“ಸದ್ಯ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷರ ಹುದ್ದೆ ಖಾಲಿ ಇಲ್ಲ, ಅಧ್ಯಕ್ಷರು ಇದ್ದಾರೆ. ಆದರೆ ಡಿಸೆಂಬರ್ ನಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಾಗಲಿದೆ. ಖಾಲಿಯಾಗದಿದ್ದರೆ ಕೇಳಿ” ಎಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಚನ್ನಗಿರಿಯಲ್ಲಿ ತಾಲೂಕಿನ ಬಂಜಾರ ಸಮಾಜ ಆಯೋಜಿಸಿದ್ದ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು “ಯಾರು ಮುಖ್ಯಮಂತ್ರಿ ಆಗುತ್ತಾರೆ, ಎಂದು ನಾನು ಈ ಹಿಂದೆಯೇ ಹೇಳಿಕೆ ನೀಡಿದ್ದೇನೆ. ಅದನ್ನು ಪದೇ ಪದೇ ಹೇಳುವ ಅಗತ್ಯವಿಲ್ಲ. ಈಗಾಗಲೇ ಹೇಳಿದ್ದೇನೆ” ಎಂದು ಪುನರುಚ್ಚರಿಸಿದರು.
“ಡಿಸೆಂಬರ್ ನಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಯಾಗಲಿದೆ. ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದೇನೆ. ಪದೇ ಪದೇ ಹೇಳುವ ಅಗತ್ಯವಿಲ್ಲ. ಯಾರನ್ನು ಹೈಕಮಾಂಡ್ ನಿರ್ಧರಿಸುತ್ತದೆ ನೋಡೋಣ. ಸತೀಶ್ ಜಾರಕಿಹೊಳಿ, ಸೇರಿ ಎಲ್ಲರೂ ಆಕಾಂಕ್ಷಿಗಳು. ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ ಕೂಡ ಹೈಕಮಾಂಡ್ ನಿರ್ಧರಿಸಿದರೆ ಮುಖ್ಯಮಂತ್ರಿ ಆಗಬಹುದು” ಎಂದು ಭವಿಷ್ಯ ನುಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಾಜಕೀಯದಲ್ಲಿ ಬೆಳೆಯುವ ಶೋಷಿತ ವರ್ಗದವರಿಗೆ ಅಡ್ಡಿಬೇಡ, ಗುಲಾಮರಾಗಿ ಬದುಕುವುದು ಬೇಡ;ವಿನಯ್ ಕುಮಾರ್ ಜಿಬಿ.
ಕೆಲ ತಿಂಗಳ ಹಿಂದೆ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ “ಡಿಸೆಂಬರ್ ನಲ್ಲಿ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ. ಇದು ನೂರಕ್ಕೆ ನೂರರಷ್ಟು ಸತ್ಯ” ಎಂದು ಭವಿಷ್ಯ ನುಡಿದಿದ್ದರು.