ಮಾಜಿ ಕೇಂದ್ರ ಸಚಿವ ದಿವಂಗತ ಅರುಣ್ ಜೇಟ್ಲಿ ಅವರ ಪುತ್ರ ಹಾಗೂ ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿರುವ ರೋಹನ್ ಜೇಟ್ಲಿ ಅವರು ಮಹಿಳೆಯೊಬ್ಬರಿಗೆ ಮದುವೆಯಾಗುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಜ್ಯೋತ್ಸ್ನಾ ಸಹಾನಿ ಎಂಬುವವರು, ”ರೋಹನ್ ಜೇಟ್ಲಿ ಮದುವೆಯ ನೆಪದಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯ ಅಧ್ಯಕ್ಷರಾಗಿರುವ ಅವರು ಅಲ್ಲಿಯೂ ಹಣ ದುರುಪಯೋಗ ಮಾಡಿದ್ದಾರೆ. ಈ ವಿಚಾರವಾಗಿ ಜೇಟ್ಲಿ ಮತ್ತು ಅವರ ಪತ್ನಿ ತನಗೆ ಜೀವ ಬೆದರಿಕೆ ಹಾಕಿದ್ದಾರೆ” ಎಂದು ಮಹಿಳೆ ಆರೋಪಿಸಿದ್ದಾರೆ.
ಆರೋಪಿಸಿರುವ ಸಂತ್ರಸ್ತೆಯ ವಿವರಗಳನ್ನು ಕಲೆಹಾಕಿರುವ ಇಮೇಲ್ ಅನ್ನು ಪತ್ರಕರ್ತೆ ಸಾಕ್ಷಿ ಜೋಶಿ ಬಹಿರಂಗಪಡಿಸಿದ್ದಾರೆ. ಅಲ್ಲದೆ ಈ ವಿಚಾರವಾಗಿ ಬಿಸಿಸಿಐಗೆ ಪತ್ರ ಬರೆಯಲಾಗಿದೆ.
ತಾನು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಯುವಕರು ತನ್ನ ಬಳಿ ಬಂದು “ರೋಹನ್ ಜೊತೆಗಿನ ನನ್ನ ಸಂಬಂಧದ ಬಗ್ಗೆ ಯಾರಿಗಾದರೂ ಹೇಳಿದರೆ ಸರಿಯಿರುವುದಿಲ್ಲ ಎಂದು ನನಗೆ ಜೀವ ಬೆದರಿಕೆ ಹಾಕಿದರು” ಎಂದು ಮಹಿಳೆ ಪತ್ರದಲ್ಲಿ ಆರೋಪಿಸಿದ್ದಾರೆ.
ಇದೇ ರೀತಿ ಮತ್ತೊಬ್ಬ ವ್ಯಕ್ತಿ ತನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇವೆಲ್ಲ ಘಟನೆಗಳಿಂದ ರೋಹನ್ ಜೇಟ್ಲಿ ಮತ್ತು ಅವರ ಪತ್ನಿ ಮೆಹರುನಿಸ್ಸಾ ಅವರಿಂದ ನನ್ನ ಜೀವಕ್ಕೆ ಗಂಭೀರ ಬೆದರಿಕೆ ಇದೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.