- 6ನೇ ವಯಸ್ಸಿಗೆ ಶಿಕ್ಷಣ ಪಡೆಯಲು ನಮ್ಮೂರಿನಿಂದ ಬೆಂಗಳೂರಿಗೆ ಬಂದೆ
- ಬೆಂಗಳೂರು ಅಭಿವೃದ್ಧಿ ಬಗ್ಗೆ ಸಲಹೆ, ಅಭಿಪ್ರಾಯ ನೀಡಿ ಸಹಕರಿಸಿ
ನನಗೂ ಬೆಂಗಳೂರಿಗೂ ಇರುವ ಸಂಬಂಧದ ಇತಿಹಾಸದ ಬಗ್ಗೆ ಅಶ್ವತ್ಥನಾರಾಯಣ ಅವರಿಗೆ ಗೊತ್ತಿಲ್ಲ. ಅದಕ್ಕೆ ಅವರು ಮಾತನಾಡುತ್ತಾರೆ. ನನಗೂ ಬೆಂಗಳೂರಿಗೂ ಇರುವ ಸಂಬಂಧದ ಬಗ್ಗೆ ಅವರು ತಿಳಿದುಕೊಳ್ಳಲಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, “ನಾನು 6ನೇ ವಯಸ್ಸಿಗೆ ಶಿಕ್ಷಣ ಪಡೆಯಲು ನಮ್ಮೂರಿನಿಂದ ಬೆಂಗಳೂರಿಗೆ ಬಂದೆ. ಇಲ್ಲಿನ ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸೇರಿ ನನ್ನ ವಿದ್ಯಾಭ್ಯಾಸ ಆರಂಭಿಸಿದೆ” ಎಂದರು.
“ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಕೆಂಪೇಗೌಡರು ಕಟ್ಟಿದ ಪ್ರದೇಶ. ತಮಿಳುನಾಡಿನ ಗಡಿ ಭಾಗದಲ್ಲಿ ಸಂಗಮದ ಬಳಿ ಕೆಂಪೇಗೌಡರ ಕೋಟೆ ಇದೆ. ಅದರ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಆ ಕೋಟೆ ಸಮೀಪ ನಿಜಲಿಂಗಪ್ಪ ಅವರ ಮನೆ ಪಕ್ಕ ವೀರೇಂದ್ರ ಪಾಟೀಲ್ ಅವರ ಮನೆ ಇದೆ. ಅದರ ಪಕ್ಕದಲ್ಲಿ ನನ್ನ ತಂದೆ ದೊಡ್ಡಹಾಲಹಳ್ಳಿ ಕೆಂಪೇಗೌಡರ ಮನೆ ಇದೆ. ಇತ್ತೀಚೆಗೆ ಅದನ್ನು ಮಾರಿದ್ದೇನೆ. ಇದು ನನಗೂ ಕೆಂಪೇಗೌಡ ಕಟ್ಟಿದ ಬೆಂಗಳೂರಿಗೆ ಇರುವ ಸಂಬಂಧ” ಎಂದು ಸ್ಪಷ್ಟನೆ ನೀಡಿದ್ದಾರೆ.
‘ಕೆಂಪೇಗೌಡ ಒಂದು ಜಾತಿ, ಸಮುದಾಯಕ್ಕೆ ಸೇರಿದವರಲ್ಲ’
“ಇಂದು ನಾವು ಕೆಂಪೇಗೌಡ ಜಯಂತಿ ಆಚರಿಸುತ್ತಿದ್ದೇವೆ. ನಮ್ಮ ಸರ್ಕಾರ ಕೆಂಪೇಗೌಡ ಜಯಂತಿ ಆಚರಣೆಗೆ ತೀರ್ಮಾನಿಸಿದಾಗ ಯಾವ ದಿನ ಜಯಂತಿ ಆಚರಿಸಬೇಕು ಎಂಬುದರ ಬಗ್ಗೆ ದೊಡ್ಡ ಚರ್ಚೆಯಾಗಿತ್ತು. ಆಗ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ, ಇತಿಹಾಸ ತಜ್ಞರನ್ನು ಒಳಗೊಂಡಂತೆ ಸಮಿತಿ ರಚಿಸಲಾಯಿತು. ಈ ಸಮಿತಿ ಅಧ್ಯಯನ ಮಾಡಿ ಜೂನ್ 27ರಂದು ಕೆಂಪೇಗೌಡ ಜಯಂತಿ ಎಂದು ತೀರ್ಮಾನಿಸಿತು” ಎಂದು ಹೇಳಿದರು.
“ಅಶೋಕ್ ಅವರು ಮುಂದಾಳತ್ವದಲ್ಲಿ ಬೆಂಗಳೂರಿನ ಎಲ್ಲ ವಾರ್ಡ್‌ಗಳಲ್ಲಿ ಕೆಂಪೇಗೌಡ ಜಯಂತಿ ಆಚರಣೆಗೆ ತೀರ್ಮಾನಿಸಲಾಗಿತ್ತು. ಇದನ್ನು ಗಮನದಲ್ಲಿ ಇಟ್ಟುಕೊಂಡು ಈ ಕೆಂಪೇಗೌಡ ಜಯಂತಿಯನ್ನು ರಾಜ್ಯಕ್ಕೆ ವಿಸ್ತರಿಸಿ, ರಾಜ್ಯದ ಎಲ್ಲೆಡೆ ಆಚರಣೆಗೆ ತೀರ್ಮಾನಿಸಿದೆವು” ಎಂದರು.
“ಬೆಂಗಳೂರಿನಲ್ಲಿ ಮತ್ತು ಹಾಸನದಲ್ಲಿ ಇಂದು ರಾಜ್ಯ ಮಟ್ಟದ ಕಾರ್ಯಕ್ರಮ ನಡೆದಿದೆ. ಕೆಂಪೇಗೌಡ ಪ್ರಾಧಿಕಾರ ಸಭೆಯಲ್ಲಿ 75% ಗಿಂತ ಹೆಚ್ಚು ಒಕ್ಕಲಿಗರು ಇದ್ದಾರೆ. ಇದನ್ನು ನೋಡಿ ನಾಚಿಕೆ ಆಯಿತು. ಕೆಂಪೇಗೌಡ ಯಾವತ್ತೂ ಒಂದು ಸಮುದಾಯಕ್ಕೆ ಸೇರಿದವರಲ್ಲ. ಎಲ್ಲ ಜಾತಿ ಹಾಗೂ ಧರ್ಮಕ್ಕೆ ಸೇರಿದವರಾಗಿದ್ದಾರೆ. ನಾವು ಹುಟ್ಟುವಾಗ ಇಂತಹ ಜಾತಿಯಲ್ಲಿ ಹುಟ್ಟುವ ಅರ್ಜಿ ಹಾಕುವುದಿಲ್ಲ. ನಮ್ಮ ತಂದೆ ತಾಯಿ ಜಾತಿ ಧರ್ಮ ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಎಕ್ಸ್‌ಪ್ರೆಸ್ ಹೈವೇ ಅವೈಜ್ಞಾನಿಕ ಕಾಮಗಾರಿ ಪತ್ತೆಗೆ ತಾಂತ್ರಿಕ ತಂಡ ರಚನೆ: ಎನ್ ಚಲುವರಾಯಸ್ವಾಮಿ
“ಕೆಂಪೇಗೌಡರ ಆಚಾರ ವಿಚಾರ ಜಾತಿ ಮೇಲೆ ನಿಂತಿರಲಿಲ್ಲ. ಅವರು ಜಾತಿ ಮೇಲೆ ಕೆಲಸ ಮಾಡಿದ್ದರೆ ಬೆಂಗಳೂರಿನಲ್ಲಿ 52 ವಿವಿಧ ಸಮುದಾಯಗಳ ಪೇಟೆಗಳು ಆಗುತ್ತಿರಲಿಲ್ಲ. ಸಮಾಜದಲ್ಲಿ ಎಲ್ಲ ವರ್ಗದವರಿಗೆ ಸ್ಥಾನಮಾನ ಸಿಗಲು ಶ್ರಮಿಸಿದ್ದಾರೆ” ಎಂದರು.
“ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ಮೂವರು ಮಹನೀಯರನ್ನು ಸ್ಮರಿಸಬೇಕು ಅದು ಕೆಂಪೇಗೌಡ, ಕೆಂಗಲ್ ಹನುಮಂತಯ್ಯ ಹಾಗೂ ಎಸ್ ಎಂ ಕೃಷ್ಣ. ಇವರು ಕಟ್ಟಿರುವ ಬೆಂಗಳೂರನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು. ಕೆಂಪೇಗೌಡರ ಸ್ತಂಭ ಹೇಗೆ ಸ್ಮಾರಕವಾಗಿದೆಯೋ ಅದೇರೀತಿ ನಾವು ನಮ್ಮ ಕೆಲಸಗಳ ಮೂಲಕ ಸಾಕ್ಷಿ ಗುಡ್ಡೆ ನಿರ್ಮಿಸಬೇಕು” ಎಂದು ಹೇಳಿದರು.
“ನಾನು ಬಹಳ ಉತ್ಸುಕತೆಯಿಂದ ಬೆಂಗಳೂರು ನಗರದ ಜವಾಬ್ದಾರಿ ಹೊತ್ತುಕೊಂಡಿದ್ದೇನೆ. ಬೆಂಗಳೂರು ಅಭಿವೃದ್ಧಿ ಬಗ್ಗೆ ನಾನು ನಿಮ್ಮೆಲ್ಲರ ಸಲಹೆ ಕೇಳಿದ್ದೇನೆ. ನಿಮ್ಮ ಸಲಹೆ ಅಭಿಪ್ರಾಯ ನೀಡಿ. ನಿಮ್ಮ ಸಹಕಾರ ಆಶೀರ್ವಾದ ನಮ್ಮ ಮೇಲಿರಲಿ” ಎಂದರು.