ಆರೋಗ್ಯ ಇಲಾಖೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ ಭ್ರಷ್ಟಾಚಾರ ಪ್ರಕರಣಗಳ ತನಿಖೆಯ ಜೊತೆಗೆ, ಕಳಂಕಿತ ಆರೋಪ ಹೊಂದಿರುವ ಅಧಿಕಾರಿಗಳ ಮೇಲೂ ಸಚಿವ ದಿನೇಶ್ ಗುಂಡೂರಾವ್ ಕ್ರಮಕ್ಕೆ ಮುಂದಾಗಿದ್ದು, ಆರೋಗ್ಯ ಮತ್ತು ಆಯುಷ್ ಇಲಾಖೆಗಳಲ್ಲಿ ಮೇಜರ್ ಸರ್ಜರಿಗೆ ಕೈ ಹಾಕಿದ್ದಾರೆ.
ಕೋವಿಡ್ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ವಹಿಸಿದ ಬೆನ್ನಲ್ಲೇ ಇದೀಗ ನಕಲಿ ವೈದ್ಯರ ಹಾವಳಿ ತಡೆಯಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಾರ್ಯತಂತ್ರ ರೂಪಿಸಿದ್ದಾರೆ. ಆಯುಷ್ ಇಲಾಖೆಯಲ್ಲಿ ನಕಲಿ ವೈದ್ಯರ ಸೃಷ್ಟಿಗೆ ಕಾರಣರಾದವರ ಬುಡವನ್ನು ಕಿತ್ತೆಸೆಯಲು ಮುಂದಾಗಿರುವ ಸಚಿವರು, ಈ ಮೂಲಕ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ನೂರಾರು ನಕಲಿ ವೈದ್ಯರಿಗೆ ಆಯುಷ್ ಇಲಾಖೆಯಿಂದ ನಕಲಿ ಸರ್ಟಿಫಿಕೇಟ್ ಕೊಟ್ಟಿರುವ ಬಗ್ಗೆ ಆಂತರಿಕ ವರದಿ ತರಿಸಿಕೊಂಡಿರುವ ಸಚಿವರು, ಒಬ್ಬೊಬ್ಬ ಅಧಿಕಾರಿಗಳಿಗೆ ಗೇಟ್ ಪಾಸ್ ಕೊಡಿಸಿದ್ದಾರೆ.
ಈ ಹಿಂದೆ ಮೂರು ನಾಲ್ಕು ಬಾರಿ ಅಮಾನತ್ತಾಗಿದ್ದ, ಆಯುರ್ವೇದದ ಹೆಸರಿನಲ್ಲಿ ನಕಲಿ ವೈದ್ಯರನ್ನು ಸೃಷ್ಢಿಸಿದ್ದ ಆರೋಪ ಹೊತ್ತಿರುವ ಹಿರಿಯ ಆಯುಷ್ ವೈದ್ಯಾಧಿಕಾರಿ ವೆಂಕಟರಾಮಯ್ಯ ಅವರನ್ನ ಅಮಾನತ್ತುಗೊಳಿಸಲಾಗಿದೆ. 13 ಪ್ರಕರಣಗಳಲ್ಲಿ ಡಾ. ವೆಂಕಟರಾಮಯ್ಯ ಅವರ ಮೇಲೆ ದೋಷಾರೋಪಣೆಯಿದ್ದು, ಇಲಾಖೆ ತನಿಖೆಗೆ ಒಳಪಡಿಸಲಾಗಿತ್ತು.
ಹಿರಿಯ ವೈದ್ಯಾಧಿಕಾರಿ ಡಾ. ವೆಂಕಟರಮಣಯ್ಯ ವಿರುದ್ದ ಕೊಲೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಅಮಾನತ್ತು ಮಾಡಿ ಆದೇಶಿಸಲಾಗಿದೆ. ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮ 2021 ರ ನಿಯಮ 3(1) (i) (ii) (iii) ಉಲ್ಲಂಘಿಸಿರುವುದರಿಂದ ಕರ್ನಾಟಕ ನಾಗರಿಕ ಸೇವಾ 1957ರ ನಿಯಮ 10(3) ಪ್ರಕಾರ ಅಧಿಕಾರವನ್ನು ಚಲಾಯಿಸಿ, ಡಾ. ವೆಂಕಟರಾಮಯ್ಯ ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.
ಆಯುಷ್ ಇಲಾಖೆ ಮುಖ್ಯ ಆಡಳಿತಾಧಿಕಾರಿ ಎಸ್ ಶೈಲಜ ಎಂಬುವರು ಫೆಬ್ರವರಿ 6ರಂದು ಮಧ್ಯಾಹ್ನ ಸುಮಾರು 4.30 ವೇಳೆಯಲ್ಲಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಗಮಿಸಿದ ಡಾ. ವೆಂಕಟರಾಮಯ್ಯ ಕೊಲೆ ಬೆದರಿಕೆ ಹಾಕಿ ಬೈದು ಹೀಯಾಳಿಸಿ ಕರ್ತವ್ಯಕ್ಕೆ ಧಕ್ಕೆ ಉಂಟು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇಂತಹ ಬೆದರಿಕೆಗಳಿಂದ ಕೆಲಸ ಮಾಡಲು ತೊಂದರೆ ಆಗುತ್ತಿದೆ ಎಂದು ಎಸ್ ಶೈಲಜ ಅವರು ಫೆಬ್ರವರಿ 7ರಂದು ದೂರು ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಕುಮಾರಸ್ವಾಮಿಗೆ ಉತ್ತರಿಸುವುದೂ, ಹುಚ್ಚಾಸ್ಪತ್ರೆಗೆ ಸೇರುವುದೂ ಒಂದೇ: ದಿನೇಶ್ ಗುಂಡೂರಾವ್ ವ್ಯಂಗ್ಯ
ಕಳೆದ ಎಂಟು ತಿಂಗಳುಗಳಿಂದ ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ. ವೆಂಕಟರಾಮಯ್ಯ ಅವರ ಮೇಲೆ ನಕಲಿ ವೈದ್ಯರನ್ನು ಸೃಷ್ಟಿಸಿದ ಹಾಗೂ ನಕಲಿ ವೈದ್ಯರಿಗೆ ಜಿಲ್ಲಾವಾರು ಕೆ ಪಿ ಎಮ್ ಇ ನೋಂದಣಿ ನೀಡಲು ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ಶಿಫಾರಸು ಮಾಡಿದ ಆರೋಪಗಳು ಕೇಳಿ ಬಂದಿದ್ದವು. ಎರಡು ವರ್ಷಗಳ ಹಿಂದೆ ಆಯುರ್ವೇದ ವೈದ್ಯ ವಿದ್ಯಾರ್ಥಿಗಳ ನೋಂದಣಿಯಲ್ಲಿ ಭೃಷ್ಟಾಚಾರ ಎಸಗಿದ ಆರೋಪದ ಮೇಲೆ ಅಮಾನತ್ತಾಗಿದ್ದರು.
ತಮ್ಮ ಆಪ್ತ ನಕಲಿ ವೈದ್ಯರಿಗಾಗಿ ತಮ್ಮದೇ ನೋಂದಣಿ ಪುಸ್ತಕ ರಚಿಸಿಕೊಂಡಿದ್ದರು ಎಂಬ ಆರೋಪ ಕೂಡ ಇತ್ತು. ಅಲ್ಲದೇ ಆನ್ಲೈನ್ ಬಯೋಮೆಟ್ರಿಕ್ ರಿಜಿಸ್ಟ್ರೇಶನ್ ಡಿಜಿಟಲ್ ವ್ಯವಸ್ಥೆಯನ್ನೂ ನಾಶಪಡಿಸಲು ಯತ್ನ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.