ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಬೆದರಿಕೆಯೊಡ್ಡಿರುವ ಆರೋಪದಡಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಮನೆ ಕೆಲಸದ ಮಹಿಳೆ ಹಾಗೂ ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಹಾಗೂ ಅವರ ಮಗ ಪ್ರಜ್ವಲ್ ವಿರುದ್ಧ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು.
ಮೊದಲ ದೂರು ಆಧರಿಸಿ ಎಸ್ಐಟಿ ತನಿಖೆ ನಡೆಸುತ್ತಿದೆ. ಇದರ ನಡುವೆಯೂ ಪ್ರಜ್ವಲ್ ವಿರುದ್ಧ ಮತ್ತೊಬ್ಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ತನಿಖೆಯನ್ನೂ ಎಸ್ಐಟಿ ಕೈಗೆತ್ತಿಕೊಂಡಿದೆ.
ದೂರಿನ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್, ‘ಮತ್ತೊಬ್ಬ ಮಹಿಳೆ ದೂರು ನೀಡಿದ್ದಾರೆ. ಇದು ಎರಡನೇ ದೂರು. ಮಹಿಳೆಯರು ಧೈರ್ಯವಾಗಿ ಬಂದು ದೂರು ನೀಡಬಹುದು. ತಮಗೆ ಸರ್ಕಾರ ಎಲ್ಲ ರೀತಿಯ ಭದ್ರತೆ ನೀಡಲಿದೆ’ ಎಂದು ತಿಳಿಸಿದರು.
“ಇಂತಹ ಸೂಕ್ಷ್ಮ ವಿಚಾರದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವುದು ಕಷ್ಟ. ಮೊದಲು ಸಂತ್ರಸ್ತೆ ಮಹಿಳೆ ಬಂದು ದೂರು ಕೊಡಬೇಕು ಎಂದ ಅವರು, ಪ್ರಜ್ವಲ್ ರೇವಣ್ಣ ಡಿಪ್ಲೊಮೆಟಿಕ್ ಪಾಸ್ ಪೋರ್ಟ್ ಮೂಲಕ ವಿದೇಶಕ್ಕೆ ಹೋಗಿದ್ದು ಸತ್ಯ, ಕೇಂದ್ರ ಸರಕಾರ ಡಿಪ್ಲೊಮೆಟಿಕ್ ಪಾಸ್ ಪೋರ್ಟ್ ಕೊಟ್ಟಿದೆ. ಹೀಗಾಗಿ ರಾತ್ರೋ ರಾತ್ರಿ ಹೋಗಿದ್ದಾರೆ” ಎಂದು ಹೇಳಿದರು.
“ಎಸ್‌ಐಟಿಯಿಂದ IPC 41A ಜಾರಿಮಾಡಲಾಗಿದೆ. ನೋಟಿಸ್ ಜಾರಿ ಮಾಡಿದ ಬಳಿಕ ಕೂಡಲೇ ಬಂದು ಹಾಜರಾಗಬೇಕು. ಒಂದು ವೇಳೆ ಹಾಜರಾಗದಿದ್ದರೆ ಅವರನ್ನು ಬಂಧಿಸಬೇಕಾಗುತ್ತದೆ ಎಂದರು. ರೇವಣ್ಣ ಅವರು ಇಂದು ಅಧಿಕಾರಿಗಳ ಮುಂದೆ ಹಾಜರಾಗುತ್ತೆನೆ ಎಂದು ಹೇಳಿದ್ದಾರೆ. ಲುಕ್ ಔಟ್ ನೋಟಿಸ್ ನೀಡಲಾಗಿದೆ. ಪ್ರಜ್ವಲ್ ರೇವಣ್ಣ ಅವರು ವಕೀಲರ ಮೂಲಕ 6 ದಿನ ಕಾಲಾವಕಾಶ ಕೇಳಿದ್ದಾರೆ” ಎಂದು ವಿವರಿಸಿದರು.
