ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ನಿರಂತರವಾಗಿ ಪ್ರತಿಭಟಿಸುತ್ತಾ ಬಂದ ಕರ್ನಾಟಕದ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಮಿಳುನಾಡಿನ ತಿರುವಳ್ಳೂರ್ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಯನ್ನು ಬರೋಬ್ಬರಿ 5,72,155 ಮತಗಳ ಅಂತರದಲ್ಲಿ ಸೋಲಿಸಿದ ಸಸಿಕಾಂತ್ ಸೆಂಥಿಲ್ 7,96,956 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಬಾಲಗಣಪತಿ ವಿ 2,24,801 ಮತಗಳನ್ನು ಪಡೆದುಕೊಂಡಿದ್ದಾರೆ.
ಒಟ್ಟು ಮತರಾರರಲ್ಲಿ ಸುಮಾರು ಶೇ.56ರಷ್ಟು ಮತದಾರರು ಸಸಿಕಾಂತ್ ಪರವಾಗಿ ಮತ ಚಲಾಯಿಸಿದ್ದರೆ, ಶೇ.15.9ರಷ್ಟು ಮತದಾರರು ಬಿಜೆಪಿಗೆ ಮತ ನೀಡಿದ್ದಾರೆ. ಮೂರನೇ ಸ್ಥಾನದಲ್ಲಿರುವ ಡಿಎಂಡಿಕೆ ಅಭ್ಯರ್ಥಿ ಶೇ.15.8 (2,23,904) ಮತಗಳನ್ನು ಪಡೆದಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭಾ ಚುನಾವಣೆ | ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಪ್ರಕಟ; ಸೆಂಥಿಲ್ ಸ್ಪರ್ಧೆ
ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜೀನಾಮೆ
ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಸಿಎಎ, ಎನ್‌ಆರ್‌ಸಿ ಕಾಯ್ದೆ ವಿರೋಧಿಸಿದ ಸೆಂಥಿಲ್, “ಪ್ರಜಾಪ್ರಭುತ್ವದ ಮೂಲ ಆಧಾರ ಸ್ತಂಭಗಳು ಹಿಂದೆಂದೂ ಕಾರಣ ರೀತಿಯಲ್ಲಿ ರಾಜಿ ಮಾಡಿಕೊಳ್ಳುತ್ತಿವೆ” ಎಂದು ಹೇಳಿ ತನ್ನ ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.
“ದೇಶದ ಬಹುತ್ವದ ಏಳಿಗೆಗೆ ಭವಿಷ್ಯದಲ್ಲಿ ಹೆಚ್ಚು ಅಪಾಯ ಇದ್ದಂತೆ ಕಾಣುತ್ತಿದೆ. ಭಾರತೀಯ ಆಡಳಿತ ಸೇವೆಯಿಂದ ಹೊರಗಿರುವುದು ಲೇಸು ಎನಿಸುತ್ತಿದೆ. ಸೇವೆಯಿಂದ ಹೊರಗಿದ್ದು, ಜನರ ಒಳಿತಿಗಾಗಿ ದುಡಿಯುತ್ತೇನೆ” ಎಂದು ತನ್ನ ರಾಜೀನಾಮೆ ಪತ್ರದಲ್ಲಿ ಸೆಂಥಿಲ್ ಹೇಳಿದ್ದರು.
Sasikanth Senthil, former IAS officer, INC candidate from Tiruvallur seat, recorded the biggest electoral victory in Tamil Nadu lok sabha election 2024. He secured both the highest vote polled and margin. He got 7,96,956 vote, won with the margin of 5,72,155 pic.twitter.com/YBRsIKianE
— Tamil Nadu Geography (@TNGeography) June 4, 2024
2009ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಸೆಂಥಿಲ್, 2017ರ ಅಕ್ಟೋಬರ್ 10ರಿಂದ 2019ರ ಸೆಪ್ಟೆಂಬರ್ 6ರವರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೇವೆ ಸಲ್ಲಿಸಿದ್ದರು. ಅದಾದ ಬಳಿಕ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರಂತರವಾಗಿ ಸಿಎಎ, ಎನ್‌ಆರ್‌ಸಿ ವಿರುದ್ಧದ ಹೋರಾಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಇದನ್ನು ಓದಿದ್ದೀರಾ? ಲೋಕಸಭಾ ಚುನಾವಣೆ | ಸೆಂಟ್ರಲ್ ವಾರ್ ರೂಮ್ ರಚಿಸಿದ ಕಾಂಗ್ರೆಸ್: ಶಶಿಕಾಂತ್ ಸೆಂಥಿಲ್ ನೇತೃತ್ವ
ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗೆ ಏಳು ತಿಂಗಳುಗಳ ಬಾಕಿ ಇರುವಾಗಲೇ ಸಸಿಕಾಂತ್ ಸೆಂಥಿಲ್ ಕಾಂಗ್ರೆಸ್ ಪಕ್ಷ ಸೇರಿ ರಾಜಕೀಯಕ್ಕೆ ಬರುವ ತೀರ್ಮಾನ ಮಾಡಿದ್ದಾರೆ. ತಾನು ರಾಜೀನಾಮೆ ನೀಡುವುದಕ್ಕೂ ಮುನ್ನ ಸಸಿಕಾಂತ್ ಸೆಂಥಿಲ್ ಹತ್ತು ವರ್ಷಗಳ ಕಾಲ ಕರ್ನಾಟಕದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಸೆಂಥಿಲ್ ಬಾಲ್ಯ, ಶಿಕ್ಷಣ, ವೃತ್ತಿ ಜೀವನ
ಸೆಂಥಿಲ್ ತಂದೆ ನ್ಯಾಯಮೂರ್ತಿ ಪಿ. ಷಣ್ಮುಗಂ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಮತ್ತು ಅವರ ತಾಯಿ ಅಂಬಿಕಾ. ಷಣ್ಮುಗಂ ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿಯಾಗಿದ್ದಾರೆ. ಸೆಂಥಿಲ್ ಅವರು ತಿರುಚಿರಾಪಳ್ಳಿಯ ಭಾರತಿದಾಸನ್ ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಅದಾದ ಬಳಿಕ ಪೋಲಾರಿಸ್ ಇಂಕ್ ಎಂಬ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿದ್ದು ನಂತರ ಐಎಎಸ್ ವೃತ್ತಿಜೀವನ ಆರಂಭಿಸಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದರು. ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದರು.
ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಮತ್ತು ನಂತರ ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಸಸಿಕಾಂತ್ ಸೆಂಥಿಲ್ ಅವರನ್ನು ಕರ್ನಾಟಕದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ನಿರ್ದೇಶಕರಾಗಿ ನೇಮಿಸಲಾಗಿತ್ತು. ನಂತರ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅವರನ್ನು ನೇಮಿಸಲಾಗಿದೆ.
ಇದನ್ನು ಓದಿದ್ದೀರಾ? ವಿಜಯಪುರ | ಮೇ 27ರಿಂದ ‘ಮೇ ಸಾಹಿತ್ಯ ಮೇಳ’ ಹರ್ಷ ಮಂದರ್, ತೀಸ್ತಾ, ಪ್ರಕಾಶ್ ಅಂಬೇಡ್ಕರ್ ಭಾಗಿ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೆಂಥಿಲ್ ಪಯಣ
ಸಸಿಕಾಂತ್ ಸೆಂಥಿಲ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾಗ ಜಿಲ್ಲೆಯಲ್ಲಿ ಕೋಮು ಸಂಘರ್ಷಗಳನ್ನು ನಿರ್ವಹಿಸುವಲ್ಲಿ ಮತ್ತು ಮರಳು ಮಾಫಿಯಾವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ದಕ್ಷಿಣ ಕನ್ನಡದಲ್ಲಿ ಸೆಂಥಿಲ್ ಅಧಿಕಾರವಧಿಯಲ್ಲಿ ಪ್ರಾಮಾಣಿಕ ಅಧಿಕಾರಿ ಮತ್ತು ಜವಾಬ್ದಾರಿಯುತ ಸರ್ಕಾರಿ ಅಧಿಕಾರಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.