್ನು ನೇಣಿಗೆ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಈ ಹಿಂದೆ ಭಟ್ಕಳದ ಕಾಂಗ್ರೆಸ್ ಶಾಸಕ ಮಂಕಾಳು ವೈದ್ಯ ಗೋಸಾಗಟ ಮಾಡುವ ಮುಸ್ಲಿಮರಿಗೆ ಸರ್ಕಲ್ ನಲ್ಲಿ ನಿಲ್ಲಿಸಿ ಗುಂಡು ಹೊಡೆಯಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿ. ತನ್ನೊಳಗಿನ ಮುಸ್ಲಿಂ ದ್ವೇಷ ಹೊರ ಹಾಕಿದ್ದರು, ಮುಸ್ಲಿಮರ ಮತ ಪಡೆದು ಆಯ್ಕೆಯಾದ ರಾಜ್ಯದ ಕಾಂಗ್ರೆಸ್ ನಾಯಕರ ಮುಸ್ಲಿಂ ದ್ವೇಷವು ಸಂಘ ಪರಿವಾರದ ನಾಯಕರ ಮುಸ್ಲಿಂ ದ್ವೇಷವನ್ನು ಓವರ್ ಟೇಕ್ ಮಾಡಲು ಪೈಪೋಟಿ ನಡೆಸಿದಂತಿದೆ. ಆದ್ದರಿಂದ ಈ ಆರೆಸ್ಸೆಸ್ ಮನಸ್ಥಿತಿಯ ಶಾಸಕರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು” ಎಂದು ಆಗ್ರಹಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಎ ಆರ್ ತಾಹೀರ್ ಮಾತನಾಡಿ “ಕೆಲವು ಕಾಂಗ್ರೆಸ್ ಶಾಸಕರ ಮನಸ್ಥಿತಿಯು ನಿಜಕ್ಕೂ ಎಚ್ಚರಿಕೆಯ ಮತ್ತು ಚಿಂತಿಸಬೇಕಾದ ವಿಷಯವಾಗಿದೆ. ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್‌ನ ಹಲವು ನಾಯಕರು ತಮ್ಮ ಮೂಲ ಸಂಘ ಪರಿವಾರದ ಸಂಸ್ಕೃತಿಯನ್ನು ತೋರಿಸುತ್ತಲೇ ಇದ್ದಾರೆ. ಇದೀಗ ಅವರ ನುಡಿಗಳೇ ಆ ನಿಜವನ್ನು ಬಹಿರಂಗಗೊಳಿಸುತ್ತಿವೆ. ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ, ತಮ್ಮ ಕ್ಷೇತ್ರದ ಮುಸ್ಲಿಂ ರೈತರು ಬಗರ್ ಹುಕುಂ ಭೂಮಿಗಾಗಿ ಸಲ್ಲಿಸಿರುವ ಅರ್ಜಿಗೆ ಸ್ಪಂದಿಸಿದ ಅಧಿಕಾರಿಗಳ ವಿರುದ್ಧ, “ಅವರನ್ನು ನೇಣಿಗೆ ಏರಿಸುತ್ತೀನಿ” ಎಂಬ ಕ್ರೂರ, ಅಸಹಿಷ್ಣು ಮತ್ತು ಬೆದರಿಕೆಯ ಮಾತುಗಳನ್ನು ಹೊರಹಾಕಿದ್ದಾರೆ. ಇದು ಕೇವಲ ಮುಸ್ಲಿಂ ದ್ವೇಶವಲ್ಲ. ಇದು ಸಂವಿಧಾನ ವಿರುದ್ಧದ ಅಭಿಪ್ರಾಯ, ಅಧಿಕಾರ ದುರ್ಬಳಕೆ ಮತ್ತು ಧರ್ಮದ ಆಧಾರದ ಮೇಲೆ ದ್ವೇಷ ಹರಡುವ ಅಪರಾಧ. ಇದು ಭಯೋತ್ಪಾದಕ ರಾಜಕೀಯ ಸಂಸ್ಕೃತಿಗೆ ದಾರಿ ಮಾಡಿಕೊಡುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜೀವನಾಡಿ ಭದ್ರಾ ಜಲಾಶಯದ ನೀರು ರೈತರಿಗೆ ತಪ್ಪುವ ಆತಂಕ ಬೇಡ ನಾವಿದ್ದೇವೆ; ಸಚಿವ ಎಸ್ ಎಸ್ ಮಲ್ಲಿಕಾರ್ಜುನ್
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಸ್ ಪೀರ್, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಎಜಾಜ್ ಅಹಮದ್, ಸಹ ಕಾರ್ಯದರ್ಶಿ ಮೊಹಮ್ಮದ್ ಕುಬೈಬ್, ಹಾಗೂ ಸಮಿತಿ ಸದಸ್ಯರಾದ, ಆರೀಫ್, ಆದಿಲ್, ಅಮೀರ್ ಮತ್ತು ಬ್ರಾಂಚ್ ಸಮಿತಿಗಳ ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.